ಬಂಡಿ ಸಂಜಯ್ ಕುಮಾರ್: ಬಿಜೆಪಿ
ತೆಲಂಗಾಣದ ಕರೀಂನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಬಂಡಿ ಸಂಜಯ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯ ರಾಜ್ಯ ಘಟಕ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಸಂಜಯ್ ಕುಮಾರ್ ಅವರು ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ.
2019ರ ಚುನಾವಣೆಯಲ್ಲಿ ಇವರು 89,508 ಮತಗಳ ಅಂತರದಿಂದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದರು. ಸಂಜಯ್ ಕುಮಾರ್ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಹೌದು.
ಎಬಿವಿಪಿ ಮೂಲಕ ರಾಜಕೀಯ ಪ್ರವೇಶಿಸಿರುವ ಇವರು ಪಕ್ಷ ಸಂಘಟನೆಯ ಮೂಲಕ ರಾಜ್ಯದಲ್ಲಿ ಚಿರಪರಿಚಿತರಾದವರು. 2023ರಲ್ಲಿ ತೆಲಂಗಾಣದ 10ನೇ ತರಗತಿ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಲ್ಲಿ ಇವರನ್ನು ಪೊಲೀಸರು ಬಂಧಿಸಿದ್ದರು. ಅನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ವೆಲಿಚಾಲ ರಾಜೇಂದರ್ ರಾವ್: ಕಾಂಗ್ರೆಸ್
ಕರೀಂನಗರ ಕ್ಷೇತ್ರದಲ್ಲಿ ಬಂಡಿ ಸಂಜಯ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷವು ವೆಲಿಚಾಲ ರಾಜೇಂದರ್ ರಾವ್ ಅವರನ್ನು ಕಣಕ್ಕಿಳಿಸಿದೆ. ಕರೀಂನಗರ ಕ್ಷೇತ್ರದ ಮಾಜಿ ಶಾಸಕ ವೆಲಿಚಾಲ ಜಗಪತಿ ರಾವ್ ಅವರ ಪುತ್ರರಾಗಿರುವ ರಾಜೇಂದರ್ ಅವರು ಕ್ಷೇತ್ರದಲ್ಲಿ ಚಿರಪರಿಚಿತರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನ್ಯೂನತೆಗಳನ್ನು ಪ್ರಮುಖ ಪ್ರಚಾರ ವಿಚಾರವಾಗಿಸಿ ರಾಜೇಂದರ್ ಮತಯಾಚಿಸುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತದಲ್ಲಿರುವುದು ಇವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕೂಡ ಬಿ. ವಿನೋದ್ ಕುಮಾರ್ ಅವರನ್ನು ಇಲ್ಲಿಂದ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಈ ಪಕ್ಷವು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.