ADVERTISEMENT

ಸಾಕ್ಷಾತ್ ಸಮೀಕ್ಷೆ: ‘ಯಥಾಸ್ಥಿತಿ’ ಮುರಿಯಲು ಕೈ–ಕಮಲ ಪೈಪೋಟಿ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರ

ವಿ.ಎಸ್.ಸುಬ್ರಹ್ಮಣ್ಯ
Published 7 ಮೇ 2023, 20:16 IST
Last Updated 7 ಮೇ 2023, 20:16 IST
ಮಂಜುಳಾ ಲಿಂಬಾವಳಿ
ಮಂಜುಳಾ ಲಿಂಬಾವಳಿ   

ಬೆಂಗಳೂರು: ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಸುತ್ತ ವ್ಯಾಪಿಸಿಕೊಂಡಿರುವ ಬೆಂಗಳೂರು ಕೇಂದ್ರ ಭಾಗದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳು ದೀರ್ಘಕಾಲದಿಂದಲೂ ಯಥಾಸ್ಥಿತಿಯ ಫಲಿತಾಂಶಕ್ಕೆ ಅಂಟಿಕೊಂಡಿವೆ. ಈ ಬಾರಿ ಯಥಾಸ್ಥಿತಿಯನ್ನು ಮುರಿದು ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಬಿಜೆಪಿ ಹಣಾಹಣಿ ನಡೆಸುತ್ತಿವೆ.

ಕ್ಷೇತ್ರ ಪುನರ್ವಿಂಗಡಣೆಯ ನಂತರ ನಡೆದಿರುವ ಮೂರು ಲೋಕಸಭಾ ಚುನಾವಣೆಗಳಲ್ಲೂ ಇಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಪಿ.ಸಿ. ಮೋಹನ್‌ ಮೂರನೇ ಬಾರಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2008ರಿಂದ ನಡೆದ ಮೂರು ವಿಧಾನಸಭಾ ಚುನಾವಣೆಗಳಲ್ಲೂ ಬಿಜೆಪಿ ಮೂರು ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸುತ್ತಿದೆ. 2008 ಮತ್ತು 2013ರಲ್ಲಿ ಕಾಂಗ್ರೆಸ್‌ ನಾಲ್ಕು ಹಾಗೂ ಜೆಡಿಎಸ್‌ ಒಂದು ಸ್ಥಾನ ಗಳಿಸಿದ್ದವು. ಚಾಮರಾಜಪೇಟೆ ಶಾಸಕ ಜಮೀರ್‌ ಅಹಮ್ಮದ್ ಖಾನ್‌ ಅವರ ವಲಸೆಯಿಂದಾಗಿ ಕಾಂಗ್ರೆಸ್‌ ಒಂದು ಸ್ಥಾನವನ್ನು ಹೆಚ್ಚಿಸಿಕೊಂಡಿದ್ದರೆ, ಜೆಡಿಎಸ್‌ ಸಾಧನೆ ಶೂನ್ಯಕ್ಕಿಳಿದಿದೆ.

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯೂ ಇಲ್ಲಿನ ಬಹುತೇಕ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಪ್ರಾಬಲ್ಯವೇ ಎದ್ದು ಕಾಣುತ್ತಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತದಾನದ ವೇಳೆ ಭಿನ್ನವಾಗಿ ಆಲೋಚಿಸುವ ಇಲ್ಲಿನ ಮತದಾರರನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ನಾಮಬಲ’ದಲ್ಲಿ ಸೆಳೆದು ಬಲ ಹೆಚ್ಚಿಸಿಕೊಳ್ಳಲು ಬಿಜೆಪಿ ಭಾರಿ ಕಸರತ್ತು ನಡೆಸುತ್ತಿದೆ. ಆಡಳಿತ ವಿರೋಧಿ ಅಲೆಯ ನೆರವಿನಲ್ಲಿ ಮತ್ತಷ್ಟು ಕ್ಷೇತ್ರಗಳನ್ನು ಗೆದ್ದು, ಪ್ರಾಬಲ್ಯ ಸಾಧಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ADVERTISEMENT

ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪ್ರತಿನಿಧಿಸುತ್ತಿರುವ ಮಹದೇವಪುರ ಎಸ್‌ಸಿ ಮೀಸಲು ಕ್ಷೇತ್ರ ಈ ಬಾರಿ ಕುತೂಹಲದ ಕೇಂದ್ರವಾಗಿದೆ. ಶಾಸಕರಿಗೆ ಟಿಕೆಟ್‌ ನಿರಾಕರಿಸಿರುವ ಬಿಜೆಪಿ ವರಿಷ್ಠರು, ಅವರ ಪತ್ನಿ ಮಂಜುಳಾ ಲಿಂಬಾವಳಿ ಅವರನ್ನು ಕಣಕ್ಕಿಳಿಸಿದ್ದಾರೆ. ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು, ಸಚಿವರೂ ಆಗಿದ್ದ ಎಚ್‌. ನಾಗೇಶ್‌ ಇಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ. ಮಹದೇವಪುರ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ಕಸಿದುಕೊಳ್ಳಲು ಕಾಂಗ್ರೆಸ್‌ ಶತಪ್ರಯತ್ನ ಮಾಡುತ್ತಿದೆ. ಪತಿಯ ಹೆಸರಿನ ಬಲದಲ್ಲಿ ಗೆದ್ದುಬರಲು ಮಂಜುಳಾ ಕಸರತ್ತು ನಡೆಸುತ್ತಿದ್ದಾರೆ.

ವಿಧಾನ ಪರಿಷತ್‌ನ ಮಾಜಿ ಸದಸ್ಯ ಪುಟ್ಟಣ್ಣ ಅವರ ಪ್ರವೇಶದಿಂದ ರಾಜಾಜಿನಗರವೂ ಜಿದ್ದಾಜಿದ್ದಿ ಹೋರಾಟದ ಕಣವಾಗಿದೆ. ಐದು ಬಾರಿ ಶಾಸಕರಾಗಿದ್ದ ಎಸ್‌. ಸುರೇಶ್ ಕುಮಾರ್‌, ಆರನೇ ಗೆಲುವಿಗೆ ಹೋರಾಟ ನಡೆಸುತ್ತಿದ್ದಾರೆ. ವರ್ಷದ ಹಿಂದೆಯೇ ಮನೆ, ಮನೆ ಪ್ರಚಾರ ಆರಂಭಿಸಿದ್ದ ಅವರು, ಕ್ಷೇತ್ರದಲ್ಲಿ ವ್ಯಾಪಿಸಿಕೊಂಡಿರುವ ಸಂಘಟನೆಯ ಬಲ ತಮ್ಮನ್ನು ಮತ್ತೊಮ್ಮೆ ಗೆಲುವಿನ ದಡ ಮುಟ್ಟಿಸಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್‌ನಿಂದ ಬಿಜೆಪಿಗೆ ಹೋಗಿ ಅಲ್ಲಿಂದ ಕಾಂಗ್ರೆಸ್‌ಗೆ ಜಿಗಿದಿರುವ ಪುಟ್ಟಣ್ಣ, ಒಕ್ಕಲಿಗ ಮತದಾರರ ಬಾಹುಳ್ಯ ‘ಕೈ’ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಿಸಿರುವ ಜೆಡಿಎಸ್‌, ಚಿರಪರಿಚಿತ ವೈದ್ಯ ಡಾ. ಆಂಜನಪ್ಪ ಟಿ.ಎಚ್‌. ಅವರನ್ನು ಕಣಕ್ಕಿಳಿಸಿದೆ. ಅವರು ಒಕ್ಕಲಿಗರ ಮತಗಳನ್ನು ಹೆಚ್ಚು ಸೆಳೆದರೆ ಬಿಜೆಪಿಗೆ ಅನುಕೂಲ ಆಗುವ ಸಾಧ್ಯತೆ ಇದೆ.

ಚಾಮರಾಜಪೇಟೆ ಕ್ಷೇತ್ರವನ್ನುಕಾಂಗ್ರೆಸ್‌ನ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ಅವರಿಂದ ಕಿತ್ತುಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್‌ ನಾನಾ ಬಗೆಯ ದಾಳ ಉರುಳಿಸುತ್ತಿವೆ. ಜೆಡಿಎಸ್‌ನಲ್ಲಿದ್ದ ಜಮೀರ್‌, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಈ ಬಾರಿ ಜಮೀರ್‌ ಆಪ್ತ ಗೋವಿಂದರಾಜು ಅವರನ್ನೇ ಸೆಳೆದಿರುವ ಜೆಡಿಎಸ್‌, ಅಲ್ಲಿ ಕಣಕ್ಕಿಳಿಸಿದೆ. ಐಪಿಎಸ್‌ ಅಧಿಕಾರಿ ಹುದ್ದೆಯಿಂದ ಸ್ವಯಂನಿವೃತ್ತಿ ಪಡೆದು ಆಮ್‌ ಆದ್ಮಿ ಪಕ್ಷ ಸೇರಿದ್ದ ಭಾಸ್ಕರ್‌ ರಾವ್‌, ಅಲ್ಲಿಂದ ಬಿಜೆಪಿಗೆ ಜಿಗಿದು ಅಭ್ಯರ್ಥಿಯಾಗಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರೂ ಅಖಾಡಕ್ಕೆ ಇಳಿದಿರುವುದರಿಂದ ಈ ಬಾರಿ ಜಮೀರ್‌ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ.

ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಿನೇಶ್‌ ಗುಂಡೂರಾವ್‌ ಮತ್ತು ಬಿಜೆಪಿಯ ಸಪ್ತಗಿರಿ ಗೌಡ ಮಧ್ಯೆ ನೇರ ಹಣಾಹಣಿ ನಡೆಸುತ್ತಿದ್ದಾರೆ. ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ದಿನೇಶ್‌ ಅವರಿಂದ ಗೆಲುವು ಕಸಿಯಲು ಬಿಜೆಪಿಯ ಹಿರಿಯ ನಾಯಕರಾಗಿದ್ದ ಮಾಜಿ ಸಚಿವ ಕೆ. ರಾಮಚಂದ್ರೇಗೌಡ ಅವರ ಮಗ ಸಪ್ತಗಿರಿ ಗೌಡ ಪ್ರಯತ್ನಿಸುತ್ತಿದ್ದಾರೆ. ಆದರೆ, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಪಕ್ಷೇತರನಾಗಿ ಕಣದಲ್ಲಿದ್ದು, ಬಿಜೆಪಿ ಮತ ಕಸಿಯುವ ಸಾಧ್ಯತೆ ಇದೆ. ಅದು ದಿನೇಶ್‌ ಅವರಿಗೆ ಅನುಕೂಲ ಸೃಷ್ಟಿಸಬಹುದು.

ಕಾಂಗ್ರೆಸ್‌ನ ಭದ್ರಕೋಟೆಯಂತಿರುವ ಶಿವಾಜಿನಗರ ಕ್ಷೇತ್ರದಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌ ಮತ್ತು ಬಿಜೆಪಿಯ ಚಂದ್ರ ಎನ್‌. ನೇರ ಹಣಾಹಣಿ ನಡೆಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿಲ್ಲ. ಇದು ಕಾಂಗ್ರೆಸ್‌ಗೆ ಮತ್ತಷ್ಟು ಅನುಕೂಲಕರ ಸನ್ನಿವೇಶ ನಿರ್ಮಿಸಿದೆ.

1985ರಿಂದ ಐದು ಬಾರಿ ಶಾಸಕರಾಗಿರುವ ಕೆ.ಜೆ. ಜಾರ್ಜ್‌ ಸರ್ವಜ್ಞನಗರದಲ್ಲಿ ಆರನೇ ಗೆಲುವಿಗೆ ಪ್ರಬಲ ಹೋರಾಟ ನೆಸುತ್ತಿದ್ದಾರೆ. 2013ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಪದ್ಮನಾಭ ರೆಡ್ಡಿ ಅವರನ್ನೇ ಬಿಜೆಪಿ ಈ ಬಾರಿಯೂ ಕಣಕ್ಕಿಳಿಸಿದೆ. ಜಾರ್ಜ್‌ ಸ್ವಂತ ಶಕ್ತಿಯಲ್ಲಿ ಸರ್ವಜ್ಞನಗರ ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರಕೋಟೆಯನ್ನಾಗಿ ಮಾಡಿದ್ದಾರೆ. ಅದನ್ನು ವಶ ಮಾಡಿಕೊಳ್ಳಲು ಬಿಜೆಪಿ ಹರಸಾಹಸ ನಡೆಸುತ್ತಿದೆ.

ಶಾಂತಿನಗರ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ ಎನ್‌.ಎ. ಹ್ಯಾರಿಸ್‌, ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯಿಂದ ಬಿಬಿಎಂಪಿ ಮಾಜಿ ಸದಸ್ಯ ಕೆ. ಶಿವಕುಮಾರ್‌ ಮತ್ತು ಆಮ್‌ ಆದ್ಮಿ ಪಕ್ಷದಿಂದ ನಿವೃತ್ತ ಕೆಎಎಸ್‌ ಅಧಿಕಾರಿ ಕೆ. ಮಥಾಯಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಗೆಲುವಿನ ಓಟ ಮುಂದುವರಿಸಿರುವ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಹಾಕಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಕ್ಷೇತ್ರದ ಮೇಲೆ ಹ್ಯಾರಿಸ್‌ ಬಲವಾದ ಹಿಡಿತ ಸಾಧಿಸಿದ್ದಾರೆ. ಶಿವಕುಮಾರ್‌ ತಾವು ಪ್ರತಿನಿಧಿಸಿದ್ದ ವಾರ್ಡ್‌ ಸೇರಿದಂತೆ ಸೀಮಿತ ಪ್ರದೇಶದಲ್ಲಿ ಪರಿಚಿತರಾಗಿರುವುದು ಬಿಜೆಪಿಗಿರುವ ನಕಾರಾತ್ಮಕ ಅಂಶ.

ಸಿ.ವಿ. ರಾಮನ್‌ ನಗರ ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿರುವ ಬಿಜೆಪಿಯ ಎಸ್. ರಘು, ಮತ್ತೆ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಆನಂದ ಕುಮಾರ್‌ ಎಸ್‌. ಅವರನ್ನು ಕಣಕ್ಕಿಳಿಸಿದೆ. ಆಪ್‌ನಿಂದ ಮೋಹನ್‌ ದಾಸರಿ ಸ್ಪರ್ಧೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ರಘು ಅವರಿಂದ ಗೆಲುವು ಕಸಿಯಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಆದರೆ, ಇಲ್ಲಿಯೂ ರಘು ಅವರ ಪ್ರಭಾವಳಿಯನ್ನು ಮಣಿಸಲು ಕಾಂಗ್ರೆಸ್‌ ಬೆವರು ಹರಿಸುತ್ತಿದೆ.

ಎಚ್‌.ನಾಗೇಶ್‌
ಕೆ.ಜೆ.ಜಾರ್ಜ್
ಎನ್.ಎ. ಹ್ಯಾರಿಸ್
ಎಸ್‌.ಸುರೇಶ್ ಕುಮಾರ್
ಎಸ್‌.ರಘು
ಜಮೀರ್‌ ಅಹಮದ್‌ ಖಾನ್‌
ರಿಜ್ವಾನ್‌ ಅರ್ಷದ್‌
ದಿನೇಶ್‌ ಗುಂಡೂರಾವ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.