ಬೆಂಗಳೂರು: ಪಕ್ಷಗಳ ಸಿದ್ಧಾಂತಕ್ಕಿಂತ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸೇ ಅತ್ಯಂತ ಪ್ರಮುಖವಾಗಿರುವ ಬೆಂಗಳೂರು ದಕ್ಷಿಣ ಭಾಗದ ವ್ಯಾಪ್ತಿಯಲ್ಲಿ ಗೆದ್ದ ವ್ಯಕ್ತಿಯ ‘ಅಭಿವೃದ್ಧಿ ಸಾಧನೆ’ ಇಲ್ಲಿ ಮಣೆ. ಹೀಗಾಗಿಯೇ ಇಲ್ಲಿ ಹ್ಯಾಟ್ರಿಕ್ ವೀರರೇ ಅಧಿಕ. ಈ ವ್ಯಾಪ್ತಿಯ 11 ಕ್ಷೇತ್ರಗಳಲ್ಲಿ ಏಳು ಮಂದಿ ಸತತವಾಗಿ ಮೂರು ಬಾರಿ ವಿಜಯ ಸಾಧಿಸಿ ನಾಲ್ಕನೇ ಬಾರಿ ವಿಧಾನಸಭೆ ಮೆಟ್ಟಿಲೇರಲು ಅಣಿಯಾಗಿದ್ದಾರೆ. ಇನ್ನುಳಿದ ನಾಲ್ಕು ಕ್ಷೇತ್ರದಲ್ಲಿ ಗೆಲುವಿನ ಸಾಧನೆಯನ್ನು ಮರು ಸ್ಥಾಪಿಸಲು ಸೆಣಸಾಟ ನಡೆಸಿದ್ದಾರೆ.
ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಎಂ. ಕೃಷ್ಣಪ್ಪ, ಬಿಜೆಪಿಯ ಆರ್. ಅಶೋಕ, ರವಿ ಸುಬ್ರಮಣ್ಯ, ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ, ಮುನಿರತ್ನ ಅವರು ಹ್ಯಾಟ್ರಿಕ್ ಜಯ ಪಡೆದಿದ್ದು, ಆಯಾ ಕ್ಷೇತ್ರದಲ್ಲಿ ಮತ್ತೆ ಕಣದಲ್ಲಿದ್ದಾರೆ. ಅವರಿಗೆ ಪೈಪೋಟಿ ನೀಡಲು, ಹೊಸ ಮುಖಗಳು ಕಣಕ್ಕೆ ಬಂದಿರುವುದು ಗಮನಾರ್ಹ.
ಬೆಂಗಳೂರು ನಗರದಲ್ಲಿ ಪಕ್ಷಗಳ ಬೆಂಬಲ ಒಂದು ತೂಕವಾದರೆ, ವೈಯಕ್ತಿಕ ವರ್ಚಸ್ಸು ಮತ್ತೊಂದು ತೂಕ. ಒಂದು ಹಂತದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ಕೆಲವು ಅಭ್ಯರ್ಥಿಗಳಿಗೆ ವೈಯಕ್ತಿಕ ವರ್ಚಸ್ಸು ಹಾಗೂ ಕ್ಷೇತ್ರದ ಮತದಾರರೊಂದಿಗಿನ ಒಡನಾಟವೇ ಬಂಡವಾಳ. ಹೀಗಾಗಿ, ಸತತವಾಗಿ ತಮ್ಮ ಗೆಲುವಿನ ನಗೆ ಬೀರಲು ಸಾಧ್ಯವಾಗಿದೆ.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೆಂಗಳೂರಿನಲ್ಲಿ ವಿಜಯ ಸಾಧಿಸುವ ಶಾಸಕರಲ್ಲಿ ನಾಲ್ಕಾರು ಮಂದಿ ಸಚಿವರಾಗುವ ಪರಂಪರೆ ಹಿಂದಿನಿಂದಲೂ ನಡೆದುಬಂದಿದೆ. ರಾಜಧಾನಿಯ ಅಭಿವೃದ್ಧಿಯ ಜೊತೆಗೆ ಪ್ರಮುಖ ಖಾತೆಗಳನ್ನೂ ಇಲ್ಲಿನ ಶಾಸಕರು ಹೊಂದಿದ್ದಾರೆ. ಹೀಗಾಗಿಯೇ ಇಲ್ಲಿ ಜಯಕ್ಕಾಗಿ ಹಂಬಲಿಸುವ ಮನಗಳು ಅತಿಹೆಚ್ಚು. ಆದರೆ, ಪ್ರಭಾವಳಿ ಬೆಳೆಸಿಕೊಳ್ಳದ, ಜನರಿಗೆ ಸಿಗದವರನ್ನು ಜನರು ಎಂದಿಗೂ ಒಪ್ಪಿಕೊಂಡಿಲ್ಲ ಎಂಬುದು ಅಷ್ಟೇ ಸತ್ಯ.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಎಚ್.ಎನ್. ಅನಂತಕುಮಾರ್ ಕಾಲದಿಂದಲೂ ಬಿಜೆಪಿ ಜಯ ಗಳಿಸುತ್ತಲೇ ಬಂದಿದೆ. ಕಾಂಗ್ರೆಸ್‌ನ ಎಂ.ಕೃಷ್ಣಪ್ಪ, ಕೃಷ್ಣ ಬೈರೇಗೌಡ, ಬಿ.ಕೆ. ಹರಿಪ್ರಸಾದ್ ಅವರೂ ಇಲ್ಲಿ ಗೆಲುವು ಕಾಣಲಿಲ್ಲ. ಆದರೆ, ಇಲ್ಲಿನ ವಿಧಾನಸಭೆ ಕ್ಷೇತ್ರಗಳ ಚಿತ್ರಣ ವಿಭಿನ್ನ.
ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾರೆಡ್ಡಿ ಅವರು ಕಾಂಗ್ರೆಸ್‌ನಿಂದ ಮೂರು ಬಾರಿ ಗೆದ್ದಿದ್ದಾರೆ. ಅದಕ್ಕೂ ಮೊದಲು ಜಯನಗರದಿಂದ ನಾಲ್ಕು ಬಾರಿ ಗೆದ್ದಿದ್ದ ಅವರಿಗೆ ಕ್ಷೇತ್ರ, ಮತದಾರರು ಚಿರಪರಿಚಿತ. ಬಿಜೆಪಿ ಹಾಗೂ ಜೆಡಿಎಸ್ ಪ್ರತಿಬಾರಿಯೂ ಇಲ್ಲಿ ಅಭ್ಯರ್ಥಿಯನ್ನು ಬದಲಿಸುತ್ತಿವೆ. ಇದು ಕಾಂಗ್ರೆಸ್‌ಗೆ ಭದ್ರನೆಲೆಗೆ ಕಾರಣವಾಗಿದೆ. ಇನ್ನು ವಿಜಯನಗರದಲ್ಲೂ ಎಂ. ಕೃಷ್ಣಪ್ಪ ಅವರು ಕಾಂಗ್ರೆಸ್‌ನ ಭದ್ರಕೋಟೆ ಕಟ್ಟಿದ್ದಾರೆ. ಒಂದು ಕಾಲದ ಸ್ನೇಹಿತ ವಿ. ಸೋಮಣ್ಣ ಅವರನ್ನೂ ಕೃಷ್ಣಪ್ಪ ಮಣಿಸಿದ್ದರು. ಕಳೆದ ಬಾರಿ ಬಿಜೆಪಿಯಿಂದ ಎಚ್. ರವೀಂದ್ರ ಅತ್ಯಲ್ಪ ಮತದಿಂದ ಸೋತಿದ್ದರು. ಈ ಬಾರಿಯೂ ಕೃಷ್ಣಪ್ಪ ಅವರಿಗೆ ರವೀಂದ್ರ ಎದುರಾಳಿಯಾಗಿದ್ದು ತೀವ್ರ ಸ್ಪರ್ಧೆಯಿದೆ.
ಪದ್ಮನಾಭನಗರದಲ್ಲಿ ಬಿಜೆಪಿ ಆರ್. ಅಶೋಕ, ಈ ಬಾರಿ ಕನಕಪುರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧವೂ ಸ್ಪರ್ಧಿಸಿದ್ದು, ಪದ್ಮನಾಭನಗರವನ್ನೂ ಉಳಿಸಿಕೊಳ್ಳುವ ಕಾತುರದಲ್ಲಿದ್ದಾರೆ. ಉತ್ತರಹಳ್ಳಿಯಂತಹ ಬೃಹತ್ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದ ಅಶೋಕ ಪದ್ಮನಾಭನಗರದಲ್ಲಿಯೂ ಮೂರು ಬಾರಿ ಗೆದ್ದು, ‘ಡಬಲ್ ಹ್ಯಾಟ್ರಿಕ್’ ಸಾಧಿಸಿದ್ದಾರೆ. ಇದೀಗ ಮತ್ತೊಂದು ಬಾರಿ ವಿಧಾನಸಭೆ ಪ್ರವೇಶಿಸಲು ಕಣದಲ್ಲಿದ್ದು, ಕಾಂಗ್ರೆಸ್‌ನಿಂದ ರಘುನಾಥ ರೆಡ್ಡಿ ತೀವ್ರ ಸ್ಪರ್ಧೆ ನೀಡಿದ್ದಾರೆ. ಶಿವಕುಮಾರ್ ತಾವೇ ಇಲ್ಲಿಯ ಅಭ್ಯರ್ಥಿ ಎಂದು ಹೇಳಿಕೊಂಡಿರುವುದು ಹೆಚ್ಚಿನ ಸ್ಪರ್ಧೆಗೆ ಕಾರಣವಾಗಿದೆ.
ಬಸವನಗುಡಿಯಲ್ಲಿ ರವಿ ಸುಬ್ರಮಣ್ಯ, ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣದಲ್ಲಿ ಎಂ. ಕೃಷ್ಣಪ್ಪ ಅವರು ಬಿಜೆಪಿಯಿಂದ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ರವಿ ಸುಬ್ರಮಣ್ಯ, ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ ಅವರಿಗೂ ಪ್ರತಿ ಬಾರಿ ಎದುರಾಳಿಗಳು ಬದಲಾಗುತ್ತಿದ್ದಾರೆ. ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಪ್ರತಿರೋಧ ತೋರಿದ್ದರೂ, ಜೆಡಿಎಸ್ ಮತಗಳನ್ನು ಸೆಳೆಯುತ್ತಿದ್ದವು. ಈ ಬಾರಿಯೂ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಮುಖ ಎದುರಾಳಿಯಾಗಿದೆ. ಬಿಜೆಪಿಯಿಂದ ಕ್ಷೇತ್ರವನ್ನು ಕಸಿದುಕೊಳ್ಳಲು ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಬಸವನಗುಡಿಯಲ್ಲಿ ಯು.ಬಿ. ವೆಂಕಟೇಶ್, ಬೊಮ್ಮನಹಳ್ಳಿ ಚಿತ್ರ ನಿರ್ಮಾಪಕ ಉಮಾಪತಿ ಗೌಡ, ಬೆಂಗಳೂರು ದಕ್ಷಿಣದಲ್ಲಿ ಆರ್.ಕೆ. ರಮೇಶ್ ಕಾಂಗ್ರೆಸ್‌ನಿಂದ ಪೈಪೋಟಿ ನೀಡುತ್ತಿದ್ದಾರೆ. ಆರ್.ಕೆ. ರಮೇಶ್ ಅವರಿಗೆ ಬಂಡಾಯ ಅಭ್ಯರ್ಥಿ ರಾಜಗೋಪಾಲರೆಡ್ಡಿ ಅವರದ್ದೇ ಸಮಸ್ಯೆಯಾಗಿದೆ. ಜೆಡಿಎಸ್ ಎಂದಿನಂತೆ ಹೆಚ್ಚಿನ ಮತಗಳನ್ನು ಸೆಳೆದು, ಅಚ್ಚರಿ ಮೂಡಿಸುವ ಕಾತುರದಲ್ಲಿದೆ.
ಗೋವಿಂದರಾಜನಗರದಲ್ಲಿ ‘ವಿ. ಸೋಮಣ್ಣ ನಾಮಬಲ’ವನ್ನೇ ಬಿಜೆಪಿಯ ಉಮೇಶ್ ಶೆಟ್ಟಿ ಅವಲಂಬಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ಪ್ರಿಯಕೃಷ್ಣ ಅವರು ಈ ಬಾರಿ ಏನಾದರೂ ಸರಿ ಕ್ಷೇತ್ರವನ್ನು ಮತ್ತೆ ಗೆಲ್ಲಬೇಕೆಂಬ ಉತ್ಸಾಹದಲ್ಲಿದ್ದಾರೆ. ಇದಕ್ಕೆ ಅವರ ತಂದೆ, ಪಕ್ಷದ ಕ್ಷೇತ್ರದ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರು ಬೆನ್ನೆಲುಬಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದ ಸೋಮಣ್ಣ ಇಲ್ಲಿಗೆ ಬಂದು ಪ್ರಚಾರ ಮಾಡಲೂ ಬಿಡುವಿಲ್ಲದಿರುವುದು ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಂತಾಗಿದೆ.
ಮತದಾರರ ಗುರುತಿನ ಚೀಟಿ ವಿವಾದದಲ್ಲಿ ಚುನಾವಣೆಯೇ ತಡವಾಗಿದ್ದ ಹಾಗೂ ಬೇಕಿಲ್ಲದ ಅಭಿವೃದ್ಧಿಯ ವಿಷಯದಲ್ಲಿ ಸದಾ ವಿವಾದದಲ್ಲಿರುವಂತೆ ಮಾಡಿರುವ ಮುನಿರತ್ನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ. ಎರಡು ಬಾರಿ ಕಾಂಗ್ರೆಸ್‌ನಿಂದ, ಒಂದು ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿರುವ ಮುನಿರತ್ನ ಅವರನ್ನು ಮಣಿಸಲು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅಭ್ಯರ್ಥಿ ಕುಸುಮಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರತ್ನಗೆ ಕುಸುಮಾ ಪ್ರತಿಸ್ಪರ್ಧಿಯಾಗಿದ್ದರು. ಈ ಬಾರಿ ಡಿ.ಕೆ. ಸುರೇಶ್ ಜೊತೆಗಿರುವುದರಿಂದ ಪೈಪೋಟಿ ಹೆಚ್ಚಾಗಿದೆ.
ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಎರಡನೇ ಬಾರಿ ವಿಜಯ ಸಾಧಿಸಬೇಕೆಂದು ಬಿಜೆಪಿಯ ಉದಯ್ ಗರುಡಾಚಾರ್ ಹಾಗೂ ಕಾಂಗ್ರೆಸ್‌ನ ಆರ್.ವಿ. ದೇವರಾಜ್ ಮತ್ತೆ ಸೆಣಸುತ್ತಿದ್ದಾರೆ. 2013ರಲ್ಲಿ ಆರ್.ವಿ. ದೇವರಾಜ್ ಜಯ ಸಾಧಿಸಿದ್ದರೆ, 2018ರಲ್ಲಿ ಉದಯ್ ಗರುಡಾಚಾರ್ ಗೆದ್ದಿದ್ದರು. ಮೂರನೇ ಬಾರಿಗೆ ಇಬ್ಬರೂ ಸ್ಪರ್ಧಿಗಳಾಗಿದ್ದು, ಜಿದ್ದಾಜಿದ್ದಿಯ ಸ್ಪರ್ಧೆ ಇದೆ. ಕಾಂಗ್ರೆಸ್‌ನಿಂದ ಸ್ಪರ್ಧೆ ಬಯಸಿದ್ದ ಕೆಜಿಎಫ್ ಬಾಬು ಸ್ವತಂತ್ರವಾಗಿ ಕಣದಲ್ಲಿರುವುದು ದೇವರಾಜ್ ಮತ ಸೆಳೆಯುವ ಲಕ್ಷಣಗಳಿವೆ.
ಜಯನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ಮರುಪಡೆಯಲು ಪೈಪೋಟಿಯಲ್ಲಿವೆ. ಎರಡು ಬಾರಿ ಕ್ಷೇತ್ರ ಗೆದ್ದಿದ್ದ ಬಿಜೆಪಿ, ವಿಜಯಕುಮಾರ್ ನಿಧನದಿಂದ ಕಳೆದ ಬಾರಿ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರಿಂದ ಸೋಲು ಅನುಭವಿಸಿತು. ಅಪ್ಪ ರಾಮಲಿಂಗಾರೆಡ್ಡಿ– ಮಗಳು ಸೌಮ್ಯ ರೆಡ್ಡಿ ಹಾಗೂ ಜೆಡಿಎಸ್ ಒಂದಾಗಿದ್ದರಿಂದ ಬಿಜೆಪಿಗೆ ಸೋಲಾಯಿತು ಎನ್ನುತ್ತಿರುವ ಕಾರ್ಯಕರ್ತರು, ಸಿ.ಕೆ. ರಾಮಮೂರ್ತಿಯ ಜೊತೆಗಿದ್ದು ಬಿಜೆಪಿ ತೆಕ್ಕೆಗೆ ಮತ್ತೆ ಕ್ಷೇತ್ರವನ್ನು ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಒಟ್ಟಾರೆ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ವಿಭಿನ್ನ ಲೆಕ್ಕಾಚಾರಗಳಿದ್ದು, ವ್ಯಕ್ತಿಯ ವರ್ಚಸ್ಸು, ಪಕ್ಷಗಳ ಸಿದ್ಧಾಂತ ಹಾಗೂ ಸ್ಥಳೀಯ ಸಮಸ್ಯೆಗಳೇ ಕೇಂದ್ರೀಕೃತವಾಗಿವೆ. 11ರಲ್ಲಿ 7 ಬಿಜೆಪಿ, 4 ಕಾಂಗ್ರೆಸ್ ಶಾಸಕರಿದ್ದು, ಅವುಗಳನ್ನು ಉಳಿಸಿಕೊಳ್ಳುವ ಜೊತೆಗೆ ಇನ್ನಷ್ಟು ಗೆಲ್ಲುವ ಉತ್ಸಾಹ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.