ADVERTISEMENT

ಭಾಲ್ಕಿ: ಕಾವೇರಿದ ದಾಯಾದಿಗಳ ನಡುವಿನ ಕಾಳಗ

ಕಾಂಗ್ರೆಸ್‌ನ ಈಶ್ವರ ಖಂಡ್ರೆ –ಬಿಜೆಪಿಯ ಪ್ರಕಾಶ ಖಂಡ್ರೆ ನಡುವೆ ನೇರ ಹಣಾಹಣಿ

ಬಸವರಾಜ ಎಸ್.ಪ್ರಭಾ
Published 15 ಏಪ್ರಿಲ್ 2023, 6:04 IST
Last Updated 15 ಏಪ್ರಿಲ್ 2023, 6:04 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ಇಲ್ಲಿನ ಭಾಲ್ಕಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು, ಎರಡೂ ಪಕ್ಷಗಳ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಚುನಾವಣೆ ಕಣ ರಂಗೇರಿದೆ.

ಕಾಂಗ್ರೆಸ್‌ನ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಮಾಜಿ ಶಾಸಕ ಪ್ರಕಾಶ್‌ ಖಂಡ್ರೆ ಪರಸ್ಪರ ದಾಯಾದಿಗಳಾಗಿದ್ದು, ಈ ಬಾರಿ ಈ ಇಬ್ಬರ ನಡುವೆ ನಡುವೆ ನೇರಾ ಹಣಾಹಣಿ ಏರ್ಪಡುವ ಸಾಧ್ಯತೆಯಿದ್ದು, ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಶಾಸಕ ಈಶ್ವರ ಖಂಡ್ರೆ ಅವರು ತಾಲ್ಲೂಕಿನ ಬಹುತೇಕ ಹೋಬಳಿಗಳಲ್ಲಿ ಸಾಧನಾ ಸಮಾವೇಶ, ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ವಿತರಿಸುವುದರ ಮೂಲಕ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ. ಪ್ರಕಾಶ ಖಂಡ್ರೆ ಅವರಿಗೆ ಟಿಕೆಟ್‌ ಘೋಷಣೆಯಾಗುತ್ತಲೇ ಬಿಜೆಪಿ ಯುವ ಮುಖಂಡ ಪ್ರಸನ್ನ ಖಂಡ್ರೆ ಅವರು ಅನ್ಯ ಪಕ್ಷದ ಕಾರ್ಯಕರ್ತರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಾ, ಪಕ್ಷದ ಪ್ರಮುಖರ ಮನೆಗಳಿಗೆ ಭೇಟಿ ನೀಡಿ, ಈ ಬಾರಿ ನಮ್ಮ ತಂದೆಯನ್ನು ಬೆಂಬಲಿಸುವಂತೆ ಮನವಿ ಮಾಡುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

2008 ರಿಂದ 2018 ರವರೆಗೆ ನಡೆದ ಸತತ ಮೂರು ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್‌ ಬಾರಿಸಿರುವ ಶಾಸಕ ಈಶ್ವರ ಖಂಡ್ರೆ ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2008 ರಿಂದ 2018ರವರೆಗೆ ಸತತ ಮೂರು ವಿಧಾನಸಭೆ ಚುನಾವಣೆ, 2016ರಲ್ಲಿ ಬೀದರ್‌ ಕ್ಷೇತ್ರದ ಉಪ ಚುನಾವಣೆ, 2021ರ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಪ್ರಕಾಶ ಖಂಡ್ರೆ ಅವರು ಅನುಕಂಪದ ಅಲೆಯ ನಿರೀಕ್ಷೆಯಲ್ಲಿದ್ದಾರೆ.

ಕ್ಷೇತ್ರವು 2008ರಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, 2013ರಲ್ಲಿ ಕಾಂಗ್ರೆಸ್‌, ಕೆಜೆಪಿ, ಬಿಜೆಪಿ, 2018ರಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿತ್ತು. ಈ ಚುನಾವಣೆಗಳಲ್ಲಿ ಬಿಜೆಪಿಯ ಮೂಲ ಮತದಾರರ ಒಡಕಿನ ಲಾಭ ಸಹಜವಾಗಿ ಶಾಸಕ ಈಶ್ವರ ಖಂಡ್ರೆಗೆ ಭರ್ಜರಿ ಗೆಲುವಿಗೆ ಕಾರಣವಾಗಿತ್ತು.

ಸದ್ಯ ಬಿಜೆಪಿಯಲ್ಲಿ ಬಂಡಾಯದ ಲಕ್ಷಣಗಳು ಕಂಡು ಬಂದಿಲ್ಲ. ಇನ್ನೂ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿ ಸಿಕ್ಕಿಲ್ಲ. 1999, 2004 ರಂತೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ನೇರ ಸ್ಪರ್ಧೆ ನಡೆಯಲಿದೆ. ಹಾಗಾಗಿ, 1999, 2004 ರ ಫಲಿತಾಂಶ ಮರು ಕಳಿಸಬಹುದೇ ಎಂಬ ಕುತೂಹಲ ತಾಲ್ಲೂಕಿನ ಜನರಲ್ಲಿ ಮನೆ ಮಾಡಿದೆ.

ಈ ಬಾರಿಯ ದಾಯಾದಿಗಳ ಮಧ್ಯದ ಚುನಾವಣೆ ತುಂಬಾ ಜಿದ್ದಾಜಿದ್ದಿ ನಿಂದ ನಡೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಮತದಾರ ಪ್ರಭುಗಳು ಯಾರಿಗೆ ಜೈ ಎನ್ನುತ್ತಾರೆ ಎಂಬುದು ಕಾದು ನೋಡಕಾಗಿದೆ ಎನ್ನುತ್ತಾರೆ ಕ್ಷೇತ್ರದ ಜನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.