ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಸೋಮವಾರ ನೂರಾರು ಕಾರ್ಯಕರ್ತರು, ಬೆಂಬಲಿಗರ ಜತೆ ಎರಡು ಕಿ.ಮೀ.ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಕೆಗೆ ಆಗಮಿಸಿದರು.
ನಗರದ ಕೋಡಿಬಾಗದಲ್ಲಿರುವ ಖಾಫ್ರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆ ಆರಂಭವಾಯಿತು. ಸತೀಶ ಸೈಲ್, ಕಾಂಗ್ರೆಸ್ ಪರ ಘೋಷಣೆ ಕೂಗುತ್ತ ಕಾರ್ಯಕರ್ತರು ಹೆಜ್ಜೆ ಹಾಕಿದರು.
ನಗರಸಭೆ ಕಚೇರಿ ಆವರಣದಲ್ಲಿ ತೆರೆಯಲಾದ ಚುನಾವಣಾಧಿಕಾರಿ ಕಚೇರಿಯತ್ತ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ತೆರಳಿದರು. ಕಾರ್ಯಕರ್ತರನ್ನು ಚುನಾವಣಾಧಿಕಾರಿ ಕಚೇರಿಯಿಂದ 200 ಮೀ. ದೂರದಲ್ಲಿ ತಡೆದು ನಿಲ್ಲಿಸಲಾಯಿತು.
'ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾನು ಗೆಲುವು ಸಾಧಿಸಲಿದ್ದೇನೆ. ನಿರಂತರವಾಗಿ ಜನರೊಟ್ಟಿಗೆ ಇದ್ದು ಅವರ ಕಷ್ಟಕ್ಕೆ ಸ್ಪಂದಿಸಲಿದ್ದೇನೆ' ಎಂದು ಸತೀಶ್ ಸೈಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮಾನಂದ ನಾಯಕ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಶಂಭು ಶೆಟ್ಟಿ, ಪ್ರಭಾಕರ ಮಾಳ್ಸೇಕರ್, ಕಾರವಾರ ಹಾಗೂ ಅಂಕೋಲಾ ತಾಲ್ಲೂಕಿನ ಹಲವು ಕಾಂಗ್ರೆಸ್ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.