ADVERTISEMENT

ಬೈಂದೂರು | ಅನುಕಂಪ V/S ಹೊಸಮುಖ; ಯಾರಿಗೆ ವಿಜಯಮಾಲೆ?

​ಪ್ರಜಾವಾಣಿ ವಾರ್ತೆ
Published 7 ಮೇ 2023, 8:41 IST
Last Updated 7 ಮೇ 2023, 8:41 IST
ಗುರುರಾಜ ಗಂಟಿಹೊಳೆ, ಬೈಂದೂರು ಬಿಜೆಪಿ ಅಭ್ಯರ್ಥಿ
ಗುರುರಾಜ ಗಂಟಿಹೊಳೆ, ಬೈಂದೂರು ಬಿಜೆಪಿ ಅಭ್ಯರ್ಥಿ   
ಪುರಾಣ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇಗುಲ, ಕ್ರೋಢ ಶಂಕರನಾರಾಯಣ, ಬ್ರಾಹ್ಮೀ ಕಮಲಶಿಲೆ, ಮರವಂತೆಯ ಕಡಲ ಕಿನಾರೆ, ಸೋಮೆಶ್ವರ ಸಮುದ್ರ ತೀರ, ನಿಸರ್ಗ ರಮಣೀಯ ಒತ್ತಿನೇಣೆ ಸೇರಿದಂತೆ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಸಂಗಮ ಕ್ಷೇತ್ರವಾಗಿರುವ ‘ಬೈಂದೂರು‘, ಜಿಲ್ಲೆಯಲ್ಲಿಯೇ ಉದ್ದನೆಯ ಕರಾವಳಿ ತೀರ ಹೊಂದಿರುವ ಪಶ್ಚಿಮ ಘಟ್ಟದ ಬುಡದಲ್ಲಿ ಮಲೆನಾಡಿನೊಂದಿಗೆ ಬೆಸೆದುಕೊಂಡಿರುವ ಕ್ಷೇತ್ರ.  ಗಂಗೊಳ್ಳಿ, ಮರವಂತೆ ಹಾಗೂ ಕೋಡೇರಿ ಮೀನುಗಾರಿಕಾ ಬಂದರು ಕ್ಷೇತ್ರದಲ್ಲಿವೆ.

ಬೈಂದೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಈ ಬಾರಿ ಕಣದಲ್ಲಿಲ್ಲ. ಅನೀರಿಕ್ಷಿತ ಬೆಳವಣಿಗೆಯಲ್ಲಿ ಸಂಘ ಪರಿವಾರದಲ್ಲಿ ಪ್ರಚಾರಕರಾಗಿ ಗುರುತಿಸಿಕೊಂಡಿದ್ದ ಗುರುರಾಜ ಶೆಟ್ಟಿ ಗಂಟಿಹೊಳೆ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕಾರಣಕ್ಕೆ ಬೈಂದೂರಿನಲ್ಲಿ ಈ ಬಾರಿಯ ಚುನಾವಣಾ ಲೆಕ್ಕಾಚಾರ ರಾಜಕೀಯ ಪಂಡಿತರ ಊಹೆಯನ್ನು ಮೀರುವ ಲಕ್ಷಣಗಳು ಕಾಣುತ್ತಿವೆ.

ಯಡ್ತರೇ ಮಂಜಯ್ಯ ಶೆಟ್ಟಿ ಅವರಂಥವರನ್ನು ಅವಿರೋಧವಾಗಿ ಆಯ್ಕೆ ಮಾಡಿದ ರಾಜಕೀಯ ಇತಿಹಾಸ ಬೈಂದೂರು ಕ್ಷೇತ್ರಕ್ಕಿದೆ. ಇಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲದ ಹೋರಾಟ ನೀಡುತ್ತಾ ಬಂದಿದೆ. 1998ರಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುತ್ತಿರುವ ಕೆ.ಗೋಪಾಲ ಪೂಜಾರಿ ನಾಲ್ಕು ಅವಧಿಗೆ ಶಾಸಕರಾಗಿದ್ದಾರೆ. ಎರಡು ಬಾರಿ ಸೋಲು ಕಂಡಿದ್ದಾರೆ.

ಬಿಜೆಪಿಯಿಂದ ಕೆ.ಲಕ್ಷ್ಮೀನಾರಾಯಣ ಹಾಗೂ ಬಿ.ಎಂ.ಸುಕುಮಾರ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಭಾಗದ ಕೆಲವು ಗ್ರಾಮಗಳು ಬೈಂದೂರು ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ.

ADVERTISEMENT

ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ನೋಡುವುದಾದರೆ ಮೇಲ್ನೋಟಕ್ಕೆ ಹಲವು ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ಸೆಣೆಸುತ್ತಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಬಿಲ್ಲವ ಸಮುದಾಯದವರಾದರೆ, ಬಿಜೆಪಿಯ ಗುರುರಾಜ ಶೆಟ್ಟಿ ಗಂಟಿಹೊಳೆ ಬಂಟ ಸಮುದಾಯಕ್ಕೆ ಸೇರಿದವರು.

ಕಾಂಗ್ರೆಸ್‌ ಬಲಾಬಲ

2018ರ ಚುನಾವಣೆಯ ಸೋಲಿನ ಬಳಿಕವೂ ಕ್ಷೇತ್ರದೊಂದಿಗಿನ ಸಂಪರ್ಕ ಕಳೆದುಕೊಳ್ಳದ ಕೆ.ಗೋಪಾಲ ಪೂಜಾರಿ ಚುನಾವಣೆ ಆರಂಭಕ್ಕೂ ಎಂಟತ್ತು ತಿಂಗಳು ಮುನ್ನವೇ ತಾಲೀಮು ನಡೆಸಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಬಲ ಬಂದಂತಾಗಿದೆ. ಕ್ಷೇತ್ರದಿಂದ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಹಾಕಿದ ಏಕೈಕ ಅಭ್ಯರ್ಥಿಯಾಗಿರುವ ಗೋಪಾಲ ಪೂಜಾರಿಗೆ ಬಂಡಾಯದ ಬಿಸಿ ತಟ್ಟಿಲ್ಲ. ಜತೆಗೆ ಕ್ಷೇತ್ರದ ಜನರ ಅನುಕಂಪವೂ ಕಾಣುತ್ತದೆ.

ಶಾಸಕರಾಗಿದ್ದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂದೆ ಕ್ಷೇತ್ರದ ಅಭಿವೃದ್ಧಿಗೆ 50 ಅಂಶಗಳ ಪ್ರಣಾಳಿಕೆ ಮುಂದಿಟ್ಟು ಗೋಪಾಲ ಪೂಜಾರಿ ಮತಯಾಚನೆ ಮಾಡುತ್ತಿದ್ದಾರೆ. ಬಿಜೆಪಿಯ ಮುಖಂಡರಾಗಿದ್ದ ಬಾಬು ಶೆಟ್ಟಿ ತಗ್ಗರ್ಸೆ, ಯಡ್ತರೆ ಶಂಕರ ಪೂಜಾರಿ ಅವರಂಥಹ ಹಿರಿಯ ನಾಯಕರು ಕಾರ್ಯಕರ್ತರೊಂದಿಗೆ ಕಾಂಗ್ರೆಸ್‌ ಸೇರಿರುವುದು, ಎದುರಾಳಿಯಾಗಿ ಬಿಜೆಪಿಯಿಂದ ಹೊಸಮುಖವನ್ನು ಕಣಕ್ಕಿಳಿಸಿರುವುದು ಕೈ ಪಾಳಯದಲ್ಲಿ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ. ಯುವಕ ಹಾಗೂ ಸರಳ ವ್ಯಕ್ತಿತ್ವದ ಅಭ್ಯರ್ಥಿಗೆ ಮತ ನೀಡುವಂತೆ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಯುತ್ತಿರುವುದು ಕಾಂಗ್ರೆಸ್‌ಗೆ ಪೆಟ್ಟುಕೊಡಬಹುದು ಎಂಬ ಲೆಕ್ಕಾಚಾರಗಳು ಇವೆ.

ಬಿಜೆಪಿಗೆ ಪೂರಕ ಅಂಶಗಳು

ಘಟನುಘಟಿಗಳನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿರುವ ಗುರುರಾಜ್ ಗಂಟಿಹೊಳೆ ‘ಸಾಮಾನ್ಯ ಕಾರ್ಯಕರ್ತ’ ಎಂಬ ಅಸ್ತ್ರವೇ ಬಿಜೆಪಿಗೆ ಪ್ಲಸ್ ಪಾಯಿಂಟ್. ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶಗಳು ಸೃಷ್ಟಿಯಾಗುತ್ತವೆ, ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಕ್ಷೇತ್ರದಾದ್ಯಂತ ಬಿಜೆಪಿ ಅಬ್ಬರದ ಪ್ರಚಾರ ಮಾಡುತ್ತಿದೆ. ಜತೆಗೆ ಕಾರ್ಯಕರ್ತರ ಉತ್ಸಾಹವೂ ಹೆಚ್ಚಾಗಿರುವುದು ಬಿಜೆಪಿಗೆ ಬಲ ತುಂಬಿದಂತಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜೆ.ಪಿ.ನಡ್ಡಾ, ಅಮಿತ್ ಶಾ, ನಟಿ ತಾರಾ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಬಿ.ವೈ.ರಾಘವೇಂದ್ರ, ನಟರಾದ ಪ್ರಮೋದ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ಪ್ರಚಾರಕರು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ.

ಸರಣಿ ಪ್ರಚಾರ ಸಭೆ, ಬೂತ್ ಸಭೆ, ಮನೆ ಮನೆ ಪ್ರಚಾರದ ಮೂಲಕ ಬಿಜೆಪಿ ಪಾರಂಪರಿಕ ಮತಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ಬಲ ಹೊಂದಿರುವ ಬಿಜೆಪಿ ಮತಗಳನ್ನಾಗಿ ಪರಿವರ್ತಿಸಲು ಕಾರ್ಯತಂತ್ರ ರೂಪಿಸಿದೆ.

ಬಿಜೆಪಿಯ ಟಿಕೆಟ್‌ನ ಪ್ರಬಲ ಅಕಾಂಕ್ಷಿಗಳಾಗಿದ್ದ ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಚುನಾವಣಾ ಪ್ರಚಾರದಿಂದ ದೂರ ಸರಿದಿರುವುದು, ಪಕ್ಷದ ಹಿರಿಯ ಮುಖಂಡ ಬಾಬು ಶೆಟ್ಟಿ ತಗ್ಗರ್ಸೆ ಪಕ್ಷಕ್ಕೆ ರಾಜಿನಾಮೆ ನೀಡಿರುವುದು, ಯಡ್ತರೆ ಶಂಕರ ಪೂಜಾರಿ, ಸದಾಶಿವ ಡಿ ಪಡುವರಿ, ಸಸಿಹಿತ್ಲು ವೆಂಕಟ ಪೂಜಾರಿ ಸೇರಿದಂತೆ ಹಲವರು ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಪೆಟ್ಟುಬೀಳಬಹುದು ಎನ್ನಲಾಗುತ್ತಿದೆ.

ದಿನದಿಂದ ದಿನಕ್ಕೆ ಎರಡು ಪಕ್ಷಗಳ ಅಭ್ಯರ್ಥಿಗಳು ಚುನಾವಣೆ ಗೆಲ್ಲಲು ಎಲ್ಲ ಅಸ್ತ್ರಗಳ ಪ್ರಯೋಗಕ್ಕೆ ಮುಂದಾಗುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಚಾರ ಪೈಪೋಟಿ ಜೋರಾಗಿದೆ. ಬಾಡೂಟ, ಮಿತ್ರ ಕೂಟ, ಪಕ್ಷಾಂತರ ಪರ್ವಗಳು ನಡೆಯುತ್ತಿವೆ. ಮದುವೆ-ಮುಂಜಿ ಮುಂತಾದ ಸಮಾರಂಭಗಳಲ್ಲಿಯೂ ಮತದಾರರ ಓಲೈಕೆ ಹೆಚ್ಚಾಗಿದೆ.

ಜಾತಿ ಸಮೀಕ್ಷೆ

65 ಗ್ರಾಮಗಳನ್ನು ಹೊಂದಿರುವ ಬೈಂದೂರು ಕ್ಷೇತ್ರದಲ್ಲಿ ಬಿಲ್ಲವರು ಹಾಗೂ ಬಂಟರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಮೀನುಗಾರರ (ಮೊಗವೀರರು ಕನ್ನಡ ಖಾರ್ವಿ ಕೊಂಕಣ ಖಾರ್ವಿ) ಪರಿಶಿಷ್ಷ ಜಾತಿ ಪರಿಶಿಷ್ಟ ಪಂಗಡ ದೇವಾಡಿಗರು ಕ್ಷತ್ರೀಯ ( ರಾಮಕ್ಷತ್ರಿಯ ಹಾಗೂ ಸೋಮ ಕ್ಷತ್ರೀಯ ) ಅಲ್ಪಸಂಖ್ಯಾತರು (ಮುಸ್ಲಿಂ ಕ್ರೈಸ್ತ ಜೈನ್) ಬ್ರಾಹ್ಮಣ (ಬ್ರಾಹ್ಮಣ ಜಿಎಸ್‌ಬಿ ದೈವಜ್ಞ ) ವಿಶ್ವಕರ್ಮರು ಕುಲಾಲ್‌ ಕೊಠಾರಿ ಮರಾಠಿ ನಾಯ್ಕ್‌ ಶೆಟ್ಟಿಗಾರ್ ಜೋಗಿ ಹಾಗೂ ಬಳೆಗಾರ ಸಮುದಾಯದವರು ಇದ್ದಾರೆ.

ಕಣದಲ್ಲಿ ಇರುವವರು ಅಭ್ಯರ್ಥಿಗಳು

ಕೆ.ಗೋಪಾಲ್‌ ಪೂಜಾರಿ (ಕಾಂಗ್ರೆಸ್)

ಗುರುರಾಜ್ ಗಂಟಿಹೊಳೆ (ಬಿಜೆಪಿ)

ಮನ್ಸೂರ್‌ ನಾವುಂದ (ಜೆಡಿಎಸ್)

ರಮಾನಂದ ಪ್ರಭು (ಎಎಪಿ)

ಪ್ರಸಾದ್ (ಉತ್ತಮ ಪ್ರಜಾಕೀಯ)

ಕೊಲ್ಲೂರು ಮಂಜುನಾಥ್ ನಾಯಕ್‌ (ರಾಷ್ಟ್ರೀಯ ಸಮಾಜ ದಳ (ಆರ್) )

ಚಂದ್ರಶೇಖರ ಜಿ (ಪಕ್ಷೇತರ)

ಬಿ.ಶ್ಯಾಮ (ಪಕ್ಷೇತರ)

ಎಚ್‌.ಸುರೇಶ್ ಪೂಜಾರಿ (ಪಕ್ಷೇತರ)

2013ರ ಚುನಾವಣಾ ಫಲಿತಾಂಶ

ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್) – 82277

ಬಿ.ಎಂ.ಸುಕುಮಾರ ಶೆಟ್ಟಿ ( ಬಿಜೆಪಿ) – 51128

ಗೆಲುವಿನ ಅಂತರ - 31149

2018 ರ ಚುನಾವಣಾ ಫಲಿತಾಂಶ

ಬಿ.ಎಂ.ಸುಕುಮಾರ ಶೆಟ್ಟಿ ( ಬಿಜೆಪಿ) – 96029

ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್) – 71636

ಗೆಲುವಿನ ಅಂತರ -24393

ಕೆ.ಗೋಪಾಲ ಪೂಜಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.