ADVERTISEMENT

ಚಿತ್ರದುರ್ಗ | ಆರು ಕ್ಷೇತ್ರಕ್ಕೆ ಪಂಚ ವನಿತೆಯರು

​ಪ್ರಜಾವಾಣಿ ವಾರ್ತೆ
Published 7 ಮೇ 2023, 5:18 IST
Last Updated 7 ಮೇ 2023, 5:18 IST
ಕೆ.ಪೂರ್ಣಿಮಾ
ಕೆ.ಪೂರ್ಣಿಮಾ   

ಕೆ.ಪಿ. ಓಂಕಾರಮೂರ್ತಿ

ಚಿತ್ರದುರ್ಗ: ಒನಕೆ ಓಬವ್ವ ನಾಡಿನಲ್ಲಿ ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಆದರೆ ಇವರನ್ನು ಪ್ರತಿನಿಧಿಸಬೇಕಿದ್ದವರ ಸಂಖ್ಯೆ ಮಾತ್ರ ಒಂದಂಕಿಯಲ್ಲಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 76 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 6 ಮಹಿಳಾ ಅಭ್ಯರ್ಥಿಗಳು ಮಾತ್ರ ಅಖಾಡದಲ್ಲಿದ್ದಾರೆ. ಆದರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಪ್ರಚಾರ ನಡೆಸಿದ್ದ ಸೌಭಾಗ್ಯ ಬಸವರಾಜನ್‌ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಈ ಸಂಖ್ಯೆ 5ಕ್ಕೆ ನಿಂತಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 14,03,585 ಮತದಾರರಿದ್ದಾರೆ. ಅದರಲ್ಲಿ 7,00,811 ಪುರುಷ ಮತ್ತು 7,02,702 ಮಹಿಳಾ ಮತದಾರರು ಇದ್ದಾರೆ.  ಚಿತ್ರದುರ್ಗ, ಚಳ್ಳಕೆರೆ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.

ಈ ಬಾರಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಮೊಳಕಾಲ್ಮುರಿನಿಂದ 10, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಹೊಳಲ್ಕೆರೆಯಿಂದ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆದರೆ ಈ ಎರಡು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳಿಲ್ಲ. ಉಳಿದಂತೆ ಸಾಮಾನ್ಯ ಕ್ಷೇತ್ರವಾದ ಹಿರಿಯೂರಿನಲ್ಲಿ 12 ಅಭ್ಯರ್ಥಿಗಳಲ್ಲಿ ಬಿಜೆಪಿಯಿಂದ ಕೆ.ಪೂರ್ಣಿಮಾ, ಪಕ್ಷೇತರ ಅಭ್ಯರ್ಥಿಯಾಗಿ ಬಿ.ಶಶಿಕಲ ಸ್ಪರ್ಧಿಸಿದ್ದಾರೆ. ಹೊಸದುರ್ಗದಲ್ಲಿ 13 ಅಭ್ಯರ್ಥಿಗಳಲ್ಲಿ ಪಕ್ಷೇತರವಾಗಿ ಬಿ.ಗೀತಾಂಜಲಿ ಕಣದಲ್ಲಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಚಳ್ಳಕೆರೆಯಲ್ಲಿ 7 ಅಭ್ಯರ್ಥಿಗಳಿದ್ದು, ಆಮ್‌ ಆದ್ಮಿ ಪಕ್ಷದಿಂದ ಮಾರಕ್ಕ, ಪಕ್ಷೇತರವಾಗಿ ಅಂಜಮ್ಮ ಸ್ಪರ್ಧಿಸಿದ್ದಾರೆ.

ಟಿಕೆಟ್‌ ಹಂಚಿಕೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡದಿದ್ದರೂ ಸಮಾಧಾನವಾಗುವ ರೀತಿಯಲ್ಲಿ ಪ್ರಾತಿನಿಧ್ಯ ಕೊಡಬೇಕಿತ್ತು. ಅಧಿಕಾರಕ್ಕೆ ಬರುವ ಪಕ್ಷಗಳು ಸಚಿವ ಸಂಪುಟಕ್ಕೂ ಮಹಿಳೆಯರನ್ನು ಪರಿಗಣಿಸಬೇಕು.
ಕೆ. ಪೂರ್ಣಿಮಾ, ಹಿರಿಯೂರು ಬಿಜೆಪಿ ಅಭ್ಯರ್ಥಿ.

1952ರಿಂದ 2018 ರವರೆಗೆ ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಹಲವು ಮಹಿಳೆಯರು ಸ್ಪರ್ಧಿಸಿದ್ದರೂ, ಈವರೆಗೆ ಒಬ್ಬರಿಗೆ ಮಾತ್ರ ಶಾಸಕಿಯಾಗುವ ಯೋಗ ಸಿಕ್ಕಿದೆ. ಅವರೆಂದರೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ.ಪೂರ್ಣಿಮಾ.

ಸಾಮಾನ್ಯ ಕ್ಷೇತ್ರವಾದ ಹಿರಿಯೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ 2018ರಲ್ಲಿ ಸ್ಪರ್ಧೆಗೆ ಧುಮುಕಿದ್ದರು. ಮಾಜಿ ಸಚಿವ ಡಿ.ಸುಧಾಕರ್‌ ವಿರುದ್ಧ 77,733 ಮತ ಪಡೆದು 12,875 ಅಂತರದಲ್ಲಿ ಜಯದ ನಗೆ ಬೀರಿದ್ದರು. ಈ ಮೂಲಕ ಜಿಲ್ಲೆಯ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾದ ಹೆಗ್ಗಳಿಕೆ ಇವರದ್ದಾಗಿದೆ.

1985 ರಿಂದ ಈವರೆಗೂ ಪ್ರತಿ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಹುತೇಕರು ಪಡೆದ ಮತಗಳು ಮೂರಂಕಿ ಸಹ ದಾಟಿಲ್ಲ. ಪಕ್ಷಗಳಿಂತ ಪಕ್ಷೇತರವಾಗಿ ಕಣಕ್ಕಿಳಿದಿದ್ದೇ ಹೆಚ್ಚು.

ಚುನಾವಣಾ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಬರಬೇಕು. ಪಕ್ಷಗಳು ಟಿಕೆಟ್‌ ನೀಡಿದಿದ್ದಾಗ ಜನಸೇವೆಯ ಹಂಬಲದೊಂದಿಗೆ ಪಕ್ಷೇತರವಾಗಿ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಬಿ. ಗೀತಾಂಜಲಿ, ಹೊಸದುರ್ಗ ಪಕ್ಷೇತರ ಅಭ್ಯರ್ಥಿ

ರಾಷ್ಟ್ರೀಯ, ಪ್ರಾದೇಶಿಕ ಸೇರಿದಂತೆ ಇತರೆ ಪಕ್ಷಗಳಲ್ಲಿ ಮಹಿಳಾ ವಿಭಾಗಗಳಿವೆ. ಆದರೆ ಚುನಾವಣಾ ಟಿಕೆಟ್‌ ಕೊಡುವ ಸಂದರ್ಭದಲ್ಲಿ ಮಹಿಳೆಯರನ್ನು ಕಡೆಗಣಿಸುವ ಪರಿಪಾಠವನ್ನು ಮೊದಲಿನಿಂದಲೂ ಪಕ್ಷಗಳು ರೂಢಿಸಿಕೊಂಡು ಬಂದಿವೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ನಿಂದ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಒಬ್ಬ ಮಹಿಳೆಗೂ ಟಿಕೆಟ್‌ ನೀಡಿಲ್ಲ. ಆದರೆ, ಬಿಜೆಪಿ ಹಾಗೂ ಆಮ್‌ ಆದ್ಮಿ ಪಕ್ಷದಿಂದ ತಲಾ ಒಂದು ಟಿಕೆಟ್‌ ನೀಡಲಾಗಿದೆ.

‘ಮಹಿಳಾ ಸಬಲೀಕರಣ, ಸ್ತ್ರೀ ಸಮಾನತೆ, ರಾಜಕಾರಣದಲ್ಲಿ ವನಿತೆಯರಿಗೆ ಪ್ರಾತಿನಿಧ್ಯ ಮುಂತಾದ ಆಶಯಗಳು ಭಾಷಣಗಳಿಗೆ ಮಾತ್ರ ಸೀಮಿತವಾಗಿವೆ. ಪಕ್ಷಕ್ಕಾಗಿ ದುಡಿದು ಕೊನೆಗೆ ಟಿಕೆಟ್‌‌ಗೆ ಅರ್ಜಿ ಸಲ್ಲಿಸಿದರು ಸಹ ಪ್ರಾತಿನಿಧ್ಯ ನೀಡುತ್ತಿಲ್ಲ. ಕೇವಲ ಕಾರ್ಯಕ್ರಮ, ಸಂಘಟನೆಗೆ ಮಾತ್ರ ಮೀಸಲಾಗಿದ್ದೇವೆ’ ಎಂದು ಮಹಿಳೆಯರು ದೂರುತ್ತಾರೆ.

ಟಿಕೆಟ್‌ ಹಂಚಿಕೆ ಸಮಯದಲ್ಲಿ ಜಾತಿ ಲೆಕ್ಕಚಾರ ಹಾಕಿ ಪುರುಷರಿಗೆ ಮಣೆ ಹಾಕುತ್ತಾರೆ ಎಂಬುದು ಮಹಿಳಾ ಕಾರ್ಯಕರ್ತರ ಬೇಸರ. ಆದರೂ ಪುರುಷ ಅಭ್ಯರ್ಥಿಗಳ ಪ್ರಬಲ ಪೈಪೋಟಿಯ ನಡುವೆಯೂ ಮಹಿಳಾ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ.

ಕಳೆದ ಬಾರಿ ನಾಲ್ವರ ಸ್ಪರ್ಧೆ

2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ನಾಲ್ವರು ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊಳಕಾಲ್ಮುರು ಮೀಸಲು ಕ್ಷೇತ್ರದಿಂದ ಎಐಎಂಇಪಿ ಪಕ್ಷದಿಂದ ಪಿ.ಸುಮಲತಾ ಸ್ಪರ್ಧಿಸಿ 791 ಮತಪಡೆದಿದ್ದರು. ಚಿತ್ರದುರ್ಗದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಕೆ.ಎಸ್‌.ಸರಸ್ವತಿ (154) ಹಿರಿಯೂರು ಬಿಜೆಪಿಯಿಂದ ಕೆ.ಪೂರ್ಣಿಮಾ (77,733) ಹೊಳಲ್ಕೆರೆ ಮೀಸಲ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಂ.ಹನುಮಕ್ಕ (1,402) ಮತ ಪಡೆದಿದ್ದರು. ಹೊಸದುರ್ಗ ಚಳ್ಳಕೆರೆಯಿಂದ ಮಹಿಳೆಯರು ಸ್ಪರ್ಧಿಸಿರಲಿಲ್ಲ.

ಮತದಾರರ ವಿವರ

ಮೊಳಕಾಲ್ಮುರು : 122927 (ಪುರುಷರು); 120788 (ಮಹಿಳೆಯರು)

ಚಳ್ಳಕೆರೆ: 109992 (ಪುರುಷರು); 110917 (ಮಹಿಳೆಯರು)

ಚಿತ್ರದುರ್ಗ: 129626 (ಪುರುಷರು);  132831(ಮಹಿಳೆಯರು)

ಹಿರಿಯೂರು: 120884 (ಪುರುಷರು);  122642 (ಮಹಿಳೆಯರು)

ಹೊಸದುರ್ಗ: 99418 (ಪುರುಷರು);  98236 (ಮಹಿಳೆಯರು)

ಹೊಳಲ್ಕೆರೆ: 117964 (ಪುರುಷರು);  117288 (ಮಹಿಳೆಯರು)

ಬಿ.ಗೀತಾಂಜಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.