ಬೆಂಗಳೂರು: ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು, ಆಹಾರ ಮತ್ತು ಇತರ ಡೆಲಿವರಿ ಸೇವೆಗಳನ್ನು ಒದಗಿಸುತ್ತಿರುವ ದುಡಿಯುವ ವರ್ಗದ ಜನರು ಸಂಖ್ಯಾಬಾಹುಳ್ಯದ ದೃಷ್ಟಿಯಿಂದ ರಾಜ್ಯದ ದೊಡ್ಡ ಸಮುದಾಯ. ಮತದಾರರ ಪಟ್ಟಿಯಲ್ಲೂ ಈ ಜನರು ನಿರ್ಣಾಯಕರು. ಆದರೆ, ಕಾರ್ಮಿಕ ಚಳವಳಿಗಳು ಬಲ ಕಳೆದುಕೊಂಡಂತೆಲ್ಲಾ ಈ ಜನರ ಶಕ್ತಿಯೂ ಕುಗ್ಗಿದೆ. ಚುನಾವಣಾ ರಾಜಕಾರಣದಲ್ಲಿ ಕಾರ್ಮಿಕ ವರ್ಗವನ್ನು ನೋಡುವ ಧೋರಣೆಯೂ ಬದಲಾಗಿದೆ. ದುಡಿಯುವ ವರ್ಗದ ಕೂಗು ಚುನಾವಣಾ ರಾಜಕಾರಣದ ಚರ್ಚೆಯ ಮುನ್ನೆಲೆಯಿಂದ ಅಂಚಿಗೆ ಸರಿಯುತ್ತಿದೆ.
ದುಡಿಯುವ ಕೈಗಳಿಗೆ ನಾಡು–ದೇಶ ಕಟ್ಟುವ ಶಕ್ತಿ ಇದೆ. ಆ ಕೈಗಳಿಗೆ ಶಕ್ತಿ ತುಂಬಲಾಗುತ್ತಿದೆ ಎಂಬ ಮಾತುಗಳನ್ನು ಲಾಗಾಯ್ತಿನಿಂದ ಕೇಳುತ್ತಲೇ ಬಂದಿದ್ದೇವೆ. ವಾಸ್ತವ ಏನು ಎಂಬುದನ್ನು ಗಮನಿಸಿದರೆ ದುಡಿವ ತೋಳುಗಳನ್ನು ಬಲಪಡಿಸುವ ಬದಲು, ಬಲಹೀನ ಮಾಡಲಾಗುತ್ತಿದೆಯೇ ಎಂಬ ಅನುಮಾನ ಕಾಡದಿರದು.
‘ದುಡಿಮೆಯೇ ದೇವರು’, ‘ಕಾಯಕವೇ ಕೈಲಾಸ’ ಎಂಬ ಮಾತುಗಳನ್ನು ರಾಜ್ಯದ ಜನ ನಂಬಿಕೊಂಡೇ ಬಂದಿದ್ದಾರೆ. ಆಳುವವರು ಕಾರ್ಮಿಕ ವರ್ಗವನ್ನು ಒಂದು ಸಮುದಾಯವಾಗಿ ನೋಡಲೇ ಇಲ್ಲ. ಇದೆಲ್ಲದರ ಪರಿಣಾಮ ಕಾರ್ಮಿಕ ವಿರೋಧಿ ನೀತಿಗಳು, ಶ್ರಮಿಕರ ಶೋಷಣೆಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.
ಕಾರ್ಮಿಕರ ರಕ್ಷಣೆಗೆ ಕಾನೂನು ಇನ್ನಷ್ಟು ಬಲಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಗಳು ಹಲವು ದಶಕಗಳಿಂದ ನಡೆಯುತ್ತಲೇ ಇವೆ. ಕನಿಷ್ಠ ವೇತನಕ್ಕಾಗಿ ರಸ್ತೆಗಿಳಿಯುವುದು ಸಾಮಾನ್ಯವಾಗಿದೆ. ಆದರೆ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಸರ್ಕಾರಗಳು ಶ್ರಮಿಕರ ಸಮುದಾಯದ ಮೇಲೆ ಪ್ರಹಾರ ಮಾಡುತ್ತಲೇ ಇವೆ.
ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗಳಿಗೆ ಹೆಚ್ಚಿಸಲಾಯಿತು. ಹೆಚ್ಚುವರಿ ಕರ್ತವ್ಯದ(ಒ.ಟಿ) ಅವಧಿಯನ್ನು 75 ಗಂಟೆಗಳಿಂದ 145 ಗಂಟೆಗಳಿಗೆ(ಮೂರು ತಿಂಗಳಿಗೆ) ವಿಸ್ತರಿಸಲಾಗಿದೆ. ಪ್ರತಿ 4 ಗಂಟೆಗೊಮ್ಮೆ ಇದ್ದ ವಿರಾಮದ ಅವಧಿ ಪ್ರತಿ 6 ಗಂಟೆಗಳಿಗೆ ವಿಸ್ತರಿಸಲಾಯಿತು. ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕು ಎಂಬ ನಿಯಮ ಜಾರಿ ತರಲಾಯಿತು. ಆದರೆ, ಅವರಿಗೆ ಸುರಕ್ಷತೆಗೆ ಆದ್ಯತೆ ನೀಡಲಿಲ್ಲ. ಗುತ್ತಿಗೆ ನೌಕರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಪದ್ಧತಿಯಲ್ಲಾದರೂ ಒಂದಷ್ಟು ಕಾನೂನಿನ ರಕ್ಷಣೆ ಇತ್ತು. ಈಗ ನಿಗದಿತ ಅವಧಿಗೆ ದುಡಿಮೆ(ಫಿಕ್ಸ್ಡ್ ಟರ್ಮ್) ನಿಯಮ ಮುನ್ನೆಲೆಗೆ ಬಂದಿದೆ. ಈ ನಿಯಮದ ಪ್ರಕಾರ ಎಷ್ಟು ದಿನ ಬೇಕಾದರೂ ದುಡಿಸಿಕೊಳ್ಳಬಹುದು, ಯಾವಾಗ ಬೇಕಿದ್ದರೂ ಕೆಲಸ ಕಸಿದುಕೊಳ್ಳಬಹುದು.
ಕನಿಷ್ಠ ವೇತನಕ್ಕಾಗಿ ನ್ಯಾಯಾಲಯಗಳ ಮೆಟ್ಟಿಲೇರುವ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಜೀವನ ನಡೆಸಲು ಕಾರ್ಮಿಕನಿಗೆ ಕನಿಷ್ಠ 25 ಸಾವಿರ ವೇತನ ಬೇಕಾಗುತ್ತದೆ ಎಂಬುದು ಸುಪ್ರೀಂ ಕೋರ್ಟ್ ಲೆಕ್ಕಾಚಾರ. ಆದರೆ, ಗಾರ್ಮೆಂಟ್ಸ್ ನೌಕರರ ವೇತನ ₹11 ಸಾವಿರವನ್ನು ಮೀರಲು ಸಾಧ್ಯವಾಗಿಲ್ಲ. ಹೈಕೋರ್ಟ್ ತನಕ ಹೋದರೂ ಗಾರ್ಮೆಂಟ್ಸ್ ಕಾರ್ಖಾನೆಗಳ ನೌಕರರ ವೇತನದಲ್ಲಿ ₹500 ಹೆಚ್ಚಳ ಸಾಧ್ಯವಾಯಿತು.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿರುವ ಹಣ ದುರ್ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬ ಆಲೋಚನೆಗಳನ್ನು ಎಲ್ಲಾ ಸರ್ಕಾರಗಳು ಮಾಡಿಕೊಂಡು ಬಂದಿವೆ. ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವ ಮೂಲಕ ಸಂಘಟಿತ ಕಾರ್ಮಿಕರನ್ನು ಬೀದಿಗೆ ತಳ್ಳುವ ಕೆಲಸಗಳಾಗುತ್ತಿವೆ. ಸಮಾನ ವೇತನಕ್ಕಾಗಿ ಸಾರಿಗೆ ಸಂಸ್ಥೆಗಳ ನೌಕರರು ನಡೆಸಿದ ಹೋರಾಟಗಳು ಅರಣ್ಯರೋಧನವಾಗಿವೆ. ಆಟೊರಿಕ್ಷಾ, ಟ್ಯಾಕ್ಸಿ ಚಾಲಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೋಟೆಲ್ ಕಾರ್ಮಿಕರು, ಹೋಟೆಲ್‌ಗಳಿಂದ ಮನೆಗಳಿಗೆ ಆಹಾರ ತಲುಪಿಸುವ ಡೆಲಿವರಿ ಕಾರ್ಮಿಕರು ಕಾನೂನಿನ ರಕ್ಷಣೆಗೆ ಇಟ್ಟಿರುವ ಮೊರೆಗಳು ಆಳುವ ಕಿವಿಗಳಿಗೆ ಕೇಳದಾಗಿವೆ. ಇವೆಲ್ಲವೂ ಕಾರ್ಮಿಕ ವರ್ಗದ ಮೇಲಿನ ದಾಳಿಯೇ ಆಗಿವೆ ಎಂಬುದು ಕಾರ್ಮಿಕ ಹೋರಾಟಗಾರರ ಅಳಲು.
ದುಡಿಯುವ ಸಮುದಾಯಗಳಿಂದಲೇ ದೇಶ ಮತ್ತು ನಾಡು ಕಟ್ಟಲು ಸಾಧ್ಯ. ಆದರೆ, ಜಾತಿ ಮತ್ತು ಧರ್ಮದ ಆಧಾರದಲ್ಲಿ ಚುನಾವಣೆಗಳು ನಡೆಯುತ್ತಿವೆ. ಕಾರ್ಮಿಕ ಸಮುದಾಯವನ್ನು ಒಂದು ಮತ ಸಮುದಾಯ ಎಂದು ಪರಿಗಣಿಸಲು ಸರ್ಕಾರಗಳು ಹಿಂದೆ ಬಿದ್ದಿವೆ. ಹಾಗೆ ಮಾಡಿದರೆ ಮಾತ್ರ ಕಾರ್ಮಿಕರ ಸಮುದಾಯಕ್ಕೆ ನ್ಯಾಯ ದೊರಕಲಿದೆ ಎಂಬುದು ಹೋರಾಟಗಾರರ ಅಂಬೋಣ.
****
‘ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು’
ಕೆಲಸದ ಅವಧಿ ಹೆಚ್ಚಳ ಸೇರಿದಂತೆ ಜಾರಿಗೆ ಬಂದಿರುವ ಕಾರ್ಮಿಕರ ವಿರೋಧಿ ನೀತಿಗಳು ಅವರ ಬದುಕನ್ನು ಹಿಂಡುತ್ತಿವೆ. ಯಾವುದೇ ಸರ್ಕಾರ ಬಂದರೂ ಅವುಗಳನ್ನು ಹಿಂದಕ್ಕೆ ಪಡೆಯಲೇಬೇಕು. ಒಳ್ಳೆಯ ತರಕಾರಿ, ಸೊಪ್ಪು, ಹಾಲು, ಅಕ್ಕಿ ಖರೀದಿಸಿ ಕಾರ್ಮಿಕ ತನ್ನ ಕುಟುಂಬದವರ ಹೊಟ್ಟೆ ತುಂಬಿಸಲು ತಿಂಗಳಿಗೆ ಕನಿಷ್ಠ ₹25 ಸಾವಿರ ಬೇಕಾಗಲಿದೆ ಎಂಬ ಲೆಕ್ಕಾಚಾರ ಇದೆ. ಕಾರ್ಮಿಕರ ಕನಿಷ್ಠ ವೇತನ ₹16 ಸಾವಿರ ಇದೆ, ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರ ವೇತನ ₹11 ಸಾವಿರ ಇದೆ. ಅವರು ಜೀವನ ಸಾಗಿಸುವುದು ಹೇಗೆ? ಕಾನೂನು ಬದಲಾವಣೆ ಆದಂತೆ ಕಾರ್ಮಿಕರ ಮೇಲೆ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಸಂಘಟಿತ, ಅಸಂಘಟಿತ ಅಥವಾ ಸೇವಾ ವಲಯ ಆಗಿರುಬಹುದು, ಮಕ್ಕಳು ಮತ್ತು ವೃದ್ಧರನ್ನು ಹೊರತುಪಡಿಸಿದರೆ ಮಿಕ್ಕವರೆಲ್ಲರೂ ಶ್ರಮಿಕ ಸಮುದಾಯವೇ ಆಗಿದ್ದಾರೆ. ಕಾರ್ಮಿಕರನ್ನು ಒಂದು ಸಮುದಾಯವಾಗಿ ನೋಡಿದರೆ, ಅವರ ಪರವಾದ ಕಾನೂನುಗಳು ಬರಲು ಸಾಧ್ಯವಾಗುತ್ತದೆ. ಇದರ ಆಧಾರದಲ್ಲಿಯೇ ಚುನಾವಣೆಗಳು ನಡೆಯಬೇಕು, ರಾಜಕೀಯ ಪಕ್ಷಗಳು ಈ ಬಗ್ಗೆ ಆಲೋಚನೆ ನಡೆಸಬೇಕು.
ಆರ್.ಪ್ರತಿಭಾ, ಅಧ್ಯಕ್ಷೆ , ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್
****
‘ಕಾರ್ಮಿಕರ ಪರ ಸರ್ಕಾರದ ನಿರೀಕ್ಷೆ’
ಕೇಂದ್ರ ಸರ್ಕಾರ ತಂದಿರುವ ಕಾರ್ಮಿಕ ನೀತಿಗಳನ್ನು ವೇಗವಾಗಿ ರಾಜ್ಯದಲ್ಲೂ ಜಾರಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಕಾರ್ಮಿಕ ವರ್ಗ ಕಷ್ಟಕ್ಕೆ ಸಿಲುಕುತ್ತಿದೆ. ಗುತ್ತಿಗೆ ಪದ್ಧತಿಯಲ್ಲಿ ಕೆಲಸದ ಅವಧಿ ಹೆಚ್ಚಳ ಮಾಡಲಾಗಿದೆ. ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕು, ಆದರೆ ಅವರಿಗೆ ಸುರಕ್ಷತೆ ಇಲ್ಲ. ಈಗ ಗುತ್ತಿಗೆ ಪದ್ಧತಿಯೂ ಇಲ್ಲವಾಗುತ್ತಿದ್ದು, ಫಿಕ್ಸ್ಡ್ ಟರ್ಮ್(ನಿಗದಿತ ಅವಧಿಗೆ) ದುಡಿಮೆ ಎಂಬ ನಿಯಮ ತರಲಾಗಿದೆ. ಎಷ್ಟು ದಿನ ಬೇಕಾದರೂ ದುಡಿಸಿಕೊಳ್ಳಬಹುದು. ಅದು ಸಂಘಟಿತ ವಲಯದಲ್ಲಿ ಈಗ ಹೆಚ್ಚಾಗುತ್ತಿದೆ. ಕೋವಿಡ್ ನಂತರ ಯಾವುದೇ ಸುರಕ್ಷತೆ ಇಲ್ಲವಾಗಿದ್ದು, ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ. ಕಟ್ಟಡ ಕಾರ್ಮಿಕ ಮಂಡಳಿಯ ನಿಧಿ ಸೇರಿ ಎಲ್ಲಾ ಕಾರ್ಮಿಕ ಕಾರ್ಯಕ್ರಮಗಳ ಹಣ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಇಎಸ್‌ಐ ಸೌಲಭ್ಯವನ್ನೂ ಕಾರ್ಮಿಕರು ಪಡೆಯಲಾಗಷ್ಟು ಷರತ್ತುಗಳನ್ನು ವಿಧಿಸಲಾಗುತ್ತಿದೆ. ಕಾರ್ಮಿಕರ ಪರವಾಗಿ ಆಲೋಚಿಸುವ ಸರ್ಕಾರವನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ. ದುಡಿಯುವ ವರ್ಗಗಳ ರಕ್ಷಣೆಯಾಗಬೇಕು. ವೇತನ ಖಾತ್ರಿ, ಸಾಮಾಜಿಕ ಸುರಕ್ಷತೆ ಖಾತ್ರಿಯಾಗಬೇಕು. ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳು ತಿದ್ದುಪಡಿಯಾಗಬೇಕು.
ಕೆ. ಮಹಾಂತೇಶ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್
****
‘ಚಾಲಕರಿಗಾಗಿ ಪ್ರತ್ಯೇಕ ನಿಗಮ ಬೇಕು’
ಆಟೊರಿಕ್ಷಾ, ಟ್ಯಾಕ್ಸಿ, ಲಾರಿ ಸೇರಿ ವಾಣಿಜ್ಯ ವಾಹನಗಳ ಚಾಲಕರ ಸಂಖ್ಯೆ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚಿದೆ. ಅಂದರೆ ಅವರ ಕುಟುಂಬದವರು ಸೇರಿದರೆ 1.20 ಕೋಟಿಯಷ್ಟು ಮತದಾರರನ್ನು ಚಾಲಕ ಸಮುದಾಯ ಹೊಂದಿದೆ. ಯಾವುದೇ ಸರ್ಕಾರ ಇದ್ದಾಗಲೂ ಚಾಲಕ ಸಮುದಾಯಕ್ಕೆ ನ್ಯಾಯ ದೊರಕಿಲ್ಲ. ಚುನಾವಣೆ ಬಳಿಕ ಬರುವ ಹೊಸ ಸರ್ಕಾರ ಚಾಲಕರ ಕಲ್ಯಾಣ ಕಾರ್ಯ ಕ್ರಮಗಳ ಅನುಷ್ಠಾನಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಚಾಲಕರಿಗೆ ಗೌರವ ನೀಡಲು ‘ಚಾಲಕರ ದಿನ’ ಆಚರಣೆ ಮಾಡುವ ಘೋಷಣೆ ಮಾಡಬೇಕು. ಚಾಲಕರ ನಿಗಮದ ಮೂಲಕವೇ ವಿದ್ಯಾರ್ಥಿ ವೇತನ ಸೇರಿ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು. ಬಜೆಟ್ ಪೂರ್ವಸಭೆಯಲ್ಲೂ ಈ ಅಭಿಪ್ರಾಯವನ್ನು ನಾವು ಹೇಳಿದ್ದೇವೆ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು.
ತನ್ವೀರ್ ಪಾಷಾ, ಅಧ್ಯಕ್ಷ, ಟ್ಯಾಕ್ಸಿ ಮಾಲೀಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.