ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ತ್ರಿಕೋನ ಸ್ಪರ್ಧೆ ನಡೆದಿತ್ತು. ಎಲ್ಲ ಏಳು ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿತ್ತು. ಈ ಸಲ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ)–ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಪರ್ಯಾಯ ರಾಜಕಾರಣದ ಪ್ರಯೋಗವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ರಾಜ್ಯ ದೆಹಲಿ. 2020ರಲ್ಲಿ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 62ರಲ್ಲಿ ಎಎಪಿ ಗೆದ್ದಿತ್ತು. ಅದಕ್ಕೆ ಕೆಲ ತಿಂಗಳು ಮೊದಲು ನಡೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.
ನಾಲ್ಕು ವರ್ಷಗಳ ಬಳಿಕ ಬಂದಿರುವ ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಸ್ಥಿತಿ ಅಷ್ಟು ಸುಭದ್ರವಾಗಿಲ್ಲ. ಅಬಕಾರಿ ನೀತಿಗೆ ಸಂಬಂಧಿಸಿದ ಹಗರಣದಲ್ಲಿ ಸಿಲುಕಿಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೈಲು ಪಾಲಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಹಾಗೂ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅವರೂ ವರ್ಷದ ಹಿಂದೆಯೇ ಜೈಲು ಸೇರಿದ್ದಾರೆ. ಲೋಕಸಭಾ ಚುನಾವಣೆಗೆ ಪಕ್ಷಕ್ಕೆ ತಾರಾ ಪ್ರಚಾರಕರೇ ಇಲ್ಲದಂತಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿಯೇ ದೆಹಲಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷ ಎಎಪಿ. ಆದರೆ, ಅಬಕಾರಿ ನೀತಿ ಹಗರಣದಿಂದಾಗಿ ಪಕ್ಷಕ್ಕೆ ಕಳಂಕ ಅಂಟಿಕೊಂಡಿದೆ. ಇದನ್ನೇ ಬಿಜೆಪಿ ಚುನಾವಣಾ ಪ್ರಚಾರ ಅಸ್ತ್ರವನ್ನಾಗಿ ಮಾಡಿಕೊಂಡಿದೆ.
ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಎಎಪಿ ಹಾಗೂ ಕಾಂಗ್ರೆಸ್ ಈ ಸಲ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಧುಮುಕಿವೆ. ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಮತಗಳು ಕೈ ಹಿಡಿದರೆ ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಒಡ್ಡಬಹುದು ಎಂಬ ವಿಶ್ವಾಸದಲ್ಲಿ ಈ ಪಕ್ಷಗಳಿವೆ. ಎಎಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕಣ್ಣಿಗೆ ಕಾಣಿಸುವ ರೀತಿ ಆಗಿರುವ ಕೆಲಸಗಳು ಕೈಬಿಡಲಿಕ್ಕಿಲ್ಲ ಎಂಬ ಲೆಕ್ಕಾಚಾರ ಮೈತ್ರಿಕೂಟದ ನಾಯಕರದ್ದು. ಉಚಿತ ಕೊಡುಗೆಗಳು ಸಹ ಮತ ತಂದುಕೊಡಲಿವೆ ಎಂಬುದು ಅವರ ನಂಬಿಕೆ.
ಎಎಪಿ ಮತ್ತು ಕಾಂಗ್ರೆಸ್ ನಡುವಿನ ಮತ ವಿಭಜನೆಯಿಂದ 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಿತ್ತು. 2019ರಲ್ಲೂ ಎಎಪಿ ಹಾಗೂ ಕಾಂಗ್ರೆಸ್ ಮೈತ್ರಿಗೆ ಪ್ರಯತ್ನಗಳು ನಡೆದಿದ್ದವು. ಆದರೆ, ರಾಜ್ಯಮಟ್ಟದ ನಾಯಕರ ವಿರೋಧದಿಂದಾಗಿ ಮೈತ್ರಿ ಏರ್ಪಟ್ಟಿರಲಿಲ್ಲ. ಈ ಸಲ ಮೈತ್ರಿ ಆಗಿರುವುದರಿಂದ ಬಿಜೆಪಿಯಿಂದ ಕೆಲವು ಸ್ಥಾನಗಳನ್ನು ಕಿತ್ತುಕೊಳ್ಳಬಹುದು ಎಂಬುದು ಎಎಪಿ–ಕಾಂಗ್ರೆಸ್ ನಾಯಕರ ವಿಶ್ವಾಸ. ಎಎಪಿ ನಾಲ್ಕರಲ್ಲಿ ಹಾಗೂ ಕಾಂಗ್ರೆಸ್ ಮೂರರಲ್ಲಿ ಸ್ಪರ್ಧಿಸುತ್ತಿವೆ. ಮೈತ್ರಿ ವಿರೋಧಿಸಿ ಕಾಂಗ್ರೆಸ್‌ನ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಸೇರಿದಂತೆ ನಾಲ್ಕೈದು ನಾಯಕರು ಪಕ್ಷದಿಂದ ಹೊರ ನಡೆದಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಮೋದಿ ಅವರ ವರ್ಚಸ್ಸನ್ನೇ ಬಿಜೆಪಿ ನಂಬಿಕೊಂಡಿದೆ. ಆಡಳಿತ ವಿರೋಧಿ ಅಲೆಯ ಕಾರಣಕ್ಕೆ ಆರು ಸಂಸದರಿಗೆ ಬಿಜೆಪಿ ಈ ಸಲ ಟಿಕೆಟ್ ನಿರಾಕರಿಸಿದೆ. ಹೊಸ ಮುಖಗಳಿಗೆ ಮಣೆ ಹಾಕಿದೆ. ಜಾತಿ ಸಮೀಕರಣದ ಆಧಾರದಲ್ಲಿ ಕಮಲ ಪಾಳಯ ಟಿಕೆಟ್ ಹಂಚಿಕೆ ಮಾಡಿದೆ. ಕಳೆದೆರಡು ಚುನಾವಣೆಗಳಲ್ಲಿ ಮೋದಿ ಅಲೆ ತೀವ್ರವಾಗಿತ್ತು. ಈ ಸಲ ಅಂತಹ ಅಲೆ ಇಲ್ಲ. ದಶಕದಿಂದ ಹಲವು ಪ್ರಯೋಗ ನಡೆಸಿದರೂ ರಾಜ್ಯಮಟ್ಟದಲ್ಲಿ ಪ್ರಭಾವಿ ನಾಯಕರನ್ನು ಬೆಳೆಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕಳೆದೊಂದು ದಶಕದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯನ್ನು ದೆಹಲಿಯ ಜನರು ಗೆಲ್ಲಿಸಿಕೊಂಡು ಬರುತ್ತಿದ್ದಾರೆ. ಈ ಸಲವೂ ಹಾಗೆಯೇ ಆಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.
ಉದಿತ್ ರಾಜ್–ಚಂದೋಲಿಯಾ
ವಾಯವ್ಯ ದೆಹಲಿ ಕ್ಷೇತ್ರದಲ್ಲಿ ಮಾಜಿ ಮೇಯರ್ ಯೋಗೇಂದ್ರ ಚಂದೋಲಿಯಾ ಅವರು ಬಿಜೆಪಿಯ ಅಭ್ಯರ್ಥಿ. ದಲಿತ ಮುಖಂಡರಾಗಿರುವ ಅವರು ದೆಹಲಿ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ. ಮಾಜಿ ಸಂಸದ ಉದಿತ್ ರಾಜ್ ಅವರು ಕಾಂಗ್ರೆಸ್ ಹುರಿಯಾಳು. ಮಾಜಿ ಐಆರ್‌ಎಸ್ ಅಧಿಕಾರಿಯಾಗಿರುವ ಅವರು 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು.
ಬಾನ್ಸುರಿ– ಭಾರ್ತಿ
ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ನವದೆಹಲಿ ಕ್ಷೇತ್ರದಲ್ಲಿ ಬಾನ್ಸುರಿ ಸ್ವರಾಜ್ ಕಮಲ ಪಡೆಯ ಹುರಿಯಾಳು. ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿಯಾಗಿರುವ ಅವರು ಸುಪ್ರೀಂ ಕೋರ್ಟ್‌ನ ವಕೀಲೆ. ಬಿಜೆಪಿಗೆ ಪ್ರಬಲ ಸವಾಲು ಒಡ್ಡಲು ಹಿರಿಯ ಶಾಸಕ ಸೋಮನಾಥ ಭಾರ್ತಿ ಅವರನ್ನು ಎಎಪಿ ಕಣಕ್ಕಿಳಿಸಿದೆ. ಎಎಪಿಯ ಮೊದಲ ಸರ್ಕಾರದಲ್ಲಿ ಭಾರ್ತಿ ಅವರು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವರಾಗಿದ್ದರು.
ಬಿಧೂರಿ–ಸಹಿರಾಮ್
ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್‌ವೀರ್ ಸಿಂಗ್ ಬಿಧೂರಿ ಕೇಸರಿ ಪಾಳಯದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗುಜ್ಜರ್ ಮುಖಂಡರಾಗಿರುವ ಅವರು 1993ರಲ್ಲಿ ಮೊದಲ ಬಾರಿಗೆ ದೆಹಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಎಎಪಿಯು ಎರಡು ಬಾರಿಯ ಶಾಸಕ ಸಹಿರಾಮ್ ಪೆಹಲ್ವಾನ್ ಅವರನ್ನು ಕಣಕ್ಕಿಳಿಸಿದೆ. ಅವರು ಎರಡು ಅವಧಿಗೆ ಪಾಲಿಕೆ ಸದಸ್ಯರಾಗಿದ್ದರು.
ಅಗರವಾಲ್–ಖಂಡೇಲ್‌ವಾಲ್
ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಹಿರಿಯ ಮುಖಂಡ ಜೆ.ಪಿ.ಅಗರವಾಲ್ ‘ಕೈ’ ಹುರಿಯಾಳು. ಈ ಕ್ಷೇತ್ರದಿಂದ 1984, 1989 ಹಾಗೂ 1996ರಲ್ಲಿ ಗೆದ್ದಿರುವ ಅವರ ಅನುಭವದ ಬಲ ಪಕ್ಷಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಬಿಜೆಪಿಯು ಕಾರ್ಮಿಕ ಮುಖಂಡ ಪ್ರವೀಣ್ ಖಂಡೇಲ್‌ವಾಲ್ ಅವರಿಗೆ ಮಣೆ ಹಾಕಿದೆ.
ಸೆಹ್ರಾವತ್–ಮಿಶ್ರಾ
ಪಶ್ಚಿಮ ದೆಹಲಿ ಕ್ಷೇತ್ರದಲ್ಲಿ ಮಾಜಿ ಮೇಯರ್ ಕಮಲಜಿತ್ ಸೆಹ್ರಾವತ್ ಕೇಸರಿ ಪಾಳಯದ ಅಭ್ಯರ್ಥಿ. ಮಾಜಿ ಸಂಸದ ಮಹಾಬಲ ಮಿಶ್ರಾ ಅವರನ್ನು ಎಎಪಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಈ ಹಿಂದೆ ಸಂಸದರಾಗಿ ಆಯ್ಕೆಯಾಗಿದ್ದ ಮಿಶ್ರಾ 2022ರಲ್ಲಿ ಎಎಪಿಗೆ ಸೇರ್ಪಡೆಯಾಗಿದ್ದರು.
ಹರ್ಷ್–ಕುಲದೀಪ್
ಪೂರ್ವ ದೆಹಲಿಯ ಸಾಮಾನ್ಯ ಕ್ಷೇತ್ರದಲ್ಲಿ ಎಎಪಿಯು ದಲಿತ ಶಾಸಕ ಕುಲದೀಪ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಸ್ವಚ್ಛತಾ ಕಾರ್ಮಿಕನ ಪುತ್ರರಾಗಿರುವ ಕುಲದೀಪ್ ಅವರು 2017ರಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಬಿಜೆಪಿಯು ಹರ್ಷ್ ಮಲ್ಹೋತ್ರಾ ಅವರಿಗೆ ಮಣೆ ಹಾಕಿದೆ.
ತಿವಾರಿ–ಕನ್ಹಯ್ಯ
ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಬಿಹಾರ ಮೂಲದ ಇಬ್ಬರು ಅಭ್ಯರ್ಥಿಗಳ ಹಣಾಹಣಿಗೆ ವೇದಿಕೆ ಸೃಷ್ಟಿಯಾಗಿದೆ. ಎರಡು ಬಾರಿ ಗೆಲುವಿನ ನಗೆ ಬೀರಿರುವ ಭೋಜ್‌ಪುರಿ ನಟ ಹಾಗೂ ಗಾಯಕ ಮನೋಜ್ ತಿವಾರಿ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಏಳು ಸಂಸದರ ಪೈಕಿ ತಿವಾರಿ ಅವರಿಗೆ ಮಾತ್ರ ಬಿಜೆಪಿ ಈ ಸಲ ಟಿಕೆಟ್ ಕೊಟ್ಟಿದೆ. ಯುವ ನೇತಾರ ಕನ್ಹಯ್ಯ ಕುಮಾರ್ ಅವರು ‘ಕೈ’ ಅಭ್ಯರ್ಥಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.