ಅರ್ಜುನ್ ಮುಂಡಾ (ಬಿಜೆಪಿ)
ಜಾರ್ಖಂಡ್‌ನ ಖುಂಟಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಈ ಬಾರಿಯೂ ಅರ್ಜುನ್ ಮುಂಡಾ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕೇಂದ್ರ ಸಚಿವರಾಗಿರುವ ಅರ್ಜುನ್ ಮುಂಡಾ, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದವರು. 2019ರ ಚುನಾವಣೆಯಲ್ಲಿ ಅವರು ಕೇವಲ 1,445 ಮತಗಳ ಅಂತರದಿಂದ ಕಾಂಗ್ರೆಸ್‌ನ ಕಾಳಿಚರಣ್ ಮುಂಡಾ ಅವರನ್ನು ಪರಾಭವಗೊಳಿಸಿದ್ದರು. 1980ರಲ್ಲಿ ಜಾರ್ಖಂಡ್ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದ್ದ ಅವರು, ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಜಾರ್ಖಂಡ್ ರಾಜ್ಯ ರಚನೆಯಾದ ಬಳಿಕ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಮಾಡಿರುವ ಕಾರ್ಯಗಳನ್ನು ಪ್ರಮುಖ ಚುನಾವಣಾ ವಿಷಯವಾಗಿಸಿ ಅರ್ಜುನ್ ಅವರು ಮತಯಾಚಿಸುತ್ತಿದ್ದಾರೆ.
............
ಕಾಳೀಚರಣ್ ಮುಂಡಾ (ಕಾಂಗ್ರೆಸ್)
ಅರ್ಜುನ್ ಮುಂಡಾ ವಿರುದ್ಧ ಸೆಣಸಲು ಕಾಂಗ್ರೆಸ್ ಈ ಬಾರಿಯೂ ಕಾಳೀಚರಣ್ ಮುಂಡಾ ಅವರನ್ನೇ ಅಖಾಡಕ್ಕಿಳಿಸಿದೆ. ಬುಡಕಟ್ಟು ಮುಖಂಡರಾಗಿದ್ದ ಮುಚಿರಾಯ್ ಮುಂಡಾ ಅವರ ಪುತ್ರರಾಗಿರುವ ಕಾಳೀಚರಣ್, ಕ್ಷೇತ್ರದಲ್ಲಿ ಪ್ರಭಾವಿ ನಾಯಕರೂ ಹೌದು. ಈ ಬಾರಿ ‘ಇಂಡಿಯಾ’ ಒಕ್ಕೂಟದಿಂದ ಸ್ಪರ್ಧಿಸಿರುವುದು ಅವರ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. ಅವರು ತಮಾಡ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಿರುದ್ಯೋಗ, ನೀರಾವರಿ ಸಮಸ್ಯೆಗಳನ್ನು ಪ್ರಮುಖ ಪ್ರಚಾರ ವಿಷಯವಾಗಿಸಿ ಜನರ ಬಳಿಗೆ ತೆರಳುತ್ತಿದ್ದಾರೆ. ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದ ಮತದಾರರು ಯಾರ ಕೈಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿರುವ ವಿಚಾರವು ಈ ಬಾರಿ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.