ADVERTISEMENT

ಮುಖಾಮುಖಿ: ಬಾಲೂರ್‌ಘಾಟ್ (ಪಶ್ಚಿಮ ಬಂಗಾಳ)

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 23:33 IST
Last Updated 4 ಏಪ್ರಿಲ್ 2024, 23:33 IST
   

ಸುಕಾಂತಾ ಮಜುಂದಾರ್‌ (ಬಿಜೆಪಿ)

ಪಶ್ಚಿಮ ಬಂಗಾಳದ ದಕ್ಷಿಣ ದಿನಜ್‌ಪುರ ಜಿಲ್ಲೆಯ ಬಾಲೂರ್‌ಘಾಟ್‌ ಲೋಕಸಭಾ ಕ್ಷೇತ್ರವು ಬಿಜೆಪಿ ಮತ್ತು ಟಿಎಂಸಿಯ ಘಟಾನುಘಟಿ ನಾಯಕರ ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ. ಬಿಜೆಪಿಯು ಈ ಬಾರಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುಕಾಂತಾ ಮಜುಂದಾರ್‌ ಅವರನ್ನು ಕಣಕ್ಕಿಳಿಸಿದೆ. ಸುಕಾಂತಾ ಅವರು ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿ, 5,39,317 ಮತಗಳನ್ನು ಪಡೆದು ತೃಣಮೂಲ (ಟಿಎಂಸಿ) ಕಾಂಗ್ರೆಸ್‌ನ ಅರ್ಪಿತಾ ಘೋಷ್‌ ಅವರನ್ನು ಪರಾಭವಗೊಳಿಸಿದ್ದರು. ಸಂದೇಶ್‌ಖಾಲಿಯಲ್ಲಿ ಟಿಎಂಸಿ ಮುಖಂಡನ ಮೇಲೆ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ ಜನರು ಟಿಎಂಸಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಬಿಜೆಪಿ ನಂಬಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ತಮಗೂ ವರದಾನವಾಗಲಿದೆ ಎಂಬುದು ಸುಕಾಂತಾ ಅವರ ವಿಶ್ವಾಸ. 2009ಕ್ಕೂ ಮೊದಲು ಈ ಕ್ಷೇತ್ರವು ಎಡರಂಗದ ಜೊತೆ ಗುರುತಿಸಿಕೊಂಡಿದ್ದ ಆರ್‌ಎಸ್‌ಪಿಯ ಭದ್ರಕೋಟೆಯಾಗಿತ್ತು.

ವಿಪ್ಲವ್‌ ಮಿತ್ರಾ (ತೃಣಮೂಲ ಕಾಂಗ್ರೆಸ್)

ಸುಕಾಂತಾ ಮಜುಂದಾರ್‌ ಅವರನ್ನು ಮಣಿಸಲೇಬೇಕೆಂದು ತೃಣಮೂಲ ಕಾಂಗ್ರೆಸ್, ಈ ‌ಬಾರಿ ಪಕ್ಷದ ಪ್ರಮುಖ ನಾಯಕ ಹಾಗೂ ರಾಜ್ಯ ಸಚಿವ ವಿಪ್ಲವ್‌ ಮಿತ್ರಾ ಅವರನ್ನು ಅಖಾಡಕ್ಕಿಳಿಸಿದೆ. ಇವರು 2021ರ ವಿಧಾನಸಭಾ ಚುನಾವಣೆಯಲ್ಲಿ ಹರಿರಾಮಪುರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪಶ್ಚಿಮ ಬಂಗಾಳಕ್ಕೆ ನೀಡಬೇಕಿರುವ ನರೇಗಾ ಅನುದಾನವನ್ನು ಕೇಂದ್ರ ಸರ್ಕಾರವು ತಡೆಹಿಡಿದಿರುವ ವಿಚಾರವನ್ನು ಪ್ರಮುಖ ಪ್ರಚಾರ ವಿಷಯವನ್ನಾಗಿಸಿ ಬಿಜೆಪಿ ಅಭ್ಯರ್ಥಿಯನ್ನು ಪರಾಭವಗೊಳಿಸಲು ವಿಪ್ಲವ್‌ ಅವರು ತಂತ್ರಗಾರಿಕೆ ಹೆಣೆದಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಈ ಬಾರಿ ಚುನಾವಣೆಯ ಫಲಿತಾಂಶದಲ್ಲಿ ಪ್ರತಿಫಲಿಸಲಿದೆ ಎಂಬ ವಿಶ್ವಾಸವೂ ಇವರದ್ದಾಗಿದೆ. ಇವರು 2019ರಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2020ರಲ್ಲಿ ಬಿಜೆಪಿ ತೊರೆದು ಮರಳಿ ಟಿಎಂಸಿ ಪಾಳಯಕ್ಕೆ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT