ಕೋಲಾರ: ‘ಮೂಡಣ ಬಾಗಿಲು’ ಎಂದೇ ಖ್ಯಾತಿ ಪಡೆದಿರುವ ಮುಳಬಾಗಿಲು ಕ್ಷೇತ್ರದಿಂದಲೇ ಎಲ್ಲಾ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಆರಂಭಿಸುತ್ತವೆ. ಆದರೆ, ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಮರ್ಥ ಅಭ್ಯರ್ಥಿಗಳೇ
ಸಿಗುತ್ತಿಲ್ಲ.
ಹೀಗಾಗಿ, ಈ ಕ್ಷೇತ್ರ ರಾಷ್ಟ್ರೀಯ ಪಕ್ಷಗಳಿಗೆ ಕಗ್ಗಂಟಾಗಿ ಪರಿಣಮಿಸಿದೆ. ಮತದಾನಕ್ಕೆ ಕೇವಲ 38 ದಿನಗಳಷ್ಟೇ ಬಾಕಿ ಇದ್ದು, ಸಮರ್ಥ ಅಭ್ಯರ್ಥಿ ಹುಡುಕಾಟಕ್ಕೆ ಉಭಯ ಪಕ್ಷಗಳು ತಲೆಕೆಡಿಸಿಕೊಳ್ಳುತ್ತಿವೆ. ಇತ್ತ ಮೂರು ತಿಂಗಳ ಮೊದಲೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಸಿದ್ಧ ಮಾಡಿಕೊಂಡು ಪ್ರಚಾರದಲ್ಲಿ ತೊಡಗಿದೆ.
ಕಳೆದ ಬಾರಿ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಚ್.ನಾಗೇಶ್ ಗೆಲುವು ಸಾಧಿಸಿದ್ದರು. ಆಗ ಅವರು ಈ ಕ್ಷೇತ್ರಕ್ಕೆ ಅಷ್ಟೇನೂ ಪರಿಚಯವೇ ಇರಲಿಲ್ಲ. ಆದರೆ, ಈ ಭಾಗದ ಪ್ರಭಾವಿ ಮುಖಂಡ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲದಿಂದ ಗೆದ್ದಿದ್ದರು. ಮೊದಲು ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾಗಿದ್ದರು. ನಂತರ ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಸಚಿವರೂ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿದ್ದರು. ಆದರೆ, ಈಚೆಗೆ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಕ್ಷೇತ್ರ ಬದಲಾಯಿಸಿದ್ದಾರೆ. ಅವರಿಗೆ ಮಹದೇವಪುರ ಮೀಸಲು ಕ್ಷೇತ್ರದಲ್ಲಿ ಕೈ ಟಿಕೆಟ್ ಘೋಷಣೆಯಾಗಿದೆ.
ಕಳೆದ ವರ್ಷ ಪಕ್ಷಕ್ಕೆ ಸೇರಿದ್ದ ಕೊತ್ತೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಸಿದ್ಧವಿದೆ. ಆದರೆ, ಅವರಿಗೆ ಸಂಬಂಧಿಸಿದ ಜಾತಿ ಪ್ರಮಾಣಪತ್ರ ಪ್ರಕರಣ ನ್ಯಾಯಾಲಯದಲ್ಲಿದೆ. ಅಂತಿಮ ತೀರ್ಪು ಹೊರಬರುವವರೆಗೆ ಅವರು ಈ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ, ಅವರು ಸೂಚಿಸಿದ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡುವ ಸಾಧ್ಯತೆ ಇದೆ. ಅಂಜೂಬಾಸ್, ಎಸ್.ವೈ.ಶಾಂಭಯ್ಯ, ಮದ್ದೂರಪ್ಪ, ಮುದ್ದುವೆಂಕಟಪ್ಪ, ವೆಂಕಟಪ್ಪ, ಕಾರ್ ಶ್ರೀನಿವಾಸ್, ಗೊಲ್ಲಹಳ್ಳಿ ವೆಂಕಟೇಶ್ ಸೇರಿದಂತೆ 11 ಮಂದಿ ಆಕಾಂಕ್ಷಿಗಳಿದ್ದಾರೆ.
ಕಳೆದ ಚುನಾವಣೆಯಲ್ಲಿ ಅಗ್ರ ಮೂರು ಸ್ಥಾನದಲ್ಲೂ ಕಾಂಗ್ರೆಸ್ ಕಾಣಿಸಿಕೊಂಡಿರಲಿಲ್ಲ. 2013ರಲ್ಲಿ ಮೂರನೇ ಸ್ಥಾನದಲ್ಲಿತ್ತು. ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಮುಳಬಾಗಿಲು ಹಾಗೂ ಕೋಲಾರಕ್ಕೆ ಮಾತ್ರ ಈ ಪಕ್ಷ ಇದುವರೆಗೆ ಟಿಕೆಟ್ ಘೋಷಿಸಿಲ್ಲ.
ಇದೇ ಗೊಂದಲ ಬಿಜೆಪಿಗೂ ಇದೆ. ಟಿಕೆಟ್‌ಗಾಗಿ ಸೀಗೇಹಳ್ಳಿ ಸುಂದರ್ ಹಾಗೂ ಆಲಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಶ್ರೀನಿವಾಸ್ ನಡುವಣ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಇದುವರೆಗೆ ಈ ಪಕ್ಷ ಖಾತೆ ತೆರೆದಿಲ್ಲ.
ಜೆಡಿಎಸ್ ಇದೇ ಕ್ಷೇತ್ರದಿಂದ ತನ್ನ ಪಂಚರತ್ನ ಯಾತ್ರೆಗೆ ಚಾಲನೆ ನೀಡಿತ್ತು. ಕುರುಡುಮಲೆ ದೇಗುಲದಲ್ಲಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದರು. ಬಳಿಕ ಮುಳಬಾಗಿಲಿನಲ್ಲಿ ಬೃಹತ್ ಸಮಾವೇಶವೂ ನಡೆದಿತ್ತು. ಕಳೆದ ಬಾರಿ ಕಡಿಮೆ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಸಮೃದ್ಧಿ ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.