ADVERTISEMENT

ರಾಣೆಬೆನ್ನೂರು ಕ್ಷೇತ್ರ: ಅಪ್ಪನ ಕ್ಷೇತ್ರದಲ್ಲಿ ಮಗನ ಅದೃಷ್ಟ ಪರೀಕ್ಷೆ

ಕೆ.ಬಿ.ಕೋಳಿವಾಡಗೆ 5 ಬಾರಿ ಗೆಲುವು ಕೊಟ್ಟ ಕ್ಷೇತ್ರ: ಆರ್‌.ಶಂಕರ್‌ ನಡೆ ಇನ್ನೂ ನಿಗೂಡ

ಸಿದ್ದು ಆರ್.ಜಿ.ಹಳ್ಳಿ
Published 10 ಏಪ್ರಿಲ್ 2023, 19:30 IST
Last Updated 10 ಏಪ್ರಿಲ್ 2023, 19:30 IST
–
   

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು, ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗರಿಗೆದರಿದೆ. ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಮತ್ತೆ ‘ಕೈ’ವಶ ಮಾಡಿಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ.

ಕಾಂಗ್ರೆಸ್‌ನಿಂದ ಪ್ರಕಾಶ ಕೋಳಿವಾಡ ಮತ್ತು ಜೆಡಿಎಸ್‌ನಿಂದ ಮಂಜುನಾಥ ಗೌಡ ಶಿವಣ್ಣನವರ ಅಭ್ಯರ್ಥಿಗಳು ಎಂದು ಪಕ್ಷಗಳು ಈಗಾಗಲೇ ಘೋಷಿಸಿವೆ. ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಸದ್ಯದ ಕುತೂಹಲವಾಗಿದೆ.

ಕಾಂಗ್ರೆಸ್‌ ಧುರೀಣ, ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ (ಕೃಷ್ಣಪ್ಪ ಭೀಮಪ್ಪ ಕೋಳಿವಾಡ) ಅವರು ರಾಣೆಬೆನ್ನೂರು ಕ್ಷೇತ್ರದಲ್ಲಿ 11 ಬಾರಿ ಸ್ಪರ್ಧಿಸಿ, 5 ಬಾರಿ ಗೆಲುವು ಕಂಡಿದ್ದಾರೆ. 2019ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ವಿರುದ್ಧ ಸೋಲು ಅನುಭವಿಸಿದ ನಂತರ ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ ಹೇಳಿದ್ದಾರೆ.

ADVERTISEMENT

ಪುತ್ರನಿಗೆ ಟಿಕೆಟ್‌:

ಕೆ.ಬಿ. ಕೋಳಿವಾಡ ಅವರ ಪುತ್ರ ಪ್ರಕಾಶ ಕೋಳಿವಾಡ ಸೇರಿದಂತೆ ಕಾಂಗ್ರೆಸ್‌ನಿಂದ ಒಟ್ಟು 6 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ ಪುತ್ರನಿಗೆ ಟಿಕೆಟ್‌ ಕೊಡಿಸುವಲ್ಲಿ ಕೆ.ಬಿ.ಕೋಳಿವಾಡ ಯಶಸ್ವಿಯಾಗಿದ್ದಾರೆ.

ಅಪ್ಪನಿಗೆ 5 ಬಾರಿ ಗೆಲುವು ತಂದುಕೊಟ್ಟ ರಾಣೆಬೆನ್ನೂರು ಕ್ಷೇತ್ರದಲ್ಲಿ, ಅವರ ಪುತ್ರ ಪ್ರಕಾಶ ಕೋಳಿವಾಡ ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ‘10 ಸಾವಿರ ಯುವಕರಿಗೆ ಉದ್ಯೋಗಾವಕಾಶ ಮತ್ತು 43 ಸಾವಿರ ಕಾಂಗ್ರೆಸ್‌ ಸದಸ್ಯತ್ವ ಮಾಡಿಸಿದ್ದನ್ನು ಗಮನಿಸಿದ ವರಿಷ್ಠರು ನನಗೆ ಟಿಕೆಟ್‌ ನೀಡಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಪ್ರಕಾಶ ಕೋಳಿವಾಡ.

ಬೇರೆಯವರಿಗೆ ಅವಕಾಶ ಬೇಡವಾ?

ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಪ್ರಾಬಲ್ಯವೇ ಹೆಚ್ಚಿದ್ದರೂ, ಕುರುಬ ಮತ್ತು ಮುಸ್ಲಿಂ ಮತಗಳೂ ನಿರ್ಣಾಯಕ ಪಾತ್ರ ವಹಿಸಲಿವೆ. ‘50 ವರ್ಷದಿಂದ ಅಪ್ಪನ (ಕೆ.ಬಿ.ಕೋಳಿವಾಡ) ರಾಜಕೀಯ ನೋಡಿದ್ದೇವೆ. ಈಗ ಮಗನ (ಪ್ರಕಾಶ ಕೋಳಿವಾಡ) ಸರದಿ. ಕಾಂಗ್ರೆಸ್‌ ಪಕ್ಷಕ್ಕೆ ದುಡಿದ ಬೇರೆಯವರಿಗೆ ಅವಕಾಶ ಬೇಡವಾ?’ ಎಂಬುದು ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಜಟ್ಟೆಪ್ಪ ಕರಿಗೌಡರ್, ಡಾ.ಪ್ರವೀಣ್‌ ಕನ್ನೂರು ಅವರ ಪ್ರಶ್ನೆಯಾಗಿದೆ. ಅಸಮಾಧಾನಗೊಂಡ ಟಿಕೆಟ್‌ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಕೆ.ಬಿ. ಕೋಳಿವಾಡ ಅವರು ಪ್ರಯತ್ನ ನಡೆಸುತ್ತಿದ್ದಾರೆ.

ಆರ್.ಶಂಕರ್‌ ನಡೆ ನಿಗೂಢ:

2018ರ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಗೆದ್ದ ಆರ್.ಶಂಕರ್‌ ಅವರು, ನಂತರ ಕಾಂಗ್ರೆಸ್‌ ಪಕ್ಷ ಸೇರಿ ಅರಣ್ಯ ಸಚಿವರಾದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ತೊರೆದು, ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದರು. ನಂತರ ಇವರಿಗೆ ‘ಅನರ್ಹ ಶಾಸಕ’ ಎಂಬ ಪಟ್ಟ ಸಿಕ್ಕಿತ್ತು.

2019ರ ಉಪಚುನಾವಣೆಯಲ್ಲಿ ಆರ್‌.ಶಂಕರ್‌ ಬದಲಾಗಿ ಸ್ಥಳೀಯ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರಿಗೆ ಬಿಜೆಪಿ ಟಿಕೆಟ್‌ ನೀಡಿ, ಶಂಕರ್‌ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿತು. ಸಚಿವ ಸ್ಥಾನದ ಭರವಸೆ ಈಡೇರದ ಕಾರಣ ಹತಾಶರಾದ ಶಂಕರ್‌ ಅವರು ಮತ್ತೆ 2023ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದರು. ಎರಡು ದಿನಗಳಿಂದ ಬಿಜೆಪಿ ಟಿಕೆಟ್‌ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಗೆಲುವಿನ ತುತ್ತು ಅಷ್ಟು ಸುಲಭವಲ್ಲ ಎಂಬುದು ಮೂರೂ ಪಕ್ಷಗಳಿಗೆ ಈಗಾಗಲೇ ಮನದಟ್ಟಾಗಿದೆ.

ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು

2019ರ ಉಪಚುನಾವಣೆಯಲ್ಲಿ ಗೆದ್ದು, ಮೊದಲ ಬಾರಿಗೆ ಶಾಸಕರಾಗಿರುವ ಅರುಣಕುಮಾರ ಪೂಜಾರ ಅವರಿಗೆ ಮತ್ತೆ ಬಿಜೆಪಿ ಟಿಕೆಟ್‌ ಸಿಗುತ್ತದಾ? ಇಲ್ಲವಾ? ಎಂಬ ಚರ್ಚೆ ರಾಣೆಬೆನ್ನೂರು ಕ್ಷೇತ್ರದಲ್ಲಿ ಜೋರಾಗಿ ನಡೆಯುತ್ತಿದೆ.

ಕೆ.ಶಿವಲಿಂಗಪ್ಪ, ಸಂತೋಷಕುಮಾರ ಪಾಟೀಲ, ಡಾ.ಬಸವರಾಜ ಕೇಲಗಾರ, ಪಿ.ಆರ್‌.ಕುಪ್ಪೇಲೂರ, ಭಾರತಿ ಅಳವಂಡಿ, ಭಾರತಿ ಜಂಬಗಿ, ಪ್ರಕಾಶ ಬರಡಿಕಟ್ಟಿ, ಚೋಳಪ್ಪ ಕಸವಾಳ, ಎ.ಬಿ.ಪಾಟೀಲ, ಬಸವರಾಜ ಲಕ್ಷ್ಮೇಶ್ವರ ಮುಂತಾದವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

‘ಶಾಸಕ ಅರುಣಕುಮಾರ ಪೂಜಾರ ಹೊರತುಪಡಿಸಿ, ಉಳಿದ ಯಾರಿಗಾದರೂ ಟಿಕೆಟ್‌ ನೀಡಿ. ನಾವು ಬಿಜೆಪಿಯನ್ನು ಗೆಲ್ಲಿಸುತ್ತೇವೆ’ ಎಂದು 9 ಆಕಾಂಕ್ಷಿಗಳು ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಅರುಣಕುಮಾರ ಅವರಿಗೇ ಟಿಕೆಟ್‌ ಕೊಡಬೇಕು ಎಂದು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

****

ರಾಣೆಬೆನ್ನೂರು: ವಿಜೇತರ ವಿವರ

ವರ್ಷ;ವಿಜೇತ ಅಭ್ಯರ್ಥಿ;ಪಕ್ಷ

1957;ಕೆ.ಎಫ್‌.ಪಾಟೀಲ;ಕಾಂಗ್ರೆಸ್‌

1962;ಯಲ್ಲವ್ವ ಡಿ.ಸಾಂಬ್ರಾಣಿ;ಕಾಂಗ್ರೆಸ್‌

1967;ಎನ್‌.ಎಲ್‌.ಬೆಲ್ಲದ;ಪಿಎಸ್‌ಪಿ

1972:ಕೆ.ಬಿ.ಕೋಳಿವಾಡ;ಕಾಂಗ್ರೆಸ್‌

1978;ಸೋಮಲಿಂಗಪ್ಪ ನಲವಾಗಲ;ಕಾಂಗ್ರೆಸ್‌

1983;ಬಿ.ಜಿ.ಪಾಟೀಲ;ಜೆಎನ್‌ಪಿ

1985;ಕೆ.ಬಿ.ಕೋಳಿವಾಡ;ಕಾಂಗ್ರೆಸ್‌

1989;ಕೆ.ಬಿ.ಕೋಳಿವಾಡ;ಕಾಂಗ್ರೆಸ್‌

1994;ವಿ.ಎಸ್‌.ಕರ್ಜಗಿ;ಜನತಾದಳ

1999;ಕೆ.ಬಿ.ಕೋಳಿವಾಡ;ಕಾಂಗ್ರೆಸ್‌

2004;ಜಿ.ಶಿವಣ್ಣ;ಬಿಜೆಪಿ

2008;ಜಿ.ಶಿವಣ್ಣ;ಬಿಜೆಪಿ

2013;ಕೆ.ಬಿ.ಕೋಳಿವಾಡ;ಕಾಂಗ್ರೆಸ್‌

2018;ಆರ್‌.ಶಂಕರ್‌;ಕೆಪಿಜೆಪಿ

2019;ಅರುಣಕುಮಾರ್‌ ಪೂಜಾರ;ಬಿಜೆಪಿ

****

ಮತದಾರರ ವಿವರ

1,18,714;ಪುರುಷ ಮತದಾರರು

1,16,345;ಮಹಿಳಾ ಮತದಾರರು

2,35,074;ಒಟ್ಟು ಮತದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.