ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರ 127ನೇ ಜಯಂತಿಗೆ ವಿಶೇಷ ಮಹತ್ವವಿದೆ. ಎಲ್ಲ ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದರೂ, ಆ ಪಕ್ಷಗಳು ದಲಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು- ಕಾರ್ಯಕ್ರಮಗಳನ್ನು ಹೊಂದಿವೆಯೇ ಎನ್ನುವ ಸಂದೇಹ ಇದ್ದೇ ಇದೆ. ಇದರ ಜೊತೆಗೆ, ಎಸ್.ಸಿ-ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ದಲಿತರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲದರ ಹಿನ್ನೆಲೆಯಲ್ಲಿ, ಅಂಬೇಡ್ಕರ್ ಜಯಂತಿಯನ್ನು ನೆಪವಾಗಿರಿಸಿಕೊಂಡು ‘ಪ್ರಜಾವಾಣಿ’ ಕೇಳಿದ ಮೂರು ಪ್ರಶ್ನೆಗಳಿಗೆ ದಲಿತ ಸಮುದಾಯದ ಮೂವರು ಜನಪ್ರತಿನಿಧಿಗಳು ಹಾಗೂ ಒಬ್ಬ ಕವಿ ನೀಡಿರುವ ಉತ್ತರಗಳು ಇಲ್ಲಿವೆ:
1. ದಲಿತರ ಅಭಿವೃದ್ಧಿ ಕುರಿತು ಯಾವ ಪಕ್ಷಕ್ಕಾದರೂ ಸ್ಪಷ್ಟ ನಿಲುವು- ಕಾರ್ಯಸೂಚಿ ಇದೆ ಎಂದು ನಿಮಗನ್ನಿಸುತ್ತದೆಯೇ?
2. ದಲಿತರ ಆತಂಕಗಳ ಸ್ವರೂಪ ಇತ್ತೀಚಿನ ದಿನಗಳಲ್ಲಿ ಬದಲಾಗಿದೆಯೇ?
3. ರಾಜಕೀಯ ಪಕ್ಷಗಳ ಪಾಲಿಗೆ ಸಿದ್ಧಾಂತಗಳು ಹಿನ್ನೆಲೆಯಲ್ಲಿ ಉಳಿದು, ಸಂಕೇತಗಳಿಗಷ್ಟೇ ಅಂಬೇಡ್ಕರ್ ಸೀಮಿತಗೊಂಡಿದ್ದಾರೆಯೇ?
***
ಅಂಬೇಡ್ಕರ್ ತಾತ್ವಿಕತೆಯ ಅಗತ್ಯ...
ರಾಜಕೀಯ ಪಕ್ಷಗಳ ದಲಿತ ಹಿತಾಸಕ್ತಿಯನ್ನು ಸ್ಪಷ್ಟವಾಗಿ ಗುರುತಿಸುವುದು ಸಾಧ್ಯವಿಲ್ಲ. ತೌಲನಾತ್ಮಕವಾಗಿ ನೋಡುವುದಾದರೆ ಕಾಂಗ್ರೆಸ್ ಉತ್ತಮ ಪಾರ್ಟಿ ಎನ್ನಬಹುದು.
ಕಳೆದ 60 ವರ್ಷಗಳಲ್ಲಿ ದಲಿತರ ಬದುಕಿನಲ್ಲಿ ದೊಡ್ಡ ಬದಲಾವಣೆಯಾಗಿದೆ. ಉನ್ನತ ಶಿಕ್ಷಣದಿಂದಾಗಿ ಆ ಸಮುದಾಯದಿಂದ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು, ಪ್ರಾಧ್ಯಾಪಕರು ರೂಪುಗೊಂಡಿದ್ದಾರೆ. ಆದರೆ, ಬಡತನ ರೇಖೆಗಿಂತ ಕೆಳಗೆ ಇರುವವರು ಇನ್ನೂ ದೊಡ್ಡ ಸಂಖ್ಯೆಯಲ್ಲಿದ್ದು ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ಜನಸಂಖ್ಯೆ ಆಧಾರದ ಮೇಲೆ ಹಣಕಾಸು ಹಂಚಿಕೆ ಆಗಬೇಕಿದ್ದು, ಅನುದಾನಗಳನ್ನು ಪ್ರಾಮಾಣಿಕವಾಗಿ ಖರ್ಚು ಮಾಡಬೇಕಾಗಿದೆ. ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದಂತೆ ನಮ್ಮ ಚಿಂತನೆ ಬದಲಾಗಬೇಕಿದ್ದು, ದಲಿತರ ಹಿತಾಸಕ್ತಿಗಾಗಿ ಇರುವ ಬಹಳ ಹಳೆಯ ಕಾರ್ಯಕ್ರಮಗಳನ್ನು ಪುನರ್ ರಚಿಸಬೇಕಾಗಿದೆ. ನಗರಗಳ ರೀತಿ ಹಳ್ಳಿಗಳನ್ನು ಕೂಡ ಎಲ್ಲರೂ ಬದುಕಲು ಸಾಧ್ಯವಾಗುವಂತೆ ರಚಿಸಬೇಕಾಗಿದೆ.
ಬಲಪಂಥೀಯರ ನಡೆ- ನುಡಿಗಳಲ್ಲಿ ತುಂಬಾ ವ್ಯತ್ಯಾಸ ಇರುವುದನ್ನು ಗಮನಿಸಬೇಕು. ಇವರು ‘ಹಿಂದೂಯಿಸಂ’ ನಂಬುತ್ತಾರೆ. ಅದೇ ಕಾಲಕ್ಕೆ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ‘ಹಿಂದೂಯಿಸಂ’ ನಂಬುವವರು ಅಂಬೇಡ್ಕರ್ ಬಗ್ಗೆ ಮಾತನಾಡುವುದು ವಿರೋಧಾಭಾಸ. ಈ ದ್ವಂದ್ವದ ಬಗ್ಗೆ ಅವರು ಸ್ಪಷ್ಟನೆ ಕೊಡಬೇಕು. ಎಸ್.ಸಿ-ಎಸ್.ಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರಿಂ ಕೋರ್ಟ್ ತೀರ್ಪು ಕೂಡ ಪೂರ್ವಗ್ರಹದಿಂದ ಕೂಡಿದೆ. ಶೇ 1ರಷ್ಟು ದುರುಪಯೋಗ ಆಗಿರಬಹುದಾದ ಉದಾಹರಣೆಗಳನ್ನು ಮುಂದಿಟ್ಟುಕೊಂಡು, ಉಳಿದ ಶೇ 99 ಜನರ ಹಕ್ಕುಗಳನ್ನು ಕಿತ್ತುಕೊಳ್ಳುವುದು ನ್ಯಾಯಸಮ್ಮತವಲ್ಲ.
ಅಂಬೇಡ್ಕರ್ ಅವರನ್ನು ಎಲ್ಲ ಪಕ್ಷಗಳೂ ಭೌತಿಕವಾಗಿ ಒಪ್ಪಿಕೊಂಡಿವೆ. ಆದರೆ, ‘ಅಂಬೇಡ್ಕರಿಸಂ’ ಎಲ್ಲಿಯೂ ಕಾಣಿಸುವುದಿಲ್ಲ. ರಾಜಕೀಯವಾಗಿ ಪ್ರಜಾಪ್ರಭುತ್ವವನ್ನು ಆನಂದಿಸುವವರು, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬದಲಾವಣೆ ತರದ ಬದಲಾವಣೆಯಿಂದ ಉಪಯೋಗವಿಲ್ಲ.
-ಎಲ್. ಹನುಮಂತಯ್ಯ, ರಾಜ್ಯಸಭಾ ಸದಸ್ಯ
**
ಅಂಬೇಡ್ಕರ್ ಕವಚ ದುರ್ಬಲಗೊಳಿಸಲಾಗಿದೆ...
ದಲಿತರ ಹಿತಾಸಕ್ತಿಯ ಬಗ್ಗೆ ರಾಜಕೀಯ ಪಕ್ಷಗಳದು, ಆಸೆ ತೋರಿಸಿ ಕೆಲಸ ಸಾಧಿಸಿಕೊಳ್ಳುವ ಸೋಗಲಾಡಿತನವಷ್ಟೇ ಆಗಿದೆ. ಸ್ವಲ್ಪಮಟ್ಟಿಗೆ ಬಿಎಸ್‍ಪಿಯನ್ನು ಬಿಟ್ಟರೆ, ದಲಿತರಿಗೆ ರಾಜಕೀಯ ಅಧಿಕಾರವನ್ನು ಕಲ್ಪಿಸುವ ಅಂಬೇಡ್ಕರ್ ಆಶಯವನ್ನು ಯಾವ ಪಕ್ಷವೂ ಈಡೇರಿಸಿಲ್ಲ.
ದಲಿತರ ಹೆಸರಿನಲ್ಲಿ ಏನೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಮೀಸಲಾತಿ ಸವಲತ್ತು ಕಲ್ಪಿಸಿದ್ದರೂ ಕಳೆದ 70 ವರ್ಷಗಳಲ್ಲಿ ಕಾಲ ಬದಲಾದಂತೆ ತನ್ನಂತಾನೇ ಕಡಿಮೆಯಾಗಬೇಕಿದ್ದ ದಲಿತರ ಬಡತನ, ಅನಕ್ಷರತೆ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈಗಲೂ ಶೇ 48ರಷ್ಟು ದಲಿತ ಹುಡುಗರು ಎಸ್ಸೆಸ್ಸೆಲ್ಸಿ ಡ್ರಾಪ್‍ಔಟ್‍ಗಳಾಗುತ್ತಿದ್ದಾರೆ. ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವವರಲ್ಲಿ ಹಾಗೂ ಅಪರಾಧ ಪ್ರಕರಣಗಳಿಗೆ ತುತ್ತಾಗಿರುವವರಲ್ಲಿ ದಲಿತರೇ ಹೆಚ್ಚು. ಬುಡಕಟ್ಟು, ಆದಿವಾಸಿ ಮಕ್ಕಳ ಬಗ್ಗೆಯಂತೂ ಹೇಳುವುದೇ ಬೇಡ. ಅವರ ಬಗ್ಗೆ ರಾಜಕಾರಣಿಗಳದು ಶೂನ್ಯ ಕಾಳಜಿ. ಏಕಲವ್ಯ ಶಾಲೆಗಳ ಕಳಪೆ ಸ್ಥಿತಿಯನ್ನು ನೋಡಿದರೆ ವ್ಯವಸ್ಥೆಯ ಕಾಳಜಿ ಅರ್ಥವಾಗುತ್ತದೆ.
ದಲಿತರ ಆತಂಕಗಳು ಎಲ್ಲ ಕಾಲಕ್ಕೂ ಇದ್ದಂತಹವೇ. ಈ ಆತಂಕ ಅಸಹಾಯಕತೆಯನ್ನು ತಲುಪಿರುವ ಸಂದರ್ಭ ಇಂದಿನದು. ಇದುವರೆಗೆ ದಲಿತ ಸಂಘರ್ಷ ಸಮಿತಿಗಳು ದಲಿತರ ಪಾಲಿಗೆ ಧೈರ್ಯ ಹುಟ್ಟಿಸುತ್ತಿದ್ದವು. ಅಂಬೇಡ್ಕರ್ ಹೆಸರು ಕವಚದಂತಿತ್ತು. ಈಗ ಅಂಬೇಡ್ಕರ್ ಅವರನ್ನೇ ದ್ರೋಹಿ ಎಂಬಂತೆ ಬಿಂಬಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಒಂದೆರಡು ಘಟನೆಗಳ ಹಿನ್ನೆಲೆಯಲ್ಲಿ ಎಸ್.ಸಿ-ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ತೀರ್ಪು ನೀಡಿದೆ. 1970ರಿಂದೀಚೆಗೆ ದಲಿತರಲ್ಲಿ ಉಂಟಾದ ಎಚ್ಚರವನ್ನು ಈ ತೀರ್ಪು ಮಸುಕಾಗಿಸುವಂತಿದೆ. ಪ್ರಕರಣಗಳೇ ದಾಖಲಾಗದೆ ಹೋದರೆ ದಮನಿತರಿಗೆ ನ್ಯಾಯ ದೊರಕುವುದಾದರೂ ಹೇಗೆ?
ದಲಿತರ ಆತಂಕಗಳಿಗೆ ಎಡಪಂಥವೇ ಮದ್ದು ಎಂದು ಹೇಳುತ್ತ ದಲಿತರನ್ನು ಸಾರಾಸಗಟಾಗಿ ಎಡಪಂಥಕ್ಕೆ ನೂಕುವ ಪ್ರಯತ್ನಗಳೂ ನಡೆಯುತ್ತಿವೆ. ಎಡಪಂಥಕ್ಕೂ ದಲಿತರ ಸಾಂಸ್ಕೃತಿಕ ಅಸ್ಮಿತೆಗೂ ಸಂಬಂಧವಿಲ್ಲ. ಹೀಗೆ ಬಲವಂತವಾಗಿ ಒಳಪಡಿಸುವುದು ಕೂಡ ಒಂದು ಬಗೆಯ ಷಡ್ಯಂತ್ರವೇ. ಈ ಕಾರಣದಿಂದಲೇ ಕರ್ನಾಟಕದಲ್ಲಿ ದಲಿತ ತಾತ್ವಿಕತೆ ಎನ್ನುವುದು ಈವರೆಗೂ ಸ್ಪಷ್ಟವಾಗಿ ರೂಪುಗೊಂಡಿಲ್ಲ. ದಲಿತ ಪ್ರಣಾಳಿಕೆ ಸಿದ್ಧಪಡಿಸಿ ಅದನ್ನು ಈಡೇರಿಸುವಂತೆ ಕರ್ನಾಟಕದ ರಾಜಕೀಯ ಪಕ್ಷಗಳನ್ನು ಒತ್ತಾಯಿಸುವುದು ಈಗ ನಮ್ಮ ಮುಂದಿರುವ ದಾರಿಗಳಲ್ಲೊಂದು. ಏ. 26ರಂದು ಬೆಂಗಳೂರಿನಲ್ಲಿ ಸಂವಿಧಾನ ಉಳಿಸಿ ಸಮಾವೇಶ ನಡೆಯಲಿದೆ. ಏ. 27ರಂದು ಕಲಬುರ್ಗಿ ಜಿಲ್ಲೆಯ ವಾಡಿಯಲ್ಲಿ (ಅಂಬೇಡ್ಕರ್ ಭೇಟಿ ಕೊಟ್ಟಿದ್ದ ಕರ್ನಾಟಕದ ಏಕೈಕ ಸ್ಥಳ) ದಲಿತ ಪ್ರಣಾಳಿಕೆ ಬಗ್ಗೆ ಚರ್ಚೆ ನಡೆಯಲಿದೆ. ಮಹಾರಾಷ್ಟ್ರದ ಸ್ಲಂಗಳಲ್ಲಿ ‘ಭೀಮ್ ಆರ್ಮಿ’ ಹೆಸರಿನ ಸುಮಾರು 3,000 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಶಾಲೆಗಳಿಂದ ಹೊರಬಿದ್ದವರಿಗೆ ಕಲಿಸುವ ಇಂಥ ಶಾಲೆಗಳು ನಮ್ಮಲ್ಲೂ ರೂಪುಗೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಆಶಯಗಳನ್ನು ಉಸಿರಾಡುವಂತೆ ಕಾಣಿಸುವ ಯುವಕರು ಆಶಾಕಿರಣವಾಗಿ ಕಾಣಿಸುತ್ತಿದ್ದಾರೆ. ಗುಜರಾತ್‍ನ ಜಿಗ್ನೇಶ್ ಮೇವಾನಿ, ಮಹಾರಾಷ್ಟ್ರದ ಚಂದ್ರಶೇಖರ್ ಆಜಾದ್ ಆಶಾಕಿರಣಗಳಾಗಿ ಕಾಣಿಸುತ್ತಿದ್ದಾರೆ. ರೋಹಿತ್ ವೇಮುಲ ಸಾವು ಕೂಡ ದಲಿತ ಯುವಕರಲ್ಲಿ ಒಂದು ಬಗೆಯ ಎಚ್ಚರವನ್ನು ಮೂಡಿಸಿದೆ. ಸಾಮಾಜಿಕ ಮಾಧ್ಯಮವನ್ನು ಅರಿವು ಬಿತ್ತಲಿಕ್ಕೆ ಬಳಸುವ ಸಾಧ್ಯತೆಯ ಕುರಿತು ಪ್ರಯತ್ನಗಳು ನಡೆದಿವೆ. ಇದೆಲ್ಲ ಎಚ್ಚರ- ಕಾಳಜಿ ರಾಜಕೀಯ ಮೇಲಾಟದಲ್ಲಿ ವ್ಯರ್ಥವಾಗದಂತೆ ಎಚ್ಚರ ವಹಿಸುವ ಜವಾಬ್ದಾರಿ ನಮ್ಮದಾಗಿದೆ.
-ಹುಲಿಕುಂಟೆ ಮೂರ್ತಿ, ಕವಿ
**
ಕಿವಿಗೆ ಹೂ, ಮೂಗಿಗೆ ತುಪ್ಪ
ಸಮಾನತೆಗೆ ಪೂರಕವಾದ ಎಲ್ಲ ಅಂಶಗಳು ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿದ್ದರೂ, ಅದನ್ನು ಅನುಷ್ಠಾನಗೊಳಿಸಬೇಕಾದ ಸ್ಥಾನದಲ್ಲಿ ಬಹುಸಮಯ ಕುಳಿತಿದ್ದ ಕಾಂಗ್ರೆಸ್, ದಲಿತರ ಅಭಿವೃದ್ಧಿಗಾಗಿ ರೂಪಿಸಿದ್ದೆಲ್ಲ ಕಳಪೆ ಕಾರ್ಯಕ್ರಮಗಳನ್ನು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದಲಿತರ ಏಳಿಗೆಗಾಗಿ ಸ್ವಲ್ಪಮಟ್ಟಿಗೆ ಪ್ರಾಮಾಣಿಕ ಪ್ರಯತ್ನಗಳು ನಡೆದವು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ದಲಿತರಿಗೆ ಕೈಗಾರಿಕಾ ಮಳಿಗೆಗಳಲ್ಲಿ ಮೀಸಲಾತಿ ತಂದರು. ಕೈಗಾರಿಕೆಗಳ ಸ್ಥಾಪನೆಗೆ ಸಹಾಯಧನ ಹಾಗೂ ಭೂಮಿ ನೀಡುವುದನ್ನು ಶುರುಮಾಡಿದರು. ಆರ್ಥಿಕವಾಗಿ ಸಬಲಗೊಳಿಸದಿದ್ದರೆ ಪ್ರಗತಿ ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ದಲಿತರನ್ನು ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸಶಕ್ತಗೊಳಿಸುವ ಕೆಲಸವನ್ನು ಬಿಜೆಪಿ ಮಾಡಿದೆ.
ಮೋದಿ ಅವರ ಸರ್ಕಾರ ಜಾರಿಗೆ ತಂದಿರುವ ‘ಮುದ್ರಾ’ ಯೋಜನೆಯೂ ಚೆನ್ನಾಗಿದೆ. ಆದರೆ, ಕಾಂಗ್ರೆಸ್ ಕೊಟ್ಟಿದ್ದೆಲ್ಲ ಕುರಿ-ಕೋಳಿ ಹಂಚುವ ಕಾರ್ಯಕ್ರಮಗಳು, ಭಿಕ್ಷುಕರಿಗೆ ನೀಡುವ ಕಾರ್ಯಕ್ರಮಗಳು. ನಾನು ಎಸ್.ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ. ಪಕ್ಷದ ಪರದೆ ನನ್ನ ಮೆದುಳಿಗೆ ಸುತ್ತಿಕೊಂಡಿಲ್ಲ. ನನ್ನ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷ ಇದುವರೆಗೆ ಮಾಡಿರುವುದೆಲ್ಲ ಕಿವಿಗೆ ಹೂ ಇಡುವ, ಮೂಗಿಗೆ ತುಪ್ಪ ಸವರುವ ಕೆಲಸ.
ಎಸ್.ಸಿ-ಎಸ್.ಟಿ ಕಾಯ್ದೆಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಲು ಕಾರಣ ಪಟ್ಟಭದ್ರ ಹಿತಾಸಕ್ತಿಗಳು ಅಲ್ಲಿ ಕೂತಿರುವುದು. ಸುಪ್ರೀಂ ಕೋರ್ಟ್‍ನ ಯಾವುದೇ ಬೆಂಚ್‍ನಲ್ಲಿ ಹಿಂದುಳಿದ ವರ್ಗಗಳ ಒಬ್ಬ ನ್ಯಾಯಮೂರ್ತಿಯೂ ಇಲ್ಲ. ಇದ್ದಿದ್ದರೆ ಅವರು ಧ್ವನಿಯೆತ್ತುತ್ತಿದ್ದರು. ಅಟ್ರಾಸಿಟಿ ಕಾಯ್ದೆಯೇ ಇದುವರೆಗೆ ಪೂರ್ಣವಾಗಿ ರೂಪುಗೊಂಡಿಲ್ಲ, ಸರಿಯಾಗಿ ಅನುಷ್ಠಾನಗೊಂಡಿಲ್ಲ. ಅದರ ಕತ್ತು ಹಿಸುಕುವ ಕೆಲಸ ನಡೆಯುತ್ತಿದೆ. ಮೊದಲಿಗೆ ಈ ಕಾಯ್ದೆ ಎಷ್ಟರಮಟ್ಟಿಗೆ ಜಾರಿಗೊಂಡಿದೆ ಎನ್ನುವುದನ್ನು ಪರಿಶೀಲಿಸಬೇಕು. ಈಗ ನೀಡಿರುವ ತೀರ್ಪನ್ನು ರದ್ದುಪಡಿಸಿ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸುವ ಮೂಲಕ ತನ್ನ ಜವಾಬ್ದಾರಿಯನ್ನು ಪ್ರದರ್ಶಿಸಿದೆ.
ಇರುವ ಕಾನೂನುಗಳನ್ನು ಹಾಗೂ ಅಭಿವೃದ್ಧಿಗಾಗಿ ಇರುವ ಕಾರ್ಯಕ್ರಮಗಳನ್ನು ಮೊದಲು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅವು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡು, ಗುರಿಸಾಧನೆಯ ನಂತರವೇ ಕಾಯ್ದೆ-ಕಾರ್ಯಕ್ರಮಗಳನ್ನು ಪರಿಶೀಲಿಸಬೇಕು. ಕಾನೂನುಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಬಾಲ್ಯಾವಸ್ಥೆಯಲ್ಲಿ ಇರುವ ಸಂದರ್ಭದಲ್ಲೇ ಕತ್ತುಹಿಚುಕುವುದು ಸರಿಯಲ್ಲ. ಹೀಗೆ ಕತ್ತು ಹಿಚುಕುವ ಕೆಲಸವನ್ನೇ ಕೋರ್ಟ್ ಮಾಡುತ್ತದೆ, ಸರ್ಕಾರವೂ ಮಾಡುತ್ತದೆ. ಸಮಾಜ ಕೂಡ ದಲಿತರ ಬಗ್ಗೆ ಅಸೂಯೆಯನ್ನು ಬಿಟ್ಟು, ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವಿವೇಕ ಪ್ರದರ್ಶಿಸಬೇಕು.
ಅಂಬೇಡ್ಕರ್ ವೈಭವೀಕರಣ ಎಂದರೆ ವೋಟ್ ಬ್ಯಾಂಕ್ ರಾಜಕಾರಣ. ಅದು ಆಗಬಾರದು. ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ಕುರಿತು ಎಲ್ಲ ಪಕ್ಷಗಳು ಯೋಚಿಸಬೇಕು. ಅಂಬೇಡ್ಕರ್ ಫೋಟೊ ಇಟ್ಟುಕೊಂಡು ಜನ್ಮದಿನ ಆಚರಿಸುವುದಷ್ಟೇ ಆದರೆ ಅದು ಅವರ ಹೆಸರಿಗೆ ಮಾಡುವ ದ್ರೋಹ. ಬಿಜೆಪಿ ಹೆದರಿಕೆಯಿಂದಲಾದರೂ ದಲಿತರ ಕಾಳಜಿಯ ಬಗ್ಗೆ ಚಿಂತಿಸುತ್ತದೆ. ಆದರೆ, ಕಾಂಗ್ರೆಸ್‍ಗೆ ನಮ್ಮ ವೋಟು ಅಜೀರ್ಣ ಆಗಿಬಿಟ್ಟಿದೆ. ‘ಕೊಟ್ಟೇ ಕೊಡ್ತಾರೆ ಬಿಡ್ರೀ’ ಎನ್ನುವ ಧೋರಣೆ ಅದರದ್ದು.
-ಡಿ.ಎಸ್. ವೀರಯ್ಯ, ವಿಧಾನ ಪರಿಷತ್ ಸದಸ್ಯ, ಬಿಜೆಪಿಎಸ್.ಸಿ ಮೋರ್ಚಾ ಅಧ್ಯಕ್ಷ
**
ಕುಂತಿ ಮಕ್ಕಳ ಕಥೆ...
ದಲಿತರ ಬಗ್ಗೆ ಎಲ್ಲ ಪಕ್ಷಗಳು ಕಳಕಳಿ ವ್ಯಕ್ತಪಡಿಸುತ್ತವೆ. ಕಾರ್ಯಕ್ರಮಗಳ ಜಾರಿ ಹಂತದಲ್ಲಿ ಅವುಗಳ ನೈಜ ಬಣ್ಣ ಬಯಲಾಗುತ್ತದೆ. ದಲಿತರನ್ನು ಅಧಿಕಾರಕ್ಕೆ ತರುವ ಕಾಳಜಿ ಅವರಿಗಿಲ್ಲ. ವೋಟ್ ಬ್ಯಾಂಕ್ ರೂಪದಲ್ಲಷ್ಟೇ ದಲಿತರು ಅವರಿಗೆ ಬೇಕು.
ಅಂಬೇಡ್ಕರ್‌ಗೆ ಕಾಂಗ್ರೆಸ್ ‘ಭಾರತರತ್ನ’ ಪುರಸ್ಕಾರ ನೀಡಿ ಗೌರವಿಸಲಿಲ್ಲ. ಕುದುರೆ ಏರಿದ ಕಾರಣಕ್ಕೆ ಗುಜರಾತಿನಲ್ಲಿ ದಲಿತನೊಬ್ಬನನ್ನು ಸಾಯಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳದು ದಲಿತರ ಬಗ್ಗೆ ಮೊಸಳೆ ಕಣ್ಣೀರು. ಇತರ ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್ ತನಗೆ ಸಿಕ್ಕ ಅಲ್ಪಸಮಯದಲ್ಲೇ ದಲಿತ ಕಾಳಜಿಯನ್ನು ತೋರಿಸಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ತಳಸಮುದಾಯದವರಿಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಸಿಗುವಂತೆ ಮಾಡಿದ್ದರು.
ಹಳ್ಳಿಗಳಲ್ಲಿ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆ, ಅಸ್ಪೃಶ್ಯತೆ ಇಂದಿಗೂ ಇದೆ. ದಲಿತ ಸಮುದಾಯದ ವಿದ್ಯಾವಂತರು ಇವೆಲ್ಲವನ್ನೂ ಅರ್ಥ ಮಾಡಿಕೊಂಡು ನೊಂದುಕೊಳ್ಳುತ್ತಾರೆ. ಜಾತಿ ವ್ಯವಸ್ಥೆ ಭಯ, ಆತಂಕ, ಕೀಳರಿಮೆಯನ್ನು ಹುಟ್ಟಿಸಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತ ಸಮುದಾಯದವರದು ‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ’ ಎಂಬಂಥ ಪರಿಸ್ಥಿತಿ.
-ಬಿ.ಬಿ. ನಿಂಗಯ್ಯ, ಜೆಡಿಎಸ್ ಶಾಸಕ
(ಲೇಖನ ಮೊದಲ ಬಾರಿಗೆ 2018ರ ಏ.14ರಂದು ಪ್ರಕಟವಾಗಿತ್ತು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.