ಆದರ್ಶ ರಾಜಕಾರಣದ ಮಾದರಿಗಳು ಸಾಕಾರವಾಗಿರುವುದು ಎಲ್ಲಿ? ಈ ಪ್ರಶ್ನೆಗೆ ಎಲ್ಲರೂ ಒಪ್ಪಿಕೊಳ್ಳಬಹುದಾದ ಉತ್ತರ, ‘ಸಿನಿಮಾಗಳಲ್ಲಿ’ ಎನ್ನುವುದು.
ರಾಜಕಾರಣದ ಅತ್ಯುತ್ತಮ ಮಾದರಿಗಳನ್ನು ಸೃಷ್ಟಿಸಿರುವ ಚಲನಚಿತ್ರ ಮಾಧ್ಯಮ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭ್ರಷ್ಟ ರಾಜಕಾರಣದ ಕಥನಗಳನ್ನೂ ನಿರೂಪಿಸಿದೆ. ರಾಜಕಾರಣ ಎನ್ನುವುದು ಸಿನಿಮಾದ ಪಾಲಿಗೆ ತೀರದ ಆಕರ್ಷಣೆ. ಈ ಚುಂಬಕತೆಯ ಕಾರಣದಿಂದಲೇ ಇರಬೇಕು, ಎರಡೂ ಕ್ಷೇತ್ರಗಳ ನಡುವಣ ಕೊಡು-ಕೊಳು ಸಂಬಂಧ ನಿರಂತರವಾಗಿದೆ- ಮುಖ್ಯವಾಗಿ, ಅನೇಕ ಸಿನಿಮಾ ಕಲಾವಿದರು ನಿಜಜೀವನ
ದಲ್ಲೂ ರಾಜಕಾರಣಿಗಳ ಪಾತ್ರಗಳನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದಾರೆ.
ಕನ್ನಡ ಚಲನಚಿತ್ರರಂಗ ಹಾಗೂ ಕರ್ನಾಟಕದ ರಾಜಕಾರಣದ ನಡುವಿನ ನಂಟಿಗೆ ದೀರ್ಘ ಇತಿಹಾಸವಿದೆ. ಈ ಪರಂಪರೆಯನ್ನು ಪ್ರಸ್ತುತ ‘ಪ್ರಜಾ ರಾಜಕಾರಣ’ದ ಕುರಿತು ಮಾತನಾಡುತ್ತಿರುವ ಉಪೇಂದ್ರ ಅವರಿಂದಲೇ ಚರ್ಚಿಸಬಹುದು. ವಿಭಿನ್ನ ಶೈಲಿಯ ಚಿತ್ರಗಳಿಂದ ನೋಡುಗರ ಗಮನಸೆಳೆದ ನಟ ಉಪೇಂದ್ರ ಸಾರ್ವಜನಿಕ ಬದುಕಿನಲ್ಲೂ ಹೊಸತನದ ಪ್ರಯೋಗದ ಮಾತನಾಡುತ್ತಿದ್ದಾರೆ. ಆದರೆ, ತಾವೇ ಸ್ಥಾಪಿಸಿದ ಪಕ್ಷದಿಂದ ಸಕ್ರಿಯ ಚಟುವಟಿಕೆಗಳಿಗೂ ಮೊದಲೇ ಹೊರಬಿದ್ದು, ಇನ್ನೊಂದು ಪಕ್ಷವನ್ನು ಅಸ್ತಿತ್ವಕ್ಕೆ ತರುವ ಅವರ ಉಮೇದು ಕೂಡ ಸದ್ಯಕ್ಕೆ ಚಿತ್ರಕಥೆಯಂತೆಯೇ ಕಾಣಿಸುತ್ತಿದೆ.
ದಕ್ಷಿಣದ ಪ್ರಯೋಗಶಾಲೆ: ದಕ್ಷಿಣ ಭಾರತದ ಚಿತ್ರರಂಗಕ್ಕೂ ರಾಜಕಾರಣಕ್ಕೂ ಇನ್ನಿಲ್ಲದ ನಂಟು. ಕರ್ನಾಟಕದ ನೆರೆಯ ಪ್ರಮುಖ ರಾಜ್ಯಗಳಲ್ಲಂತೂ ಚಿತ್ರರಂಗದ ಮುಂದಾಳುಗಳೇ ರಾಜಕಾರಣದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಇತಿಹಾಸವಿದೆ. ತಮಿಳುನಾಡಿನ ಜನಪ್ರಿಯ ರಾಜಕಾರಣಿ ಎಂ.ಜಿ. ರಾಮಚಂದ್ರನ್ ಎ.ಐ.ಎ.ಡಿ.ಎಂ.ಕೆ ಸ್ಥಾಪಿಸಿದವರು. ಮುಖ್ಯಮಂತ್ರಿಯಾಗಿ ದೇಶದ ಗಮನಸೆಳೆದ ಜಯಲಲಿತಾ ಅವರು ಕೂಡ ಸಿನಿಮಾ ನಟಿ
ಯಾಗಿದ್ದವರು. ಇನ್ನು ಆಂಧ್ರ ಪ್ರದೇಶದಲ್ಲಿ ಎನ್.ಟಿ. ರಾಮರಾವ್ ಅವರು, ತೆಲುಗುದೇಶಂ ಪಕ್ಷವನ್ನು ಕ್ಷಿಪ್ರಕಾಲ
ದಲ್ಲೇ ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದವರು.
ಎಂಜಿಆರ್, ಎನ್‍ಟಿಆರ್ ಅವರಂತೆ ಕರ್ನಾಟಕದಲ್ಲಿ ರಾಜ್‌ಕುಮಾರ್ ಕೂಡ ಜನಪ್ರಿಯರು. ರಾಜಕಾರಣವನ್ನು ಪ್ರವೇಶಿಸುವಂತೆ ಪದೇ ಪದೇ ಒತ್ತಾಯ ಬಂದರೂ ಅದು ತಮಗೆ ಒಗ್ಗುವ ಕ್ಷೇತ್ರವಲ್ಲವೆಂದು ಅವರು ನಯವಾಗಿ ನಿರಾಕರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಜ್‌ಕುಮಾರ್ ರಾಜಕಾರಣಕ್ಕೆ ಬಂದಿದ್ದರೆ, ಕರ್ನಾಟಕ ಕೂಡ ಸಿನಿಮಾ ಹಿನ್ನೆಲೆಯ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯಾಗಿ ಪಡೆಯುವ ಸಾಧ್ಯತೆಯಿತ್ತು.
ಸಿನಿಮಾ ಹಿನ್ನೆಲೆಯ ಮುಖ್ಯಮಂತ್ರಿ ಇಲ್ಲ ಎನ್ನುವ ಹಿನ್ನೆಲೆಯಲ್ಲಿ, ಕನ್ನಡನಾಡಿನಲ್ಲಿ ರಾಜಕಾರಣಕ್ಕೂ ಚಿತ್ರರಂಗಕ್ಕೂ ಗಾಢ ಸಂಬಂಧ ಇಲ್ಲ ಎನ್ನುವಂತಿಲ್ಲ. ಪರದೆ ಮೇಲೆ ರಂಜಿಸುವ ಕಲಾವಿದರು ಹಾಗೂ ಚಿತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡವರು ರಾಜಕೀಯದಲ್ಲಿ ಸೈ ಅನ್ನಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.
ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದ ದಿಗ್ಗಜರಲ್ಲಿ ಒಬ್ಬರಾದ ಗುಬ್ಬಿವೀರಣ್ಣ ಸಂವಿಧಾನದತ್ತವಾಗಿ ಏರ್ಪಟ್ಟಿರುವ ನಾಮಕರಣ ಪ್ರಕ್ರಿಯೆಯಲ್ಲಿ ಕರ್ನಾಟಕ ವಿಧಾನಪರಿಷತ್ತಿಗೆ ಪ್ರವೇಶಿಸಿದವರಲ್ಲಿ ಮೊದಲಿಗರು. ಅವರ ಬಳಿಕ ವೀರಣ್ಣನವರ ಪತ್ನಿ ಬಿ. ಜಯಮ್ಮ ಕೂಡ ವಿಧಾನಪರಿಷತ್ ಸದಸ್ಯರಾಗಿ ನಾಮಕರಣಗೊಂಡಿದ್ದರು.
ಸ್ಟುಡಿಯೊ ನಿರ್ಮಿಸಿ, ಚಲನಚಿತ್ರ ತಯಾರಿಸಿ, ಕಲಾವಿದರಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ದಯಾನಂದ ಸಾಗರ್ ನೇರ ಚುನಾವಣೆಗೆ ಇಳಿದು, ಶಾಸಕರಾದವರು ಹಾಗೂ ಉಪ ಸಚಿವರಾಗಿ ಕಾರ್ಯ ನಿರ್ವಹಿಸಿದವರು.
ನಂತರದ ದಿನಗಳಲ್ಲಿ ರಾಜಕಾರಣಿಗಳೊಂದಿಗೆ ಒಡನಾಟ ಇಟ್ಟುಕೊಂಡರೂ ಪ್ರತ್ಯಕ್ಷ ರಾಜಕಾರಣಕ್ಕೆ ಕಲಾವಿದರು ಮುಂದಾಗಲಿಲ್ಲ. 1980ರ ದಶಕದಲ್ಲಿ ರಂಗಭೂಮಿ–ಸಿನಿಮಾ ಕಲಾವಿದ ಮುಖ್ಯಮಂತ್ರಿ ಚಂದ್ರು ಜನತಾ ಪರಿವಾರದ ಪ್ರತಿನಿಧಿಯಾಗಿ ಗೌರಿಬಿದನೂರು (ಆಗ ಕೋಲಾರ ಜಿಲ್ಲೆ) ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿಬಂದರು. ನೇರ ಚುನಾವಣೆಯಲ್ಲಿ ಗೆದ್ದ ಮೊದಲ ನಟ– ರಾಜಕಾರಣಿ ಇವರೇ. ನಾಟಕವೊಂದರಲ್ಲಿ ಮುಖ್ಯಮಂತ್ರಿಯ ಪಾತ್ರವನ್ನು ಅಭಿನಯಿಸುವ ಅವರು ತಮ್ಮನ್ನು ತಾವು ಬಣ್ಣಿಸಿಕೊಳ್ಳುವುದು - ‘ನಾನು ಕನ್ನಡ ರಂಗಭೂಮಿಯ ಶಾಶ್ವತ ಮುಖ್ಯಮಂತ್ರಿ’.
‘ಕಂಕಣ’ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟು, ಮುಂದೆ ಕಲಾತ್ಮಕ ಹಾಗೂ ವಾಣಿಜ್ಯ ಚಿತ್ರಗಳಲ್ಲೂ ಮಿಂಚಿದ ಅನಂತ್‌ನಾಗ್ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಗೆದ್ದು ಜೆ.ಎಚ್. ಪಟೇಲರ ಸಚಿವ ಸಂಪುಟದಲ್ಲಿ ಮಂತ್ರಿಯಾದರು. ಶಾಸಕರಾಗಿ, ಮಂತ್ರಿಯಾದ ಪ್ರಥಮ ಚಿತ್ರಕಲಾವಿದ ಅನಂತ್‌ನಾಗ್.
ಏಳುಬೀಳಿನ ನಡಿಗೆ: ರಾಜಕಾರಣಿಗಳಾಗಿದ್ದ ವಾಟಾಳ್ ನಾಗರಾಜ್ ಹಾಗೂ ಬಂಗಾರಪ್ಪ ಚಿತ್ರರಂಗದಲ್ಲಿ ಕಾಲಿಡಲು ಪ್ರಯತ್ನಿಸಿದ್ದರು. ಆದರೆ, ತಮ್ಮ ಪ್ರಯತ್ನಗಳಲ್ಲಿ ವಿಫಲರಾದ ಅವರು ರಾಜಕಾರಣದಲ್ಲೇ ವರ್ಚಸ್ಸು ರೂಪಿಸಿಕೊಂಡರು. ಇದಕ್ಕೆ ಇನ್ನೊಂದು ತುದಿಯಲ್ಲಿ, ಅನೇಕ ಚಿತ್ರನಟರು ರಾಜಕಾರಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮುಂದುವರಿಸಿದರು. ಕೆಲವು ನಟ–ನಟಿಯರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಕೊಂಡಿದ್ದೂ ಆಯಿತು.
ಜನಪ್ರಿಯ ನಾಯಕಿಯಾಗಿದ್ದ ಆರತಿ ವಿಧಾನಪರಿಷತ್ತಿಗೆ ನಾಮಕರಣಗೊಂಡಿದ್ದರು. ಆದರೆ ಅದನ್ನವರು ಒಪ್ಪಿಕೊಳ್ಳದ ವಿಚಾರ ನಿಧಾನಕ್ಕೆ ಬೆಳಕಿಗೆ ಬಂತು. ಬಂಗಾರಪ್ಪನವರ ಮಗ ಚಿತ್ರನಟ ಕುಮಾರ್ ಬಂಗಾರಪ್ಪ ಚುನಾವಣಾ ಕಣದಲ್ಲಿ ಗೆದ್ದು ಸಚಿವರಾದರು. ಇನ್ನೊಬ್ಬ ನಟ ಶಶಿಕುಮಾರ್ ಲೋಕಸಭೆಗೆ (ಚಿತ್ರದುರ್ಗ) ಆಯ್ಕೆಯಾಗಿದ್ದರು.
1980–90ರ ದಶಕದಲ್ಲಿ ಚಿತ್ರರಂಗ–ರಾಜಕಾರಣದ ನಡುವಿನ ನಂಟು ಗಾಢವಾಗತೊಡಗಿ ಹಲವು ಕಲಾವಿದರು ರಾಜಕಾರಣದಲ್ಲಿ ಮುಂಚೂಣಿಗೆ ಬರತೊಡಗಿದರು. ಇಲ್ಲೂ ಸೋಲು–ಗೆಲುವುಗಳು ಇದ್ದೇ ಇದ್ದವು.
ಒಡಲಾಳದ ‘ಸಾಕವ್ವ’ನಾಗಿ ನೋಡುಗರನ್ನು ರಂಜಿಸಿದ ನಟಿ ಉಮಾಶ್ರೀ ಮೊದಲಿಗೆ ವಿಧಾನಪರಿಷತ್ತಿಗೆ ನೇಮಕಗೊಂಡವರು. ನಂತರ ಜಿದ್ದಾಜಿದ್ದಿನ ರಾಜಕಾರಣಕ್ಕಿಳಿದು ತೇರದಾಳ್ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ಐದು ವರ್ಷ ಕಾಲ ಕನ್ನಡ ಹಾಗೂ ಸಂಸ್ಕೃತಿ ಖಾತೆ ಜೊತೆಗೆ ಮಹಿಳಾ–ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ, ನಿರ್ವಹಿಸುತ್ತಿರುವ ಹೆಮ್ಮೆ ಅವರದು.
ಚಿತ್ರನಟರು ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿದ್ದ ಟ್ರೆಂಡ್ ಏರುಮುಖವಾಗಿದ್ದ ಸಮಯದಲ್ಲೇ ಜನಪ್ರಿಯ ನಾಯಕಿ ಜಯಂತಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದರು. ಕಿರುತೆರೆಯ ತಾರಾ ವರ್ಚಸ್ಸಿನ ನಿರ್ದೇಶಕ ಟಿ.ಎನ್. ಸೀತಾರಾಂ ಗೌರಿಬಿದನೂರು ಕ್ಷೇತ್ರದಿಂದ ವಿಧಾನಸಭೆಗೆ ಬರಲು ಬಯಸಿದರು. ಇವರಿಬ್ಬರ ಪ್ರಯತ್ನ ಸಫಲವಾಗಲಿಲ್ಲ. ನಿರ್ಮಾಪಕ, ನಟ ಎಂ.ಪಿ. ಶಂಕರ್, ನಟ ಅಶೋಕ್ ಅವರೂ ವಿಧಾನಸಭಾ ಚುನಾವಣೆಗಳಲ್ಲಿ ವಿಫಲ ಯತ್ನ ನಡೆಸಿದರು.
ರಾಜಕೀಯದ ಏಳುಬೀಳುಗಳ ನಡುವೆ ಲೋಕಸಭೆ– ವಿಧಾನಸಭೆಗೆ ಆರಿಸಿಬಂದ ಪ್ರಮುಖ ಚಲನಚಿತ್ರ ಕಲಾವಿದ ಅಂಬರೀಷ್. ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದ ಅವರು, ‘ಅಂತ’ ಚಿತ್ರದ ಯಶಸ್ಸಿನ ನಂತರ ಜನಪ್ರಿಯ ನಾಯಕ ನಟರಾದರು. ‘ಅಂತ’ ಕೂಡ ರಾಜಕಾರಣದ ಕಥೆಯನ್ನು ಒಳಗೊಂಡ ಸಿನಿಮಾ. ಅಂಬರೀಷ್ ಸಿನಿಮಾದಂತೆಯೇ ರಾಜಕಾರಣದಲ್ಲೂ ಸೋಲು ಗೆಲುವುಗಳನ್ನು ಕಂಡರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.
ನಾಮಕರಣದ ಮೂಲಕ ಪ್ರವೇಶ: ಚಿತ್ರರಂಗ ಹಾಗೂ ರಾಜಕೀಯ ಬೇರೆ ಬೇರೆ ಕ್ಷೇತ್ರಗಳು. ಒಂದು ರಂಗದಲ್ಲಿ ಗಳಿಸಿದ ಜನಪ್ರಿಯತೆಯನ್ನು ಇನ್ನೊಂದರಲ್ಲಿ ಬಳಸಿಕೊಳ್ಳುವಲ್ಲಿ ಯಶಸ್ಸನ್ನು ಕಂಡವರು ಬಹಳ ಕಡಿಮೆ. ದಕ್ಷಿಣದ ಎರಡು ರಾಜ್ಯಗಳಲ್ಲಿ ಚಿತ್ರನಟರೇ ಆಡಳಿತದ ಚುಕ್ಕಾಣಿ ಹಿಡಿದರೂ, ಆ ರಾಜ್ಯಗಳಲ್ಲಿದ್ದ ಚಿತ್ರರಂಗದ ಪ್ರತಿನಿಧಿಗಳು ವಿರಳ. ಪಕ್ಷಗಳ ಟಿಕೆಟ್ ಮೇಲೆ ಸ್ಪರ್ಧಿಸಿ ಸಫಲರಾದವರೂ ಅಪರೂಪ. ಇಷ್ಟಾದರೂ ಪ್ರತಿಯೊಂದು ಪಕ್ಷವೂ ಕೆಲವು ಚಲನಚಿತ್ರ ಕಲಾವಿದರನ್ನು ತಮ್ಮ ಜೊತೆ ಗುರುತಿಸಿಕೊಳ್ಳುವ ಪ್ರವೃತ್ತಿಯಂತೂ ಇದೆ. ಈ ಸಖ್ಯದ ಮೂಲಕವೇ ಕೆಲವು ನಟ–ನಟಿಯರು ವಿಧಾನಪರಿಷತ್ತಿಗೆ ನಾಮಕರಣಗೊಂಡಿದ್ದಾರೆ.
ವಿಧಾನಪರಿಷತ್ತಿನಲ್ಲಿ ತಾರಾ ಮೆರುಗು ಶುರುವಾಗಿದ್ದು ಉಮಾಶ್ರೀ ಅವರಿಂದ. ನಂತರ ತಾರಾ ಅನುರಾಧ ಬಂದರು. ಬಳಿಕ ಪರಿಷತ್ತಿಗೆ ಕಾಲಿಟ್ಟವರು ಜಯಮಾಲಾ. ಇವರೆಲ್ಲರೂ ನಟನೆಯಿಂದ ಪ್ರೇಕ್ಷಕರ ಪ್ರಶಂಸೆ ಪಡೆದವರು. ಈ ಮೂವರೂ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಚಿತ್ರಗಳಲ್ಲಿ ಅಭಿನಯಿಸಿದವರು ಎನ್ನುವುದು ಗಮನಾರ್ಹ.
ಸಿನಿಮಾ ಸಂಬಂಧ ಇಟ್ಟುಕೊಂಡ ಹಲವರು ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಚಿತ್ರಮಂದಿರ ಮಾಲೀಕರಾಗಿದ್ದ ಡಿ.ಕೆ. ಶಿವಕುಮಾರ್, ಆಸ್ಟ್ರೇಲಿಯಾ ಚಿತ್ರವೊಂದರಲ್ಲಿ ಪಾತ್ರ ವಹಿಸಿದ್ದ ಡಾ. ಜಿ. ಪರಮೇಶ್ವರ್, ಸಂಕಲನ–ಸಂಸ್ಕರಣಾ ಕೇಂದ್ರ ಹೊಂದಿರುವ ಮಧು ಬಂಗಾರಪ್ಪ, ಚಿತ್ರನಿರ್ಮಾಪಕ ಸಂದೇಶ್ ನಾಗರಾಜ್ ಇವರಲ್ಲಿ ಪ್ರಮುಖರು.
ವಿಧಾನಸಭೆಗೆ ಆಯ್ಕೆಯಾಗಿದ್ದ ಜಗ್ಗೇಶ್ ಪ್ರಸ್ತುತ ವಿಧಾನಪರಿಷತ್ತಿನ ಸದಸ್ಯರು. ಪೊಲೀಸ್ ಇನ್ಸ್‌ಪೆಕ್ಟರ್ ಹುದ್ದೆಯಲ್ಲಿರುವಾಗಲೇ ಚಿತ್ರನಟರಾಗಿ ಹೆಸರು ಮಾಡಿದ್ದ ಬಿ.ಸಿ. ಪಾಟೀಲ್ ಹಿರೇಕೇರೂರು ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಬಂದು ಸ್ವಲ್ಪ ಸಮಯ ಸಚಿವರಾಗಿದ್ದರು. ಇನ್ನೋರ್ವ ನಿವೃತ್ತ ಅಧಿಕಾರಿ ಕೆ. ಶಿವರಾಮ್ ರಾಜಕಾರಣದಲ್ಲಿದ್ದರೂ ಚುನಾವಣೆಗಳಲ್ಲಿ ಸಫಲತೆ ಕಂಡಿಲ್ಲ.
ನಟ ಶ್ರೀನಾಥ್, ಚಿತ್ರಸಾಹಿತಿ ದೊಡ್ಡರಂಗೇಗೌಡ ವಿಧಾನಪರಿಷತ್ತಿನಲ್ಲಿದ್ದವರು. ಈಗಲೂ ಪರಿಷತ್ತಿನಲ್ಲಿ ತಾರಾ ಮಿಂಚು ಇದೆ (ಜಯಮಾಲಾ, ತಾರಾ, ಜಗ್ಗೇಶ್). ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲವು ಕಲಾವಿದರು ತಯಾರಿ ನಡೆಸುತ್ತಿದ್ದಾರೆ. ಅವರಲ್ಲಿ ಮುಖ್ಯರಾದವರು ಉಪೇಂದ್ರ, ಶಶಿಕುಮಾರ್ ಹಾಗೂ ಭಾವನಾ.
ಕರ್ನಾಟಕದಲ್ಲಿ ಚುನಾವಣಾ ರಾಜಕಾರಣ ರಂಗೇರಿರುವ ಸಂದರ್ಭದಲ್ಲೇ, ತಮಿಳುನಾಡಿನ ರಾಜಕಾರಣಕ್ಕೂ ಸಿನಿಮಾ ರಂಗು ಬಂದಿದೆ. ಅಲ್ಲಿನ ಇಬ್ಬರು ಹಿರಿಯನಟರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಪಕ್ಷಗಳನ್ನು ಕಟ್ಟಿಕೊಂಡು ಸಕ್ರಿಯ ರಾಜಕಾರಣ ಪ್ರವೇಶಿಸಿದ್ದಾರೆ. ಇವರಲ್ಲಿ ರಜನಿಕಾಂತ್ ಕನ್ನಡಿಗರಾಗಿದ್ದರೆ, ಕಮಲ್ ಕರ್ನಾಟಕದೊಂದಿಗೆ ಸಾಂಸ್ಕೃತಿಕ ನಂಟು ಹೊಂದಿರುವವರು. ಕನ್ನಡದ ತಾರಾ ವರ್ಚಸ್ಸಿನ ನಟರಾದ ಸುದೀಪ್, ದರ್ಶನ್‍ರ ರಾಜಕೀಯ ಒಲವುಗಳ ಬಗ್ಗೆ ಕೂಡ ಆಗಾಗ ಚರ್ಚೆಯಾಗುತ್ತದೆ.
ರಾಜಕಾರಣಿಗಳ ಪಾಲಿಗೆ ಸಿನಿಮಾ ಎನ್ನುವುದು ಗ್ಲ್ಯಾಮರ್‌ನ ಕ್ಷೇತ್ರವಾದರೆ, ಚಿತ್ರೋದ್ಯಮದವರು ರಾಜಕಾರಣದ ಗ್ಲ್ಯಾಮರ್‌ಗೆ ಮರುಳಾಗುತ್ತಾರೆ. ಸಿನಿಮಾದಲ್ಲಿ ಗ್ಲ್ಯಾಮರ್ ವಿಜೃಂಭಿಸಿದರೆ ಸಮಾಜಕ್ಕೇನೂ ತೊಂದರೆಯಿಲ್ಲ. ಆದರೆ, ರಾಜಕಾರಣಕ್ಕೆ ಬೇಕಿರುವುದು ಗ್ಲ್ಯಾಮರ್ ಅಲ್ಲ, ಜನಪರತೆಯ ಗ್ರ್ಯಾಮರ್. ಈವ್ಯಾಕರಣವನ್ನು ಅರ್ಥ ಮಾಡಿಕೊಂಡವರಷ್ಟೇ ಯಶಸ್ವಿ ನಾಯಕರಾಗಿ ಉಳಿಯುತ್ತಾರೆ. ದುರದೃಷ್ಟವಶಾತ್ ಚಿತ್ರರಂಗದಿಂದ ಬಂದು ರಾಜಕಾರಣದಲ್ಲಿಯೂ ನಾಯಕನಾಗಿಯೇ ಯಶಸ್ವಿಯಾದ ಉದಾಹರಣೆಗಳು ಕರ್ನಾಟಕದಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
(ಬಿ. ಜಯಮ್ಮ ಮತ್ತು ಗುಬ್ಬಿವೀರಣ್ಣ)
ರಾಜಕಾರಣಿಗಳ ಬಣ್ಣದ ‘ಅವಸ್ಥೆ’
ಸಿನಿಮಾ ಕಲಾವಿದರು ರಾಜಕಾರಣದಲ್ಲಿ ಸಕ್ರಿಯ ಪಾತ್ರ ವಹಿಸಿದಂತೆ, ಕೆಲವು ರಾಜಕಾರಣಿಗಳು ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಿದೆ. ಈ ನಿಟ್ಟಿನಲ್ಲಿ ನೆನಪಿಸಿಕೊಳ್ಳಬಹುದಾದ ಪ್ರಮುಖ ಸಿನಿಮಾ 'ಅವಸ್ಥೆ'. ಇದು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಬದುಕಿನ ಚಿತ್ರರೂಪ.
ಯು.ಆರ್. ಅನಂತಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ ಈ ಚಿತ್ರದ ನಿರ್ದೇಶಕರು ಕೃಷ್ಣ ಮಾಸಡಿ. ಗೋಪಾಲಗೌಡರಾಗಿ ಅನಂತನಾಗ್ ನಟಿಸಿದ್ದ ಸಿನಿಮಾದಲ್ಲಿ, ರಾಜಕಾರಣಿಗಳಾದ ಎಂ.ಪಿ. ಪ್ರಕಾಶ್. ಜೆ.ಎಚ್. ಪಟೇಲ್, ಅಬ್ದುಲ್ ನಜೀರ್‌ಸಾಬ್, ಡಿ.ಬಿ. ಚಂದ್ರೇಗೌಡರು ನಟಿಸಿದ್ದರು. ಮತ್ತೊಬ್ಬ ರಾಜಕಾರಣಿ ರಾಮಕೃಷ್ಣ ಹೆಗಡೆ 'ಮರಣ ಮೃದಂಗ' ಚಿತ್ರದಲ್ಲಿ ರಾಜಕಾರಣಿಯಾಗಿಯೇ ಕಾಣಿಸಿಕೊಂಡಿ
ದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
(ಅವಸ್ಥೆ ಚಿತ್ರದಲ್ಲಿ ಅಬ್ದುಲ್ ನಜೀರ್‌ಸಾಬ್, ಅನಂತನಾಗ್, ಬಿ.ಕೆ. ಚಂದ್ರಶೇಖರ್)
ರಮ್ಯ ಚೈತ್ರಕಾಲ!
ಚಿತ್ರನಟಿಯಾಗಿ ಹೆಸರು ಗಳಿಸಿರುವ ರಮ್ಯಾ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿನ ಪ್ರಮುಖ ಯುವ ನಾಯಕಿ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2013ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದ ಅವರು, ನಂತರದ ಚುನಾವಣೆಯಲ್ಲಿ ಸೋಲನ್ನೂ ಕಂಡಿದ್ದರು.
ಪ್ರಸ್ತುತ ಕಾಂಗ್ರೆಸ್‍ನ ಡಿಜಿಟಲ್ ಮೀಡಿಯಾ ತಂಡವನ್ನು ಮುನ್ನಡೆಸುತ್ತಿರುವ ಅವರು, ಮಂಡ್ಯ ಕ್ಷೇತ್ರವನ್ನು ತಮ್ಮ ರಾಜಕೀಯದ ಕರ್ಮಭೂಮಿಯನ್ನಾಗಿ ರೂಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.