ಕಳಸಾ– ಬಂಡೂರಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಪರಿಣಾಮ ಬೀರೀತೇ? ಇದು, ಈಗ ಚರ್ಚೆಯಾಗುತ್ತಿರುವ ವಿಷಯ. ವಿಶೇಷವಾಗಿ ಪ್ರಧಾನಿ, ತಮ್ಮ ಭಾಷಣದಲ್ಲಿ ಇದರ ಬಗ್ಗೆ ಏನೂ ಪ್ರಸ್ತಾಪ ಮಾಡದಿರುವುದಕ್ಕೆ ಬಹಳಷ್ಟು ಅಸಂತೋಷ ಹಾಗೂ ಅಸಮಾಧಾನ ಬಹಿರಂಗವಾಗಿಯೇ ವ್ಯಕ್ತವಾಗುತ್ತಿದೆ.
ರೈತ ಹೋರಾಟಗಳು ಈ ಹಿಂದೆ ಚುನಾವಣೆ ಮೇಲೆ ಪ್ರಭಾವ ಬೀರಿವೆ. 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಲ್ಪ ಹಿನ್ನಡೆಯನ್ನು ಅನುಭವಿಸಬೇಕಾಯಿತು. ಇದಕ್ಕೆ ಕಾರಣ, ರೈತ ಚಳವಳಿಯ ಮುಂಚೂಣಿಯಲ್ಲಿದ್ದ ನಂಜುಂಡಸ್ವಾಮಿ ಹಾಗೂ ಬಾಬಾಗೌಡ ನೇತೃತ್ವದ ಕರ್ನಾಟಕ ರೈತ ಸಂಘವು ಕಾಂಗ್ರೆಸ್ ವಿರೋಧಿ ಬಣದ ಅಂಗವಾಗಿತ್ತು.
1989ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ಕೇವಲ ಮೂರು ಸ್ಥಾನ ಗಳಿಸಿತು. ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರ ಎರಡೂ ಕಡೆ ಸ್ಪರ್ಧಿಸಿ ಬಾಬಾಗೌಡ ಗೆದ್ದರು. ಅದರಲ್ಲಿ ಒಂದು ಸ್ಥಾನವನ್ನು ಪ್ರೊ. ನಂಜುಂಡ ಸ್ವಾಮಿಯವರಿಗೆ ಕೊಟ್ಟು ಗೆಲ್ಲಿಸಿದರು. ಆದರೆ ಆಗ ರೈತರ ಸಮಸ್ಯೆಯು ಚುನಾವಣಾ ವಿಷಯವಾಗಿರಲಿಲ್ಲ.
ರೈತ ಸಂಘ ದುರ್ಬಲವಾದ ಮೇಲೆ, ಎಲ್ಲ ರೈತರೂ ಒಂದೊಂದು ರಾಜಕೀಯ ಪಕ್ಷಗಳ ಜೊತೆಗೆ ನಂಟು ಹೊಂದಿದ್ದಾರೆ. ಮತ್ತೆ ಎಲ್ಲ ಮುಖಂಡರೂ ರೈತರ ಪರವಾಗಿ ಇರುವಂತೆ ತೋರಿಸಿಕೊಳ್ಳುತ್ತಾರೆ. ಚುನಾವಣೆಗಿಂತ ಮೊದಲು ರೈತರ ಪರವಾಗಿ ಇರುವುದಾಗಿ ತೋರಿಸಿಕೊಂಡು, ಚುನಾವಣೆ ಬಂದಾಗ ತಮ್ಮ ಪಕ್ಷದ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಾರೆ.
ಉದಾಹರಣೆಗೆ, ಕಳಸಾ- ಬಂಡೂರಿ ಹೋರಾಟ. 2007ರಿಂದ ಇದು ಪ್ರಮುಖ ರಾಜಕೀಯ ಪಕ್ಷಗಳ, ಅವರ ರೈತ ಬೆಂಬಲಿಗರ ಕಾಲ್ಚೆಂಡಾಗಿದೆ. ಏನೂ ತಿಳಿಯದ ಸಾಮಾನ್ಯ ಜನರೇ ಪ್ರೇಕ್ಷಕರು.
ಕಳಸಾ- ಬಂಡೂರಿ ಯೋಜನೆಯ ರೂವಾರಿ, 2000ನೇ ಇಸವಿಯಲ್ಲಿ ಇದ್ದ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಅಂದಿನ ನೀರಾವರಿ ಸಚಿವ ಎಚ್.ಕೆ. ಪಾಟೀಲರು, ಮಹದಾಯಿ ನದಿಯನ್ನು ಮುಟ್ಟದೇ ಅದರ ಉಪ ನದಿಗಳಾದ ಕಳಸಾ ಮತ್ತು ಬಂಡೂರಿಗಳಲ್ಲಿ ಲಭ್ಯವಾಗುವ ಸುಮಾರು ಏಳು ಟಿಎಂಸಿ ಅಡಿ ನೀರನ್ನು ಬಳಸುವ ಯೋಜನೆ ರೂಪಿಸಿದರು. ಕಾಲುವೆಗಳ ಮೂಲಕ ಮಲಪ್ರಭಾ ನದಿಗೆ ತಿರುಗಿಸಿ, ಮಲಪ್ರಭಾ ಅಣೆಕಟ್ಟು ಅನುಭವಿಸುತ್ತಿರುವ ನೀರು ಸಂಗ್ರಹದ ಕೊರತೆಯನ್ನು ನಿವಾರಿಸಿ, ರೈತರಿಗೆ ನೀರಾವರಿಗಾಗಿ ನೀರು ಒದಗಿಸುವುದು ಈ ಯೋಜನೆಯ
ಉದ್ದೇಶವಾಗಿತ್ತು. ಆದರೆ, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರದೇಶಗಳು ಮತ್ತು ಮಲಪ್ರಭಾ ನದಿಯಗುಂಟ ಇರುವ ಗ್ರಾಮೀಣ ಪ್ರದೇಶದ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆಯನ್ನು ನಿವಾರಿಸುವುದು ಈ ಯೋಜನೆಯ ಉದ್ದೇಶ ಎಂದು ಬಿಂಬಿಸಲಾಯಿತು.
ಕುಡಿಯವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ಅಡ್ಡಿ ಆತಂಕ ಇರಬಾರದು ಎಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನ ಇದ್ದುದರಿಂದ ಯಾರ ಒಪ್ಪಿಗೆಗೂ ಕಾಯಬೇಕಾದ ಅಗತ್ಯವಿರಲಿಲ್ಲ. ಆದರೂ, ರಾಜ್ಯ ಸರ್ಕಾರ ಕುಡಿಯುವ ನೀರಿಗೆ ಸಂಬಂಧವಿಲ್ಲದ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಒಪ್ಪಿಗೆ ಪಡೆಯಲು ಮುಂದಾಗಿದ್ದೇಕೆ ಎನ್ನುವುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಇದಕ್ಕೆ ಪೂರಕವಾಗಿ, ಅಂದಿನ ಎನ್‌ಡಿಎ ಸರ್ಕಾರದ ಜಲಸಂಪನ್ಮೂಲ ಇಲಾಖೆ ತನ್ನ ತಾತ್ವಿಕ ಒಪ್ಪಿಗೆಯನ್ನೂ ನೀಡಿತು. ಕೆಲವೇ ತಿಂಗಳ ನಂತರ ತಾನೇ ಕೊಟ್ಟ ಒಪ್ಪಿಗೆಗೆ, ಈಗ ಗೋವಾದ ಮುಖ್ಯಮಂತ್ರಿ ಆಗಿರುವ ಮನೋಹರ ಪರ‍್ರೀಕರ್ ಅವರ ಒತ್ತಾಯಕ್ಕೆ ಮಣಿದು ತಡೆಯಾಜ್ಞೆ ಕೊಟ್ಟಿತು. ಕರ್ನಾಟಕದ ಅಂದಿನ ಕಾಂಗ್ರೆಸ್ ಸರ್ಕಾರವಾಗಲಿ, ಪ್ರಧಾನ ವಿರೋಧ ಪಕ್ಷವಾದ ಬಿಜೆಪಿಯಾಗಲೀ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಣಯದ ಬಗೆಗೆ ಪ್ರತಿಭಟನೆ ಮಾಡಲಿಲ್ಲ.
ಇದು ತಮಗಾಗಿ, ತಮ್ಮ ಒಳಿತಿಗಾಗಿ ತಯಾರಾದ ಯೋಜನೆ ಎಂದು ರೈತರು ನಂಬಿದರು. ರಾಜಕೀಯ ಪಕ್ಷಗಳು ಅದಕ್ಕೆ ಪುಷ್ಟಿ ಕೊಟ್ಟವು. ಅವರ ಕಲ್ಪನೆ ತಪ್ಪು ಎಂದಾಗಲೀ, ತಮ್ಮ ಪ್ರಶ್ನೆಯನ್ನು ನ್ಯಾಯಮಂಡಳಿ ಮುಂದಾಗಲೀ, ಕೇಂದ್ರ ಸರ್ಕಾರದ ಮುಂದಾಗಲೀ ನಮ್ಮ ಸರ್ಕಾರ ಮಂಡಿಸಿಲ್ಲ ಎಂಬುದನ್ನು ಅರಿಯದೆಯೇ ಇಲ್ಲಿಯ ತನಕ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದು ಈ ಯೋಜನೆಗೆ ಬಂದ ಮೊದಲ ತಿರುವಲ್ಲ. ಇಂತಹ ತಿರುವುಗಳಿಗೆ ಕೊರತೆ ಇಲ್ಲ. ಇವುಗಳ ಸುತ್ತಲೇ ರಾಜಕೀಯ ನಡೆದಿದೆ. ಇದರಲ್ಲಿ ರಾಜಕೀಯ ಪಕ್ಷಗಳೂ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿವೆ.
ಗೋವಾ ಮಾತ್ರ, ಕುಡಿಯುವ ನೀರಿನ ಹೆಸರಿನಲ್ಲಿ ನೀರಾವರಿಗಾಗಿ ಕರ್ನಾಟಕ ಮಾಡುತ್ತಿರುವ ಪ್ರಯತ್ನ ಎಂದು ನಂಬಿದೆ ಮತ್ತು ಅದನ್ನು ನ್ಯಾಯಮಂಡಳಿ ಮುಂದೆ ನಡೆಯುತ್ತಿರುವ ವಾದದಲ್ಲಿ ಗೋವಾದ ವಕೀಲರು ಪುನರುಚ್ಚರಿಸಿದ್ದಾರೆ.
ಈ ಮಧ್ಯೆ, ನೀರಾವರಿ ಖಾತೆಯನ್ನು ಪಾಟೀಲರ ಕೈತಪ್ಪಿಸಿದ ಆಗಿನ ಮುಖ್ಯಮಂತ್ರಿ ಕೃಷ್ಣ, ಅದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದರು. ಈ ಯೋಜನೆಯ ಬಗ್ಗೆ ಆಗ ಕಡಿಮೆಯಾದ ಸರ್ಕಾರದ ಆಸಕ್ತಿ, ಇದುವರೆಗೂ ತಿರುಗಿ ಬಂದಿಲ್ಲ. ಖರ್ಗೆ ಅವರಾಗಲೀ, ಕೃಷ್ಣ ಆಗಲೀ, ಮುಂದೆ ಬಂದ ಸಮ್ಮಿಶ್ರ ಸರ್ಕಾರ, ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರವಾಗಲೀ ಏನೂ ಮಾಡಲಿಲ್ಲ.
ಈ ಯೋಜನೆ ತಮಗಾಗಿ ಆಗಿದೆ ಎಂಬ ಭಾವನೆಯಿಂದ, ವಿಶೇಷವಾಗಿ ಮಲಪ್ರಭಾ ಅಚ್ಚುಕಟ್ಟಿನ ರೈತರು ಚಳವಳಿಯ ಮಾರ್ಗವನ್ನು ಹಿಡಿದಾಗ ರಾಜಕೀಯ ಪಕ್ಷಗಳು ಅದರ ಲಾಭ ಪಡೆದುಕೊಂಡವೇ ಹೊರತು ವಾಸ್ತವಿಕ ಸಂಗತಿಯನ್ನು ಜನರ ಮುಂದಿಡಲಿಲ್ಲ. ರೈತರು ತಮ್ಮ ಭ್ರಮಾಲೋಕದಲ್ಲಿ ಇರುವಂತೆ ಮಾಡಿದರು. ‘ಇದು ಕುಡಿಯುವ ನೀರಿಗಾಗಿ ಮಾತ್ರ ಮೀಸಲಾದ ಯೋಜನೆ; ನಿಮಗಾಗಿ ಅಲ್ಲ’ ಎಂಬುದನ್ನು ಯಾರೂ ತಿಳಿಹೇಳಲಿಲ್ಲ. ಕುಡಿಯುವ ನೀರು ಪಡೆಯುವ ಹುಬ್ಬಳ್ಳಿ ಧಾರವಾಡದ ಜನರು, ರೈತರು ನಡೆಸಿದ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಲಿಲ್ಲ. ರಾಜ್ಯಕ್ಕೆ ನೀರಾವರಿಗಾಗಿ ಕಳಸಾ– ಬಂಡೂರಿ ನೀರಿನ ಅವಶ್ಯಕತೆ ಇದೆ ಎನ್ನುವುದನ್ನು ಕರ್ನಾಟಕದ ಯಾವ ಸರ್ಕಾರಗಳೂ ಯಾವ ಕಾಲದಲ್ಲೂ ಕೇಂದ್ರ ಸರ್ಕಾರ ಅಥವಾ ನ್ಯಾಯಮಂಡಳಿಯ ಗಮನಕ್ಕೆ ತರಲಿಲ್ಲ. ಮುಖ್ಯಮಂತ್ರಿ, ಇಂದಿಗೂ ಕುಡಿಯುವ ನೀರಿನ ವಿಷಯವನ್ನೇ ಮಾತನಾಡುತ್ತಾರೆ.
ರೈತರ ಹೆಸರಿನಲ್ಲಿ ಚಳವಳಿ ಹಾದಿ ಹಿಡಿದವರು ಜೆಡಿಯು ಪಕ್ಷದ ಬಸವರಾಜ ಬೊಮ್ಮಾಯಿ. ಅವರು ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ, ಪ್ರಚಾರ ಗಿಟ್ಟಿಸಿ, ಚುನಾವಣೆ ಮುಗಿದ ಮೇಲೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾದರು. ಖರ್ಗೆ ಸಚಿವರಾಗಿದ್ದಾಗ ಆಗಲಿ, ಚಳವಳಿಯಲ್ಲಿ ವೀರಾವೇಶದ ಮಾತುಗಳನ್ನು ಆಡಿದ್ದ ಅಂದಿನ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ಅವರಾಗಲಿ ಚುನಾವಣೆ ಆದ ಮೇಲೆ ಅದನ್ನೆಲ್ಲ ಮರೆತರು.
ಜೆಡಿಎಸ್– ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಾಗ, ಕಳಸಾ ಯೋಜನೆಗೆ ಅಡಿಗಲ್ಲು ಹಾಕುವ ಸಮಾರಂಭಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಬರದೇ ಜಲಸಂಪನ್ಮೂಲ ಸಚಿವ ಈಶ್ವರಪ್ಪ ಅಡಿಗಲ್ಲು ಹಾಕಿದರು. ಈಗಿನ ಕಾಂಗ್ರೆಸ್ ಸರ್ಕಾರದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.
ಅಂದಿನಿಂದ ಇಲ್ಲಿಯತನಕ ಬಂದ ಬಹುಶಃ ಯಾವ ಮುಖ್ಯಮಂತ್ರಿ, ನೀರಾವರಿ ಸಚಿವ, ವಿರೋಧ ಪಕ್ಷದ ನಾಯಕರೂ, ಚಳವಳಿಯ ನೇತಾರರೂ ಕಳಸಾ – ಬಂಡೂರಿಗೆ ಭೇಟಿ ನೀಡಲಿಲ್ಲ; ಅದರ ಪ್ರಗತಿ ಪರಿಶೀಲನೆ ಮಾಡಲಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ, ಕಳಸಾ – ಬಂಡೂರಿ ವಿಚಾರವಾಗಿ ಯಾವ ಪಕ್ಷಕ್ಕೂ ಆಸಕ್ತಿ ಇಲ್ಲ. ಅವರಿಗೆ ಬೇಕಾಗಿರುವುದು ರಾಜಕೀಯ ಮತ್ತು ಅದಕ್ಕಾಗಿ ಸಂದರ್ಭೋಚಿತವಾಗಿ ಏನಾದರೂ ಮಾಡಿ ಪಾರಾಗುವುದು. ಗೋವಾ ಮುಖ್ಯಮಂತ್ರಿ ಬರೆದ ಪತ್ರವನ್ನು ಮತ್ತು ಅಲ್ಲಿನ ವಿಷಯವನ್ನು ಸರಿಯಾಗಿ ತಿಳಿಯದೇ ಯಡಿಯೂರಪ್ಪ ಪೇಚಿಗೆ ಸಿಕ್ಕಿ ಹಾಕಿಕೊಂಡಿರುವುದು ಇನ್ನೂ ಹಸಿರಾಗಿದೆ.
‘ಕುಡಿಯುವ ನೀರಿಗಾಗಿ ಕೇಳಿದ ನೀರು ಅತಿ ಜಾಸ್ತಿ. ಅದು ನೀರಾವರಿಗೆ ಲಾಯಕ್ಕು. ನೀರಾವರಿಗಾಗಿ ಏಕೆ ಕೇಳಲಿಲ್ಲ?’ ಎಂದು ಯಾರೂ ಯಾವ ಸರ್ಕಾರವನ್ನೂ ಕೇಳಿಲ್ಲ. ನ್ಯಾಯಮಂಡಳಿಯ ಆದೇಶದಂತೆ ತಡೆಗೋಡೆ ಕಟ್ಟಿ, ಕಳಸಾದಿಂದ ಕಾಲುವೆಗೆ ನೀರು ಹರಿಯುವುದನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ ಎಂಬ ಆಘಾತಕಾರಿ ಸುದ್ದಿ ಮಾಧ್ಯಮದಲ್ಲಿ ಬಂದಾಗ ರೈತರ ರೋಷ ವ್ಯಕ್ತ
ವಾಗಲಿಲ್ಲ. ಹೀಗಿದ್ದರೂ ನೀರಿಗಾಗಿ ಬೆಂಗಳೂರಿಗೆ ಹೋಗುವುದನ್ನು
ನಿಲ್ಲಿಸಿಲ್ಲ.
ನಿಮ್ಮ ಸಮಸ್ಯೆಗೆ ಪರಿಹಾರ ಕೊಡಿಸದ ಪಕ್ಷಕ್ಕೆ ಮತ ನೀಡಬೇಡಿ ಎಂದು ಯಾರು ಹೇಳಬೇಕು? ಎಲ್ಲರೂ ಒಂದಿಲ್ಲೊಂದು ಪಕ್ಷದವರೇ. ಎಲ್ಲರೂ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕಳಸಾ– ಬಂಡೂರಿ ಹೋರಾಟ ಚುನಾವಣೆಯ ಮೇಲೆ ಪರಿಣಾಮ ಬೀರೀತು ಹೇಗೆ?
* ರೈತರ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಹೋರಾಟದಲ್ಲಿ ಹೊಸ ಹೊಸ ನಾಯಕರು ಹುಟ್ಟಿಕೊಳ್ಳುತ್ತಾರೆ. ತಮಗೆ ತಿಳಿದದ್ದನ್ನು ಮಾತನಾಡುತ್ತಾರೆ. ಚುನಾವಣೆ ಆದ ನಂತರ ನೇಪಥ್ಯಕ್ಕೆ ಹೋಗುತ್ತಾರೆ.
* ರಾಜಕೀಯ ನಾಯಕರಿಗಾಗಲೀ ಚಳವಳಿಯ ನೇತಾರರಿಗಾಗಲೀ ಕಳಸಾ ಬಂಡೂರಿ ನೆನಪಾಗುವುದು ಯಾವುದಾದರೂ ಚಳವಳಿಯ ವಾಸನೆ ಬಂದಾಗ ಮಾತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.