ADVERTISEMENT

ಜೆಡಿಎಸ್‌ನಲ್ಲೂ ಹೊಗೆಯಾಡುತ್ತಿರುವ ಅಸಮಾಧಾನ

ಸಚಿವ ಸ್ಥಾನ ತಪ್ಪಿದ್ದಕ್ಕೆ ಕಾರಣ ತಿಳಿಸಿ: ದೇವೇಗೌಡರಿಗೆ ಹೊರಟ್ಟಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಜೆಡಿಎಸ್‌ ಕೆಲವು ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ, ಈ ಪೈಕಿ ವಿಧಾನಪರಿಷತ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತಮಗಾದ ಅನ್ಯಾಯದ ಬಗ್ಗೆ ಅತೃಪ್ತಿ ಹೊರ ಹಾಕಿದ್ದಾರೆ.

ತುಮಕೂರು ಜಿಲ್ಲೆ ಶಿರಾ ಶಾಸಕ ಸತ್ಯನಾರಾಯಣ ಅವರು ಸಚಿವ ಸ್ಥಾನ ಸಿಗದ ಬಗ್ಗೆ ಅಸಮಾಧಾನಗೊಂಡಿದ್ದರೂ, ತಾವು ಜೆಡಿಎಸ್ ಶಾಸಕರಾಗಿ ಮುಂದುವರಿಯವುದಾಗಿ ಹೇಳಿದ್ದಾರೆ. ದೇವೇಗೌಡ ಕುಟುಂಬಕ್ಕೆ ನಿಷ್ಠರಿರುವ ಶಾಸಕರಿಗೆ ಸಿಟ್ಟು ಇದ್ದರೂ ಅದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡಿದ್ದರಿಂದ ಸಚಿವ ಸ್ಥಾನ ತಪ್ಪಿಸಲಾಗಿದೆಯೇ ಎನ್ನುವುದನ್ನು ದೇವೇಗೌಡರು ಬಹಿರಂಗವಾಗಿ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಸಿದ್ದರಾಮಯ್ಯ ಹಿಂದೆ ತಮ್ಮ ಸಮಾಜದ ಪರವಾಗಿ ಹೋರಾಟ ಮಾಡಿದ್ದಾರೆ. ದೇವೇಗೌಡರೂ ಒಂದು ಕಾಲದಲ್ಲಿ ಅದಿಚುಂಚನಗಿರಿ ಹಿರಿಯ ಸ್ವಾಮೀಜಿಗಳ ವಿರುದ್ಧವೇ ಹೋರಾಟ ಮಾಡಿದ್ದರು. ಹಾಗಿದ್ದರೆ, ಲಿಂಗಾಯತ ಧರ್ಮದ ಪರ ಹೋರಾಟದಲ್ಲಿ ನಾನು ಭಾಗವಹಿಸಿದ್ದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಆ ಹೋರಾಟದಲ್ಲಿ ಭಾಗವಹಿಸಿದ ಕಾರಣಕ್ಕೇ ಸಚಿವ ಸ್ಥಾನ ನೀಡಿಲ್ಲ ಎಂಬ ವದಂತಿ ಹರಡಿದೆ. ದೇವೇಗೌಡರು ಅದನ್ನು ಸ್ಪಷ್ಟಪಡಿಸಿದರೆ ನೆಮ್ಮದಿ ಆಗುತ್ತದೆ. ನಾನು ವಿಧಾನಪರಿಷತ್ತಿನ ಅತ್ಯಂತ ಹಿರಿಯ ಸದಸ್ಯ ಮಾತ್ರವಲ್ಲ, ಪ್ರಾಮಾಣಿಕತೆ ಮತ್ತು ಪಕ್ಷ ನಿಷ್ಠೆಯಲ್ಲಿ ಇತರ ಯಾವುದೇ ಶಾಸಕನಿಗೂ ಕಮ್ಮಿ ಇಲ್ಲ. ಹಾಗಿದ್ದರೆ ಸಚಿವ ಸ್ಥಾನ ತಪ್ಪಿಸಿದ್ದು ಯಾವ ಕಾರಣಕ್ಕೆ’ ಎಂದು ಪ್ರಶ್ನಿಸಿದರು.

‘ವರಿಷ್ಠರ ಇಂತಹ ನಡೆಯಿಂದ ನನಗೆ ತುಂಬಾ ನೋವಾಗಿದೆ. ನಾನು ಮಾಡಿರುವ ಅನ್ಯಾಯವೇನು. ಪಕ್ಷ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾಗಲೂ ಪಕ್ಷ ಬಿಡಲಿಲ್ಲ. ಹಿಂದೆ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಮತ್ತು ಬಿಜೆಪಿಯಿಂದ ಯಡಿಯೂರಪ್ಪ ಅವರು ಆಹ್ವಾನ ನೀಡಿದ್ದರು. ಮಂತ್ರಿ ಮಾಡುವ ಭರವಸೆ ನೀಡಿದಾಗಲೂ ಪಕ್ಷ ಬಿಡಲಿಲ್ಲ’ ಎಂದು ಅವರು ತಿಳಿಸಿದರು.

’ಪಕ್ಷ ಬಿಡುವ ಆಲೋಚನೆ ನನಗಿಲ್ಲ. ಜಿ.ಟಿ.ದೇವೇಗೌಡ ಬಿಜೆಪಿಗೆ ಹೋಗಿ ಮತ್ತೆ ಪಕ್ಷಕ್ಕೆ ಬಂದರು. ಸಾ.ರಾ.ಮಹೇಶ್‌ ಅಂತಹವರಿಗೆ ಮಣೆ ಹಾಕಿರುವುದನ್ನು ನೋಡಿದಾಗ ಬೇಸರ ಎನಿಸುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸಂಘಟನೆಗೆ ಕೆಲಸ ಮಾಡಿದ ನನಗೆ ಅನ್ಯಾಯ ಆಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಜಾತಿ ಮತ್ತು ಧರ್ಮದ ವಿಚಾರದಲ್ಲಿ ಬಹಳ ತಾರತಮ್ಯ ಆಗುತ್ತಿದೆ. ಶೈಕ್ಷಣಿಕವಾಗಿ ಎಷ್ಟೇ ಉತ್ತಮ ಸಾಧನೆ ಮಾಡಿದರೂ ಮೀಸಲಾತಿ ಹೆಸರಿನಲ್ಲಿ ಅನ್ಯಾಯ ಆಗುತ್ತಿದೆ ಎಂದು ಕೆಲವು ಯುವಕ– ಯುವತಿಯರು ಬಂದು ಅಳಲು ತೋಡಿಕೊಂಡರು. ನಮಗೆ ಪ್ರತಿಭೆ ಇದ್ದರೂ ಪ್ರಯೋಜನ ಇಲ್ಲ ಇಂತಹ  ಅನ್ಯಾಯ ನಿಲ್ಲದೇ ಇದ್ದರೆ ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವ ಸ್ಥಿತಿ ಬರುತ್ತದೆ ಎಂದು ಹೇಳಿದರು. ಅವರ ಮಾತು ನಿಜವೇ ಆಗಿದೆ. ಆ ಕಾರಣಕ್ಕೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಕೈ ಜೋಡಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.