ಗುಂಡೂರಾವ್ ಅವರ ಭಾಷಣ, ಅದರಲ್ಲಿದ್ದ ಹಾಸ್ಯ ಚಟಾಕಿಗಳು ಕಚಗುಳಿ ಇಟ್ಟು ನೆನಪಿಸಿ, ನೆನಪಿಸಿ ನಗುವಂಥವುಗಳು. 1981ರ ಜೂನ್ ತಿಂಗಳಲ್ಲಿ, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಅಳ್ನಾವರದಲ್ಲಿ ಅವರು ಪ್ರಚಾರ ಮಾಡುತ್ತಿದ್ದರು. ಆಗ ವಿರೋಧ ಪಕ್ಷದ ಧುರೀಣರು ಮಾಡುತ್ತಿದ್ದ ಅಸಂಗತ ಟೀಕೆಗಳನ್ನು ಅವರು ಉಡಾಯಿಸಹತ್ತಿದರು. ‘ಬೈಯ್ಯುವುದಾದರೆ ಬನ್ನಿ ನೋಡೋಣ ಒಂದು ಕೈ. ನಾವೂ ಬೈಯ್ಯುತ್ತೇವೆ. ಅದರಲ್ಲೂ ಜನ ನಮಗೆ ವೋಟ್ ಹಾಕುತ್ತಾರೆ. ಟೀಕೆ ಮಾಡುವುದಾದರೂ ಎಂಥದ್ದು? ಗುಂಡೂರಾವ್ ಹುಟ್ಟುವಾಗ ಬೆತ್ತಲೆ ಆಗಿದ್ದರು ಎಂಬುದು ಟೀಕೆಯೇ? ಇದು ಚುನಾವಣಾ ಭಾಷಣವೇ? ಎರಡು ವರ್ಷಗಳ ನಂತರ ಚಡ್ಡಿ ಹಾಕಿಕೊಂಡರು, ನಂತರ ಪ್ಯಾಂಟು ಧರಿಸಿದರು, ಇಂದು ಪಂಚೆ ಉಟ್ಟುಕೊಂಡಿದ್ದಾರೆ. ಇವೂ ಟೀಕೆ ಮಾತುಗಳೇ’ ಎಂದವರು ಛೇಡಿಸಿದ್ದರು.
ಬೊಮ್ಮಾಯಿ ಪಾದರಕ್ಷೆ: ಇದೇ ಉಪಚುನಾವಣೆ ಸಂದರ್ಭದಲ್ಲಿ ಗುಂಡೂರಾವ್, ಆಗ ವಿರೋಧ ಪಕ್ಷದ ಧುರೀಣರಾಗಿದ್ದ ಎಸ್.ಆರ್.ಬೊಮ್ಮಾಯಿ ಸಹ ನನ್ನನ್ನು ಹೊಗಳುತ್ತಾರೆ ಎಂದು ಹೇಳುತ್ತಿದ್ದರು. ಇದರಿಂದಾಗಿ ಬೊಮ್ಮಾಯಿ ಕಾಂಗ್ರೆಸ್ (ಐ) ಸೇರುತ್ತಾರೆಂಬ ಗುಲ್ಲೂ ಎದ್ದಿತ್ತು. ಇದರ ಹಿನ್ನೆಲೆಯಲ್ಲಿ ಬೊಮ್ಮಾಯಿ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದು, ‘ನಾನೆಂದೂ ಗುಂಡೂರಾಯರನ್ನು ಹೊಗಳಿಲ್ಲ. ಕಾಂಗ್ರೆಸ್ (ಐ)ಗೆ ನಾನಲ್ಲ ನನ್ನ ಪಾದರಕ್ಷೆಗಳೂ ಹೋಗುವುದಿಲ್ಲ’ ಎಂದರು. ಮರುದಿನವೇ ಗುಂಡೂರಾಯರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೊಮ್ಮಾಯಿ ಮಾತುಗಳನ್ನು ಛೇಡಿಸಿದರು. ‘ಬೊಮ್ಮಾಯಿ ಹೇಳಿಕೆ ಸರಿಯಾಗಿಯೇ ಇದೆ. ದೊಡ್ಡವರು ಗುರುಗಳ ಮಠಕ್ಕೆ ಬರಬೇಕಾದರೆ ಪಾದರಕ್ಷೆಗಳನ್ನು ಹೊರಗಡೆ ಬಿಟ್ಟೇ ಪ್ರವೇಶಿಸುತ್ತಾರೆ’ ಎಂದು
ಮೂದಲಿಸಿದ್ದರು.
ಈಶ್ವರನ ಸಂಸಾರ: ಗುಂಡೂರಾಯರು ಆಗಿನ ಜನತಾ ಪಕ್ಷವನ್ನು ಈಶ್ವರನ ಸಂಸಾರಕ್ಕೆ ಕರಾರುವಾಕ್ಕಾಗಿ ಹೋಲಿಸಿದ್ದರು. ಕೊರಳಲ್ಲಿನ ಹಾವಿನ ಮೇಲೆ ಷಣ್ಮುಖನ ವಾಹನ ನವಿಲಿನ ಕಣ್ಣು, ಈಶ್ವರನ ವಾಹನ ನಂದಿಯ ಮೇಲೆ ಪಾರ್ವತಿಯ ವಾಹನ ಸಿಂಹದ ಕೆಟ್ಟ ಕಣ್ಣು, ಗಣೇಶನ ವಾಹನ ಇಲಿಯ ಮೇಲೆ ಹಾವಿನ ಕಣ್ಣು ಎಂದಿದ್ದರು.
ಈಶ್ವರ ಯಾವಾಗ ಕಣ್ಣು ಮುಚ್ಚುತ್ತಾನೋ, ನಾವು ಯಾವಾಗ ಈ ಭಕ್ಷ್ಯಗಳನ್ನು ತಿನ್ನುತ್ತೇವೋ ಎಂದು ಇವೆಲ್ಲಾ ಹಪಹಪಿಸಿರುತ್ತವೆ. ಈಶ್ವರ ಅಂದರೆ ಜೆ.ಪಿ (ಜಯಪ್ರಕಾಶ ನಾರಾಯಣ) ಕಣ್ಣು ಮುಚ್ಚಿದರು. ನಂತರ ಜನತಾ ಪಕ್ಷದ ಮೊರಾರ್ಜಿ ದೇಸಾಯಿ, ಜಗಜೀವನರಾಮ್, ವಾಜಪೇಯಿ ಕಿತ್ತಾಡಿದರು. ಜನತಾ ಪಕ್ಷ ನಿರ್ನಾಮ ಆಯಿತು ಎಂದಿದ್ದರು.
ಕಾರವಾರ ಜಿಲ್ಲೆಯಲ್ಲಿ 1981ರ ನವೆಂಬರ್ ತಿಂಗಳಿನಲ್ಲಿ ಗುಂಡೂರಾಯರು ಜನತಾ ಪಕ್ಷವನ್ನು ಮತ್ತೆ ಹೀಗಳೆದಿದ್ದರು. ‘... ಕೇಂದ್ರದಲ್ಲಿ ಜನತಾ ಸರ್ಕಾ
ರದ ಆಡಳಿತ ಹೇಗಿತ್ತೆಂದರೆ, ಸಾರು ಮಾಡುವಾಗ ಅದಕ್ಕೆ ಉಪ್ಪು ಯಾರು ಹಾಕಬೇಕು ಎಂಬ ಬಗ್ಗೆ ಜನತಾ ಪಕ್ಷದಲ್ಲಿ ಜಗಳ ಇರುತ್ತಿತ್ತು. ಕೊನೆಗೆ ಎಲ್ಲರೂ ಸಾರಿಗೆ ಉಪ್ಪು ಹಾಕಿದ್ದರಿಂದ, ಸಾರು ಉಪ್ಪಾಗಿ ಎಲ್ಲರೂ ಊಟ ಮಾಡದೇ ನೀರು ಕುಡಿದು ಹಾಗೆಯೇ ಹೊರಟುಹೋದರು’!
-ಮನೋಜ್ ಪಾಟೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.