ADVERTISEMENT

ನಗೆ ಮತ್ತು ಪ್ರೀತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 20:05 IST
Last Updated 2 ಏಪ್ರಿಲ್ 2018, 20:05 IST
ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ   

ಭಾರತದಂತಹ ಬಹುಮುಖದ, ಬಹುಸ್ತರದ ದೇಶದಲ್ಲಿ ಡಾ. ಬಿ.ಎಂ. ತಿಪ್ಪೇಸ್ವಾಮಿಯಂಥವರು ಬದುಕಿದ್ದೇ ಒಂದು ಕುತೂಹಲಕರ ವಿಷಯವಾಗಬಲ್ಲದು; ಅವರು ಅಕ್ಷರದಿಂದ ವಂಚಿತರಾದ, ಜಾತಿ ಪದ್ಧತಿಗೂ ಕ್ರೂರವ್ಯವಸ್ಥೆಯ ಹೊರಗೇ ಉಳಿದಿದ್ದ ಪಂಚಮ ಸಮುದಾಯದಿಂದ ಬಂದವರು.

ಅಂಥವರು ತಮ್ಮ ಹುಟ್ಟೂರನ್ನು ಬಿಟ್ಟು ಅಕ್ಕನ ಊರಿಗೆ ಹೋಗಿ ಶಾಲೆಗೆ ಸೇರದಿದ್ದರೆ, ಅಲ್ಲಿ ಕೂಡಾ ಜನರ ಅಸೂಯೆ, ಅವಮಾನಗಳನ್ನು ಸಹಿಸಿಕೊಂಡು ವಿದ್ಯೆ ಗಳಿಸಲೇಬೇಕೆಂಬ ನಿಶ್ಚಲ ಗುರಿಯಿಂದ ಮುಂದುವರಿಯದಿದ್ದರೆ ತಿಪ್ಪೇಸ್ವಾಮಿ ತಮ್ಮ ಹುಟ್ಟಿದೂರಾದ ಹಿರೇ
ಹಳ್ಳಿಯಲ್ಲಿ ದನ ಕಾಯುತ್ತಾ ಜೀವನ ಸಾಗಿಸಬೇಕಾಗುತ್ತಿತ್ತು. ಆದರೆ, 20ನೇ ಶತಮಾನದ ಭಾರತದ ಅಲ್ಲೋಲ ಕಲ್ಲೋಲ ಸಾಮಾಜಿಕ ವಾತಾವರಣದಲ್ಲಿ ತಿಪ್ಪೇಸ್ವಾಮಿಯವರು ಅನ್ಯಜಾತಿಯವರಿಂದ ಪಡೆದ ಸಹಕಾರ, ಪ್ರೀತಿ, ನಿರ್ಲಕ್ಷ್ಯ, ಅವಮಾನ ಇತ್ಯಾದಿಯ ದಾಖಲೆಯೇ ಒಂದು ಬೃಹತ್‌ ಕೃತಿಗೆ ವಸ್ತುವಾಗಬಲ್ಲದು. ಯಾಕೆಂದರೆ ತಿಪ್ಪೇಸ್ವಾಮಿ ಜಟಿಲ ಪರಿಸರದಲ್ಲಿ ವಿಶಿಷ್ಟ ಜೀವನಶೈಲಿ, ಸಾಮಾಜಿಕ ಕಾಳಜಿಯನ್ನು ಆರಿಸಿಕೊಂಡವರು.

ತಿಪ್ಪೇಸ್ವಾಮಿ ಅವರು ದಲಿತರ ಜಾಣತನ, ಕುಶಲತೆಯಲ್ಲಿ ನಂಬಿಕೆ ಇಟ್ಟವರು; ದಲಿತರು ಕ್ರಿಯಾಶೀಲರಾಗಿದ್ದರೆ ಅವರಿಗೆ ಯಾವ ಕಿರಿಕಿರಿಯೂ ಆಗುವುದಿಲ್ಲ ಎಂದು ತಿಳಿದವರು; ಇದರಿಂದಾಗಿಯೇ ತಿಪ್ಪೇಸ್ವಾಮಿ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತು ಗೆದ್ದರು; ಆಮೇಲೆ ದಲಿತ ಹಾಸ್ಟೆಲ್‌ಗಳ ದುಃಸ್ಥಿತಿಯನ್ನು ಕಂಡು ಅವುಗಳನ್ನು ವಹಿಸಿಕೊಂಡು ಉತ್ತಮಗೊಳಿಸಿ ಅವುಗಳಿಗೆ ಹೊಂದಿಕೊಂಡಂತೆ ಹಲವಾರು ಶಾಲೆಗಳನ್ನು ಪ್ರಾರಂಭಿಸಿದರು.

ADVERTISEMENT

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ತಿಪ್ಪೇಸ್ವಾಮಿ ವೈದ್ಯಕೀಯ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ ಮೆಡಿಕಲ್‌ ಕಾಲೇಜಿಗೆ ಆಯ್ಕೆಯಾದರು. ಅಲ್ಲಿಂದ ಬಂದ ತಿಪ್ಪೇಸ್ವಾಮಿ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ದಕ್ಷರಾಗಿ ಸೇವೆ ಸಲ್ಲಿಸಿ ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ನೇಮಕಗೊಂಡು ಅಲ್ಲಿ ಅಧ್ಯಾಪಕರಾಗಿ ಸಹಕಾರಿ ಗೃಹನಿರ್ಮಾಣ ಮಂಡಳಿಯನ್ನು ರೂಪಿಸಿ ಅಪರೂಪದ ಸೇವೆ ಸಲ್ಲಿಸಿದರು. ಇದು ತಿಪ್ಪೇಸ್ವಾಮಿಯವರ ಕ್ರಿಯಾಶಕ್ತಿಗೆ ಸಾಕಾಗಲಿಲ್ಲ. ತಮ್ಮ ಇಳಿವಯಸ್ಸಿನಲ್ಲಿ ರಾಜಕೀಯ ಪ್ರವೇಶಿಸಿ ಚುನಾವಣೆಯಲ್ಲಿ ಗೆದ್ದರು.

ಕಾಂಗ್ರೆಸ್‌ ಪಕ್ಷ ದಲಿತಪರವಾದ ಸೋಗಲಾಡಿತನ ತೋರುತ್ತಿದ್ದಾಗ ತಿಪ್ಪೇಸ್ವಾಮಿ ವಿರೋಧ ಪಕ್ಷವಾಗಿದ್ದ ಜನತಾದಳ ಸೇರಿ ಚುನಾ
ಯಿತರಾಗಿದ್ದರು. ಅಲ್ಲಿ ದೊರೆತ ವೇದಿಕೆಯಿಂದ ತಮ್ಮ ಆಳವಾದ ಅನಿಸಿಕೆಗಳನ್ನು ಧೈರ್ಯವಾಗಿ ಹೇಳಿದರು. ಇದು ತಿಪ್ಪೇಸ್ವಾಮಿಯವರ ವೈಯಕ್ತಿಕ ನಿಲುವನ್ನು ತೋರುವಂತೆಯೇ ಅವರಿಗೆ ಜಾತಿಪದ್ಧತಿಯ ಬಗ್ಗೆ ಇದ್ದ ತಪ್ಪು ಗ್ರಹಿಕೆಯನ್ನೂ ತೋರಿತು. ‘ನನ್ನಂಥ ಯಶಸ್ವೀ ದಲಿತರ ಮಕ್ಕಳಿಗೆ ಮೀಸಲಾತಿಯ ಅಗತ್ಯವಿಲ್ಲ’. ‘ದಲಿತರ ವರಮಾನವನ್ನು ಪರಿಗಣಿಸಿ ಅದು ಸಾಕಷ್ಟಿದ್ದರೆ ಅವರ ಬದಲು ಬಡ ದಲಿತರಿಗೆ ಮೀಸಲಾತಿ, ಇತರ ಸವಲತ್ತುಗಳನ್ನು ಕೊಡಬೇಕು’ ಎಂದು ಹೇಳಿದರು. ಇದು ಇತರ ದಲಿತರನ್ನು ಸಿಟ್ಟಿಗೇಳಿಸಿತು. ಶ್ರೀಮಂತ ದಲಿತರು ಕೂಡಾ ಅನುಭವಿಸುವ ತಾರತಮ್ಯವನ್ನು, ಅವಮಾನವನ್ನು ಬಲ್ಲವರ ಈ ಸಿಟ್ಟು ತಿಪ್ಪೇಸ್ವಾಮಿಯವರಿಗೆ ಅರ್ಥವಾಗಲಿಲ್ಲ. ಶ್ರೀಮಂತರಾದೊಡನೆ ಅಸ್ಪೃಶ್ಯತೆ ಹೋಗುತ್ತದೆ ಎನ್ನುವುದು ಸುಳ್ಳು ಎನ್ನುವುದು ಕೂಡಾ ಅವರಿಗೆ ತಿಳಿಯಲಿಲ್ಲ.

ನಾನು ತಿಪ್ಪೇಸ್ವಾಮಿಯವರನ್ನು ಒಂದೆರಡೇ ಸಲ ನೋಡಿದ್ದೆ. ರಾಜಕಾರಣಿಯಾಗಿ ದಲಿತರ ಗುಂಪು ಕಟ್ಟಿಕೊಂಡು ಓಡಾಡಲು ಇಷ್ಟಪಡದೆ ಇದ್ದ ಅವರನ್ನು ರಾಮಕೃಷ್ಣ ಹೆಗಡೆ ಮಂತ್ರಿಯನ್ನಾಗಿ ಮಾಡಲಿಲ್ಲ; ದಲಿತ ಗುಂಪಿನ ಎಲ್ಲ ಮರ್ಮಗಳನ್ನು ಬಲ್ಲ ಇತರರು ಸುಲಭವಾಗಿ ತಿಪ್ಪೇಸ್ವಾಮಿಯವರನ್ನು ಮೂಲೆಗೆ ತಳ್ಳಿದರು. ಆದರೆ, ತಿಪ್ಪೇಸ್ವಾಮಿಯವರ ನಿಜವಾದ ಸಜ್ಜನಿಕೆ, ಪ್ರತಿಭೆ ಮತ್ತು ಮಾನವೀಯತೆಯನ್ನು ಯಾರೂ ಕಸಿದುಕೊಳ್ಳಲು ಆಗಲಿಲ್ಲ. ನಮ್ಮ ಮೇಲು ಜಾತಿಯ ಬ್ರಾಹ್ಮಣರು ಮತ್ತು ಕೆಳಸ್ತರದ ದಲಿತರು ತುಂಬ ಜಟಿಲ ವ್ಯಕ್ತಿಗಳು; ಅವರೊಂದಿಗೆ ದಿನನಿತ್ಯದ ಒಡನಾಟ, ವ್ಯವಹಾರ ಕಿರಿಕಿರಿ ಉಂಟು ಮಾಡುತ್ತದೆ. ಆದರೆ, ತಿಪ್ಪೇಸ್ವಾಮಿ ನಾನು ಬಲ್ಲ ಅತ್ಯಂತ ಆರೋಗ್ಯವಂತ ಮನಸ್ಸಿನ ವ್ಯಕ್ತಿ. ಅವರು ಎಲ್ಲರಂತೆಯೇ ಇದ್ದರು; ಎಲ್ಲರ ಜೊತೆಗೆ ಸ್ಪರ್ಧಿಸಿ ಗೆಲ್ಲಬಲ್ಲ ಸಿದ್ಧತೆ ಅವರಲ್ಲಿತ್ತು. ಅವರು ನಗಬಲ್ಲವರಾಗಿದ್ದರು. ಜಾತಿ, ವರ್ಗ ಯಾವುದನ್ನೂ ಪರಿಗಣಿಸದೆ ತಮ್ಮ ಪ್ರೀತಿಯನ್ನು ನೀಡಬಲ್ಲವರಾಗಿದ್ದರು. ನಗೆ ಮತ್ತು ಪ್ರೀತಿ ಅವರ ವ್ಯಕ್ತಿತ್ವದ main springs ಎಂದು ನನಗೆ ಅನ್ನಿಸುತ್ತದೆ.

– ಪಿ. ಲಂಕೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.