ADVERTISEMENT

ನಮ್ಮನ್ನು ಒಪ್ಪುವವರ ಜೊತೆ ಕೈ ಜೋಡಿಸುತ್ತೇವೆ

ಚಿಕ್ಕಮಗಳೂರಿನಲ್ಲಿ ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 18:43 IST
Last Updated 6 ಮೇ 2018, 18:43 IST
ಚಿಕ್ಕಮಗಳೂರಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು
ಚಿಕ್ಕಮಗಳೂರಿನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು   

ಚಿಕ್ಕಮಗಳೂರು: ‘ಸಮ್ಮಿಶ್ರ ಸರ್ಕಾರ ರಚನೆ ಅನಿವಾರ್ಯವಾದರೆ, ಜೆಡಿಎಸ್‌ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಸಮ್ಮತಿಸಿದವರ ಜೊತೆ ಕೈಜೋಡಿಸುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಸುಭಾಷ್‌ ಚಂದ್ರಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು. ಜೆಡಿಎಸ್‌ಗೆ 40 ಸ್ಥಾನಗಳು ದೊರೆಯಲಿವೆ ಎಂದು ಟಿವಿ ಸಮೀಕ್ಷೆಗಳು ಹೇಳಿವೆ. ಅದರಂತೆ ಅಷ್ಟು ಸ್ಥಾನಗಳು ದೊರೆತೂ ನಮ್ಮನ್ನು ಬಿಟ್ಟು ಇವರಾರು ಸರ್ಕಾರ ರಚಿಸಲು ಸಾಧ್ಯ ಇಲ್ಲ’ಎಂದು ಹೇಳಿದರು.

‘ನನಗೆ ಮುಖ್ಯಮಂತ್ರಿ ಆಗಲೇಬೇಕು ಎಂಬ ಇರಾದೆ ಇಲ್ಲ. ನಾನೀಗ ಮಾಜಿ ಮುಖ್ಯಮಂತ್ರಿ. ಮಾಧ್ಯಮಗಳಲ್ಲಿ ತೋರಿಸುವ ಲೆಕ್ಕಾಚಾರದಷ್ಟೇ ಸೀಟುಗಳು ಬಂದರೂ ನಾನು ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಯಾರ ಬಾಗಿಲನ್ನೂ ತಟ್ಟುವುದಿಲ್ಲ. ನನ್ನ ಲೆಕ್ಕಾಚಾರದ ಪ್ರಕಾರ ಸಮ್ಮಿಶ್ರ ಸರ್ಕಾರ ಬರಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾದರೆ ನಮ್ಮ ಕಾರ್ಯಕ್ರಮ ಅನುಷ್ಠಾನಗೊಳಿಸುವವರ ಜತೆ ಕೈಜೋಡಿಸುತ್ತೇವೆ’ ಎಂದರು.

ADVERTISEMENT

‘ರಾಜ್ಯದ ಜನರು ಜೆಡಿಎಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ. ಪಕ್ಷಕ್ಕೆ 113ಕ್ಕಿಂತ ಹೆಚ್ಚಿನ ಸ್ಥಾನಗಳು ದೊರೆಯಲಿವೆ ಎಂಬ ನಂಬಿಕೆ ನನಗಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ. ವಿಜಯಪುರ ಜಿಲ್ಲೆಯ 7 ಸ್ಥಾನಗಳಲ್ಲಿ ಕನಿಷ್ಠ 7, ಬೀದರ್‌ನಲ್ಲಿ 6ರಲ್ಲಿ 4, ರಾಯಚೂರಿನಲ್ಲಿ ಏಳೂ ಸ್ಥಾನಗಳನ್ನು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ’ ಎಂದು ಹೇಳಿದರು.

‘ಜೆಡಿಎಸ್‌ ಯಾರ ಜತೆ ಸಖ್ಯ ಮಾಡುತ್ತದೆ ಎಂಬದನ್ನು ಎಚ್‌.ಡಿ.ದೇವೇಗೌಡ ಅವರು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಕೇಳಿದ್ದಾರೆ. ಜೆಡಿಎಸ್‌ ರಾಹುಲ್‌ ಗಾಂಧಿ ಕಡೆಗೂ ಇಲ್ಲ, ನರೇಂದ್ರ ಮೋದಿ ಕಡೆಗೂ ಇಲ್ಲ. ನಿಮ್ಮಗಳ ಗುಲಾಮ ನಾನಲ್ಲ. ನಾನು ರಾಜ್ಯದ 6.5 ಕೋಟಿ ಜನರ ಗುಲಾಮ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.