ADVERTISEMENT

ನೆಲಮಂಗಲಕ್ಕೆ ಮೆಟ್ರೊ: ಶಾ ಭರವಸೆ

ಕೇಂದ್ರಸರ್ಕಾರ ನೀಡಿದ ಹಣವೆಲ್ಲ ಮುಖ್ಯಮಂತ್ರಿ ಜೇಬಿಗೆ ಹೋಗಿದೆ: ಆರೋಪ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ಅಮಿತ್‌ ಶಾ ಅವರಿಗೆ ಇಷ್ಟಲಿಂಗ ಹಾಗೂ ಬಸವಣ್ಣನ ಮೂರ್ತಿಯನ್ನು ಸಿದ್ದಲಿಂಗ ಸ್ವಾಮೀಜಿ ನೀಡಿದರು. ಅಭ್ಯರ್ಥಿ ಎಂ.ವಿ.ನಾಗರಾಜು, ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಹೊಂಬಯ್ಯ ಇದ್ದಾರೆ.
ಅಮಿತ್‌ ಶಾ ಅವರಿಗೆ ಇಷ್ಟಲಿಂಗ ಹಾಗೂ ಬಸವಣ್ಣನ ಮೂರ್ತಿಯನ್ನು ಸಿದ್ದಲಿಂಗ ಸ್ವಾಮೀಜಿ ನೀಡಿದರು. ಅಭ್ಯರ್ಥಿ ಎಂ.ವಿ.ನಾಗರಾಜು, ಪಕ್ಷದ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಹೊಂಬಯ್ಯ ಇದ್ದಾರೆ.   

ನೆಲಮಂಗಲ: ‘ಬೆಂಗಳೂರಿಗೆ ಸೀಮಿತವಾಗಿರುವ ಮೆಟ್ರೊ ರೈಲು ಗ್ರಾಮಾಂತರ ಪ್ರದೇಶಗಳಿಗೂ ಬರುವಂತೆ, ಅದರಲ್ಲೂ ನೆಲಮಂಗಲಕ್ಕೆ ಮೊದಲ ಆದ್ಯತೆಯಲ್ಲಿ  ಸಂಪರ್ಕ ಕಲ್ಪಿಸುತ್ತೇವೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದರು.

ಪಟ್ಟಣದ ಬಸವಣ್ಣದೇವರ ಮಠದ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ವಿ.ನಾಗರಾಜು ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೇಂದ್ರದಿಂದ ರಾಜ್ಯಕ್ಕೆ ₹3 ಲಕ್ಷ ಕೋಟಿ ಅನುದಾನ ನೀಡಿದ್ದೇವೆ. ನೆಲಮಂಗಲಕ್ಕೆ ಏನಾದರೂ ಅನುದಾನ ಬಂದಿದೆಯೇ? 5 ವರ್ಷಗಳಲ್ಲಿ ಅಭಿವೃದ್ಧಿ ಆಗಿದೆಯೆ? ಸರ್ಕಾರ ನೀಡಿದ ಹಣವೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಜೇಬಿಗೆ ಹೋಗಿದೆ. ಜೊತೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯ ಖರ್ಚಿಗೆ ರವಾನೆಯಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ಮಹಿಳೆಯರಿಗೆ ಸ್ಮಾರ್ಟ್‌ಫೋನ್, ಯುವಕರಿಗೆ ಲ್ಯಾ‍ಪ್‌ಟ್ಯಾಪ್‌ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಸಂದರ್ಶನದ ಮೂಲಕ ಹಣ ವಸೂಲಿ ಮಾಡಿ ಸರ್ಕಾರಿ ಕೆಲಸವನ್ನು ನೀಡುವ ಪ್ರವೃತ್ತಿ ರಾಜ್ಯ ಸರ್ಕಾರದಲ್ಲಿದೆ. ನಮ್ಮ ಸರ್ಕಾರ ಬಂದರೆ ಸಂದರ್ಶನವನ್ನು ನಿಷೇಧಿಸಿ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು’ ಎಂದರು.

‘ಕೇಂದ್ರದ ಯೋಜನೆಗಳು ವಿದ್ಯುತ್‌ನಂತೆ. ಅದು ನೇರ ನಿಮ್ಮ ಮನೆಗೆ ಬರಬೇಕಾದರೆ ಟ್ರಾನ್ಸ್‌ಫಾರ್ಮರ್ ಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಎಂಬ ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಗಿದೆ. ಅದನ್ನು ಕಿತ್ತೆಸೆದು, ಯಡಿಯೂರಪ್ಪ ಎಂಬ ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಂಡರೆ ನಿಮ್ಮ ಬಾಳಿನಲ್ಲಿ ಬೆಳಕು ಮೂಡುತ್ತದೆ’ ಎಂದು ಹೇಳಿದರು.

ಅಭ್ಯರ್ಥಿ ಎಂ.ವಿ.ನಾಗರಾಜು, ನೆಲಮಂಗಲಕ್ಕೆ ಹೇಮಾವತಿ ನೀರು, ಶಾಶ್ವತ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅಮಿತ್ ಶಾ, ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಿದರು. ಸಿದ್ಧಲಿಂಗ ಸ್ವಾಮೀಜಿಯವರನ್ನೂ ಭೇಟಿ ಮಾಡಿದರು. ಇಷ್ಟಲಿಂಗ ಹಾಗೂ ಬಸವಣ್ಣನ ಮೂರ್ತಿಯನ್ನು ಶಾ ಅವರಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.