ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಸ್ಥಳೀಯ ಬಿಜೆಪಿ ವಿರುದ್ಧ ಹೋರಾಟ: ಶಿರೂರು ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ಲಕ್ಷ್ಮೀವರತೀರ್ಥ ಸ್ವಾಮೀಜಿ
ಲಕ್ಷ್ಮೀವರತೀರ್ಥ ಸ್ವಾಮೀಜಿ   

ಉಡುಪಿ: ಇಲ್ಲಿನ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಬಿಜೆಪಿ ಸರಿ ಇರುತ್ತಿದ್ದರೆ ರಾಜಕೀಯಕ್ಕೆ ಬರುವ ಅಗತ್ಯ ಇರಲಿಲ್ಲ. ದೇಶ ಹಾಗೂ ರಾಜ್ಯದಲ್ಲಿ ಆ ಪಕ್ಷ ಸರಿ ಇದೆ. ಉಡುಪಿಯಲ್ಲಿ ಮಾತ್ರ ಸರಿ ಇಲ್ಲ. ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತಿಲ್ಲ. ಬಿಜೆಪಿ ನಾಯಕರು ಕೇವಲ ತಮ್ಮ ಸ್ವಾರ್ಥವನ್ನು ನೋಡಿಕೊಂಡಿದ್ದಾರೆ. ನನ್ನ ಹೋರಾಟ ಕಾಂಗ್ರೆಸ್ ವಿರುದ್ಧ ಅಲ್ಲ’ ಎಂದರು.

ಬಿಜೆಪಿಯಿಂದ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಟಿಕೆಟ್ ನೀಡಿದರೆ ಖಂಡಿತ ಆ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ, ಇಲ್ಲವಾದರೆ ಪಕ್ಷೇತರನಾಗಿ ನಿಲ್ಲುತ್ತೇನೆ. ದೇವರ ಕೃಪೆಯಿಂದ ಗೆಲುವು ಸಿಗಲಿದೆ ಎಂಬ ವಿಶ್ವಾಸ ಇದೆ’ ಎಂದರು.

ADVERTISEMENT

‘ಚುನಾವಣೆಗೆ ನಿಲ್ಲುವ ಬಗ್ಗೆ ಅಷ್ಟ ಮಠಾಧೀಶರು ಅಥವಾ ಪೇಜಾವರ ಸ್ವಾಮೀಜಿ ಅವರ ಬಳಿ ಮಾತನಾಡುವ ಅಗತ್ಯ ಇಲ್ಲ. ನಾನೇನೂ ವಿದೇಶಕ್ಕೆ ಹೋಗುತ್ತಿಲ್ಲ. ಅಷ್ಟಕ್ಕೂ ಖಾವಿಧಾರಿಗಳು ಚುನಾವಣೆಗೆ ಸ್ಪರ್ಧಿಸಬಾರದು ಎಂಬ ನಿಯಮ ಇಲ್ಲ. ಭ್ರಷ್ಟಾಚಾರ, ಲಂಚಾವತಾರ ತಾಂಡವವಾಡುತ್ತಿದೆ. ಜನರಿಗೆ ಒಳ್ಳೆಯದು ಮಾಡಬೇಕಿದೆ’ ಎಂದರು.

ಪ್ರಮೋದ್ ಮಾದರಿ
‘ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅವರ ಸಾಧನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅವರ ಬಗ್ಗೆ ನನಗೆ ವಿಶ್ವಾಸ ಇದೆ. ಯಾರೇ ಒಳ್ಳೆಯ ಕೆಲಸ ಮಾಡಿರಲಿ ಅವರನ್ನು ನಾನು ಹೊಗಳುತ್ತೇನೆ’ ಎಂದು ಲಕ್ಷ್ಮೀವರತೀರ್ಥ ಸ್ವಾಮೀಜಿ ಹೇಳಿದರು.

ಒಳ್ಳೆಯ ಕೆಲಸ ಮಾಡಿರುವ ಪ್ರಮೋದ್ ವಿರುದ್ಧ ಏಕೆ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಉತ್ತಮ ಕೆಲಸ ಮಾಡಿದ್ದಾರೆ ನಿಜ. ಆದರೂ ನಾನು ಸ್ಪರ್ಧಿಸುತ್ತೇನೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತರೆ ಖಂಡಿತ ಅದರಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.