1957ರಿಂದ ಇಲ್ಲಿಯವರೆಗೆ ಧಾರವಾಡ ವಿಧಾನಸಭಾ ಕ್ಷೇತ್ರ ಹಲವಾರು ಪ್ರಮುಖ ಘಟನಾವಳಿಗಳಿಗೆ ಸಾಕ್ಷಿಯಾಗುತ್ತಲೇ ಬಂದಿದೆ. ಸದ್ಯ ಮಹದಾಯಿ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿದೆ.
80ರ ದಶಕದವರೆಗೂ ಕಾಂಗ್ರೆಸ್‌ಗೆ ನಿಚ್ಚಳ ಗೆಲುವು ತಂದುಕೊಡುತ್ತಿದ್ದ ಕ್ಷೇತ್ರ ಇದಾಗಿತ್ತು. 1980ರ ನರಗುಂದ ಬಂಡಾಯ ಹಾಗೂ ಅವೈಜ್ಞಾನಿಕ ಲೇವಿ ಪದ್ಧತಿ ವಿರುದ್ಧ ಸಿಡಿದೆದ್ದ ರೈತರು ನಡೆಸಿದ ಧರಣಿ, ಹೆದ್ದಾರಿ ಬಂದ್ ರಾಷ್ಟ್ರದ ಗಮನ ಸೆಳೆದಿದ್ದವು.
ರೈತ ಚಳವಳಿ ಮೂಲಕ ನಾಯಕರಾಗಿ ಹೊರಹೊಮ್ಮಿದ ಬಾಬಾಗೌಡ ಪಾಟೀಲ ಈ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದರು. 1989ರಲ್ಲಿ ನೆರೆಯ ಕಿತ್ತೂರು ಹಾಗೂ ಧಾರವಾಡ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಅವರು, ನಂತರ ಧಾರವಾಡ ಕ್ಷೇತ್ರವನ್ನು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಬಿಟ್ಟುಕೊಟ್ಟು, ಅವರನ್ನೂ ಆರಿಸಿ ತಂದರು. ಅಷ್ಟರ ಮಟ್ಟಿಗೆ ರೈತ ಚಳವಳಿ ಈ ಕ್ಷೇತ್ರದ ಮೇಲೆ ಪ್ರಭಾವ ಬೀರಿತ್ತು.
ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ರೈತ ಸಂಘದೊಳಗಿನ ಆಂತರಿಕ ಭಿನ್ನಾಭಿಪ್ರಾಯದಿಂದ ಸಂಘಟನೆ ದುರ್ಬಲವಾಯಿತೇ ಹೊರತು, ರೈತರ ಬಲ ಕುಗ್ಗಲಿಲ್ಲ. ನಂತರ ರೈತರ ಹೆಸರಿನಲ್ಲಿ ಬಂದ ಶ್ರೀಕಾಂತ ಅಂಬಡಗಟ್ಟಿ, ಶಿವಾನಂದ ಅಂಬಡಗಟ್ಟಿ ಈ ಕ್ಷೇತ್ರದಿಂದ ಗೆದ್ದು ಬಂದರು. ಅಷ್ಟೇ ಏಕೆ, ಹಾಲಿ ಶಾಸಕ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಕೂಡ ರೈತರ ಹೆಸರಿನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇದೇ ಕ್ಷೇತ್ರದಿಂದ ಆಯ್ಕೆ ಆದವರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಆರಂಭಕ್ಕೂ ಒಂದು ವರ್ಷ ಮೊದಲು ವಿನಯ ಕುಲಕರ್ಣಿ ಸಚಿವರಾಗುವುದರ ಹಿಂದೆ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತ ಕ್ರೋಡೀಕರಣದ ತಂತ್ರಗಾರಿಕೆಯೂ ಇತ್ತು ಎಂದೇ ವಿಶ್ಲೇಷಿಸಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ, ಹೆಚ್ಚಿನ ಸಮಯ ಕ್ಷೇತ್ರದಲ್ಲೇ ಇದ್ದು ಅದನ್ನು ಬಿಗಿ ಹಿಡಿತಕ್ಕೆ ತೆಗೆದುಕೊಳ್ಳುವತ್ತ ಅವರು ಗಮನಹರಿಸಿದ್ದಾರೆ. ಕ್ಷೇತ್ರಕ್ಕಷ್ಟೇ ಹೆಚ್ಚಿನ ಅನುದಾನ ದೊರಕುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ, ‘ವಿನಯ ಕುಲಕರ್ಣಿ ಧಾರವಾಡ ಕ್ಷೇತ್ರದ ಉಸ್ತುವಾರಿ ಸಚಿವರೇ ಹೊರತು, ಜಿಲ್ಲೆಗಲ್ಲ’ ಎಂಬ ಕುಹಕವೂ ಕೇಳಿಬಂದಿದೆ.
ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ 2004ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು, 2008ರಲ್ಲಿ ಪಕ್ಷದ ಟಿಕೆಟ್ ಪಡೆದರೂ ಸೋಲುಂಡಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಯ ಸೀಮಾ ಮಸೂತಿ ವಿರುದ್ಧ ಪರಾಭವಗೊಂಡಿದ್ದರು. ಮತ್ತೆ 2013ರಲ್ಲಿ ಜೆಡಿಎಸ್ ಅಭ್ಯರ್ಥಿ ಅಮೃತ ದೇಸಾಯಿ ವಿರುದ್ಧ ಗೆಲುವು ಸಾಧಿಸಿದರು. ಬದಲಾದ ಪರಿಸ್ಥಿತಿಯಲ್ಲಿ, ಅಮೃತ ದೇಸಾಯಿ ಈಗ ಬಿಜೆಪಿ ಸೇರಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಯಾದ ಅವರು ಈ ಬಾರಿಯ ಚುನಾವಣೆಯಲ್ಲೂ ವಿನಯ ಕುಲಕರ್ಣಿ ಅವರಿಗೆ ಸ್ಪರ್ಧೆ ಒಡ್ಡಲಿದ್ದಾರೆ.
ಈ ಎಲ್ಲದರ ನಡುವೆ ಹೆಬ್ಬಳ್ಳಿಯ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ, ಚುನಾವಣಾ ವಿಷಯದ ದಿಕ್ಕನ್ನೇ ಬದಲಿಸುವಂತಿದೆ. ಯೋಗೀಶಗೌಡ ಹತ್ಯೆ ಬಳಿಕ ನಡೆದ ಹೆಬ್ಬಳ್ಳಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತೀವ್ರ ಜಿದ್ದಿಗೆ ಬಿದ್ದು ಸ್ಪರ್ಧಿಸಿದ್ದವು. ಅದಾದ ಬಳಿಕ ಒಂದಲ್ಲ ಒಂದು ರೀತಿಯಲ್ಲಿ ಕ್ಷೇತ್ರದಲ್ಲಿ ಈ ವಿಷಯ ಕುರಿತು ಪ್ರತಿಭಟನೆಗಳು, ಗಲಾಟೆಗಳು ನಡೆಯುತ್ತಲೇ ಇವೆ. ವಿನಯ ಕುಲಕರ್ಣಿ ಅವರ ವಿರುದ್ಧ ಆರೋಪ ಮಾಡುತ್ತಿದ್ದ ಯೋಗೀಶಗೌಡರ ಪತ್ನಿ ಮಲ್ಲಮ್ಮ, ಈಗ ಕಾಂಗ್ರೆಸ್‌ನಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ, ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ಈ ಆರೋಪವನ್ನು ತಳ್ಳಿಹಾಕುವ ವಿನಯ ಕುಲಕರ್ಣಿ, ‘ಅಪರಾಧ ಚಟುವಟಿಕೆಗಳನ್ನು ನಮ್ಮ ಕುಟುಂಬ ಎಂದೂ ಬೆಂಬಲಿಸಿಲ್ಲ. ಮುಂದೆಯೂ ಬೆಂಬಲಿಸುವುದಿಲ್ಲ. ಅಪರಾಧ ಎಲ್ಲೇ ನಡೆದರೂ ಅದನ್ನು ಹತ್ತಿಕ್ಕುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಆದರೆ ಇಸ್ಪೀಟ್, ಜೂಜಾಟ ಸಣ್ಣ ಪ್ರಮಾಣದಲ್ಲಿ ಅಲ್ಲಿ ಇಲ್ಲಿ ನಡೆದಿರಬಹುದು. ಅಂಥವು ವರದಿಯಾಗಿವೆ’ ಎನ್ನುತ್ತಾರೆ.
1983ರ ರೈತ ಹೋರಾಟದ ಮೂಲಕವೇ ಕೆಲ ಕಾಲ ಸುದ್ದಿಯಲ್ಲಿದ್ದ ಕ್ಷೇತ್ರದಲ್ಲಿ, ಅದರ ಸ್ವರೂಪ ಈಗ ಬದಲಾಗಿದೆ. ಮಹದಾಯಿ ಹೋರಾಟ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆಗಳು ನಡೆದಿವೆ.
ಈ ಕ್ಷೇತ್ರದ ಕೆಲ ಹಳ್ಳಿಗಳಿಗೆ ಮಲಪ್ರಭಾ ನೀರು ಪೂರೈಕೆಯಾಗುತ್ತಿದೆ; ಇನ್ನು ಕೆಲವಕ್ಕೆ ಇಲ್ಲ. ಆದರೂ ಮಹದಾಯಿ ಹೋರಾಟಕ್ಕೆ ಈ ಭಾಗದ ಜನರು ಸದಾ ಬೆಂಬಲ ನೀಡಿದ್ದಾರೆ. ಇನ್ನು, ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯವಾಗಿ ಪರ ಹಾಗೂ ವಿರೋಧದ ಚರ್ಚೆಗಳು ಬಿರುಸಿನಿಂದ ನಡೆದಿವೆ. ಸ್ವತಂತ್ರ ಧರ್ಮದ ಮಾನ್ಯತೆ ಪರವಾಗಿರುವ ಸ್ವಾಮೀಜಿಗಳಲ್ಲಿ ಕೆಲವರು ಬಹಿರಂಗವಾಗಿಯೇ ವಿನಯ ಪರವಾಗಿ ಮಾತನಾಡಿದರೆ, ವಿರೋಧಿಸುವವರು ‘ಧರ್ಮ ಒಡೆದವರು’ ಎಂದು ಆರೋಪ ಮಾಡುತ್ತಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡಿದ್ದಿರಲಿ, ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಕಾರಣವಿರಲಿ ಅಥವಾ ಎರಡನ್ನೂ ಅಲ್ಲಗಳೆದು, ಬಿಜೆಪಿ ಆರೋಪ ಮಾಡುವಂತೆ ಕಾನೂನು ಸುವ್ಯವಸ್ಥೆಯ ಲೋಪವೇ ಆಗಿರಲಿ, ಇವೆಲ್ಲವೂ ವಿನಯ ಕುಲಕರ್ಣಿ ಅವರ ಲಾಭ–ನಷ್ಟ ನಿರ್ಧರಿಸುವ ಬಾಬತ್ತುಗಳೇ ಆಗಲಿವೆ.
‘ಎಲ್ಲವೂ 3–4 ವರ್ಷಗಳ ಸಾಧನೆ’
ಕ್ಷೇತ್ರದ ಪ್ರತಿ ಹೊಲವನ್ನೂ ತಲುಪಲು ‘ನಮ್ಮ ಹೊಲ ನಮ್ಮ ದಾರಿ’ ಯೋಜನೆ ಅಡಿ 900 ಕಿ.ಮೀ ರಸ್ತೆ ನಿರ್ಮಾಣವಾಗಿದೆ. ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು, ಅಂದರೆ ಏಳು ಸಾವಿರಕ್ಕೂ ಅಧಿಕ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಇಡೀ ರಾಜ್ಯಕ್ಕೆ ಈ ಕ್ಷೇತ್ರ ಮೂರನೇ ಸ್ಥಾನದಲ್ಲಿದೆ. ಇವೆಲ್ಲವೂ ಕಳೆದ ಮೂರ್ನಾಲ್ಕು ವರ್ಷಗಳ ಸಾಧನೆ.
-ವಿನಯ ಕುಲಕರ್ಣಿ, ಧಾರವಾಡ ಶಾಸಕ– ಸಚಿವ
****
ಕಾಂಕ್ರೀಟ್ ರಸ್ತೆ, ಗಂಗಾ ಕಲ್ಯಾಣ, ನೀರು ಇಂಗಿಸುವಿಕೆ ಇತ್ಯಾದಿ ಕಾಮಗಾರಿಗಳು ಆಗಿವೆ. ಶಾಸಕರು ಎಲ್ಲಕ್ಕಿಂತ ಹೆಚ್ಚಾಗಿ, ಅವರ ಬಳಿ ಹೋದಾಗ ಕೇಳಿದ್ದನ್ನು ನೀಡಿದ್ದಾರೆ. ಜಾತಿ ಧರ್ಮ ಮೀರಿ ಕೆಲಸ ಮಾಡಿದ್ದಾರೆ
-ಲಿಂಬಣ್ಣ ನಾಯ್ಕರ್, ಹೆಬ್ಬಳ್ಳಿ
ಕಾನೂನು ಸುವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದೆ. ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಅಧಿಕಾರಿಗಳು ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇವೆಲ್ಲದರ ಫಲವಾಗಿ ಗ್ರಾಮಗಳಲ್ಲಿ ಜಗಳ, ಹೊಡೆದಾಟ, ಬಡಿದಾಟ ಹೆಚ್ಚಾಗಿವೆ. ಮಟ್ಕಾ, ಜೂಜು ಎಗ್ಗಿಲ್ಲದೆ ನಡೆಯುತ್ತಿದೆ. ಇದು ನಿಜಕ್ಕೂ ಆಘಾತಕಾರಿ.
-ರಾಜಣ್ಣ ಮುದ್ದಿ, ಶಿವಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.