ADVERTISEMENT

ಮೇಲ್ಮನೆ ಚುನಾವಣೆ; ಬಿಜೆಪಿಗೆ ಮೇಲುಗೈ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಮೇಲ್ಮನೆ ಚುನಾವಣೆ; ಬಿಜೆಪಿಗೆ ಮೇಲುಗೈ
ಮೇಲ್ಮನೆ ಚುನಾವಣೆ; ಬಿಜೆಪಿಗೆ ಮೇಲುಗೈ   

ಬೆಂಗಳೂರು: ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್‌ನ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರು ಹಾಗೂ ಜೆಡಿಎಸ್ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈಶಾನ್ಯ ಪದವೀಧರರ ಕ್ಷೇತ್ರ ಕೊನೆಯ ಕ್ಷಣದಲ್ಲಿ ‘ಕೈ’ ವಶವಾಗಿದೆ.

ಮಂಗಳವಾರ ರಾತ್ರಿವರೆಗೆ ಮೂರು ಕ್ಷೇತ್ರಗಳ ಫಲಿತಾಂಶ ಮಾತ್ರ ಪ್ರಕಟವಾಗಿತ್ತು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಮರಿತಿಬ್ಬೇಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ನ ಭೋಜೇಗೌಡ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.

ಬುಧವಾರ ನಸುಕಿನ ವೇಳೆಗೆ ಉಳಿದ ಮೂರು ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿತು. ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್, ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ 25,250 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದಿನೇಶ್ (16,157 ಮತಗಳು) ಅವರನ್ನು ಸೋಲಿಸಿದರು.

ADVERTISEMENT

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಮೋಜಿಗೌಡ ಹಾಗೂ ಬಿಜೆಪಿಯ ಅ.ದೇವೇಗೌಡ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಮೊದಲ ಸುತ್ತು ಪೂರ್ಣಗೊಂಡಾಗ, ರಾಮೋಜಿಗೌಡ 114 ಮತಗಳ ಮುನ್ನಡೆ ಪಡೆದಿದ್ದರು. ಆ ನಂತರದ ಎಲ್ಲ ಸುತ್ತುಗಳಲ್ಲೂ ಅವರನ್ನು ಹಿಂದಿಕ್ಕಿದ ದೇವೇಗೌಡ, ಕೊನೆಗೆ 3,864 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದರು.

ಬಿಜೆಪಿ ಕೋಟೆಗೆ ಕೈ ಲಗ್ಗೆ: ಈಶಾನ್ಯ ಪದವೀಧರ ಕ್ಷೇತ್ರದ ಮತಎಣಿಕೆ ತೀವ್ರ ಕುತೂಹಲ ‌ಕೆರಳಿಸಿತ್ತು. ಆರಂಭದಿಂದಲೂ ಬಿಜೆಪಿ–ಜೆಡಿಎಸ್ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಆದರೆ, ಕೊನೆ ಸುತ್ತಿನಲ್ಲಿ ಕಾಂಗ್ರೆಸ್‌ನ ಡಾ.ಚಂದ್ರಶೇಖರ ಪಾಟೀಲ 321 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ನಿರ್ಮಿಸಿದ್ದ ಭದ್ರಕೋಟೆಯನ್ನು ಛಿದ್ರಗೊಳಿಸಿದರು.

ನಾಲ್ಕು ಸುತ್ತುಗಳ ಎಣಿಕೆ ಪೂರ್ಣಗೊಂಡರೂ, ಗೆಲುವಿಗೆ ನಿಗದಿಪಡಿಸಿದ್ದ ಕೋಟಾ 24,414 ಮತಗಳನ್ನು ಯಾವೊಬ್ಬ ಅಭ್ಯರ್ಥಿಯೂ ಪಡೆದಿರಲಿಲ್ಲ. ಹೀಗಾಗಿ, ರಾತ್ರಿ 12.20ಕ್ಕೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯನ್ನು ಆರಂಭಿಸಲಾಯಿತು. ಕೊನೆಗೆ ಎಣಿಕೆಯು ಎಲಿಮಿನೇಷನ್ ಸುತ್ತಿನೊಂದಿಗೆ ಬೆಳಿಗ್ಗೆ 4 ಗಂಟೆಗೆ ಮುಕ್ತಾಯವಾಯಿತು. ಡಾ.ಚಂದ್ರಶೇಖರ ಪಾಟೀಲ 18,768 ಮತಗಳನ್ನು ಪಡೆದರೆ, ಕೆ.ಬಿ. ಶ್ರೀನಿವಾಸ್ 18,447 ಹಾಗೂ ಪ್ರತಾಪ್ ರೆಡ್ಡಿ  13,311 ಮತ ಗಳಿಸಿದರು.

‘ಜಯನಗರದಲ್ಲೂ ಮುನ್ನಡೆ ಸಿಕ್ಕಿದೆ’

‘ಮೇಲ್ಮನೆ ಚುನಾವಣೆಯಲ್ಲೂ ನಾವು ಮೇಲುಗೈ ಸಾಧಿಸಿದ್ದೇವೆ. ಇದು ಮತದಾರರು ನಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ಜಯನಗರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪ್ರಹ್ಲಾದ್‌ ಬಾಬು, ಕೇವಲ 2,886ರ ಮತಗಳ ಅಂತರದಿಂದ ಸೋತಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ 7,000ಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಗಳಿಸಿದೆ. ಮತದಾರರ ತೀರ್ಪನ್ನು ಗೌರವಿಸುತ್ತೇವೆ’ ಎಂದು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.