ನವದೆಹಲಿ: ರಾಜಕೀಯ ಪಕ್ಷಗಳ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದ ಚುನಾವಣಾ ಬಾಂಡ್‌ಗಳ ವಿತರಣೆಗೆ ಕೇಂದ್ರ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಲೋಕಸಭೆಯಲ್ಲಿ ಬಾಂಡ್ ವಿತರಣೆ ನಿಯಮಾವಳಿ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು.
ಚುನಾವಣಾ ಖರ್ಚುವೆಚ್ಚದಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್ ವ್ಯವಸ್ಥೆ ರೂಪಿಸುವುದಾಗಿ ಕೇಂದ್ರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು.
ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ಬರುವ ಕೊಡುಗೆಯನ್ನು ತಡೆಗಟ್ಟಲು ಪರಿಚಯಿಸಲಾಗುತ್ತಿರುವ ಪ್ರಸ್ತಾವಿತ ಬಾಂಡ್‌ಗಳು ವಾಯಿದೆ ಪತ್ರದ (ಸಾಲ ಪತ್ರ) ರೂಪದಲ್ಲಿ ಇರಲಿವೆ.
ದೇಣಿಗೆದಾರರು ರಾಜಕೀಯ ಪಕ್ಷಗಳಿಗೆ ನಗದಿನ ಬದಲಿಗೆ ಈ ಬಾಂಡ್‌ಗಳನ್ನು ನೀಡಬಹುದು. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಆಯ್ದ ಶಾಖೆಗಳಲ್ಲಿ ₹1,000, ₹10,000, ₹1 ಲಕ್ಷ ₹10 ಲಕ್ಷ ₹1 ಕೋಟಿ ಮುಖಬೆಲೆಯ ಬಾಂಡ್‌ಗಳು ದೊರೆಯಲಿವೆ.
ಕಡಿವಾಣ
ಈ ಹೊಸ ವ್ಯವಸ್ಥೆಯಿಂದ ರಾಜಕೀಯ ಪಕ್ಷಗಳಿಗೆ ಗೋಪ್ಯವಾಗಿ ಹರಿದು ಬರುತ್ತಿದ್ದ ದೇಣಿಗೆ ಮತ್ತು ಚುನಾವಣಾ ಖರ್ಚುವೆಚ್ಚಗಳಿಗೆ ಕಡಿವಾಣ ಬೀಳಲಿದೆ ಎಂದು ಜೇಟ್ಲಿ ತಿಳಿಸಿದರು.
ಬಾಂಡ್‌ಗಳಲ್ಲಿ ದೇಣಿಗೆ ನೀಡುವವರ ಹೆಸರು ಇರುವುದಿಲ್ಲ. ಅವುಗಳ ಕಾಲಾವಧಿ ಕೇವಲ 15 ದಿನ ಮಾತ್ರವಾಗಿರುತ್ತದೆ. ಆ ನಂತರ ಅವು ಊರ್ಜಿತವಾಗಿರುವುದಿಲ್ಲ.
ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್ ತಿಂಗಳ ಮೊದಲ ಹತ್ತು ದಿನಗಳಲ್ಲಿ ಮಾತ್ರ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಬಾಂಡ್ ಖರೀದಿಸುವವರು ತಮ್ಮ ಬ್ಯಾಂಕ್ ಖಾತೆಗಳಿಂದಲೇ ಹಣ ಪಾವತಿಸಬೇಕು.
ರಾಜಕೀಯ ಪಕ್ಷಗಳು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐ.ಟಿ ರಿಟರ್ನ್ಸ್) ಸಲ್ಲಿಸುವಾಗ ಬಾಂಡ್ ರೂಪದಲ್ಲಿ ಸ್ವೀಕರಿಸಿದ ದೇಣಿಗೆ ಕುರಿತು ಕಡ್ಡಾಯವಾಗಿ ವಿವರ ಸಲ್ಲಿಸಬೇಕಾಗುತ್ತದೆ. ದೇಣಿಗೆ ನೀಡುವವರ ಲೆಕ್ಕಪತ್ರ ಮಾಹಿತಿಗೆ ಇದು ತಾಳೆಯಾಗಬೇಕು ಎಂದು ಜೇಟ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.