ADVERTISEMENT

ಡಿಕೆಶಿ ಮೇಲೆ ಮುನಿಸು; ಧರ್ಮದ ವಿಚಾರದಲ್ಲಿ ಜಾಣ ಮೌನ

ಬಳ್ಳಾರಿ ಕಡೆ ಸುಳಿಯದ ಎಂ.ಬಿ. ಪಾಟೀಲ್‌, ವಿನಯ್‌ ಕುಲಕರ್ಣಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಅಕ್ಟೋಬರ್ 2018, 19:58 IST
Last Updated 26 ಅಕ್ಟೋಬರ್ 2018, 19:58 IST
   

ಬಳ್ಳಾರಿ:ಬಳ್ಳಾರಿ ಲೋಕಸಭೆ ಉಪಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭಾರಿ ಸದ್ದು ಮಾಡಿದ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ಈಗ ತಣ್ಣಗಾಗಿರುವಂತೆ ಕಾಣಿಸುತ್ತಿದೆ.

ಪ್ರತಿಷ್ಠಿತ ಹಾಗೂ ಜಿದ್ದಾಜಿದ್ದಿನ ಕಣದಲ್ಲಿ ಪ್ರಮುಖ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಧರ್ಮದ ವಿಚಾರದಲ್ಲಿ ಜಾಣ ಮೌನ ವಹಿಸಿವೆ. ಎರಡೂ ಪಕ್ಷಗಳ ಮುಖಂಡರು ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಂದ ಈ ಕುರಿತು ಪ್ರಶ್ನೆಗಳು ಎದುರಾಗುತ್ತಿದ್ದರೂ ಅದಕ್ಕೆ ಮೌನ ಉತ್ತರ ನೀಡುತ್ತಿದ್ದಾರೆ. ಬಹಿರಂಗ ಪ್ರಚಾರ ಸಭೆಗಳಲ್ಲೂ ಅದರ ಪ್ರಸ್ತಾಪ ಮಾಡುತ್ತಿಲ್ಲ. ವಿಧಾನಸಭೆ ಚುನಾವಣೆ ವೇಳೆ ಪ್ರಸ್ತಾಪಿಸಿದ್ದ ಬಹುತೇಕ ವಿಷಯಗಳನ್ನೇ ಎರಡೂ ಪಕ್ಷಗಳು ಜನರ ಮುಂದಿಡುತ್ತಿವೆ. ಆದರೆ, ಧರ್ಮದ ವಿಚಾರದಲ್ಲಿ ಯಾವುದೇ ಸೊಲ್ಲು ಎತ್ತುತ್ತಿಲ್ಲ.

ಪ್ರತ್ಯೇಕ ಲಿಂಗಾಯತ ಧರ್ಮದ ಪರ ಹಾಗೂ ವಿರುದ್ಧ ಇರುವ ಸ್ವಾಮೀಜಿಗಳು, ಸಂಘಟನೆಗಳು ಹಾಗೂ ಜನ ಜಿಲ್ಲೆಯಲ್ಲಿಯೂ ಒಡೆದು ಹೋಗಿದ್ದಾರೆ. ಅದರ ಪರ ಅಥವಾ ವಿರುದ್ಧ ಮಾತನಾಡಿದರೆ ಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ ಎಂಬ ಆತಂಕ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಮುಖಂಡರು ಬಹಳ ಎಚ್ಚರಿಕೆಯಿಂದ ಪ್ರಚಾರ ಸಭೆಗಳಲ್ಲಿ ಮಾತನಾಡುತ್ತಿದ್ದಾರೆ.

ADVERTISEMENT

ಸುಳಿಯದ ಎಂ.ಬಿ. ಪಾಟೀಲ್‌:

ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪನವರ ಪರ ಪ್ರಚಾರಕ್ಕೆ ಆ ಪಕ್ಷದ ಬಹುತೇಕ ಸಚಿವರು, ಶಾಸಕರು ಜಿಲ್ಲೆಗೆ ಬಂದು ಹೋಗಿದ್ದಾರೆ. ಕೆಲವರು ಈಗಲೂ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ವೀರಶೈವ ಹಾಗೂ ಲಿಂಗಾಯತ ಪರ ಇರುವ ಪಕ್ಷದ ಶಾಸಕರು ಪ್ರಚಾರ ಕೈಗೊಂಡಿದ್ದಾರೆ. ಆದರೆ, ಪ್ರತ್ಯೇಕ ಧರ್ಮದ ಪರ ಹೋರಾಟದ ಮುಂಚೂಣಿಯಲ್ಲಿದ್ದ ಶಾಸಕ ಎಂ.ಬಿ. ಪಾಟೀಲ್‌, ಕಾಂಗ್ರೆಸ್‌ ಮುಖಂಡ ವಿನಯ್‌ ಕುಲಕರ್ಣಿ ಅವರು ಒಂದು ಸಲ ಕೂಡ ಇದುವರೆಗೆ ಜಿಲ್ಲೆಯತ್ತ ಸುಳಿದಿಲ್ಲ.

‘ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕೈ ಹಾಕಿದ್ದರಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಇತ್ತೀಚೆಗೆ ಡಿ.ಕೆ. ಶಿವಕುಮಾರ ನೀಡಿದ್ದ ಹೇಳಿಕೆಯಿಂದ ಎಂ.ಬಿ. ಪಾಟೀಲ್‌, ವಿನಯ್‌ ಕುಲಕರ್ಣಿ ಅವರು ಮುನಿಸಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ ಶಿವಕುಮಾರ ಮೇಲೆ ಇರುವುದರಿಂದ ಸಹಜವಾಗಿಯೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಅವರ ಮೇಲಿದೆ. ಈ ಕಾರಣಕ್ಕಾಗಿಯೇ ಆ ಇಬ್ಬರೂ ಮುಖಂಡರು ಅಂತರ ಕಾಯ್ದುಕೊಂಡಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ಸಿನ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತ್ಯೇಕ ಧರ್ಮದ ವಿಚಾರದಲ್ಲಿ ವಿಧಾನಸಭೆ ಚುನಾವಣೆ ವೇಳೆ ತಳೆದಿದ್ದ ನಿಲುವು ಈಗ ಕೂಡ ತಳೆದಿದ್ದೇವೆ. ಎರಡೂ ಬಣದವರು ನಮ್ಮ ಜೊತೆ ಇದ್ದಾರೆ’ ಎಂದು ಬಿಜೆಪಿ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.