ಶಿರಸಿ: ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿರುವ ಆನಂದ ಅಸ್ನೋಟಿಕರ್ ಅವರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚಾರ ಮಾಡಿ, ಪ್ರಚಾರ ನಡೆಸುತ್ತಿದ್ದಾರೆ.
ಮೈತ್ರಿ ಪಕ್ಷಗಳ ಸೀಟು ಹೊಂದಾಣಿಕೆಯಲ್ಲಿ ಜೆಡಿಎಸ್ ಪಾಲಾಗಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ, ಬಲಿಷ್ಠವಾಗಿರುವ ಕಾಂಗ್ರೆಸ್ ಅನ್ನು ವಿಶ್ವಾಸಕ್ಕೆ ಪಡೆದು, ಚುನಾವಣೆ ಪ್ರಚಾರ ನಡೆಸುವುದು ಜೆಡಿಎಸ್‌ಗೆ ಸವಾಲಾಗಿದೆ. ತಳಪಾಯ ಗಟ್ಟಿಯಿಲ್ಲದ ಜೆಡಿಎಸ್, ಕಾಂಗ್ರೆಸ್ ಮತಗಳ ಆಧಾರದ ಮೇಲೆ ಗೆಲುವಿನ ಕನಸು ಹೆಣೆಯುತ್ತಿದೆ. ಪ್ರಚಾರ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ವಿವರ ಇಲ್ಲಿದೆ.
* ಯಾವ ಅಂಶಗಳನ್ನು ಇಟ್ಟುಕೊಂಡು ನೀವು ಚುನಾವಣೆಗೆ ಎದುರಿಸುತ್ತಿದ್ದೀರಿ ?
ಅಭಿವೃದ್ಧಿಗೆ ನನ್ನ ಮೊದಲ ಪ್ರಾಶಸ್ತ್ಯ. ಜಿಲ್ಲೆಯಲ್ಲಿ ಜನರು ಉದ್ಯೋಗವಿಲ್ಲದೇ ಒದ್ದಾಡುತ್ತಿದ್ದಾರೆ. ಉತ್ತರ ಕನ್ನಡ ಸುತ್ತಲಿನ ಮಂಗಳೂರು, ಉಡುಪಿ, ಹುಬ್ಬಳ್ಳಿ–ಧಾರವಾಡ, ಶಿವಮೊಗ್ಗ ಜಿಲ್ಲೆಗಳು, ನೆರೆಯ ಗೋವಾ ರಾಜ್ಯ ಸಾಕಷ್ಟು ಅಭಿವೃದ್ಧಿಗೊಂಡಿವೆ. ನೈಸರ್ಗಿಕ ಸಂಪನ್ಮೂಲ, ಕರಾವಳಿ, ಕೃಷಿ ಹೀಗೆ ಎಲ್ಲವೂ ಇರುವ ಉತ್ತರ ಕನ್ನಡ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಐದು ಬಾರಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ತಮ್ಮ ಬುದ್ಧಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಉಪಯೋಗಿಸಲೇ ಇಲ್ಲ. ಸ್ವಾರ್ಥಕ್ಕಾಗಿ ಕೋಮುಗಲಭೆ ಮಾಡಿಸಿ, ಕ್ಷೇತ್ರವನ್ನು ಕಲುಷಿತಗೊಳಿಸಿದ್ದಾರೆ.
* ಪ್ರಚಾರದಲ್ಲಿ ಬರೀ ಆರೋಪ–ಪ್ರತ್ಯಾರೋಪವೇ ಆಗುತ್ತಿದೆ, ಅಭಿವೃದ್ಧಿಯ ಮಾತೇ ಇಲ್ಲ ?
ನಾನು ಹಿಂದುಳಿದವನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಈಗಿನ ಯುವಕರು ಹಿಂದುತ್ವವನ್ನು ಒಳ್ಳೆಯ ಭಾವನೆಯಿಂದ ಸ್ವೀಕರಿಸುತ್ತಿಲ್ಲ. ಹಿಂದುತ್ವ ಎಂದರೆ ನಾಮ ಹಾಕಿಕೊಳ್ಳುವುದು, ಹೊಡೆಯಲಿಕ್ಕೆ ಹೋಗುವುದು ಎನ್ನುವುದನ್ನು ಮಾತ್ರ ಕಲಿತಿದ್ದಾರೆ. ಅನಂತಕುಮಾರ್ ಹೆಗಡೆ ಅವರ ಪ್ರಚೋದನಕಾರಿ ಭಾಷಣವನ್ನು ಕೇಳಿ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಆರೋಪ ಮಾಡಿದಾಗ, ಪ್ರತ್ಯಾರೋಪ ಮಾಡುವುದು ಅನಿವಾರ್ಯ. ಆದರೆ, ನಾನು ಇದನ್ನೇ ಮಾಡುತ್ತಿಲ್ಲ. ಅಭಿವೃದ್ಧಿಯ ಬಗ್ಗೆಯೂ ಹೇಳುತ್ತಿದ್ದೇನೆ.
* ಕ್ಷೇತ್ರ ಸಮಸ್ಯೆಗಳ ಬಗ್ಗೆ ನಿಮ್ಮ ಅನಿಸಿಕೆ ?
ಜಿಲ್ಲೆಯಲ್ಲಿ 80ಸಾವಿರ ಅರಣ್ಯ ಅತಿಕ್ರಮಣಕಾರ ಕುಟುಂಬಗಳಿವೆ. ನಾನು ಇದರ ಬಗ್ಗೆ ಹೆಚ್ಚು ಮಾತನಾಡಿದರೆ, ಅವರಿಗೆ ತೊಂದರೆಯಾಗಬಹುದು. ಅನಂತಕುಮಾರ್ ಕೂಡ ಅತಿಕ್ರಮಣ ಮಾಡಿದವರೇ. ಮನೆ–ಮಠ ಇಲ್ಲದ ಬಡವರಿಗಾದರೂ ಅರಣ್ಯ ಹಕ್ಕುಪತ್ರ ಕೊಡಿಸಲು ಅವರು ಪ್ರಯತ್ನಿಸಬೇಕಿತ್ತು. ಅಡಿಕೆ ಬೆಳೆಗಾರರಲ್ಲಿ ಅನೇಕರು ಅನಂತಕುಮಾರ್ ಹೆಗಡೆ ಸಮುದಾಯದವರೇ ಇದ್ದಾರೆ. ಒಮ್ಮೆಯೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಭೇಟಿ ಮಾಡಿ, ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅವರು ಪ್ರಯತ್ನಿಸಿಲ್ಲ. ಕಾಂಗ್ರೆಸ್ ಹಿರಿಯ ಸದಸ್ಯ ಶಾಂತಾರಾಮ ಹೆಗಡೆ ಅವರು ಅಡಿಕೆ ಸಮಸ್ಯೆ ಪರಿಹಾರಕ್ಕೆ ದೆಹಲಿಗೆ ಹೋಗಿದ್ದಾಗ, ಅನಂತಕುಮಾರ್‌ಗೆ ಕಾಲ್ ಮಾಡಿದ್ದರಂತೆ. ಅವರು ಸಚಿವರ ಜತೆ ಮಾತನಾಡಲು ಬರುವುದಿರಲಿ, ಕಾಲ್ ಎತ್ತಿ ಮಾತನಾಡಿಯೂ ಇಲ್ಲ ಎಂದು ಶಾಂತಾರಾಮ ಹೆಗಡೆ ಅವರೇ ಹೇಳಿದರು. ಹವ್ಯಕರು ಹೇಗೆ ಇಂಥವರನ್ನು ಒಪ್ಪುತ್ತೀರಿ?
* ನೀವು ಆಯ್ಕೆಯಾದರೆ, ಕ್ಷೇತ್ರಕ್ಕೆ ಮೊದಲ ಆದ್ಯತೆ ಏನು ?
ನಾನು ಆಯ್ಕೆಯಾದರೆ, ಸಕ್ರಿಯ ಸಂಸದನಾಗಿರಲು ಬಯಸುತ್ತೇನೆ. ಕೇಂದ್ರದಲ್ಲಿರುವ ಬಹಳಷ್ಟು ಯೋಜನೆಗಳಿವೆ. ರಾಜ್ಯದ ಹಸ್ತಕ್ಷೇಪವಿಲ್ಲದೇ ನೇರವಾಗಿ ಅವನ್ನು ಕ್ಷೇತ್ರಕ್ಕೆ ತರಬಹುದು. ಕೆಲವೊಮ್ಮೆ ರಾಜ್ಯದ ಸಹಕಾರ ಬೇಕಾಗುತ್ತದೆ. ಅದನ್ನೂ ಪಟ್ಟಿಮಾಡಿಕೊಂಡು ತರಲು ಪ್ರಯತ್ನಿಸುತ್ತೇನೆ. ಕುಡಿಯುವ ನೀರು, ಉದ್ಯೋಗಾವಕಾಶ, ಬಂದರು ಅಭಿವೃದ್ಧಿ, ಪರಿಸರ ಪೂರಕ ಉದ್ಯಮ, ಕೃಷಿ, ಮೀನುಗಾರಿಕೆ ಪೂರಕ ಚಟುವಟಿಕೆಗಳಿಗೆ ಮೊದಲ ಆದ್ಯತೆ.
* ಕಾಂಗ್ರೆಸ್‌ನಲ್ಲಿ ಇನ್ನೂ ಅಸಮಾಧಾನ ತಣ್ಣಗಾಗಿಲ್ಲ, ಚುನಾವಣೆ ಸಮೀಪಿಸುತ್ತಿದೆ...
ನಾನೀಗ ಅಭಿಮನ್ಯವಿನ ಸ್ಥಿತಿಯಲ್ಲಿದ್ದೇನೆ. ಎಲ್ಲ ರೀತಿಯ ಸಮಸ್ಯೆಗಳಿವೆ, ಆದರೆ ಗೆಲ್ಲುವುದು ಖಚಿತ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಇತರ ಎಲ್ಲರ ಆಶೀರ್ವಾದವಿದೆ. ಕಾಂಗ್ರೆಸ್–ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡೇ ಕೆಲಸ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.