ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಲು ಆ ಪಕ್ಷದ ನಾಯಕರಿಗಿಂತ ಹೆಚ್ಚು ಬೇಡಿಕೆ ಇರುವವರು ಎಂಎನ್‌ಎಸ್ ನಾಯಕ ರಾಜ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಧನಂಜಯ ಮುಂಢೆ.
ಸಿಡಿಗುಂಡಿನಂತಹ ಭಾಷಣಕ್ಕೆ ಪ್ರಸಿದ್ಧರಾಗಿರುವ ರಾಜ್ ಠಾಕ್ರೆ ಅವರು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಚವಾಣ್ ಮತ್ತು ಹಿರಿಯ ಮುಖಂಡ ಸುಶೀಲ್ ಕುಮಾರ್ ಶಿಂಧೆ ಪರವಾಗಿ ನಾಂದೇಡ್ ಮತ್ತು ಸೋಲಾಪುರದಲ್ಲಿ ಪ್ರಚಾರ ನಡೆಸುವ ನಿರೀಕ್ಷೆ ಇದೆ. ಮುಂಬೈ ನಗರದ ಕೆಲವು ಕ್ಷೇತ್ರಗಳಲ್ಲಿಯೂ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡಲಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಎರಡು ಮತ್ತು ನಾಲ್ಕನೇ ಹಂತಗಳಲ್ಲಿ ಮತದಾನ ಆಗಲಿದೆ.
ನಾಗಪುರ, ಗಡ್‌ಚಿರೋಲಿ, ವಾರ್ಧಾ ಸೇರಿ ಹತ್ತು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬರಬೇಕು ಎಂದು ಮಹಾರಾಷ್ಟ್ರ ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮುಂಢೆ ಅವರನ್ನು ಕಾಂಗ್ರೆಸ್ ಕೇಳಿಕೊಂಡಿದೆ ಎಂದು ಮೂಲಗಳು ಹೇಳಿವೆ.ಅತ್ಯುತ್ತಮ ಮಾತುಗಾರರಾಗಿರುವ ನಾಯಕರು ಕಾಂಗ್ರೆಸ್‌ನಲ್ಲಿ ಕಡಿಮೆ ಇದ್ದಾರೆ. ರಾಜ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡುತ್ತಿರುವ ಆರೋಪಗಳು ಜನರನ್ನು ಆಕರ್ಷಿಸುತ್ತಿವೆ. ಹಾಗಾಗಿ ಅವರನ್ನು ಪ್ರಚಾರಕ್ಕೆ ನೆಚ್ಚಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.ಮುಂಢೆ ಅವರೂ ಉತ್ತಮ ಮಾತುಗಾರ. ಈ ಇಬ್ಬರ ಮಾತಿನ ಮೂಲಕ ಬಿಜೆಪಿ ವಿರುದ್ಧದ ವಿಚಾರಗಳನ್ನು ಮತದಾರರಿಗೆ ತಲುಪಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.