ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಿಗಜಿಣಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಪಕ್ಷದ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅಪಾರ ಸಂಖ್ಯೆಯ ಮುಖಂಡರು, ಕಾರ್ಯಕರ್ತರು ಸಾಕ್ಷಿಯಾದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಆರಾಧ್ಯದೈವ ಸಿದ್ಧೇಶ್ವರ ದೇಗುಲದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಶೇಷ ಪೂಜೆ ಸಲ್ಲಿಸಿದರು. ಇಲ್ಲಿಂದಲೇ ಕಾರ್ಯಕರ್ತರ ಬೃಹತ್ ಮೆರವಣಿಗೆ ಆರಂಭವಾಯ್ತು.
ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ಚೌಕ್‌ನಲ್ಲಿನ ಮಹಾತ್ಮರ ಪ್ರತಿಮೆಗಳಿಗೆ ಬಿಜೆಪಿ ಮುಖಂಡರು ಮಾಲಾರ್ಪಣೆ ಮಾಡಿದರು. ಮಂಗಳವಾದ್ಯಗಳು ಮೊಳಗಿದವು. ಹಾದಿಯುದ್ದಕ್ಕೂ ಕಲಾ ತಂಡಗಳು ಪ್ರದರ್ಶನ ನೀಡಿದವು.
ಮೆರವಣಿಗೆಯುದ್ದಕ್ಕೂ ಕೇಸರಿ ರಾರಾಜಿಸಿತು. ಬಿಜೆಪಿ ಬಾವುಟಗಳು ಹಾರಾಡಿದವು. ಜಿಲ್ಲಾಧಿಕಾರಿ ನಿವಾಸದ ಮುಂಭಾಗ ಬಹಿರಂಗ ಸಮಾವೇಶವೂ ನಡೆಯಿತು. ರಸ್ತೆಯ ಇಕ್ಕೆಲಗಳ ಬೃಹತ್ ಮರಗಳ ನೆರಳಿನಲ್ಲಿ ನಿಂತ ಕಾರ್ಯಕರ್ತರು ನಾಯಕ ಈಶ್ವರಪ್ಪ ಭಾಷಣ ಆಲಿಸಿದರು.
ಎರಡು ತಾಸಿಗೂ ಹೆಚ್ಚಿನ ಅವಧಿ ಮೋದಿ, ಮೋದಿ ಘೋಷಣೆಗಳು ಮುಗಿಲು ಮುಟ್ಟಿದವು. ಅಪರೂಪಕ್ಕೊಮ್ಮೆ ಎಂಬಂತೆ ಜಿಗಜಿಣಗಿ ಪರ ಘೋಷಣೆಗಳು ಆಗಾಗ್ಗೆ ಮೊಳಗುತ್ತಿದ್ದವು. ಅಸಂಖ್ಯಾತ ಕಾರ್ಯಕರ್ತರ ಕೊರಳನ್ನು ಕಮಲದ ಶಲ್ಯ ಅಲಂಕರಿಸಿತ್ತು.
ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು, ಮುಖಂಡರು, ಶಾಸಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಬಾಯಾರಿಕೆ ನೀಗಿಸಲಿಕ್ಕಾಗಿಯೇ ದಾರಿಯುದ್ದಕ್ಕೂ ಕುಡಿಯುವ ನೀರಿನ ಪ್ಯಾಕೇಟ್ ವಿತರಿಸಲಾಯಿತು.
ಶಾಸಕರಾದ ಗೋವಿಂದ ಕಾರಜೋಳ, ಎ.ಎಸ್.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ, ದುರ್ಯೋಧನ ಐಹೊಳಿ, ಅರುಣ ಶಹಾಪುರ, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನಾರ, ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಮತ್ತಿತರ ಪ್ರಮುಖರು ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಮುಸ್ಲಿಮರು ಮತ ಹಾಕ್ತಾವರೆ..!
ಜಿಲ್ಲಾಧಿಕಾರಿ ನಿವಾಸದ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ‘ಮೇ 23ರ ನಂತರ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ನೆಗೆದು ಬಿದ್ದುಹೋಗಲಿದೆ’ ಎಂದು ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್, ಜೆಡಿಎಸ್‌ನವರು ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ರಮೇಶ ಜಿಗಜಿಣಗಿಗೆ ಮತ ಚಲಾಯಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ದೇವೇಗೌಡರಿಗೆ ಒಂದು ವೇಳೆ 14 ಮಕ್ಕಳಿದ್ದರೆ, ಅವರ ಎಲ್ಲ ಮಕ್ಕಳು, ಸೊಸೆಯಂದಿರನ್ನು 28 ಕ್ಷೇತ್ರದ ಚುನಾವಣಾ ಕಣಕ್ಕಿಳಿಸುತ್ತಿದ್ದರು. ಕಾಂಗ್ರೆಸ್ ಸಹ ಇದರಿಂದ ಹೊರತಾಗಿಲ್ಲ. ರಾಜ್ಯ, ರಾಷ್ಟ್ರವನ್ನು ಇವರ ವಂಶಕ್ಕೆ ಬರೆದುಕೊಡಲಾಗಿದೆಯಾ ? ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಯತ್ನಾಳ ಮತ್ತೊಮ್ಮೆ ಗೈರು..!
ರಮೇಶ ಜಿಗಜಿಣಗಿ ಜತೆ ವೈಮನಸ್ಸು ಹೊಂದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೂವರೆಗೂ ಚುನಾವಣಾ ಕಣದಲ್ಲಿ ಗೋಚರಿಸಿಲ್ಲ.
ಮಾರ್ಚ್ 28ರಂದು ನಡೆದ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭ, ವಿವಿಧೆಡೆ ನಡೆದಿರುವ ಸಭೆ, ಸಮಾವೇಶ ಸೇರಿದಂತೆ ಮಂಗಳವಾರ ನಡೆದ ನಾಮಪತ್ರ ಸಲ್ಲಿಕೆ ಸಮಾರಂಭದಿಂದಲೂ ದೂರ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಯತ್ನಾಳ ಜತೆಯಲ್ಲೇ ಅವರ ಯಾವೊಬ್ಬ ಬೆಂಬಲಿಗರು ನಾಮಪತ್ರ ಸಲ್ಲಿಕೆ ಸಂದರ್ಭ ಗೋಚರಿಸದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಹೆಂಡ್ತಿ ನಿಲ್ಸೋವ್ನೇ; ಟೀಕಿಸ್ತ್ವಾನೆ ಅಷ್ಟೇ..!
‘ಹೆಂಡ್ತಿನಾ ಚುನಾವಣೆಗೆ ನಿಲ್ಸೋವ್ನೇ. ಅದಕ್ಕೆ ವಿರೋಧಿಸಬೇಕು ಅಂಥ ನನ್ನನ್ನು ಟೀಕಿಸ್ತ್ವಾನೆ. ಅಷ್ಟ್ ಬಿಟ್ರೇ ಬೇರೆ ಇನ್ನೇನಿಲ್ಲ’ ಎಂದು ನಾಮಪತ್ರ ಸಲ್ಲಿಸಿದ ಬಳಿಕ ರಮೇಶ ಜಿಗಜಿಣಗಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಟೀಕೆಗೆ ಪ್ರತ್ಯುತ್ತರ ನೀಡಿದರು.
‘ಜಿಗಜಿಣಗಿ ಸಾಧನೆ ಶೂನ್ಯ ಎಂದು ಹೇಳೋ ಗಂಡ್ಸು ಮಕ್ಕಳೇ ನನ್ನ ಜತೆ ಬನ್ನಿ. ಏನೇನು ಅಭಿವೃದ್ಧಿ ಮಾಡಿರುವೆ ಎಂಬುದನ್ನು ನಿಮಗೆ ತಿಳಿಸುವೆ’ ಎಂದು ಮಾಧ್ಯಮದವರ ಬಳಿ ಖಾರವಾಗಿ ಪ್ರತಿಕ್ರಿಯಿಸಿದರು.
‘ಎಷ್ಟು ಸಲ ಅಂಥ ಯತ್ನಾಳ ಗೈರು, ಪ್ರಚಾರಕ್ಕೆ ಬರಲ್ವಾ ಅಂಥ ಕೇಳ್ತೀರಿ. ನನಗೂ ಹೇಳಿ ಹೇಳಿ ಸಾಕಾಗೈತಿ. ಅವ ನನ್ನ ಮಿತ್ರ. ಪ್ರಚಾರಕ್ಕೂ ಬರ್ತ್ವಾರೆ’ ಎಂದು ಜಿಗಜಿಣಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಮೈತ್ರಿಯಲ್ಲಿ ತಿಕ್ಕಾಟ: ಈಶ್ವರಪ್ಪ ಟೀಕೆ
‘ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಮೇ.23ರ ನಂತರ ರಾಜ್ಯ ಸರ್ಕಾರವೇ ನೆಗೆದು ಬಿದ್ದು ಹೋಗುತ್ತದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
‘ಬಿಜೆಪಿ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಮತದಾನದ ದಿನ ಸಮೀಪಿಸಿದರೂ ದೋಸ್ತಿಯಲ್ಲಿ ಗೊಂದಲ ಬಗೆಹರಿಯಲ್ಲ’ ಎಂದು ಮಂಗಳವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ತಿಳಿಸಿದರು.
‘ಮಂಡ್ಯ, ಹಾಸನ, ಮೈಸೂರು, ತುಮಕೂರು ಕ್ಷೇತ್ರಗಳಲ್ಲಿ ಅವರವರಲ್ಲೇ ಕಚ್ಚಾಟ ನಡೆದಿದೆ. ಇದು ಬಗೆಹರಿಯದ ರಾಮಾಯಣ. ಮತದಾನದ ಸಂದರ್ಭವೂ ಮುಂದುವರೆಯಲಿದೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಅಂದರೇ ಸರ್ಕಾರ. ನಾನು ದೋಸ್ತಿ ಸರ್ಕಾರ ನೆಗೆದು ಬೀಳುತ್ತೆ ಎಂದು ಹೇಳಿದ್ದೇನೆ ಹೊರತು, ಸಿ.ಎಂ. ನೆಗೆದು ಬೀಳ್ತಾರೆ ಎಂದು ವೈಯುಕ್ತಿಕವಾಗಿ ಹೇಳಿಲ್ಲ’ ಎಂದು ಇದೇ ಸಂದರ್ಭ ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.