ADVERTISEMENT

ಸಿಕ್ಕಿಂ ವಿಧಾನಸಭೆ: ತೀವ್ರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 28 ಮೇ 2019, 11:24 IST
Last Updated 28 ಮೇ 2019, 11:24 IST
...
...   

ಗ್ಯಾಂಗ್ಟಕ್: ಸಿಕ್ಕಿಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಆಡಳಿತಾರೂಢ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ (ಎಸ್‌ಡಿಎಫ್‌) ಮತ್ತು ವಿರೋಧ ಪಕ್ಷ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ವಿರುದ್ಧತೀವ್ರ ಹಣಾಹಣಿ ನಡೆದಿದೆ. ಎಸ್‌ಕೆಎಂ ಸರಳ ಬಹುಮತ ಗಳಿಸುವತ್ತ ಹೆಜ್ಜೆ ಇಟ್ಟಿದೆ.

32 ವಿಧಾನಸಭಾ ಕ್ಷೇತ್ರಗಳಿರುವ ಸಿಕ್ಕಿಂ ರಾಜ್ಯದಲ್ಲಿ ಅಧಿಕಾರಕ್ಕೇರಲು ಸರಳ ಬಹುಮತ 17 ಸ್ಥಾನ ಗಳಿಸಬೇಕು.ಎಸ್‌ಡಿಎಫ್‌ನ ಪವನ್‌ ಕುಮಾರ್ ಚಾಮ್ಲಿಂಗ್‌ ಅವರು ಆರನೇ ಬಾರಿ ಮುಖ್ಯಮಂತ್ರಿ ಆಗುವ ಕನಸನ್ನು ಇಟ್ಟುಕೊಂಡಿದ್ದರು. ಆರಂಭದಲ್ಲಿ ಸಮಬಲದ ಸ್ಥಾನಗಳನ್ನು ಎರಡೂ ಪಕ್ಷಗಳು ಪಡೆದಿದ್ದವು. ಆದರೆ ಗುರುವಾರ ಸಂಜೆ ಸಿಕ್ಕಿಂನ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಯಿತು.ಎಸ್‌ಕೆಎಂ ಐದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಎಸ್‌ಡಿಎಫ್‌ ಮುಖ್ಯಸ್ಥ ಪವನ್ ಚಾಮ್ಲಿಂಗ್‌ ಅವರು ಪೊಕ್ಲಾಕ್‌ ಕಮರಂಗ್‌ ಮತ್ತು ನಾಮ್ಚಿ ಚಾಕುಂಗ್‌ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ, ಎರಡರಲ್ಲೂ ಜಯಿಸಿದರು. ಎಸ್‌ಕೆಎಂ ಮುಖ್ಯಸ್ಥ ಪಿ.ಎಸ್‌.ಗೋಲಾಯ್‌ ಪುತ್ರ ಆದಿತ್ಯ ಗೋಲಾಯ್‌ ಸೊರೆಂಗ್‌ ಚಾಕುಂಗ್‌ನಲ್ಲಿ ಗೆದ್ದರು.

ADVERTISEMENT

ಚುನಾವಣಾ ಆಯೋಗದ ಲೆಕ್ಕಾಚಾರದಂತೆ ಎಸ್‌ಡಿಎಫ್‌ಶೇ 46.8ರಷ್ಟು ಮತ ಗಳಿಸಿದ್ದರೆ, ಎಸ್‌ಕೆಎಂ ಶೆ 47.4ರಷ್ಟು ಮತ ಗಳಿಸಿದೆ.

ಬೈಚುಂಗ್‌ ಭುಟಿಯಾ ನೇತೃತ್ವದ ಹಮ್ರೊ ಸಿಕ್ಕಿಂ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್‌ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಖಾತೆ ತೆರೆಯಲು ವಿಫಲವಾಗಿವೆ. ಏಪ್ರಿಲ್‌ 11ರಂದು ನಡೆದ ಒಂದೇ ಹಂತದ ಚುನಾವಣೆಯಲ್ಲಿ 32 ಕ್ಷೇತ್ರಗಳಿಂದ 150 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಭಾರತದ ಮೊದಲ ಸಂಪೂರ್ಣ ನಿರ್ಮಲ ರಾಜ್ಯ ಎಂಬ ಶ್ರೇಯ ಸಿಕ್ಕಿಂನದು. 1975ರಲ್ಲಿ ಭಾರತ ಒಕ್ಕೂಟಕ್ಕೆ ಸೇರಿದ ಸಿಕ್ಕಿಂನಲ್ಲಿ‍ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ. ಪಶ್ವಿಮ ಬಂಗಾಳದಲ್ಲಿಪ್ರತ್ಯೇಕ ಗೂರ್ಖಾಲ್ಯಾಂಡ್‌ ರಾಜ್ಯದ ಬೇಡಿಕೆಗಾಗಿ ಹೋರಾಟ ತೀವ್ರವಾದಾಗ ಸರಕು ಸರಂಜಾಮುಗಳು ಸಿಕ್ಕಿಂ ತಲುಪುತ್ತಿರಲಿಲ್ಲ. ಆಗ ಮುಖ್ಯಮಂತ್ರಿ ಪವನ್‌ ಕುಮಾರ್ ಚಾಮ್ಲಿಂಗ್‌ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಮೇಲೆ ಮತ್ತೆ ಸಿಕ್ಕಿಂ ಸುದ್ದಿಯಾದದ್ದು ಚೀನೀ ಸೈನಿಕರು ದೋಕಲಾದಲ್ಲಿ ನೆಲೆಯೂರಿದಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.