ADVERTISEMENT

ರಾಜಕೀಯ ಪ್ರವೇಶ ದ್ವೇಷ ಸಾಧನೆಗಲ್ಲ: ಸುಮಲಾತಾ ಅಂಬರೀಷ್

ಉದಯು ಯು.
Published 25 ಏಪ್ರಿಲ್ 2019, 6:24 IST
Last Updated 25 ಏಪ್ರಿಲ್ 2019, 6:24 IST
ಸುಮಲತಾ
ಸುಮಲತಾ   

* ತಾವು ರಾಜಕೀಯ ಪ್ರವೇಶ ಮಾಡುತ್ತೀರಿ ಎಂಬ ಸುದ್ದಿ ಇದೆಯಲ್ಲ, ನಿಜವೇ?

ರಾಜಕೀಯ ಪ್ರವೇಶಿಸುವಂತೆ ತುಂಬಾ ಒತ್ತಡ ಇದೆ. ಮಂಡ್ಯದಿಂದ ಪ್ರತಿನಿತ್ಯವೂ ಜನ ನಮ್ಮ ಮನೆಗೆ ಬರುತ್ತಾರೆ. ‘ಅಂಬರೀಷ್‌ ನಿಧನದಿಂದ ಸೃಷ್ಟಿಯಾದ ಶೂನ್ಯವನ್ನು ನೀವೇ ತುಂಬಬೇಕು’ ಎಂದು ಒತ್ತಾಯ ಮಾಡುತ್ತಾರೆ. ರಾಜಕೀಯಕ್ಕೆ ಧುಮುಕುವುದು ಒಂದು ದೊಡ್ಡ ನಿರ್ಧಾರ. ಏಕಾಏಕಿ ತೀರ್ಮಾನ ಕೈಗೊಳ್ಳಲಾಗದು.

* ರಾಜಕೀಯ ಪಕ್ಷಗಳವರು ನಿಮ್ಮನ್ನು ಸಂಪರ್ಕಿಸಿದ್ದಾರೆಯೇ?

ADVERTISEMENT

ಅಂಬರೀಷ್‌ ಕಾಂಗ್ರೆಸ್‌ ಪಕ್ಷದಲ್ಲಿದ್ದರು. ಆದ್ದರಿಂದ ಮಂಡ್ಯದ ಕಾಂಗ್ರೆಸ್‌ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಮನೆಗೆ ಬರುತ್ತಿದ್ದಾರೆ.

* ಅಂಬರೀಷ್‌ ಕೊನೆಯ ದಿನಗಳಲ್ಲಿ ಕಾಂಗ್ರೆಸ್‌ ಜೊತೆ ಮುನಿಸಿಕೊಂಡು, ಜೆಡಿಎಸ್‌ಗೆ ಹತ್ತಿರವಾಗಿದ್ದರು. ನಿಮ್ಮ ರಾಜಕೀಯ ಪ್ರವೇಶಕ್ಕೆ ಈ ವಿಚಾರದಿಂದ ಸಮಸ್ಯೆ ಆದೀತೇ?

ಅಯ್ಯೋ! ಅಷ್ಟು ದೂರದವರೆಗೆ ಯೋಚಿಸಿಲ್ಲ. ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದೆಯೇ ಎಂಬ ಸ್ಪಷ್ಟತೆ ಇಲ್ಲ. ರಾಜಕೀಯ ಪ್ರವೇಶಿಸಿದರೆ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ತೀರ್ಮಾನಿಸುವ ಹೊಣೆಯನ್ನು ಮಂಡ್ಯದ ಜನರಿಗೇ ಬಿಡುತ್ತೇನೆ.

* ನಿಮ್ಮ ಮಗ ಅಭಿಷೇಕ್‌ಗೆ ಟಿಕೆಟ್‌ ಕೊಡಬೇಕು ಎಂದು ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಅನ್ನು ಒತ್ತಾಯಿಸಿದ್ದಾರಂತೆ?

ಅಭಿಷೇಕ್‌ ಇನ್ನೂ ಸಿನಿಮಾದಲ್ಲಿ ಭವಿಷ್ಯ ಕಂಡುಕೊಳ್ಳಬೇಕು. ರಾಜಕೀಯಕ್ಕೆ ಬರುವ ಆಸಕ್ತಿ ಇದ್ದರೂ ಅದಕ್ಕೆ ಇನ್ನೊಂದಿಷ್ಟು ಕಾಲ ಕಾಯಬೇಕು. ಇನ್ನಷ್ಟು ಅನುಭವ ಆಗಬೇಕು.

* ಜೆಡಿಎಸ್‌ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಅಥವಾ ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಹೇಗೆ ಎದುರಿಸುತ್ತೀರಿ?

ನಾನು ರಾಜಕೀಯ ಪ್ರವೇಶಿಸಿದರೂ ಯಾರನ್ನೋ ಸೋಲಿಸುವ ಅಥವಾ ದ್ವೇಷ ಸಾಧಿಸುವ ಉದ್ದೇಶದಿಂದಲ್ಲ. ಮಂಡ್ಯದ ಜೊತೆ ನಮ್ಮ ಕುಟುಂಬಕ್ಕೆ ಇರುವ ಗಾಢವಾದ ಸಂಬಂಧ ಕಳೆದುಕೊಳ್ಳುವ ಇಚ್ಛೆ ಇಲ್ಲ. ಇನ್ನು ನಿಖಿಲ್‌ ಹಾಗೂ ಅಭಿಷೇಕ್‌ ಒಳ್ಳೆಯ ಸ್ನೇಹಿತರು. ಪ್ರಜ್ವಲ್‌ ಸಹ ಆಗಾಗ ನಮ್ಮ ಮನೆಗೆ ಬರುತ್ತಾನೆ.

‘ದೊಡ್ಡ ಗೌಡರ’ ಜೊತೆ ಅಂಬರೀಷ್‌ ಅವರಿಗಿದ್ದ ಸಂಬಂಧ ಎಂಥದ್ದೆಂದು ಎಲ್ಲರಿಗೂ ಗೊತ್ತಲ್ಲ? ನಾನು ರಾಜಕೀಯ ಪ್ರವೇಶಿಸಬೇಕಾದರೆ ಎಲ್ಲರ ಬೆಂಬಲವೂ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.