ADVERTISEMENT

ಬಿಜೆಪಿ ಸೇರಿದ ಸನ್ನಿ ಡಿಯೋಲ್‌; ಗುರುದಾಸ್‌ಪುರದಿಂದ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:01 IST
Last Updated 9 ಮೇ 2019, 18:01 IST
ಸನ್ನಿ ಡಿಯೋಲ್‌
ಸನ್ನಿ ಡಿಯೋಲ್‌   

ನವದೆಹಲಿ (ಪಿಟಿಐ): ಬಾಲಿವುಡ್‌ ನಟ ಸನ್ನಿ ಡಿಯೋಲ್‌ ಬಿಜೆಪಿಗೆ ಮಂಗಳವಾರ ಸೇರ್ಪಡೆಯಾಗಿದ್ದಾರೆ. ಅವರಿಗೆ ಪಂಜಾಬ್‌ನ ಗುರುದಾಸ್‌ಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.

ಗುರುದಾಸ್‌ಪುರದಲ್ಲಿ ಹಾಲಿ ಸಂಸದ, ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್ ಜಕ್ಕರ್ ವಿರುದ್ಧ ಡಿಯೋಲ್ ಸೆಣಸಲಿದ್ದಾರೆ. ಈ ಕ್ಷೇತ್ರವನ್ನು ಬಾಲಿವುಡ್ ನಟ ವಿನೋದ್ ಖನ್ನಾ ಅವರು ಪ್ರತಿನಿಧಿಸಿದ್ದರು. 2017ರಲ್ಲಿ ವಿನೋದ್ ಖನ್ನಾ ನಿಧನದ ಬಳಿಕ ನಡೆದ ಉಪಚುನಾವಣೆಯಲ್ಲಿ ಸುನೀಲ್ ಜಕ್ಕರ್ ಗೆದ್ದು ಬಂದಿದ್ದರು.

ಈ ಕ್ಷೇತ್ರಕ್ಕೆ ವಿನೋದ್ ಖನ್ನಾ ಅವರ ಪುತ್ರ ಅಕ್ಷಯ್ ಖನ್ನಾ ಅವರ ಹೆಸರು ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಡಿಯೋಲ್ ಅವರು ಪುಣೆ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ADVERTISEMENT

ಡಿಯೋಲ್ ತಂದೆ ಧರ್ಮೇಂದ್ರ ಅವರು 2004ರಲ್ಲಿ ಬಿಕಾನೇರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ತಾಯಿ ಹೇಮಾಮಾಲಿನಿ ಅವರು ಮಥುರಾದ ಹಾಲಿ ಸಂಸದರಾಗಿದ್ದು, ಈ ಬಾರಿ ಅವರನ್ನೇ ಮತ್ತೆ ಕಣಕ್ಕೆ ಇಳಿಸಲಾಗಿದೆ.

ಮಂಗಳವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರ ಸಮ್ಮುಖದಲ್ಲಿ ಸನ್ನಿ ಡಿಯೋಲ್ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದರು.

‘ಅಟಲ್‌ಜಿ ಅವರ ಜೊತೆ ನನ್ನ ತಂದೆ (ನಟ ಧರ್ಮೇಂದ್ರ) ಹೊಂದಿದ್ದಂಥ ಬಾಂಧವ್ಯವನ್ನೇ ನಾನು ಮೋದೀಜಿ ಅವರ ಜೊತೆ ಹೊಂದಲು ಬಯಸುತ್ತೇನೆ. ಈ ಕುಟುಂಬಕ್ಕಾಗಿ (ಬಿಜೆಪಿ) ನಾನು ಏನೇನು ಮಾಡಬಲ್ಲೆನೋ ಅದೆಲ್ಲವನ್ನೂ ಮಾಡುತ್ತೇನೆ. ಹೆಚ್ಚು ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಪಕ್ಷ ಸೇರ್ಪಡೆಯ ನಂತರ ಸನ್ನಿ ಹೇಳಿದ್ದರು.

ಸಂಸದೆ ಕಿರಣ್ ಖೇರ್ ಅವರನ್ನು ಚಂಡಿಗಡ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.