ADVERTISEMENT

ವಾಕ್ಸಮರ ತಾರಕಕ್ಕೆ; ನಿಂದನೆಗಿಳಿದ ಬೆಂಬಲಿಗರು..!

ನಾಮಪತ್ರ ವಾಪಸ್ ಪಡೆಯಲು ಏ.8ರ ಸೋಮವಾರ ಅಂತಿಮ ದಿನ; ಬಿರುಸುಗೊಂಡ ಚುನಾವಣಾ ಕಣ

ಡಿ.ಬಿ, ನಾಗರಾಜ
Published 30 ಏಪ್ರಿಲ್ 2019, 16:12 IST
Last Updated 30 ಏಪ್ರಿಲ್ 2019, 16:12 IST

ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಯಕರ ನಡುವೆ ನಡೆದಿದ್ದ ವಾಕ್ಸಮರ, ಇದೀಗ ಬೆಂಬಲಿಗರ ಮೂಲಕ ವೈಯಕ್ತಿಕ ನಿಂದನೆಗಿಳಿದಿದೆ.

ಬಿಸಿಲ ಝಳ ಹೆಚ್ಚಿದಂತೆ ಬೈಗುಳ ವಿನಿಮಯವೂ ತಾರಕಕ್ಕೇರುತ್ತಿದೆ. ಬಿಸಿಲ ಬೇಗೆಗೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಅಷ್ಟಿರದಿದ್ದರೂ; ಮಾಧ್ಯಮಗಳ ಮೂಲಕ ಪರಸ್ಪರ ಕೆಸರೆರಚಾಟದ ಬಿರುಸು ಹೆಚ್ಚಿದೆ.

ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್‌ ಪಡೆಯುವಿಕೆ ಸೋಮವಾರ (ಏ.8) ಪೂರ್ಣಗೊಳ್ಳಲಿದೆ. ಇದಕ್ಕೂ ಮುನ್ನವೇ ಅಖಾಡ ರಂಗೇರಿದೆ. ಬಹಿರಂಗ ಸಮಾವೇಶ, ಪ್ರಚಾರ ಸಭೆಗಳಲ್ಲಿ ಇನ್ಯಾವ ಪರಿಯ ಮಾತುಗಳು ವಿನಿಮಯವಾಗಲಿವೆ ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ನಾಗಠಾಣ ಶಾಸಕ ದೇವಾನಂದ ಚವ್ಹಾಣ ‘ಜಿಗಜಿಣಗಿ ಭಯೋತ್ಪಾದಕ’ ಎಂದು ಜರಿದರೆ, ಕಾಂಗ್ರೆಸ್ ಮುಖಂಡರು ಸಹ ರಮೇಶ ಜಿಗಜಿಣಗಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಜಿಗಜಿಣಗಿ ‘ನಾನೊಬ್ಬ ದಲಿತ ಮುಖಂಡ. ನನ್ನ ರಾಜಕೀಯ ಜೀವನ ಮುಗಿಸಲು ಎಲ್ಲರೂ ಒಂದಾಗಿ ವಾಗ್ಬಾಣ ಹೂಡಿದ್ದಾರೆ’ ಎನ್ನುವ ಮೂಲಕ ಜಾಣ್ಮೆಯ ರಾಜಕೀಯ ನಡೆ ಅನುಸರಿಸಿದ್ದರು.

ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಗೃಹ ಸಚಿವ ಎಂ.ಬಿ.ಪಾಟೀಲಗೆ ನೀರಾವರಿಯ ಸವಾಲು ಹಾಕಿದ್ದರು. ಇದೇ ಸಂದರ್ಭ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಬಗ್ಗೆಯೂ ಕಟಕಿಯಾಡಿದ್ದರು. ಈ ಗೋಷ್ಠಿ ಮುಗಿದ ಎರಡ್ಮೂರು ತಾಸಿನೊಳಗೆ, ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಪತ್ರಿಕಾ ಪ್ರಕಟಣೆಯೂ ಹೊರಬಿದ್ದಿತ್ತು. ಅದರಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಬಳಕೆಯ ಜಾಣ್ಮೆಯೂ ಮೆರೆದಿತ್ತು.

ಮುಂದುವರೆದ ಭಾಗವಾಗಿ ಗೃಹ ಸಚಿವರ ಬೆಂಗಲಿಗ ಪಡೆ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ, ನಡಹಳ್ಳಿ ವಿರುದ್ಧ ನಿಂದನೆಯ ಮಹಾಪೂರವನ್ನೇ ಹರಿಸಿತು. ಇದಕ್ಕೆ ಪ್ರತಿಯಾಗಿ ನಡಹಳ್ಳಿ ಬೆಂಬಲಿಗರು ಸೋಮವಾರ (ಏ.8) ಪತ್ರಿಕಾಗೋಷ್ಠಿ ನಡೆಸಲಿದ್ದು, ಕಟು ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ಗೊತ್ತಾಗಿದೆ.

ಆಯೋಗಕ್ಕೆ ದೂರು; ಹೈಕೋರ್ಟ್‌ಗೆ ಮೊರೆ

‘ನಾಮಪತ್ರ ಪರಿಶೀಲನೆ ಸಂದರ್ಭ ಜಾತಿ ಪ್ರಮಾಣ ಪತ್ರ ಸರಿಯಿಲ್ಲ ಎಂಬ ಕಾರಣ ನೀಡಿ ಪಕ್ಷೇತರಳಾಗಿ ಕಣಕ್ಕಿಳಿದಿದ್ದ ನನ್ನ ನಾಮಪತ್ರವನ್ನು ತಿರಸ್ಕೃತಗೊಳಿಸಲಾಗಿದೆ. ಇದರ ವಿರುದ್ಧ ಹೈಕೋರ್ಟ್‌ ಮೊರೆ ಹೋಗುವ ಜತೆ, ಕೇಂದ್ರ ಚುನಾವಣಾ ಆಯೋಗಕ್ಕೂ ಸೋಮವಾರ ದೂರು ದಾಖಲಿಸುವೆ’ ಎಂದು ಬೆಂಗಳೂರಿನ ಎಂ.ಇ.ಸುಜಾತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘2012ರಲ್ಲಿ ತಹಶೀಲ್ದಾರ್ ನನ್ನ ಬೇಡ ಜಂಗಮ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ರದ್ದುಗೊಳಿಸಿದ್ದರು. ಇದನ್ನು ಹೈಕೋರ್ಟ್‌ ಮಾನ್ಯ ಮಾಡಿಲ್ಲ. ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನನ್ನ ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ತಕರಾರಿನ ವಾದ ಸಲ್ಲಿಸಲು ಅವರಿಗೆ ಹೆಚ್ಚಿನ ಅವಕಾಶವನ್ನು ಚುನಾವಣಾಧಿಕಾರಿ ನೀಡಿದ್ದರು.’

‘ಆದರೆ ಸಮರ್ಥಿಸಿಕೊಳ್ಳಲು ನನಗೆ ಹೆಚ್ಚಿನ ಸಮಯವನ್ನೇ ನೀಡಲಿಲ್ಲ. ದಾಖಲಾತಿ ಪರಿಶೀಲಿಸಲಿಲ್ಲ. ಚುನಾವಣಾಧಿಕಾರಿ ಹೈಕೋರ್ಟ್‌ ಆದೇಶ ಉಲ್ಲಂಘಿಸಿ, ನನಗೆ ಅನ್ಯಾಯ ಎಸಗಿದ್ದಾರೆ. ಇದನ್ನು ಖಂಡಿಸಿ ಸೋಮವಾರ ಬೆಂಗಳೂರು ಹೈಕೋರ್ಟ್‌ಗೆ ಮನವಿ ಸಲ್ಲಿಸುವೆ’ ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಾಗಿ ಜಿಲ್ಲಾ ಚುನಾವಣಾಧಿಕಾರಿ ಸಂಪರ್ಕಕ್ಕೆ ಯತ್ನಿಸಿದರೂ ಲಭ್ಯವಾಗಲಿಲ್ಲ.

15 ನಾಮಪತ್ರ ಕ್ರಮಬದ್ಧ; 2 ತಿರಸ್ಕೃತ

‘ಸ್ಪರ್ಧೆ ಬಯಸಿ 17 ಮಂದಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾ- ಎ.ಪಿ.ಐ ಪಕ್ಷದ ರಮೇಶ ಹಳ್ಳಿ ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಇ.ಸುಜಾತಾ ನಾಮಪತ್ರ ತಿರಸ್ಕೃತಗೊಂಡಿವೆ. ಉಳಿದ 15 ಅಭ್ಯರ್ಥಿಗಳ ನಾಮಪತ್ರ ಸಿಂಧುತ್ವಗೊಂಡಿವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಉಮೇದುವಾರಿಕೆ ಹಿಂಪಡೆಯಲು ಸೋಮವಾರ ಅಂತಿಮ ದಿನ. ನಾಮಪತ್ರ ಪರಿಶೀಲನೆ ಬಳಿಕ ಬಿಜೆಪಿ, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು, ಅವರ ಬೆಂಬಲಿಗರು ಕಣದಲ್ಲಿರುವ ಕೆಲ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ಸೇರಿದಂತೆ ಪಕ್ಷೇತರ ಸ್ಪರ್ಧಿಗಳನ್ನು ಮನವೊಲಿಸಿ, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಸರತ್ತು ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ.

ನಿರೀಕ್ಷೆಯಂತೆ ಎಲ್ಲವೂ ಯಶಸ್ವಿಯಾದರೆ, ಎರಡ್ಮೂರು ಅಭ್ಯರ್ಥಿಗಳು ಕಣದಿಂದ ನಾಮಪತ್ರ ವಾಪಸ್‌ ಪಡೆಯಲಿದ್ದಾರೆ ಎಂಬುದು ಮೂಲಗಳಿಂದ ಖಚಿತ ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.