ಕಾರವಾರ: ಚಲನಚಿತ್ರ ನಟಿ ತಾರಾ ಅನುರಾಧಾ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರ ನಗರದಲ್ಲಿ ಶನಿವಾರ ಮತಯಾಚನೆ ಮಾಡಿದರು.
ನಗರದ ಅಂಬೇಡ್ಕರ್ ವೃತ್ತ, ಗ್ರೀನ್ ಸ್ಟ್ರೀಟ್ ಗಳಲ್ಲಿರುವ ವಿವಿಧ ಅಂಗಡಿಗಳಿಗೆ ತೆರಳಿ, ಬಿಜೆಪಿಗೆ ಮತ ನೀಡುವಂತೆ ವ್ಯಾಪಾರಸ್ಥರ ಬಳಿ ಮನವಿ ಮಾಡಿದರು. ಕರಪತ್ರಗಳನ್ನು ಹಂಚಿದರು. ಬಳಿಕ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಕಲ್ಲಂಗಡಿ ಹಣ್ಣು ಖರೀದಿಸಿ ತಿಂದು ಬಾಯಾರಿಕೆ ತಣಿಸಿಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅನಂತಕುಮಾರ ಹೆಗಡೆ ನೂರಕ್ಕೆ ನೂರು ಪ್ರತಿಶತ ಗೆಲ್ಲುತ್ತಾರೆಂಬ ನಂಬಿಕೆ ನಮ್ಮಲ್ಲಿ ಇದೆ. ಅವರಿಗೆ ಪರ್ಯಾಯ ಬೇರೆ ಯಾರೂ ಇಲ್ಲ. ಅವರ ಕೈಯಲ್ಲಿ ಆಗೋದಿಲ್ಲ ಎಂದು ಸವಾಲು ಹಾಕಿದ್ದನ್ನು ಜಿಲ್ಲೆಗೆ ತಂದಿದ್ದಾರೆ. ಅವರಿಗೆ ಯಾರ ಪ್ರಚಾರವೂ ಬೇಡ. ನನ್ನ ಕರ್ತವ್ಯ ಮಾಡಲೇಬೇಕಿದ್ದರಿಂದ ಅವರ ಪ್ರಚಾರಕ್ಕೆ ಬಂದಿದ್ದೀನಿ. ಅವರು ಗೆಲುವಿನಲ್ಲಿ ಯಾವುದೇ ಸಂಶಯ ಇಲ್ಲ’ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಅನಂತಕುಮಾರ ಅವರ ಆಡಳಿತದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಅವರಿಗೆ ಪ್ರಚಾರ ತೆಗೆದುಕೊಳ್ಳಲು ಬರುವುದಿಲ್ಲ. ಸಣ್ಣಸಣ್ಣ ಕೆಲಸ ಮಾಡಿ, ಇದನ್ನು ನಾನು ಮಾಡಿದ್ದೇನೆ ಎಂದು ಹೇಳಿಕೊಳ್ಳುವ ಗುಣ ಅವರಿಗಿಲ್ಲ. ಕರಪತ್ರದಲ್ಲಿ ಅವರು ಮಾಡಿರುವ ಹಾಗೂ ಮುಂದೆ ಮಾಡುವ ಯೋಜನೆಗಳನ್ನು ಮುದ್ರಿಸಿದ್ದೇವೆ. ಅದರಲ್ಲಿ ಯಾವುದೇ ಸುಳ್ಳುಗಳನ್ನು ಮುದ್ರಿಸಿ ತಪ್ಪು ದಾರಿಗೆ ಎಳೆಯುವ ಕೆಲಸ ಬಿಜೆಪಿ ಮಾಡಿಲ್ಲ, ಮಾಡುವುದೂ ಇಲ್ಲ’ಎಂದು ಪ್ರತಿಕ್ರಿಯಿಸಿದರು.
'ಇಲ್ಲಿ ಯಾವುದೇ ಜಾತಿ, ಧರ್ಮದ ಮೇಲೆ ಚುನಾವಣೆ ನಡೆಯುತ್ತಿಲ್ಲ. ರಾಷ್ಟ್ರಕ್ಕಾಗಿ ನಡೆಯುತ್ತಿರುವ ಚುನಾವಣೆ ಇದು. ನರೇಂದ್ರ ಮೋದಿ ಅವರ ಹೆಸರಲ್ಲಿ ಚುನಾವಣೆ ನಡೆಯುತ್ತಿದೆ. ಅವರ ಹೆಸರೇ ನಮ್ಮ ಪಕ್ಷದ ಶಕ್ತಿ. ಸುಭದ್ರ ನಾಯಕತ್ವ ಅವರದ್ದು. ಮಹಾ ಘಟಬಂಧನದಲ್ಲಿ ವಾರಕ್ಕೊಮ್ಮೆ ಪ್ರಧಾನಿಯಾಗುವವರು ನಮಗೆ ಬೇಡ. ಆರ್ಥಿಕವಾಗಿ ಹಿಂದುಳಿದ ದೇಶ ಎಂದು ಮೊದಲು ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಿದ್ದ ದೇಶ ಭಾರತ. ಈಗ ಆರನೇ ಸ್ಥಾನಕ್ಕೆ ಏರಿದೆ ಎಂದರೆ ಅದು ಮೋದಿ ಅವರ ಆಡಳಿತದಲ್ಲಿ' ಎಂದು ಹೇಳಿದರು.
ಶಾಸಕಿ ರೂಪಾಲಿ ನಾಯ್ಕ, ಮುಖಂಡರಾದ ಗಂಗಾಧರ ಭಟ್, ನಯನಾ ನೀಲಾವರಕರ್, ಅನ್ಮೋಲ್ ರೇವಣಕರ್, ಕಿಶನ್ ಕಾಂಬ್ಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.