ADVERTISEMENT

ಬಿಹಾರ: ಲಾಲು, ತೇಜಸ್ವಿ ಯಶಸ್ಸಿನ ಹಿಂದೆ ಹರಿಯಾಣ ಯುವಕನ ತಂತ್ರಗಾರಿಕೆ

ಆರ್‌ಜೆಡಿ ಪ್ರಮುಖರಿಗೆ ಸಂಜಯ್ ಯಾದವ್ ಸಲಹೆಗಾರ

​ಪ್ರಜಾವಾಣಿ ವಾರ್ತೆ
Published 14 ಮೇ 2019, 10:25 IST
Last Updated 14 ಮೇ 2019, 10:25 IST
ತೇಜಸ್ವಿ ಯಾದವ್ (ಎಡ ಚಿತ್ರ) ಮತ್ತು ಸಂಜಯ್ ಯಾದವ್
ತೇಜಸ್ವಿ ಯಾದವ್ (ಎಡ ಚಿತ್ರ) ಮತ್ತು ಸಂಜಯ್ ಯಾದವ್   

ಬಿಹಾರದಲ್ಲಿ 2005ರಲ್ಲಿ ಅಧಿಕಾರ ಕಳೆದುಕೊಂಡ ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಆಮೇಲೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿತ್ತು. ಹಲವು ವರ್ಷಗಳ ಶ್ರಮದ ನಂತರ 2015ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿ ಮೈತ್ರಿ ಪಕ್ಷಗಳ ಜತೆ ಸರ್ಕಾರ ರಚಿಸಿದ್ದು ಈಗ ಇತಿಹಾಸ. ಬಳಿಕ ಜೆಡಿಯು ಕೈಕೊಟ್ಟಿದ್ದರಿಂದ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಆದರೂ ರಾಜ್ಯದಲ್ಲಿ ಹಿಡಿತ ಕಳೆದುಕೊಳ್ಳುತ್ತಾ ಸಾಗಿದ್ದಆರ್‌ಜೆಡಿ ಮತ್ತೆ ಮುನ್ನೆಲೆಗೆ ಬಂದಿದ್ದು ಸುಳ್ಳಲ್ಲ. ಇದರ ಹಿಂದೆ ಕೆಲಸ ಮಾಡಿರುವುದು ಹರಿಯಾಣ ಮೂಲದ ಸಂಜಯ್ ಯಾದವ್ ಎಂಬ ಯುವಕನ ತಂತ್ರಗಾರಿಕೆ.

2015ರ ವಿಧಾಸಭೆ ಚುನಾವಣೆ ಸಮೀಪಿಸುತ್ತಿದ್ದಾಗ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜಾತಿ ಆಧಾರಿತ ಮೀಸಲಾತಿ ಕುರಿತು ಹೇಳಿಕೆ ನೀಡಿದ್ದರು. ‘ದೇಶದಲ್ಲಿ ಈಗ ಇರುವಂತಹ ಮೀಸಲಾತಿ ವ್ಯವಸ್ಥೆಯ ಪುನರ್‌ ವಿಮರ್ಶೆ ಮಾಡಬೇಕಾಗಿದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:ಮೀಸಲಾತಿ ಪುನರ್‌ವಿಮರ್ಶೆ​

ADVERTISEMENT

ತಕ್ಷಣವೇ ಲಾಲು ಮನೆಗೆ ದೌಡಾಯಿಸಿದ ಸಂಜಯ್, ಭಾಗವತ್ ಹೇಳಿಕೆಯನ್ನು ಚುನಾವಣಾ ಅಸ್ತ್ರವಾಗಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಅಷ್ಟೇ ಅಲ್ಲದೆ ಲಾಲು ಅವರ ಟ್ವಿಟರ್‌ ಹ್ಯಾಂಡಲ್‌ನಲ್ಲಿಯೂ ಭಾಗವತ್ ಹೇಳಿಕೆ ವಿರೋಧಿಸಿ ಸಂದೇಶ ಪ್ರಕಟಿಸಿದರು. ಈ ವಿಚಾರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಆರ್‌ಜೆಡಿ ಜಾತಿ ಆಧಾರಿತ ಮೀಸಲಾತಿ ರದ್ದುಪಡಿಸಲುಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಯತ್ನಿಸುತ್ತಿದೆ ಎಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮವಾಗಿ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳನ್ನು ಗಳಿಸಿತು.

ಬಹುರಾಷ್ಟ್ರೀಯ ಕಂಪನಿಯೊಂದರ ಉದ್ಯೋಗಿಯಾಗಿರುವ ಸಂಜಯ್ ಮೊದಲ ಬಾರಿ ಲಾಲು ಪುತ್ರ ತೇಜಸ್ವಿ ಅವರನ್ನು ಭೇಟಿಯಾಗಿದ್ದು ದೆಹಲಿಯಲ್ಲಿ. ಐಪಿಎಲ್‌ ಕ್ರಿಕೆಟ್ ಪಂದ್ಯವೊಂದರ ಸಂದರ್ಭ. ನಂತರ ವಿಧಾನಸಭೆ ಚುನಾವಣೆ ವೇಳೆ ತೇಜಸ್ವಿ ಹಾಗೂ ಆರ್‌ಜೆಡಿ ಪರ ಕೆಲಸ ಮಾಡುವುದಕ್ಕಾಗಿಯೇ ಬಿಹಾರಕ್ಕೆ ಬಂದರು. ಟ್ವಿಟರ್‌ ಹ್ಯಾಂಡಲ್‌ ತೆರೆಯುವಂತೆ ಲಾಲು ಅವರ ಮನವೊಲಿಸಿದ್ದಲ್ಲದೆ, ಪಕ್ಷಕ್ಕೆ ಅಧಿಕೃತ ವೆಬ್‌ಸೈಟ್‌ ರೂಪಿಸಿದರು. ಸಾಮಾಜಿಕ ಮಾಧ್ಯಮ, ಜಾಲತಾಣಗಳ ಮೂಲಕ ತಳಮಟ್ಟದಲ್ಲಿ ಜನರನ್ನು ತಲುಪಲು ನೆರವಾದರು. ಪಕ್ಷದ ಮತ್ತು ಪಕ್ಷದ ಅಭ್ಯರ್ಥಿಗಳ ವರ್ಚಸ್ಸು ವೃದ್ಧಿಗೆ ಸಾಕಷ್ಟು ಶ್ರಮಿಸಿದರು. ಜೆಡಿಯು, ಕಾಂಗ್ರೆಸ್ ಜತೆ ಸೇರಿ ಮಹಾಮೈತ್ರಿ ರೂಪಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.

ಲಾಲು ಅವರ ಸಿದ್ಧಾಂತದಲ್ಲಿ ಗಾಢವಾದ ನಂಬಿಕೆ ಇಟ್ಟಿರುವ ಸಂಜಯ್ ಸದ್ಯ ತೇಜಸ್ವಿ ಯಾದವ್ ಅವರ ಪ್ರಮುಖ ರಾಜಕೀಯ ಸಲಹೆಗಾರರು. ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಪಕ್ಷ ಗರಿಷ್ಠ ಸ್ಥಾನ ಗಳಿಸುವಂತೆ ಮಾಡಲು ಅವಿರತ ಶ್ರಮಿಸುತ್ತಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.