ಹೈದರಾಬಾದ್:ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಲೋಕನೀತಿ–ಸಿಎಸ್‌ಡಿಎಸ್ ಹೆಸರಿನಲ್ಲಿ ‘ಆಂಧ್ರ ಜ್ಯೋತಿ’ ಪತ್ರಿಕೆ ಸೋಮವಾರ ಸುಳ್ಳು ಸಮೀಕ್ಷೆ ಪ್ರಕಟಿಸಿದೆ.
ಆಂಧ್ರದಲ್ಲಿ ನಾವು ಯಾವುದೇ ಚುನಾವಣಾ ಸಮೀಕ್ಷೆ ಮಾಡಿಲ್ಲ ಎಂದುಲೋಕನೀತಿ–ಸಿಎಸ್‌ಡಿಎಸ್ ಸ್ಪಷ್ಟನೆ ನೀಡಿದೆ. ಜತೆಗೆ ಸಂಸ್ಥೆಯ ಹೆಸರಿನಲ್ಲಿ ಸಮೀಕ್ಷೆ ಪ್ರಕಟಿಸಿದ್ದನ್ನು ಖಂಡಿಸಿದೆ.
ಆಡಳಿತಾರೂಢ ತೆಲುಗುದೇಶಂ (ಟಿಡಿಪಿ) ಪಕ್ಷದ ಮುಖವಾಣಿ ಎಂದೇ ಸಾರ್ವಜನಿಕ ವಲಯದಲ್ಲಿ ಬಿಂಬಿತವಾಗಿರುವ‘ಆಂಧ್ರ ಜ್ಯೋತಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಸಮೀಕ್ಷಾ ವರದಿ ಪ್ರಕಾರ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 126–135 ಸ್ಥಾನ ಗಳಿಸಲಿದೆ ಎನ್ನಲಾಗಿದೆ. ವೈಎಸ್‌ಆರ್‌ಸಿಪಿಗೆ 40–50 ಸ್ಥಾನ ದೊರೆಯಲಿದೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ 2–5 ಸ್ಥಾನ ಗಳಿಸಲಿದೆ ಎನ್ನಲಾಗಿದೆ. ರಾಜ್ಯದಲ್ಲಿ 175 ವಿಧಾನಸಭಾ ಕ್ಷೇತ್ರ ಮತ್ತು 25 ಲೋಕಸಭಾ ಕ್ಷೇತ್ರಗಳಿವೆ.
‘ಆಂಧ್ರ ಪ್ರದೇಶದ ಮತಹಂಚಿಕೆ ಪ್ರಮಾಣ ಮತ್ತು ಸೀಟು ಹಂಚಿಕೆಗೆ ಸಂಬಂಧಿಸಿ ನಾವುನಡೆಸಿದ್ದೇವೆ ಎನ್ನಲಾದ ಸಮೀಕ್ಷಾ ವರದಿಯೊಂದು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ನಾವು ಯಾವುದೇ ಸಮೀಕ್ಷೆ ನಡೆಸಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ನಮ್ಮ ಹೆಸರು ಉಲ್ಲೇಖಿಸಿ ಪ್ರಕಟವಾಗಿರುವ ವರದಿಗಳು ದುರುದ್ದೇಶದಿಂದ ಕೂಡಿದ್ದು. ಈ ಸಮೀಕ್ಷಾ ವರದಿಗೆ ನಾವು ಜವಾಬ್ದಾರರಲ್ಲ’ ಎಂದುಲೋಕನೀತಿ–ಸಿಎಸ್‌ಡಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಟಿಡಿಪಿಗೆ 18–22 ಸ್ಥಾನ ಮತ್ತು ವೈಎಸ್‌ಆರ್‌ಪಿಗೆ 3–5 ಸ್ಥಾನ ದೊರೆಯಲಿದೆ ಎಂದೂ ‘ಆಂಧ್ರ ಜ್ಯೋತಿ’ ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಆಂಧ್ರ ಜ್ಯೋತಿ’ಏಕಮುಖವಾದ ವರದಿಗಳನ್ನು ಪ್ರಕಟಿಸುತ್ತಿದೆ ಎಂದು ಆರೋಪಿಸಿರುವವೈಎಸ್‌ಆರ್‌ಪಿ ತನ್ನೆಲ್ಲಾ ಪತ್ರಿಕಾಗೋಷ್ಠಿ, ಸಂವಾದಗಳಿಗೆ ಆ ಪತ್ರಿಕೆಯ ಸಿಬ್ಬಂದಿಗೆ ನಿಷೇಧ ಹೇರಿದೆ.
ಆಂಧ್ರ ಪ್ರದೇಶದಲ್ಲಿ ಏಪ್ರಿಲ್ 11ರಂದು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.