ಬೆಂಗಳೂರು: ‘ಮೊದಲ ಗೆಲುವನ್ನು ತಂದೆಗೆ ಅರ್ಪಣೆ ಮಾಡಿ ಅವರ ಆಶೀರ್ವಾದ ಪಡೆದೆ. ಇದು ಅತ್ಯಂತ ಸವಾಲಿನ ಚುನಾವಣೆಯಾಗಿತ್ತು. ಕಠಿಣ ಶ್ರಮದಿಂದ ಸಾಧಿಸಿದ್ದೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ತಿಳಿಸಿದರು.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಮಾಹಿತಿ ಹೊರಬೀಳುತ್ತಿದ್ದಂತೆ ವಿಜಯೇಂದ್ರ ನೇರವಾಗಿ ಯಡಿಯೂರಪ್ಪ ಅವರ ಬಳಿ ತೆರಳಿ ಸಿಹಿ ತಿನ್ನಿಸಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ‘ಕೆ.ಆರ್.ಪೇಟೆ ಕ್ಷೇತ್ರ ಗೆಲ್ಲಿಸಿಕೊಂಡು ಬರಬೇಕೆಂದು ಉಸ್ತುವಾರಿ ನೀಡಿದ್ದರು. ಕ್ಷೇತ್ರದಲ್ಲಿ ಉಸ್ತುವಾರಿ ಹೊತ್ತಿದ್ದ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಶಾಸಕ ಪ್ರೀತಂಗೌಡ ಮತ್ತು ಇತರ ನಾಯಕರ ನೆರವಿನಿಂದ ಈ ಗೆಲುವು ಸಾಧ್ಯವಾಯಿತು’ ಎಂದರು.
‘ಕೆ.ಆರ್.ಪೇಟೆ ತಾಲ್ಲೂಕು ನಮ್ಮ ತಂದೆಯವರ ಊರು. ಇಡೀ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿ ಏನಾದರೂ ಕೊಡುಗೆ ನೀಡಬೇಕು ಎಂಬುದು ಅವರ ಅಪೇಕ್ಷೆ ಆಗಿತ್ತು. ಅದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಅವರು ಹೇಳಿದರು.
ಸ್ಥಾನಮಾನದ ಆಕಾಂಕ್ಷಿಯಲ್ಲ: ಕೆಲವು ಸಂಘಟನೆಗಳು ಸರ್ಕಾರದಲ್ಲಿ ಸ್ಥಾನಮಾನ ನೀಡಬೇಕು ಎಂದು ಪಕ್ಷಕ್ಕೆ ಮನವಿ ಮಾಡಿದ್ದಾರೆ. ‘ಇದು ಅವಿವೇಕತನ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭಿವೃದ್ಧಿ ಪರ ಕನಸು ನನಸು ಮಾಡಲು ಶ್ರಮಿಸುತ್ತಿದ್ದೇನೆ. ಯಾವುದೇ ಹುದ್ದೆಯ ಆಕಾಂಕ್ಷೆಯೂ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.