ADVERTISEMENT

ಮೊದಲ ಹಂತ: 502 ತೃತೀಯ ಲಿಂಗಿಗಳು ಮಾತ್ರ ಮತದಾನ

ತಲುಪದ ಮತದಾನ ಜಾಗೃತಿ ಕಾರ್ಯಕ್ರಮ

ವಿಜಯಕುಮಾರ್ ಸಿಗರನಹಳ್ಳಿ
Published 21 ಏಪ್ರಿಲ್ 2019, 19:56 IST
Last Updated 21 ಏಪ್ರಿಲ್ 2019, 19:56 IST
ಅಕೈ ಪದ್ಮಶಾಲಿ
ಅಕೈ ಪದ್ಮಶಾಲಿ   

ಬೆಂಗಳೂರು: ಮತದಾನ ಮಾಡಲು ತೃತೀಯ ಲಿಂಗಿಗಳು ನಿರಾಸಕ್ತಿ ವಹಿಸಿದ್ದು, ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆದಲ್ಲಿ 502 ತೃತೀಯ ಲಿಂಗಿಗಳ ಮಾತ್ರ ಮತ ಹಕ್ಕು ಚಲಾಯಿಸಿದ್ದಾರೆ.

ರಾಜ್ಯದಲ್ಲಿ ಸುಮಾರು ಒಂದು ಲಕ್ಷ ತೃತೀಯ ಲಿಂಗಿಗಳಿದ್ದು, ಈ ಪೈಕಿ, 4,839 ಮಂದಿ ಮಾತ್ರ ಮತದಾರರ ಪಟ್ಟಿಯಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ 2,022 ಮಂದಿ ಮತದಾರರಿದ್ದರು.

ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿದೆ. 2014ರಲ್ಲಿ ರಾಜ್ಯ
ದಲ್ಲಿ 3,890 ತೃತೀಯ ಲಿಂಗಿಗಳುಮತದಾರರ ಪಟ್ಟಿ ಯಲ್ಲಿದ್ದರು. ಈ ಪೈಕಿ 167 ಜನ ಮಾತ್ರ ಮತ ಚಲಾಯಿಸಿದ್ದರು.

ADVERTISEMENT

ಜಾಗೃತಿ ತಲುಪಲಿಲ್ಲ: ‘ ರಾಜ್ಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳಿಗೆ ₹ 15 ಕೋಟಿ ಮೀಸಲಿಡಲಾಗಿದೆ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಆದರೆ, ಜಾಗೃತಿ ಕಾರ್ಯಕ್ರಮ ನಮ್ಮ ಸಮುದಾಯವನ್ನು ತಲುಪಲೇ ಇಲ್ಲ. ನಮ್ಮನ್ನು ಯಾರೊ
ಬ್ಬರು ಸಂಪರ್ಕಿಸಲೂ ಇಲ್ಲ. ಆದರೂ ನಾನು ಮತದಾನ ಮಾಡಿದ್ದೇನೆ’ ಎಂದು ಎಲ್‌ಜಿಬಿಟಿ ಕಾರ್ಯಕರ್ತೆ ಅಕೈ ಪದ್ಮಶಾಲಿ ಹೇಳಿದರು.

‘ರಾಜ್ಯದಲ್ಲಿ ನಮ್ಮ ಸಮುದಾಯದವರು 1 ಲಕ್ಷಕ್ಕೂ ಹೆಚ್ಚಿದ್ದಾರೆ. ಆದರೆ, ಮತದಾರರ ಪಟ್ಟಿಯಲ್ಲಿ ಇರುವುದು 4,839 ಮಂದಿ ಮಾತ್ರ. ಇದಕ್ಕಾಗಿಯೇ ಗಣತಿ ನಡೆಸಿ, ಪ್ರತ್ಯೇಕ ಅಭಿಯಾನ ಕೈಗೊಳ್ಳಿ ಎಂಬ ಒತ್ತಾಯವನ್ನು ಮಾಡಿಕೊಂಡೇ ಬಂದಿದ್ದೇವೆ. ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲು ಚುನಾವಣಾ ಆಯೋಗವಾಗಲೀ, ಸರ್ಕಾರವಾಗಲೀ ಅಷ್ಟೊಂದು ಕಾಳಜಿ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಕಳಂಕವೂ ಕಾರಣ: ‘ಸಾಮಾಜದಲ್ಲಿ ನಾವು ಕಳಂಕಿತರಂತೆ ಬದುಕುತ್ತಿದ್ದೇವೆ. ನಮ್ಮ ಸಮಸ್ಯೆಗಳಾಗಲೀ, ಮತಗಳಗಾಲಿ ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಹೀಗಾಗಿ ಮತಗಟ್ಟೆಗೆ ಬರಲು ನಮ್ಮವರು ಹಿಂದೇಟು ಹಾಕಿರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

‘ಯಾವುದೇ ರಾಜಕೀಯ ಪಕ್ಷಗಳನ್ನು ನಂಬಿಕೊಳ್ಳದೆ ಮುಂದಿನ ಚುನಾವಣೆಗಳಲ್ಲಿ ನಮ್ಮ ಸಮುದಾಯದವರೇ ಕಲಬುರ್ಗಿ ಅಥವಾ ದಾವಣಗೆರೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಆಲೋಚನೆ ಇದೆ’ ಎಂದು ಅಕೈ ‘ಪ್ರಜಾವಾಣಿ’ಗೆ ತಿಳಿಸಿದರು.

ನಮ್ಮ ಪ್ರಣಾಳಿಕೆಗೆ ಯಾರು ಸ್ಪಂದಿಸಿದ್ದಾರೆ?

‘ಪ್ರತಿ ಚುನಾವಣೆಯಲ್ಲೂ ನಮ್ಮ ಬೇಡಿಕೆ ಪ್ರಣಾಳಿಕೆ ಸಿದ್ಧಪಡಿಸಿ ಎಲ್ಲ ಪಕ್ಷಗಳಿಗೂ ಸಲ್ಲಿಸುತ್ತಿದ್ದೇವೆ. ಆದರೆ, ಅದಕ್ಕೆ ಯಾರು ಸ್ಪಂದಿಸುತ್ತಿಲ್ಲ’ ಎಂದು ಇದೇ ಮೊದಲ ಬಾರಿಗೆ ಮತದಾನ ಮಾಡಿದ ತೃತೀಯ ಲಿಂಗಿ ರಿಯಾನಾ ಹೇಳಿದರು.

‘ನಮಗೂ ಘನತೆಯಿಂದ ಬದುಕಲು ಈ ಸಮಾಜ ಅವಕಾಶ ಕೊಡಬೇಕು. ಮನುಷ್ಯರೇ ಅಲ್ಲವೆಂದು ಪರಿಗಣಿಸುವ ಕಾರಣ ಮತದಾನ ಮಾಡಲು ನಮ್ಮವರು ಮುಂದೆ ಬಂದಿಲ್ಲ’ ಎಂದರು.

‘ತೃತೀಯ ಲಿಂಗಿಗಳ ಪರವಾದ ಕಾನೂನು ಅನುಷ್ಠಾನಕ್ಕೆ ಕೇಂದ್ರ ಸರ್ಕಾರವೇ ಅಡ್ಡಗಾಲಾಗಿದೆ. ರಾಜ್ಯ ಸರ್ಕಾರ ರೂಪಿಸಿದ ತೃತೀಯ ಲಿಂಗಿಗಗಳ ನೀತಿ ಎರಡು ವರ್ಷಗಳಿಂದ ದೂಳು ಹಿಡಿಯುತ್ತಿದೆ. ಈ ಎಲ್ಲ ಕಾರಣಗಳಿಂದ ತೃತೀಯ ಲಿಂಗಿಗಳು ಮತದಾನಕ್ಕೆ ಆಸಕ್ತಿ ತೋರಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಅಂಕಿ–ಅಂಶಗಳು

ಸುಮಾರು 1 ಲಕ್ಷ– ರಾಜ್ಯದಲ್ಲಿ ತೃತೀಯ ಲಿಂಗಿಗಳ ಸಂಖ್ಯೆ

4,839‌– ಒಟ್ಟು ಮತದಾರರ ಸಂಖ್ಯೆ

2,022– ಮೊದಲ ಹಂತದ 14 ಕ್ಷೇತ್ರಗಳಲ್ಲಿನ ಮತದಾರರು

2,817– ಎರಡನೇ ಹಂತದ 14 ಕ್ಷೇತ್ರಗಳಲ್ಲಿನ ಮತದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.