ADVERTISEMENT

ಉಡುಪಿ–ಚಿಕ್ಕಮಗಳೂರು: ಶೋಭಾ - ಪ್ರಮೋದ್ ಹಣಾಹಣಿ

ಮೋದಿ ಅಲೆಗೆ ಭಂಗವಿಲ್ಲ

ಎಂ.ಜಿ.ಬಾಲಕೃಷ್ಣ
Published 2 ಮೇ 2019, 16:20 IST
Last Updated 2 ಮೇ 2019, 16:20 IST
   

ಉಡುಪಿ/ಚಿಕ್ಕಮಗಳೂರು: ಆಸ್ಕರ್‌ ಫರ್ನಾಂಡಿಸ್‌ ಅವರನ್ನು 5 ಬಾರಿ ಗೆಲ್ಲಿಸಿಕೊಟ್ಟ ಹಾಗೂ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಹೆಗ್ಗಳಿಕೆಯ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಎದ್ದು ಕಂಡಿರುವ ಕೊರತೆ ‘ಕೈ’ ಚಿಹ್ನೆ. ಮೈತ್ರಿ ಒಪ್ಪಂದದಂತೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟಕೊಡಲಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿಯೇ ಕಣದಲ್ಲಿದ್ದರೂ ‘ಕೈ’ ಚಿಹ್ನೆ ಮಾತ್ರ ಇಲ್ಲ.

ತಳಹದಿಯೇ ಇಲ್ಲದ ಜೆಡಿಎಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನ ಇದೆ. ಎಐಸಿಸಿ ಸದಸ್ಯರೂ ಆಗಿದ್ದ ಅಮೃತ್‌ ಶೆಣೈ ಇದರ ವಿರುದ್ಧ ಬಂಡಾಯ ಎದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಲ್ಲಿ ಗೆಲ್ಲಬಲ್ಲ ಅಭ್ಯರ್ಥಿಯೇ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ನಾಯಕ ಪ್ರಮೋದ್‌ ಮಧ್ವರಾಜ್‌ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದೆ. ಅವರು ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ‍‍ಪ್ರತಿನಿಧಿಸುತ್ತಿರುವುದು ಜೆಡಿಎಸ್‌ ಪಕ್ಷವನ್ನು. ಸಹಜವಾಗಿಯೇ ಎರಡೂ ಪಕ್ಷಗಳಲ್ಲಿ ಒಂದು ರೀತಿಯ ಗೊಂದಲ ಇದ್ದೇ ಇದೆ.

ಕರಾವಳಿ–ಮಲೆನಾಡು ಬಿಜೆಪಿಯ ಭದ್ರ ಕೋಟೆ ಎಂಬುದು ಈಚಿನ ವರ್ಷಗಳಲ್ಲಿ ಸಾಬೀತಾಗಿದೆ. ಈ ಹಿಂದೆ ಕೆಲ ಸಂದರ್ಭಗಳಲ್ಲಿ ಧರ್ಮ–ಕೋಮು ಸೂಕ್ಷ್ಮಗಳು ಪಕ್ಷದ ನೆರವಿಗೆ ಬಂದಿದ್ದವು. ಅದೇ ಪರಿಸ್ಥಿತಿ ಈಗ ಇಲ್ಲ. ಈ ಬಾರಿಯೂ ಕ್ಷೇತ್ರದಲ್ಲಿ ಮೋದಿ ಅಲೆ ಇದೆ. ದೇಶ ರಕ್ಷಣೆ, ಮೋದಿ ನಾಯಕತ್ವ ವಿಚಾರಗಳು ಮುನ್ನೆಲೆಗೆ ಬಂದಿವೆ.

ADVERTISEMENT

ಕರಾವಳಿ, ಮಲೆನಾಡು, ಅರೆಮಲೆನಾಡು, ಬಯಲು ಸೀಮೆ ಇರುವ ವೈಶಿಷ್ಟ್ಯದ ಕ್ಷೇತ್ರ ಉಡುಪಿ–ಚಿಕ್ಕಮಗಳೂರು. ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟ್‌ ನಾಪತ್ತೆಯಾಗಿ ಮೂರು ತಿಂಗಳು ಕಳೆದರೂ ಪತ್ತೆ ಇಲ್ಲ, ಐದು ವರ್ಷದ ಹಿಂದೆ ಕ್ಷೇತ್ರದಲ್ಲಿ ಗೆದ್ದು ಹೋದ ಶೋಭಾ ಕರಂದ್ಲಾಜೆ ಸಹ ಬಹುತೇಕ ಅವಧಿಯಲ್ಲಿ ಕ್ಷೇತ್ರದಿಂದ ನಾಪತ್ತೆಯಾಗಿಯೇ ಇದ್ದರು. ಇದಕ್ಕಾಗಿಯೇ ‘ಗೋ ಬ್ಯಾಕ್‌ ಶೋಭಾ’ ಎಂಬ ಅಭಿಯಾನವೂ ನಡೆದುಹೋಯಿತು. ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್‌ ಬಿಒಬಿ ಜತೆಗೆ ವಿಲೀನಗೊಂಡಾಗ ಅದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂಬ ಆಕ್ಷೇಪ ಕೇಳಿಬಂತು. ಹೀಗಿದ್ದರೂ ಮೋದಿ ಹೆಸರನ್ನೇ ನೆಚ್ಚಿಕೊಂಡಿರುವ ಶೋಭಾ ಅವರು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಒಟ್ಟು 8 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿನ ಬಿಜೆಪಿ ಶಾಸಕರ ಬಲ ಇದೆ.

ಪ್ರಮೋದ್‌ ಮಧ್ವರಾಜ್‌ ಅವರು ಸಹ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಚಿಕ್ಕಮಗಳೂರು ಭಾಗದಲ್ಲಿ ಅವರು ಹೊಸ ಮುಖ. ತರೀಕೆರೆ, ಅಜ್ಜಂಪುರ, ಚಿಕ್ಕಮಗಳೂರು ಭಾಗದಲ್ಲಿ ಅವರ ಗುರುತು ಹೆಚ್ಚಿನವರಿಗೆ ಇಲ್ಲ. ಶೃಂಗೇರಿಯಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರಿದ್ದು, ಜೆಡಿಎಸ್‌ ನ ಒಬ್ಬರೂ ಶಾಸಕರು ಕ್ಷೇತ್ರದಲ್ಲಿ ಇಲ್ಲದಿರುವುದು ದೊಡ್ಡ ಕೊರತೆ. ಉಡುಪಿ ಭಾಗದಲ್ಲಂತೂ ಜೆಡಿಎಸ್‌ಗೆ ಅಸ್ತಿತ್ವವೇ ಇಲ್ಲ.

ಬಿಜೆಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಒಂದು ಬಾರಿ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿರುವ ಅವರ ಕುರಿತಂತೆ ಜನರಿಗೆ ಉತ್ತಮ ಅಭಿಪ್ರಾಯ ಇದೆ. ಶೋಭಾಗೆ ಟಿಕೆಟ್‌ ಘೋಷಣೆಯಾದ ಬಳಿಕ ಅವರು ಪ್ರಚಾರದಿಂದ ದೂರವೇ ಉಳಿದುಬಿಟ್ಟಿದ್ದಾರೆ. ಆದರೆ ಪಕ್ಷದ ವಿರುದ್ಧ ತಿರುಗಿಬೀಳುವಂತಹ ನಡೆಯನ್ನು ಅವರು ತುಳಿದಿಲ್ಲ. ಅಷ್ಟರಮಟ್ಟಿಗೆ ಬಿಜೆಪಿ ನೆಮ್ಮದಿಯಿಂದಿದೆ.

ಸಮಸ್ಯೆ–ಸವಾಲು: ಉಡುಪಿಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ. ಮರಳು ಪರವಾನಗಿ ನೀಡುವ ವಿಚಾರದಲ್ಲಿ ತೆಗೆದುಕೊಂಡ ಕಠಿಣ ಕ್ರಮಗಳಿಂದ ಮರಳುಗಾರಿಕೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಮಾತ್ರ ಪರವಾನಗಿ ನೀಡುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಮರಳು ಸಿಗದ ಬಗ್ಗೆ ಜನರಲ್ಲಿ ಆಕ್ರೋಶ ಇದೆ. ಮೂರು ತಿಂಗಳ ಹಿಂದೆ ನಾಪತ್ತೆಯಾಗಿರುವ ಮೀನುಗಾರರು ಏನಾದರು ಎಂಬುದಕ್ಕೂ ಸ್ಪಷ್ಟ ಉತ್ತರ ದೊರಕದೆ ಇರುವುದು ಸಹ ಮೀನುಗಾರರ ಕಳವಳಕ್ಕೆ ಕಾರಣವಾಗಿದೆ. ವಾರಾಹಿ ನೀರು ಉಡುಪಿ ಜನತೆಯ ಬಾಯಾರಿಕೆಯನ್ನು ಇನ್ನೂ ತಣಿಸಿಲ್ಲ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕಾರ್ಯಕ್ಕೂ ಗ್ರಹಣ ಹಿಡಿದಿದೆ.

ಡಾ.ಕಸ್ತೂರಿ ರಂಗನ್‌ ವರದಿಗೆ ವಿರೋಧ, ವನ್ಯಜೀವಿ–ಮಾನವ ಸಂಘರ್ಷ, ಪ್ರವಾಸೋದ್ಯಮ ಅಭಿವೃದ್ಧಿಗೆ ಸವಾಲುಗಳು, ಒತ್ತುವರಿ ಸಮಸ್ಯೆ, ಅರಣ್ಯ ಹಕ್ಕು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ತೂಗುಗತ್ತಿ, ನನಸಾಗದ ಬಯಲು ಸೀಮೆಯ ನೀರಾವರಿ ಯೋಜನೆ, ನಕ್ಸಲ್‌ ಪೀಡಿತ ಪ್ರದೇಶಗಳ ಅಭಿವೃದ್ಧಿ ಈ ಭಾಗದ ಪ್ರಮುಖ ಸವಾಲುಗಳು. ಚಿಕ್ಕಮಗಳೂರಿನಲ್ಲಿ ಕಾಫಿ, ಕಾಳುಮೆಣಸು, ಅಡಿಕೆ, ತೆಂಗು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟಗಳೂ ದೊಡ್ಡದೇ.

ಕ್ಷೇತ್ರದಲ್ಲಿ ಬಿಲ್ಲವರು, ಲಿಂಗಾಯತರು, ಒಕ್ಕಲಿಗರು ಒಟ್ಟಾರೆ ಫಲಿತಾಂಶದ ಮೇಲೆ ಪ್ರಭಾವ ಬೀರುವಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಪ್ರಚಾರ ಆರಂಭವಾಗಿ ವಾರಗಳೇ ಕಳೆದರೂ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಸಮರ್ಪಕ ಮೈತ್ರಿ ಮೂಡಿದ ಲಕ್ಷಣ ಕಾಣಿಸುತ್ತಿಲ್ಲ. ಬಿಜೆಪಿಯಲ್ಲಿ ಅಸಮಾಧಾನಗಳನ್ನು ಒಳಗೇ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಬಹುತೇಕ ಯಶಸ್ವಿಯಾದಂತಿದೆ. ಮೋದಿ ಅಲೆಯ ಮುಂದೆ ಸ್ಥಳೀಯ ಸಮಸ್ಯೆಗಳು, ಸಂಸದರ ವೈಫಲ್ಯ ಮರೆಯಾದಂತೆ ಕಾಣಿಸುತ್ತಿದೆ.

**

ಶೋಭಾ ಹೊರಗಿನಿಂದ ಬಂದವರು. ನಾನು ಉಡುಪಿಯ ನಿವಾಸಿ. ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿ ಗೆಲ್ಲಬೇಕೇ ಹೊರತು, ಕೆಲಸ ಮಾಡದವರಲ್ಲ
- ಪ್ರಮೋದ್ ಮಧ್ವರಾಜ್‌, ಜೆಡಿಎಸ್‌ ಅಭ್ಯರ್ಥಿ

**

ನಾನು ಹೊರಗಿನವಳು ಅಲ್ಲ, ಉಡುಪಿಯಲ್ಲಿ ನನಗೆ ಬಾಡಿಗೆ ಮನೆ ಇದೆ. ಜನರಿಗೆ ಸಿಗುತ್ತಿದ್ದೇನೆ. ಹೋದ ಹೋದಲ್ಲಿ ಸ್ವಂತ ಮನೆ ಮಾಡುವಷ್ಟು ಶಕ್ತಿ ನನಗಿಲ್ಲ.
– ಶೋಭಾ ಕರಂದ್ಲಾಜೆ,ಬಿಜೆಪಿ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.