ಲಖನೌ: ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 2014ರ ಫಲಿತಾಂಶವನ್ನು ಪುನರಾವರ್ತಿಸುವ ಕನಸಿಗೆ ನೀರೆರೆದು ಬಿಜೆಪಿ ಪೋಷಿಸಿದೆ.
ಇಲ್ಲಿನ 80 ಕ್ಷೇತ್ರಗಳ ಪೈಕಿ 71ರಲ್ಲಿ ಬಿಜೆಪಿಕಳೆದ ಬಾರಿ ಜಯ ಗಳಿಸಿತ್ತು. ಆದರೆ, ಈಗಿನ ಚುನಾವಣಾ ಲೆಕ್ಕಾಚಾರವೇ ಬಿಜೆಪಿಯ ಕನಸಿಗೆ ದೊಡ್ಡ ಅಡ್ಡಿಯಾಗಿ ಕೂತಿದೆ.
ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಇರುವ ಕ್ಷೇತ್ರಗಳ ಸಂಖ್ಯೆ 32. ಕಳೆದ ಬಾರಿ ಆಜಂಗಡ ಒಂದು ಬಿಟ್ಟು ಉಳಿ
ದೆಲ್ಲವೂ ಬಿಜೆಪಿಯ ತೆಕ್ಕೆಗೆ ಬಿದ್ದಿದ್ದವು. ಸಮಾಜವಾದಿ ಪಕ್ಷದ (ಎಸ್‌ಪಿ) ಸ್ಥಾಪಕ ಮುಲಾಯಂ ಸಿಂಗ್ ಅವರು ಅಲ್ಪ ಅಂತರದಲ್ಲಿ ಆಜಂಗಡದಲ್ಲಿ ಗೆದ್ದಿದ್ದರು.
ಬದ್ಧ ಪ್ರತಿಸ್ಪರ್ಧಿಗಳಾಗಿದ್ದ ಎಸ್‌ಪಿ ಮತ್ತು ಬಿಎಸ್‌ಪಿ ಕೈಜೋಡಿಸಿರುವುದೇ ಬಿಜೆಪಿಯ ಲೆಕ್ಕಾಚಾರಕ್ಕೆಈ ಬಾರಿ ಅಡ್ಡಿಯಾಗುತ್ತಿರುವ ಅಂಶ. ಈ ಮೈತ್ರಿಕೂಟ ಬಿಜೆಪಿಗೆ ದೊಡ್ಡ ಸವಾಲು ಒಡ್ಡಿದೆ.
ಇಲ್ಲಿನ ಅರ್ಧಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ 2014ರಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಪಡೆದಿದ್ದ ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ಸಿಕ್ಕ ಮತಕ್ಕಿಂತಲೂ ಬಹಳ ಹೆಚ್ಚು. ಕೆಲವು ಕ್ಷೇತ್ರಗಳಲ್ಲಿಯಂತೂ ಇದು ಬಿಜೆಪಿ ಪಡೆದ ಮತಗಳಿಗಿಂತ ಒಂದು ಲಕ್ಷಕ್ಕೂ ಅಧಿಕ.
ಗಾಜಿಪುರ, ಬಲಿಯಾ, ಲಾಲ್‌ಗಂಜ್, ಬಸ್ತಿ, ಸಂತ ಕಬೀರ್ ನಗರ, ಜಾನ್‌ಪುರ, ಘೋಸಿ ಮತ್ತು ಇತರ ಕೆಲವು ಕ್ಷೇತ್ರಗಳಲ್ಲಿ ಮೈತ್ರಿಕೂಟವು ಬಿಜೆಪಿಗಿಂತ ಬಹಳ ಮುಂದೆ ಇದೆ.
ಹಾಗಾಗಿಯೇ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಹೋರಾಟ ಬಹಳ ಕಠಿಣ ಎಂದು ಬಿಜೆಪಿ ಮುಖಂಡರೇ ಒಪ್ಪಿಕೊಳ್ಳುತ್ತಿದ್ದಾರೆ. ‘ಮಹಾಮೈತ್ರಿಕೂಟ ಒಡ್ಡಿದ ಸವಾಲು ಬಹಳ ಕಷ್ಟದ್ದಾಗಿದೆ. ನಾವು ಅಸಾಧಾರಣ ಸ್ಪರ್ಧೆ ಒಡ್ಡ
ಬೇಕಾಗಿದೆ’ ಎಂದು ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಬಲವಾದ ಅಸ್ತಿತ್ವ ಬಿಜೆಪಿಯ ಸವಾಲನ್ನು ಇನ್ನಷ್ಟು ದೊಡ್ಡದಾಗಿಸಿದೆ. ಕುಷಿನಗರ ಲೋಕಸಭಾ ಕ್ಷೇತ್ರದಲ್ಲಿ ದ್ವಿತೀಯ ಮತ್ತು ಪ್ರತಾಪಗಡ ಲೋಕಸಭಾ ಕ್ಷೇತ್ರದಲ್ಲಿ ತೃತೀಯ ಸ್ಥಾನವನ್ನು ಕಾಂಗ್ರೆಸ್ ಕಳೆದ ಬಾರಿ ಪಡೆದಿತ್ತು.
ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಲ್ಲಿ ಭಾರಿ ಪ್ರಚಾರ ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್ ಸ್ಥಿತಿಯನ್ನು ಇನ್ನಷ್ಟು ಉತ್ತಮಪಡಿಸ
ಬಲ್ಲುದು. ಪ್ರಧಾನಿ ನರೇಂದ್ರ ಮೋದಿ ಅವರು ಈ ಭಾಗದಲ್ಲಿ ಇನ್ನೂ ಹೆಚ್ಚು ರ‍್ಯಾಲಿಗಳನ್ನು ನಡೆಸಬೇಕು ಎಂದು ಇಲ್ಲಿನ ಮುಖಂಡರು ಬೇಡಿಕೆ ಇರಿಸಿದ್ದಾರೆ. ಮಂಗಳವಾರ ಒಂದೇ ದಿನ ನಾಲ್ಕು ತಾಸು ಅವಧಿಯಲ್ಲಿ ಮೋದಿ ನಾಲ್ಕು ಸಮಾವೇಶಗಳಲ್ಲಿ ಭಾಗಿಯಾಗಿದ್ದಾರೆ. ಮೋಹನ್‌ಲಾಲ್ ಗಂಜ್, ಬಾರಾಬಂಕಿ ಮತ್ತು ಬಹರೈಚ್‌ನಲ್ಲಿ ಮೋದಿ ಭಾಷಣ ಮಾಡಿದ್ದಾರೆ. ‘ಮೋದಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮವೇಶಗಳಲ್ಲಿ ಮಾತನಾಡಲಿದ್ದಾರೆ’ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ.
ಮೈತ್ರಿಕೂಟಕ್ಕೆ ಇಲ್ಲಿ ಹೆಚ್ಚು ಅವಕಾಶಗಳಿವೆ ಎಂಬುದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೂ ತಿಳಿದಿದೆ. ಹಾಗಾಗಿ, ಅವರೂ ಇಲ್ಲಿ ಸಾಲು ಸಾಲು ಸಮಾವೇಶಗಳನ್ನು ನಡೆಸಲಿದ್ದಾರೆ.
ಬಿಜೆಪಿ ಮತಕ್ಕೆ ಕನ್ನ: ಪ್ರಿಯಾಂಕಾ ಗಾಂಧಿ
ಅಮೇಠಿ (ಪಿಟಿಐ): ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದ ಮತಗಳಿಗೆ ಕತ್ತರಿ ಹಾಕುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಗೆಲುವಿನ ಅವಕಾಶ ಇರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಅಥವಾ ಬಿಜೆಪಿ ಗೆಲುವಿಗೆ ಅಡ್ಡಿಯಾಗುವ ರೀತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಯದಿಂದಾಗಿ ವಾರಾಣಸಿಯಿಂದ ಸ್ಪರ್ಧಿಸಲಿಲ್ಲವೇ ಎಂಬ ಪ್ರಶ್ನೆಗೆ, ‘ಭಯವಾಗಿದ್ದರೆ ಪ್ರಿಯಾಂಕಾ ಮನೆಯಲ್ಲಿ ಕುಳಿತಿರುತ್ತಿದ್ದಳು. ಭಯ ಇಲ್ಲದಿರುವುದರಿಂದಲೇ ನಾನು ರಾಜಕಾರಣದಲ್ಲಿದ್ದೇನೆ ಮತ್ತು ಇಲ್ಲಿಯೇ ಮುಂದುವರಿಯುತ್ತೇನೆ’ ಎಂದು ಅವರು ಹೇಳಿದರು.
ಜನರ ಸಮಸ್ಯೆಗಳನ್ನು ಪರಿಹರಿಸುವುದರತ್ತ ಗಮನ ಹರಿಸಬೇಕು, ಅದರ ಬದಲಿಗೆ ಗಾಂಧಿ ಕುಟುಂಬವೇ ಬಿಜೆಪಿಯನ್ನು ಆವರಿಸಿಬಿಟ್ಟಿದೆ ಎಂದು ಅವರು ಹರಿಹಾಯ್ದಿದ್ದಾರೆ.
ಆದರೆ, ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿ ವಿರೋಧಿ ಮತಗಳು ವಿಭಜನೆಗೊಂಡು ಬಿಜೆಪಿ ಅನುಕೂಲವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಕಾಂಗ್ರೆಸ್ ‘ಮತಕಡಿತ’ ಪಕ್ಷ: ಬಿಜೆಪಿ ಟೀಕೆ
ನವದೆಹಲಿ (ಪಿಟಿಐ): ‘ದೇಶದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್, ಈಗ ‘ಮತ ಕಡಿತ’ ಪಕ್ಷವಾಗಿದೆ ಎಂದು ಬಿಜೆಪಿ ಟೀಕಿಸಿದೆ.
‘ತನ್ನ ಗೆಲುವಿನ ಸಾಧ್ಯತೆ ಕ್ಷೀಣವಾಗಿರುವ ಕಡೆಗಳಲ್ಲೆಲ್ಲ ಎಸ್‌ಪಿ– ಬಿಎಸ್‌ಪಿ ಅಭ್ಯರ್ಥಿಗಳ ಗೆಲುವಿಗೆ ಸಹಾಯವಾಗುವಂತೆ ಬಿಜೆಪಿಯ ಮತಗಳನ್ನು ಕಡಿತ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಹೇಳಿಕೆಗೆ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.
‘ಕಾಂಗ್ರೆಸ್ ನಾಯಕಿಯ ಈ ಹೇಳಿಕೆಯು ಅವರ ಪಕ್ಷವು ಸೋಲು ಒಪ್ಪಿಕೊಂಡಿದೆ ಎಂಬುದರ ಸೂಚನೆಯಾಗಿದೆ. ಚುನಾವಣೆ ಗೆಲ್ಲಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸ್ಪರ್ಧೆಗೆ ಇಳಿದಿಲ್ಲ, ಬದಲಿಗೆ ಬಿಜೆಪಿಯಮತಗಳನ್ನು ಕಡಿತ ಮಾಡಲು ಇಳಿದಿದೆ’ ಎಂದು ಬಿಜೆಪಿ ವಕ್ತಾರ ಸಂಬಿತ್‌ಪಾತ್ರ ಟೀಕಿಸಿದ್ದಾರೆ.
‘ಎಸ್‌ಪಿ–ಬಿಎಸ್‌ಪಿ–ಆರ್‌ಎಲ್‌ಡಿ ಮೈತ್ರಿಯಲ್ಲಿ ಕಾಂಗ್ರೆಸ್ ಸೇರಿಕೊಂಡಿದೆಯೇ? ಇಲ್ಲ ಎಂದಾದರೆ ಆ ಮೈತ್ರಿಗೂ ಕಾಂಗ್ರೆಸ್‌ಗೂ ಇರುವ ಸಂಬಂಧವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಕಾಂಗ್ರೆಸ್ ಇದಕ್ಕೆ ಸ್ಪಷ್ಟ ಉತ್ತರ ನೀಡಬೇಕು’ ಎಂದು ಸಂಬಿತ್ ಒತ್ತಾಯಿಸಿದ್ದಾರೆ.
ಮಾಯಾಬಜಾರ್‌ನಲ್ಲಿ ಪ್ರಚಾರ: ರಾಮ ಮಂದಿರಕ್ಕೆ ಹೋಗದ ಮೋದಿ
ಲಖನೌ:ಅಯೋಧ್ಯೆಯ ಮಾಯಾಬಜಾರ್‌ನಲ್ಲಿ ಬುಧವಾರ ಚುನಾವಣಾ ರ‍್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಭೇಟಿ ನೀಡಲಿಲ್ಲ ಮತ್ತು ತಮ್ಮ ಭಾಷಣದಲ್ಲಿ ರಾಮ ಮಂದಿರದ ಬಗ್ಗೆ ಒಂದು ಮಾತೂ ಹೇಳಲಿಲ್ಲ
ಆದರೆ, ಅಯೋಧ್ಯೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಅಯೋಧ್ಯೆಯಿಂದ ರಾಮೇಶ್ವರದವರೆಗೆ ರಾಮಾಯಣ ಸರ್ಕೀಟ್ ನಿರ್ಮಿಸಲಾಗತ್ತಿದೆ. ರಾಮನಿಗೆ ಸಂಬಂಧಿಸಿದ ಎಲ್ಲಾ ಪ್ರದೇಶಗಳ ಮಧ್ಯೆ ನೇರ ಸಂಪರ್ಕ ಏರ್ಪಡಿಸಲಾಗುತ್ತಿದೆ’ ಎಂದು ಮೋದಿ ಹೇಳಿದ್ದಾರೆ.
‘2014ಕ್ಕೂ ಮೊದಲು ದೇಶದ ಪರಿಸ್ಥಿತಿ ಈಗಿನ ಶ್ರೀಲಾಂಕಾದ ಪರಿಸ್ಥಿತಿಯಂತೆ ಇತ್ತು. ಎಲ್ಲೆಂದರೆ ಅಲ್ಲಿ ಬಾಂಬ್ ಸ್ಫೋಟವಾಗುತ್ತಿತ್ತು. ಸರ್ಕಾರ ದುರ್ಬಲವಾಗಿದ್ದರಿಂದ ಹಾಗೆ ಆಗುತ್ತಿತ್ತು’ ಎಂದೂ ಮೋದಿ ಹೇಳಿದ್ದಾರೆ.
‘ಮಾಯಾಬಜಾರ್ ಪ್ರದೇಶವು ರಾಮಜನ್ಮಭೂಮಿಯಿಂದ ಕೆಲವೇ ಕಿ.ಮೀ.ನಷ್ಟು ದೂರದಲ್ಲಿದೆ. ಮೋದಿ ರಾಮ ಮಂದಿರಕ್ಕೆ ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರು ರಾಮ ಮಂದಿರ ವಿವಾದವನ್ನು ಬಗೆಹರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಯಾವ ಕೆಲಸವೂ ಆಗಿಲ್ಲ. ಇದು ದುರದೃಷ್ಟಕರ’ ಎಂದು ತಾತ್ಕಾಲಿಕ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.