ನವದೆಹಲಿ: ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ವಿನಂತಿಸಿ ಕಾಂಗ್ರೆಸ್ ಮುಖಂಡ ಅಮನ್ ಪಾನ್ವರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಮೋದಿ ಅವರ ಜೀವನವನ್ನು ಆಧರಿಸಿದ ಈ ಸಿನಿಮಾ, ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಒಪ್ಪಲು ನಿರಾಕರಿಸಿದ ಕೋರ್ಟ್, ‘ಈ ವಿಚಾರವನ್ನು ಚುನಾವಣಾ ಆಯೋಗ ನಿರ್ಧರಿಸಬೇಕು. ಸಿನಿಮಾಗೆ ಇನ್ನೂ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆನ್ಸಾರ್ ಮಂಡಳಿ) ಪ್ರಮಾಣಪತ್ರ ಲಭಿಸಿಲ್ಲ. ಹೀಗಿರುವಾಗ ಈ ಅರ್ಜಿಯನ್ನು ಪರಿಗಣಿಸಲಾಗದು’ ಎಂದು ಹೇಳಿದೆ.
ಇಂಥ ವಿಚಾರವನ್ನು ನ್ಯಾಯಾಲಯದ ಮುಂದೆ ತಂದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು, ‘ಈ ಅರ್ಜಿಯು ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಮಾಡಿದೆ’ ಎಂದಿದೆ.
ಈ ಸಿನಿಮಾ ಬಿಡುಗಡೆಯಿಂದ ಚುನಾವಣೆ ಮೇಲೆ ಪರಿಣಾಮ ಉಂಟಾಗುತ್ತದೆ, ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರೂ ನ್ಯಾಯಾಲಯವು, ‘ನಮಗೆ ಹಾಗೆ ಅನ್ನಿಸುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿತು. ಮಾತ್ರವಲ್ಲ ದೂರಿನ ಜೊತೆಗೆ ಅರ್ಜಿದಾರರು ಸಲ್ಲಿಸಿದ ಎರಡು ನಿಮಿಷ ಅವಧಿಯ ಟ್ರೇಲರ್ ಅನ್ನು ವೀಕ್ಷಿಸಲು ಕೋರ್ಟ್ ನಿರಾಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.