ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಆರೂವರೆ ದಶಕದಲ್ಲಿ ಕೆಲವೇ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಅದರಲ್ಲೂ ಸಾಮಾನ್ಯ ವರ್ಗಕ್ಕೆ ಸೇರಿದವರು ಜಿಲ್ಲೆಯಲ್ಲಿ ರಾಜಕಾರಣ ನಡೆಸಿದ್ದಾರೆ.
1957ರಿಂದ 2018ರ ವರೆಗೆ 14 ಸಾರ್ವತ್ರಿಕ ವಿಧಾನಸಭೆ ಚುನಾವಣೆಗಳು ನಡೆದಿವೆ. ಶಹಾಪುರ, ಸುರಪುರ ಮತಕ್ಷೇತ್ರದಲ್ಲಿ ಒಂದೊಂದು ಬಾರಿ ಉಪ ಚುನಾವಣೆ ನಡೆದಿದೆ.
1957ರಲ್ಲಿ ಜಿಲ್ಲೆಯಲ್ಲಿ ಮೂರು ಮತಕ್ಷೇತ್ರಗಳು ಮಾತ್ರ ಇದ್ದವು. ಯಾದಗಿರಿ, ಶಹಾಪುರ, ಸುರಪುರ ಮತಕ್ಷೇತ್ರಗಳು ಮಾತ್ರ ಇದ್ದು, 1962ರಲ್ಲಿ ಗುರುಮಠಕಲ್ ಕ್ಷೇತ್ರ ರಚನೆಯಾಯಿತು.
1957ರಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರೆ, ಶಹಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರು.
ಯಾದಗಿರಿ ಮತಕ್ಷೇತ್ರದಲ್ಲಿ ಡಾ.ಎ.ಬಿ.ಮಾಲಕರೆಡ್ಡಿ ಮಾತ್ರ ಹ್ಯಾಟ್ರಿಕ್ ಸಾಧಿಸಿದ್ದರು. ಉಳಿದವರಿಗೆ ಇದು ಸಾಧ್ಯವಾಗಿಲ್ಲ.
ಸುರಪುರ ಮತಕ್ಷೇತ್ರದಲ್ಲಿ ರಾಜಾ ಪಿಡ್ಡ ನಾಯಕ, ರಾಜಾ ಮದನ್‌ಗೋಪಾಲ ನಾಯಕ ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಆದರೆ, ಗುರುಮಠಕಲ್ ಕ್ಷೇತ್ರದಲ್ಲಿ ಸತತ 8 ಬಾರಿ ಮಲ್ಲಿಕಾರ್ಜುನ ಖರ್ಗೆ ಗೆದ್ದಿರುವುದು ಜಿಲ್ಲೆಯಲ್ಲಿ ಇತಿಹಾಸವಾಗಿದೆ.
ಶಹಾಪುರ ಮತಕ್ಷೇತ್ರದಲ್ಲಿ ದರ್ಶನಾಪುರ ಕುಟುಂಬ, ಶಿರವಾಳ ಕುಟುಂಬ ಒಂದು ಬಾರಿ ಗೆದ್ದರೆ, ಮತ್ತೊಂದು ಬಾರಿ ಸೋತಿದ್ದಾರೆ. ಇದರಿಂದ ಇಲ್ಲಿ ಹ್ಯಾಟ್ರಿಕ್ ಸಾಧನೆ ಸಾಧ್ಯವಾಗಿಲ್ಲ.
ಯಾದಗಿರಿಯಲ್ಲಿ ರೆಡ್ಡಿ, ಶಹಾಪುರದಲ್ಲಿ ಗೌಡ, ಮೀಸಲು ಕ್ಷೇತ್ರವಾಗಿದ್ದರಿಂದ ಸುರಪುರದಲ್ಲಿ ನಾಯಕ, ಗುರುಮಠಕಲ್‌ನಲ್ಲಿ ಪರಿಶಿಷ್ಟ ಜಾತಿ ಸಮುದಾಯವರು ಹೆಚ್ಚು ಬಾರಿ ಶಾಸಕರಾಗಿದ್ದಾರೆ.
ಸದ್ಯ ಯಾದಗಿರಿ, ಶಹಾಪುರ, ಗುರುಮಠಕಲ್ ಸಾಮಾನ್ಯ ಕ್ಷೇತ್ರವಾಗಿದ್ದರೆ, ಸುರಪುರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.