ಬೀದರ್: ‘ಜನ ಹೇಳಿದಂತೆ ಕೆಲಸ ಮಾಡಲು ಉದ್ದೇಶಿಸಿರುವ ಪ್ರಜಾಕೀಯ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಮತದಾರರು ರಾಜಕೀಯ ಬದಲಾವಣೆಗೆ ನಾಂದಿ ಹಾಡಲಿದ್ದಾರೆ’ ಎಂದು ಉತ್ತಮ ಪ್ರಜಾಕೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಉಪೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
‘ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವ ಹಾಗೂ ಸುಳ್ಳು ಭರವಸೆ ನೀಡುವ ರಾಜಕೀಯ ನಾಯಕರು ನಾವು ಅಲ್ಲ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮನೆ ಮನೆಗೆ ಮತ ಕೇಳಲು ಬರುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಡಿ. ವರ್ಷವಿಡೀ ನಿಮ್ಮ ಬೇಕು, ಬೇಡಿಕೆಗಳಿಗೆ ಸ್ಪಂದಿಸುವಂತಹ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಚುನಾವಣಾ ಪ್ರಚಾರ ಸಭೆ, ರ‍್ಯಾಲಿಗಳನ್ನು ನಡೆಸಿ ದುಂದು ವೆಚ್ಚ ಮಾಡುತ್ತಿಲ್ಲ. ಸಂಪರ್ಕ ಸಾಧನದ ಕೊರತೆ ಇದ್ದ ಕಾರಣ ಹಿಂದೆ ಪ್ರಚಾರ ಸಭೆಗಳನ್ನು ಮಾಡಲಾಗುತ್ತಿತ್ತು. ಆದರೆ ಇಂದು ಅಂತಹ ಸ್ಥಿತಿ ಇಲ್ಲ. ಹಳೆಯ ಪದ್ಧತಿ ಬಿಟ್ಟು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸುಲಭವಾಗಿ ಮತದಾರರ ಬಳಿ ತಲುಪುತ್ತಿದ್ದೇವೆ’ ಎಂದು ಹೇಳಿದರು.
‘ನಮ್ಮದು ಜನರ ಪಕ್ಷ. ರಾಜಕೀಯ ವೃತ್ತಿಯಾಗಬೇಕು. ವ್ಯಾಪಾರೀಕರಣವಾಗಬಾರದು. ಕೇವಲ ಸಿರಿವಂತರು ಮಾತ್ರ ರಾಜಕೀಯಕ್ಕೆ ಬರಲು ಸಾಧ್ಯ ಎನ್ನುವ ತಪ್ಪು ಕಲ್ಪನೆಯನ್ನು ಅಳಿಸಿ ಹಾಕಬೇಕು. ವಿಚಾರವಂತರು ಹಾಗೂ ಪ್ರಾಮಾಣಿಕರಿಗೆ ಅವಕಾಶ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದು ತಿಳಿಸಿದರು.
‘ರಾಜಕೀಯ ಅಂದರೆ ಸೇವೆ ಅಲ್ಲ. ಸಂಸತ್ ಸದಸ್ಯರಿಗೂ ವೇತನ ಇದೆ. ಸಂಬಳ ಪಡೆದು ಕೆಲಸ ಮಾಡಬೇಕಾಗಿದೆ. ಹೀಗಾಗಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಕ್ಷದ ಬಿ ಫಾರಂ ಕೊಡಲಾಗಿದೆ’ ಎಂದು ಹೇಳಿದರು.
‘ಯಾರಿಂದಲೂ ಪಕ್ಷಕ್ಕೆ ದೇಣಿಗೆ ಪಡೆದಿಲ್ಲ. ಅಭ್ಯರ್ಥಿಗಳು ಠೇವಣಿ ಹಾಗೂ ಕರಪತ್ರಕ್ಕೆ ಮಾತ್ರ ಖರ್ಚು ಮಾಡಿದ್ದಾರೆ. ಇನ್ನುಳಿದ ಖರ್ಚವನ್ನು ಪಕ್ಷ ನೋಡಿಕೊಳ್ಳುತ್ತಿದೆ. ಚುನಾವಣಾ ಆಯೋಗ ₹ 70 ಲಕ್ಷ ವರೆಗೆ ಮಾತ್ರ ಖರ್ಚು ಮಾಡಬೇಕು ಎಂದು ಸೂಚನೆ ನೀಡಿದೆ. ಆದರೆ ನಾವು ₹ 70 ಸಾವಿರ ಒಳಗೆ ಖರ್ಚು ಇರಬೇಕು ಎಂದು ಹೇಳುತ್ತಿದ್ದೇವೆ. ಒಂದು ವೇಳೆ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದರೆ ಆಯೋಗ ಅದನ್ನೇ ಮಾದರಿಯಾಗಿ ತೆಗೆದುಕೊಳ್ಳಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ದೇಶದ ಶೇ 20ರಷ್ಟು ಹಣ ಬಂಡವಾಳಶಾಹಿಗಳ ಬಳಿ ಇದೆ. ರಾಜಕೀಯ ಎನ್ನುವುದು ತಲೆ ಇದ್ದ ಹಾಗೆ. ತಲೆ ಸರಿ ಇದ್ದರೆ ದೇಹದ ಎಲ್ಲ ಅವಯವಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ರಾಜಕೀಯದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ’ ಎಂದರು.
‘ಚಲನಚಿತ್ರ ನಟರನ್ನು ನೋಡಿ ಜನ ಮತ ಹಾಕುವುದಿಲ್ಲ. ಮಂಡ್ಯದಲ್ಲಿ ದರ್ಶನ ಹಾಗೂ ಯಶ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಅವರ ವಿಚಾರಗಳನ್ನು ಕೇಳಿ ಜನ ಮತ ಹಾಕಬಹುದು. ಗೆಲುವಿಗೆ ಹೋರಾಟ ನಡೆಸಿದರೆ ವಾಮ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ನಮಗೆ ಸೋಲು– ಗೆಲುವು ಮುಖ್ಯವಲ್ಲ. ಜನ ಒಳ್ಳೆಯದ್ದು ಬೇಕೆಂದರೆ ಬೆಂಬಲಿಸುತ್ತಾರೆ, ಇಲ್ಲದಿದ್ದರೆ ಇಲ್ಲ ಅಷ್ಟೇ’ ಎಂದು ಹೇಳಿದರು.
ಬೀದರ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಂಬರೇಷ ಕೆಂಚಾ, ‘ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಅಧಿಕವಾಗಿದೆ. ಸರ್ಕಾರಿ ಸಿಬ್ಬಂದಿ ಸಂಬಳ ಪಡೆದರೂ ಗಿಂಬಳಕ್ಕಾಗಿ ಕೈವೊಡ್ಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವವರು ಇಲ್ಲವಾಗಿದ್ದಾರೆ. ಜನರ ಆಶಯದಂತೆ ನಡೆದುಕೊಳ್ಳುವುದು ನಮ್ಮ ಧ್ಯೇಯವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.