ADVERTISEMENT

ಮೈಸೂರು: ಅಂಗವಿಕಲರಿಗಾಗಿ 11 ವಿಶೇಷ ಮತಗಟ್ಟೆ

ಮತದಾನ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 12:20 IST
Last Updated 7 ಏಪ್ರಿಲ್ 2023, 12:20 IST
ಪ್ರಭು ಸ್ವಾಮಿ
ಪ್ರಭು ಸ್ವಾಮಿ   

ಮೈಸೂರು: ವಿಧಾನಸಭೆ ಚುನಾವಣೆಯಲ್ಲಿ ಅಂಗವಿಕಲರು, ವಿಶೇಷ ವ್ಯಕ್ತಿಗಳು ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲಾ ಸ್ವೀಪ್ ಸಮಿತಿಯು ಮುತುವರ್ಜಿ ವಹಿಸಿದೆ. ಅವರಿಗಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಿದೆ.

ಮತದಾನದ ಬಗ್ಗೆ ಜಾಗೃತಿ, ಆತ್ಮವಿಶ್ವಾಸ ಮೂಡಿಸುವುದು ಮತ್ತು ಯಾರ ಸಹಾಯವೂ ಇಲ್ಲದೆ ಮತದಾನ ಮಾಡುವುದಕ್ಕಾಗಿ ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 31,754 ಅಂಗವಿಕಲರ ಮತದಾರರಿದ್ದಾರೆ. ಈ ಹಿಂದಿನ ಪಟ್ಟಿಯಲ್ಲಿ 29,588 ಮತದಾರರಿದ್ದು, ನಿರಂತರ ಪರಿಷ್ಕರಣೆ ವೇಳೆ 2,166 ಮಂದಿಯ ಹೆಸರು ಸೇರ್ಪಡೆಯಾಗಿದೆ. ಮತದಾನಕ್ಕೆ ಬರಲು ಸಾಧ್ಯವಾಗುವವರಿಗೆ ವಿಶೇಷ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೊಂದರಂತೆ ಒಟ್ಟು 11 ಮತಗಟ್ಟೆಯನ್ನು ಅಂಗವಿಕಲರಿಗಾಗಿ ಸಿದ್ಧಪಡಿಸಲಾಗಿದೆ.

ADVERTISEMENT

ವಿಶೇಷ ಮತಗಟ್ಟೆಗಳ ವಿವರ: ಪಿರಿಯಾಪಟ್ಟಣದ ಬೈಲುಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ ಸಂಖ್ಯೆ 115, ಕೃಷ್ಣರಾಜನಗರದ ಕ್ಷೇತ್ರದ ಹೆಬ್ಬಾಳ್ ಗ್ರಾಮ ಪಂಚಾಯಿತಿ ಬೂತ್ ಸಂಖ್ಯೆ 151, ಹುಣಸೂರಿನ ಧರ್ಮಾಪುರ ಪ್ರೌಢಶಾಲೆಯ ಬೂತ್ ಸಂಖ್ಯೆ 224, ಎಚ್‌.ಡಿ ಕೋಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಬೂತ್‌ ಸಂಖ್ಯೆ 98, ನಂಜನಗೂಡಿನ ಸರ್ಕಾರಿ ಜೂನಿಯರ್ ಕಾಲೇಜಿನ ಬೂತ್‌ ಸಂಖ್ಯೆ 60, ಚಾಮುಂಡೇಶ್ವರಿ ಕ್ಷೇತ್ರದ ಶೆಟ್ಟಿನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ ಸಂಖ್ಯೆ 184, ಕೃಷ್ಣರಾಜ ಕ್ಷೇತ್ರದಲ್ಲಿ ಜೆಪಿ ನಗರದ ಜೆಎಸ್ಎಸ್ ಪ್ರೌಢಶಾಲೆಯ ಬೂತ್‌ ಸಂಖ್ಯೆ 227, ನರಸಿಂಹರಾಜ ಕ್ಷೇತ್ರದ ರಾಜೇಂದ್ರ ನಗರದಲ್ಲಿ ಇನ್‌ಸ್ಟಿಟ್ಯೂಟ್ ಆಫ್‌ ಎಜುಕೇಶನ್ ಹೈಸ್ಕೂಲ್ ಕಟ್ಟಡದ ಬೂತ್ ಸಂಖ್ಯೆ 32, ವರುಣ ಕ್ಷೇತ್ರದಲ್ಲಿ ಗರ್ಗೇಶ್ವರಿಯ ಬಾಲಕರ ಸರ್ಕಾರಿ ಉರ್ದು ಶಾಲೆಯ ಬೂತ್‌ ಸಂಖ್ಯೆ 76, ತಿ.ನರಸೀಪುರ ಕ್ಷೇತ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡದಲ್ಲಿನ ಬೂತ್ ಸಂಖ್ಯೆ 151– ಅಂಗವಿಕಲರ ಮತದಾನಕ್ಕಾಗಿ ವಿಶೇಷವಾಗಿ ರೂಪಿಸಲಾಗುತ್ತಿದೆ.

ಮತದಾನಕ್ಕೆ ಬರಲು ಸಾಧ್ಯವಾಗುವವರಿಗೆ ಮತಗಟ್ಟೆಯಲ್ಲೇ ವ್ಯವಸ್ಥೆ ಕಲ್ಪಿಸಿ ಪ್ರಜಾತಂತ್ರದ ಹಬ್ಬದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಅದಕ್ಕಾಗಿ ಗಾಲಿ ಕುರ್ಚಿ, ವಾಕರ್‌ ಮೊದಲಾದ ವ್ಯವಸ್ಥೆ ಮಾಡಲಾಗುವುದು.

80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶವನ್ನೂ ಚುನಾವಣಾ ಆಯೋಗವು ನೀಡಿದೆ. ಇಲ್ಲಿ ಪೋಸ್ಟಲ್ ಮೂಲಕ ಮತದಾನವನ್ನು ಮಾಡಲಾಗುತ್ತದೆ. ಈಗಾಗಲೇ ಪೋಸ್ಟಲ್ ಬ್ಯಾಲೆಟ್‌ ತಂಡವನ್ನು ರಚಿಸಲಾಗಿದೆ. ಕ್ಷೇತ್ರವೊಂದಕ್ಕೆ ನಾಲ್ಕು ಜನರ ಒಂದು ತಂಡವನ್ನು ನಿಯೋಜಿಸಲಾಗಿದೆ. ಮತದಾನದ ವೇಳೆ ಪಕ್ಷದ ಚುನಾವಣಾ ಏಜೆಂಟ್‌ಗಳಿಗೂ ಭಾಗವಹಿಸುವ ಅವಕಾಶ ಇರಲಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವೀಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಮನೆಯೊಳಗಿರುವ ವಿಶೇಷ ವ್ಯಕ್ತಿಗಳನ್ನೂ ಗುರುತಿಸಿ’

‘ಚುನಾವಣಾ ಆಯೋಗವು ಮತಗಟ್ಟೆಗೆ ಬರಲು ಸಾಧ್ಯವಾಗದೇ ಇರುವವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನಾರ್ಹ. ಆದರೆ, ಅನೇಕರು ಮನೆಯೊಳಗಡೆಯೇ ಇದ್ದಾರೆ. ಅವರನ್ನು ಗುರುತಿಸುವಲ್ಲಿ ಇಲಾಖೆ ವಿಫಲವಾಗಿದೆ’ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಪ್ರಭು ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಮಾಹಿತಿಯ ಪ್ರಕಾರ ಮೈಸೂರು ನಗರದಲ್ಲೇ 20ಸಾವಿರ ವಿಶೇಷ ವ್ಯಕ್ತಿಗಳು ಮತ್ತು ಅಂಗವಿಕಲರಿದ್ದಾರೆ. ಅವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನಗಳಾಗಬೇಕು. ಇದರಿಂದ ಪ್ರಜಾಪ್ರಭುತ್ವದ ಹಬ್ಬಕ್ಕೆ ಮತ್ತಷ್ಟು ಅರ್ಥ ಬರುತ್ತದೆ. ಮತದಾನದ ಅರಿವು ಮೂಡಿಸುವ ಕಾರ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳನ್ನಷ್ಟೇ ಸಂಪರ್ಕಿಸಿದ್ದಾರೆ. ಆದರೆ, ಸಂಘಟನೆಗಳವರನ್ನೂ ಸಂಪರ್ಕಿಸಿದರೆ ನಮ್ಮ ಸಮಸ್ಯೆಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಲು ಸಹಾಯವಾಗುತ್ತದೆ’ ಎನ್ನುತ್ತಾರೆ ಅವರು.

ಜಿಲ್ಲೆಯ ಅಂಗವಿಕಲ ಮತದಾರರ ವಿವರ

ಕ್ಷೇತ್ರ;ಸಂಖ್ಯೆ

ಪಿರಿಯಾಪಟ್ಟಣ;3,257

ಕೃಷ್ಣರಾಜನಗರ;3132

ಹುಣಸೂರು;3,430

ಎಚ್‌.ಡಿ.ಕೋಟೆ;3,438

ನಂಜನಗೂಡು;3,107

ಚಾಮುಂಡೇಶ್ವರಿ;2,595

ಕೃಷ್ಣರಾಜ;1,436

ಚಾಮರಾಜ;2,374

ನರಸಿಂಹರಾಜ;2,667

ವರುಣ;3,218

ತಿ.ನರಸೀಪುರ;3,100

ಒಟ್ಟು;31,754

ಜಾಗೃತಿ ಮೂಡಿಸಲು ಕ್ರಮ

ಅಂಗವಿಕಲರು ಪೂರ್ಣ ಪ್ರಮಾಣದಲ್ಲಿ ಮತದಾನ ಮಾಡಲು ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅವರ ಸಂಘಟನೆಗಳ ಮೂಲಕವೂ ಮತದಾನದ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

–ಕೆ.ಎಂ.ಗಾಯಿತ್ರಿ, ಸಿಇಒ, ಜಿಲ್ಲಾ ಪಂಚಾಯಿತಿ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.