ADVERTISEMENT

ಲೋಕಸಭೆ ಚುನಾವಣೆ: ಬಿಜೆಪಿ ಪ್ರಚಾರಕ್ಕೆ ಹೆಚ್ಚು ಸಮಯ ನೀಡಿದ ದೂರದರ್ಶನ

ಕಾಂಗ್ರೆಸ್‌, ಸಿಪಿಎಂ ಆಕ್ಷೇಪ * ಸಮತೋಲನ ಕಾಯ್ದುಕೊಳ್ಳಲು ಚುನಾವಣಾ ಆಯೋಗ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 2:59 IST
Last Updated 15 ಏಪ್ರಿಲ್ 2019, 2:59 IST
   

ನವದೆಹಲಿ:ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಾಜಕೀಯ ಪಕ್ಷಗಳಿಗೆ ಸಮಯಾವಕಾಶ ನೀಡುವಲ್ಲಿ ದೂರದರ್ಶನ ಸುದ್ದಿ ವಾಹಿನಿ (ಡಿಡಿ ನ್ಯೂಸ್) ತಾರತಮ್ಯ ಎಸಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಏಪ್ರಿಲ್ 5ರಂದು ದೂರದರ್ಶನ ವಾಹಿನಿಯು ಚುನಾವಣಾ ಆಯೋಗಕ್ಕೆ ನೀಡಿದ ವರದಿಯಿಂದ ಇದು ದೃಢಪಟ್ಟಿದೆ. ಇದರ ಪ್ರಕಾರ, ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಡಿಡಿ ನ್ಯೂಸ್ ಮತ್ತು ಅದರ ಪ್ರಾದೇಶಿಕ ವಾಹಿನಿಗಳಲ್ಲಿ ಬಿಜೆಪಿಗೆ160 ಗಂಟೆ ಪ್ರಚಾರದ ಅವಕಾಶ ನೀಡಲಾಗಿದ್ದರೆ ಕಾಂಗ್ರೆಸ್‌ಗೆ 80 ಮತ್ತು ಸಿಪಿಎಂಗೆ 8 ಗಂಟೆ ನೀಡಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ರಾಜಕೀಯ ಪಕ್ಷಗಳ ಪ್ರಚಾರಕ್ಕೆ ನೀಡಲಾದ ಸಮಯ ಸಮತೋಲನದಿಂದ ಕೂಡಿಲ್ಲ. ನಿರ್ದಿಷ್ಟ ಪಕ್ಷಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದನ್ನು ನಿಲ್ಲಿಸಲು ಮತ್ತು ಸಮತೋಲನ ಕಾಯ್ದುಕೊಳ್ಳಲು ಡಿಡಿ ನ್ಯೂಸ್‌ಗೆ ಸೂಚಿಸಿ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಚುನಾವಣಾ ಆಯೋಗ ಈಗಾಗಲೇ ನಿರ್ದೇಶನ ನೀಡಿದೆ.

ADVERTISEMENT

16 ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಮತ್ತು ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ಹೆಚ್ಚು ಸಮಯ ನೀಡಲಾಗಿದೆ. ಎರಡೂ ಪಕ್ಷಗಳಿಗೆ ಒಂದೇ ರೀತಿ ಸಮಯ ಹಂಚಿಕೆ ಮಾಡಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳ ಜತೆ ಹೋಲಿಕೆ ಮಾಡಿದಲ್ಲಿ ಸಮಯದ ಹಂಚಿಕೆ ಸಮತೋಲನದಿಂದ ಕೂಡಿದೆ ಎಂದುಡಿಡಿ ನ್ಯೂಸ್‌ನ ಉನ್ನತ ಮೂಲಗಳು ಸಮರ್ಥಿಸಿಕೊಂಡಿದ್ದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿದೆ. ಆದರೆ ಈ ವಿವರಣೆ ಚುನಾವಣಾ ಆಯೋಗದ ಜತೆ ಹಂಚಿಕೊಂಡಿರುವ ವರದಿಯಲ್ಲಿ ಇಲ್ಲ ಎಂದೂ ಹೇಳಿದೆ.

‘30ಕ್ಕೂ ಹೆಚ್ಚು ಚಾನೆಲ್‌ಗಳು ಮತ್ತು ಸುಮಾರು 100 ರೇಡಿಯೊ ಸ್ಟೇಷನ್‌ಗಳಲ್ಲಿ ಪ್ರಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು ಸಮಯದ ಹಂಚಿಕೆಯಲ್ಲಿ ಲೋಪವಾಗಿದೆ ಎನ್ನಲು ಖಚಿತವಾದ ಆಧಾರಗಳಿಲ್ಲ. ಆದಾಗ್ಯೂ, ಆಯೋಗದ ಸೂಚನೆ ಬಗ್ಗೆ ಗಮನಹರಿಸಲಾಗಿದೆ. ಸಂಪಾದಕೀಯ ಮೇಲ್ವಿಚಾರಣೆಗಾಗಿ ಹೆಚ್ಚುವರಿಯಾಗಿ ಸಮಿತಿಯೊಂದನ್ನು ನೇಮಕ ಮಾಡಲಾಗಿದೆ. ಕಾಲಕಾಲಕ್ಕೆ ದತ್ತಾಂಶಗಳನ್ನು ಸಂಗ್ರಹಿಸಿ ವರದಿಯನ್ನು ಆಯೋಗಕ್ಕೆ ನೀಡಲಾಗುವುದು’ ಎಂದು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಶೇಖರ್ ವೆಂಪತಿ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಪ್ರಚಾರದ ಸಮಯ ಹಂಚಿಕೆಯಲ್ಲಿಡಿಡಿ ನ್ಯೂಸ್ ತಾರತಮ್ಯ ಎಸಗುತ್ತಿದೆ ಎಂದು ಏಪ್ರಿಲ್ 1ರಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ಪೂರಕವಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಚ್‌ 31ರ ‘ಮೈ ಭಿ ಚೌಕೀದಾರ್ ಹೂಂ’ ಕಾರ್ಯಕ್ರಮದ ನೇರ ಪ್ರಸಾರಕ್ಕೆ 84 ನಿಮಿಷ ಅವಕಾಶ ನೀಡಿದ್ದನ್ನು ಉದಾಹರಿಸಿತ್ತು. ಮೋದಿ ಅವರಿಗೆ ನೀಡಿದಷ್ಟೇ ಸಮಯವನ್ನು ಇತರ ರಾಜಕೀಯ ಪ‍ಕ್ಷಗಳ ಮುಖಂಡರಿಗೂ ನೀಡುವಂತೆ ಡಿಡಿ ನ್ಯೂಸ್‌ಗೆ ಸೂಚಿಸಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.