ADVERTISEMENT

ನಾನೇಕೆ ಬಲಿಪಶು ಅಗಲಿ; ನಾಮಪತ್ರ ವಾಪಸ್‌ ಪಡೆಯಲ್ಲ: ಮುದ್ದಹನುಮೇಗೌಡ 

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:43 IST
Last Updated 2 ಮೇ 2019, 10:43 IST
   

ತುಮಕೂರು: ಸಕ್ರಿಯ ಸಂಸದನಾಗಿ ಕೆಲಸ ಮಾಡಿದರೂ ಕಾರಣ ಇಲ್ಲದೇ ಟಿಕೆಟ್ ತಪ್ಪಿಸುವುದನ್ನು ಸಹಿಸುವುದಿಲ್ಲ. ನಾನೇಕೆ ಬಲಿಪಶು ಆಗಲಿ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ಹೇಳಿದರು.

ಸೋಮವಾರ ನಾಮಪತ್ರ ಸಲ್ಲಿಸಲು ಅಪಾರ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿ ಕಚೆರಿಗೆ ಬಂದ ವೇಳೆ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು.

ಮೈತ್ರಿ ಧರ್ಮದ ಹೆಸರಿನಲ್ಲಿ ಇನ್ಯಾರಿಗೋ ಅವಕಾಶ ಮಾಡಿಕೊಡಲು ನನ್ನನ್ನು ಬಲಿಪಶು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಉಭಯ ಪಕ್ಷಗಳ ಮುಖಂಡರು ಚಿಂತನೆ ಮಾಡಬೇಕು. ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯಲ್ಲ. ನನ್ನನ್ನೇ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದರು.

ADVERTISEMENT

‘ದೇವೇಗೌಡರ ಪಾಳೇಗಾರಿಕೆ ಸಹಿಸಲ್ಲ’
ಮಾಜಿ ಶಾಸಕ ಕೆ.ಎನ್ ರಾಜಣ್ಣ ಮಾತನಾಡಿ, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡದೇ ಇರುವುದಕ್ಕೆ ಸಕಾರಣ ತಿಳಿಸಬೇಕು. ಸಕ್ರಿಯ ಸಂಸದನಾಗಿ ಕೆಲಸ ಮಾಡಿದ ಪಕ್ಷದವರಿಗೆ ಟಿಕೆಟ್ ಕೊಡದೇ ಬೇರೆಯವರಿಗೆ ಟಿಕೆಟ್ ಕೊಡುವುದನ್ನು ಸಹಿಸಲ್ಲ ಎಂದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಚುನಾವಣೆ ಎಂದರೆ ಪಾಳೆಗಾರಿಕೆ ಎಂದು ತಿಳಿದಿದ್ದಾರೆ. ಹಾಸನ, ಮಂಡ್ಯ, ತುಮಕೂರು ಹೀಗೆ ಎಲ್ಲ ಕಡೆಗೂ ಅವರೇ, ಅವರ ಕುಟುಂಬದವರೇ ಇರಬೇಕು ಎಂದರೆ ಹೇಗೆ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಪಾಳೆಗಾರಿಕೆ ಧೋರಣೆ ಸಹಿಸಲ್ಲ. ಮೂರ್ನಾಲ್ಕು ದಿನಗಳಲ್ಲಿ ದೇವೇಗೌಡರ ಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ ಎಂದರು.

‘ಚನ್ನಮ್ಮಗೂ ಸ್ಥಾನ ಕಲ್ಪಿಸಿಕೊಡಲಿ’
ದೇವೇಗೌಡರು ತಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಗೆ ರಾಜಕೀಯ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಪಾಪ ಅವರ ಪತ್ನಿ ಚನ್ನಮ್ಮ ಅವರು ಏನು ಮಾಡಿದ್ದಾರೆ. ಅವರಿಗೂ ಒಂದು ಸ್ಥಾನ ಕಲ್ಪಿಸಿಕೊಡಲಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.