ADVERTISEMENT

ಕೇರಳದಿಂದ ಸ್ಪರ್ಧಿಸುವ ಧೈರ್ಯ ಇದೆಯೇ?: ಪ್ರಧಾನಿ ಮೋದಿಗೆ ಶಶಿ ತರೂರ್‌ ಪ್ರಶ್ನೆ

ಪಿಟಿಐ
Published 9 ಮೇ 2019, 17:54 IST
Last Updated 9 ಮೇ 2019, 17:54 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ: 'ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆಯೇ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಮತ್ತು ಸಂಸದ ಶಶಿ ತರೂರ್‌ ಪ್ರಶ್ನಿಸಿದ್ದಾರೆ.

‘ವಯನಾಡ್‌ನಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸುವ ಮೂಲಕ ಉತ್ತರ ಮತ್ತು ದಕ್ಷಿಣ ಭಾರತದಿಂದ ಗೆಲ್ಲುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

‘ರಾಹುಲ್‌ ಅವರು ವಯನಾಡ್‌ನಲ್ಲಿ ಸ್ಪರ್ಧಿಸಿದ್ದರಿಂದ ದಕ್ಷಿಣ ರಾಜ್ಯಗಳಲ್ಲಿ ಅತಿ ಹೆಚ್ಚು ಉತ್ಸಾಹ ಮೂಡಿದೆ. ಮುಂದಿನ ಪ್ರಧಾನಿ ನಮ್ಮ ಪ್ರದೇಶದಿಂದಲೇ ಆಯ್ಕೆಯಾಗುತ್ತಾರೆ ಎನ್ನುವ ಭಾವನೆ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲರಲ್ಲೂ ಮೂಡಿದೆ. ರಾಹುಲ್‌ ಅಲೆ ಕೇರಳದ ಕಾಂಗ್ರೆಸ್‌ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದೇ ಉತ್ಸಾಹ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಕಾಣುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಭಾರತದ ಪ್ರಧಾನಿ ಎಲ್ಲ ಭಾರತೀಯರಿಗೂ ಪ್ರಧಾನಿ ಎನ್ನುವ ಭಾವನೆಯನ್ನೇ ನರೇಂದ್ರ ಮೋದಿ ಹೊಂದಿಲ್ಲ’ ಎಂದು ಟೀಕಿಸಿದರು.

ಬಹುಸಂಖ್ಯಾತರಿರುವ ಪ್ರದೇಶಗಳಿಂದ ಸ್ಪರ್ಧಿಸಲು ಬಯಸದೆ ರಾಹುಲ್‌ ಗಾಂಧಿ ಓಡಿ ಹೋಗಿದ್ದಾರೆ ಎನ್ನುವು ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ತರೂರ್‌, ‘ಆಡಳಿತ ಪಕ್ಷ ಅಸಹಿಷ್ಣುತೆಯನ್ನು ಪ್ರತಿಪಾದಿಸುತ್ತಿದೆ. ಸಹಕಾರ ಒಕ್ಕೂಟ ತತ್ವದ ಆಧಾರದ ಮೇಲೆ ರಾಹುಲ್‌ ಗಾಂಧಿ ಅವರು ವಯನಾಡ್‌ನಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಎನ್‌ಡಿಎ ಆಡಳಿತಾವಧಿಯಲ್ಲಿ ದಕ್ಷಿಣ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವಣ ಸಂಬಂಧ ತೀವ್ರ ಹದಗೆಟ್ಟಿತ್ತು. ದಕ್ಷಿಣ ಮತ್ತು ಉತ್ತರದ ನಡುವೆ ಸಂಪರ್ಕ ಸೇತುವೆಯಾಗಿ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಕಾರ್ಯೋನ್ಮುಖರಾಗಿದ್ದಾರೆ’ ಎಂದು ಪ್ರತಿಪಾದಿಸಿದರು.

‘ರಾಜಕೀಯ ಪಕ್ಷಗಳೂ ಆರ್‌ಟಿಐ ವ್ಯಾಪ್ತಿಗೆ ಬರಲಿ’
ನವದೆಹಲಿ (ಪಿಟಿಐ):ದೇಶದಲ್ಲಿನ ಎಲ್ಲ ನೋಂದಾಯಿತ ಮತ್ತು ಅಧಿಕೃತ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ‘ಸಾರ್ವಜನಿಕ ಪ್ರಾಧಿಕಾರ’ ಎಂದು ಪರಿಗಣಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯಸರ್ಕಾರಗಳು ರಾಜಕೀಯ ಪಕ್ಷಗಳಿಗೆ ದೇಶದಾದ್ಯಂತ ಪ್ರಮುಖ ಸ್ಥಳಗಳನ್ನು ಉಚಿತವಾಗಿ ಅಥವಾ ರಿಯಾಯ್ತಿ ದರದಲ್ಲಿ ನೀಡಿರುತ್ತವೆ. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ದೂರದರ್ಶನದಲ್ಲಿ ಉಚಿತವಾಗಿ ಸುದ್ದಿ ಪ್ರಸಾರಕ್ಕೆ ಸಮಯ ನೀಡಲಾಗುತ್ತದೆ. ಈ ರೀತಿ ಪರೋಕ್ಷ ಹಣಕಾಸು ನೀಡುವ ಕಾರಣಗಳಿಂದ ರಾಜಕೀಯ ಪಕ್ಷಗಳನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕು’ ಎಂದು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.