ಅಮರಾವತಿ:ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇತರೆಲ್ಲ ಪಕ್ಷಗಳನ್ನು ಹೊಸಕಿ ಹಾಕಿರುವ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿ)ನಾಯಕ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತ ಪಡೆದಿರುವುದರಿಂದ ವೈಎಸ್‌ಆರ್‌ಸಿಯ ಪಾತ್ರ ರಾಜ್ಯಕ್ಕಷ್ಟೇ ಸೀಮಿತ. ಹೊಸ ರಾಜಧಾನಿ ಅಮರಾವತಿಯನ್ನು ಕಟ್ಟಿ ಬೆಳೆಸುವ ದೊಡ್ಡ ಹೊಣೆಗಾರಿಕೆಯ ಜತೆಗೆ ಸಂಪನ್ಮೂಲ ಕೊರತೆಯರಾಜ್ಯಕ್ಕೆ ಹೆಚ್ಚಿನ ಅನುದಾನ ಹರಿಸುವ ನಿಟ್ಟಿನಲ್ಲಿ ಅವರಿಗೆ ಕೇಂದ್ರವನ್ನು ಮಣಿಸುವ ಅವಕಾಶ ಕಳೆದು ಹೋಗಿದೆ.
2014ರ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಸೋಲು ಅನುಭವಿಸಿದ ಜಗನ್ ಅವರು ಹೋರಾಟವನ್ನು ಅಲ್ಲಿಂದಲೇ ಮರುಹುಟ್ಟುಗೊಳಿಸಿದವರು. ಚಂದ್ರಬಾಬು ನಾಯ್ಡು ಅವರ ‘ದುರಾಡಳಿತ’, ರಾಜಧಾನಿ ಅಮರಾವತಿಯ ನಿರ್ಮಾಣವನ್ನು ರಿಯಲ್ ಎಸ್ಟೇಟ್ ಉದ್ಯಮವನ್ನಾಗಿ ಮಾಡಿದ ಆರೋಪ, ನೀರಾವರಿ ಯೋಜನೆಗಳಲ್ಲಿ ಭ್ರಷ್ಟಾಚಾರ, ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಅಂಶಗಳೇ ಜಗನ್ ಪ್ರಚಾರದ ಪ್ರಮುಖ ವಿಷಯವಾಗಿತ್ತು.ಜನರ ನಡುವೆಯೇ ಹೋರಾಟದ ಕೆಚ್ಚು ತೋರಿದ ಜಗನ್ ಮಾಡಿದ್ದು 3,648 ಕಿ.ಮೀ.ದೂರದ ಪಾದಯಾತ್ರೆ. ‘ನವರತ್ನಲು’ ಹೆಸರಲ್ಲಿ ಅವರು ನೀಡಿದ ಚುನಾವಣಾ ಭರವಸೆಯನ್ನು ಸಹ ರಾಜ್ಯದ ಜನತೆ ನಂಬಿಕೊಂಡು ಇದೀಗ ಅವರಿಗೆ ಅಧಿಕಾರ ನೀಡಿದ್ದಾರೆ.
ಒಂದು ಕಾಲಕ್ಕೆ ಕೈದಿ: ಎಂಟು ವರ್ಷಗಳ ಹಿಂದೆ ತಮ್ಮ ಘೋಷಿತ ಆಸ್ತಿಗಿಂತ ಅಧಿಕ ಆಸ್ತಿ ಹೊಂದಿದ್ದ ಆರೋಪದ ಮೇರೆಗೆ ಬಂಧಿತರಾದವರು ಜಗನ್. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಕಾಂಗ್ರೆಸ್ ವಿರುದ್ಧ ಪ್ರತೀಕಾರದ ಬೀಜ ಆಗಲೇ ಮೊಳಕೆಯೊಡೆದಿತ್ತು. ಚಂದ್ರಬಾಬು ನಾಯ್ಡು ಅವರನ್ನೂ ಸಮಾನ ವಿರೋಧಿ ಎಂದೇ ಪರಿಗಣಿಸಿದ್ದರು.ಹೋರಾಟವನ್ನೇ ಉಸಿರಾಗಿ ಮಾಡಿಕೊಂಡ ಅವರು ಯಾರೂ ನಿರೀಕ್ಷಿಸದಷ್ಟು ಅಂತರದಗೆಲುವನ್ನು ಸಾಧಿಸಿದ್ದಾರೆ. ಎನ್‌ಡಿಎ ಜತೆಗೆ ಜಗನ್ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಎನ್‌ಡಿಎ ಪರ ಅವರ ಒಲವು ಇತ್ತು. ನೆರೆಯ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಬೆಂಬಲವೂ ಜಗನ್‌ಗೆ ಇತ್ತು.
‘ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಿದೆ’
‘ಜನ ವೈಎಸ್‌ಆರ್‌ಸಿಗೆ ಹರಸಿದ್ದಾರೆ. ಅವರ ಈ ತೀರ್ಪು ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಿಸಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆ...‘
ಫಲಿತಾಂಶ ಹೊರಬಿದ್ದ ತಕ್ಷಣ ಜಗನ್ ಮೋಹನ್ ರೆಡ್ಡಿ ನೀಡಿದ ಪ್ರತಿಕ್ರಿಯೆ ಇದು.
ಜಗನ್ ಅವರು ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಮೇಲಾಗಿ ಚಂದ್ರಶೇಖರ ರಾವ್ ಅವರಿಂದಲೂ ಕರೆ ಸ್ವೀಕರಿಸಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಗಿಟ್ಟಿಸುವ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಮಧ್ಯೆ, ಶಾಸಕಾಂಗ ಪಕ್ಷದ ಸಭೆ ಇದೇ 25ರಂದು ನಡೆಯಲಿದ್ದು, ಜಗನ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಿದೆ. ಇದೇ 30ರಂದು ತಿರುಪತಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.
ಪ್ರಶಾಂತ್ ಕಿಶೋರ್ ಶಕ್ತಿ: ಚಂದ್ರಬಾಬು ನಾಯ್ಡು ಅವರು ತಾಂತ್ರಿಕ ಪರಿಣಿತ. ಅದರಿಂದಲೇ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯತಂತ್ರ ರೂಪಿಸುವಲ್ಲಿ ನಿಸ್ಸೀಮರು. ಇದನ್ನು ಹತ್ತಿಕ್ಕುವುದಕ್ಕಾಗಿ ಜಗನ್ ಅವರು ಆರಿಸಿಕೊಂಡದ್ದು ಐ–ಪ್ಯಾಕ್ ಸಂಸ್ಥೆಯ ಪ್ರಶಾಂತ್ ಕಿಶೋರ್ ಅವರನ್ನು. ಮತದಾನದ ದಿನ ಐ–ಪ್ಯಾಕ್ ತಂಡ ಹೇಳಿದ್ದೇನೆಂದರೆ ‘ಜಗನ್ ಗೆದ್ದೇ ಬಿಟ್ಟಿದ್ದಾರೆ, ಮತವನ್ನು ಎಣಿಸುವ ಅಗತ್ಯವೇ ಇಲ್ಲ’ ಎಂಬುದಾಗಿ. ಇದು ಇಂದು ನಿಜವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.