ADVERTISEMENT

ಅಪ್ಪನಿಗೆ ತಕ್ಕ ಮಗಳು

ಅಮಿತ್ ಎಂ.ಎಸ್.
Published 25 ಸೆಪ್ಟೆಂಬರ್ 2014, 19:30 IST
Last Updated 25 ಸೆಪ್ಟೆಂಬರ್ 2014, 19:30 IST

‘ನಾನು ಚಿಕ್ಕ ವಯಸ್ಸಿನವಳಾಗಿದ್ದಾಗಿನಿಂದಲೂ ಅಪ್ಪನ ಕಲಾ ಬದುಕನ್ನು ಬೆರಗಿನಿಂದ ನೋಡುತ್ತಿದ್ದೆ. ನೂರಾರು ಸಂಕಟ, ತಾಪತ್ರಯಗಳಿದ್ದಾಗಲೂ ಅವರಿಗೆ ಸಿನಿಮಾ, ನಾಟಕಗಳದ್ದೇ ಜಪ. ಬಿಸಿರಕ್ತದ ಹುಮ್ಮಸ್ಸು ಹಾಗೆಯೇ ಅಲ್ಲವೇ? ಮುಂದೆ ಅವರು ಬದಲಾಗುತ್ತಾರೆ ಎಂದು ಆ ಗಳಿಗೆಗಾಗಿ ಕಾಯುತ್ತಿದ್ದೆ. ಆದರೆ ಅವರು ಬದಲಾಗಲಿಲ್ಲ, ನಾನೇ ಬದಲಾದೆ...!’

ಕಲೆಯೆಡಗಿನ ತಂದೆಯ ಪ್ರೀತಿ, ತಾವೂ ಅದನ್ನು ಹಿಂಬಾಲಿಸಿದ ರೀತಿ, ಎರಡನ್ನೂ ಹೀಗೆ ವರ್ಣಿಸಿದ್ದು ಮಂಡ್ಯ ರಮೇಶ್‌ ಅವರ ಮಗಳು ದಿಶಾ. ತಂದೆಯಂತೆಯೇ ರಂಗಭೂಮಿಯನ್ನು ಮೋಹಿಸುವ ಮಗಳು, ಈಗ ಸಿನಿಮಾರಂಗಕ್ಕೂ ಅಡಿಯಿಟ್ಟಿದ್ದಾರೆ. ಬಿ. ಸುರೇಶ ನಿರ್ದೇಶನದ ‘ದೇವರ ನಾಡಲ್ಲಿ’ ಚಿತ್ರ ದಿಶಾ ಅವರ ಚಿತ್ರರಂಗದ ಮೊದಲ ಮೆಟ್ಟಿಲು.

ಮೈಸೂರಿನ ಮಹಾಜನಾಸ್‌ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಪತ್ರಿಕೋದ್ಯಮ ಓದುತ್ತಿರುವ ದಿಶಾ ಅವರದು ಸದ್ಯ ಓದಿನೆಡೆಗೆ ಧ್ಯಾನ. ವೃತ್ತಿ ಬದುಕು ಸಿನಿಮಾದಲ್ಲಿಯೇ ಅಥವಾ ಪತ್ರಿಕೋದ್ಯಮವೇ ಎಂದಿನ್ನೂ ಅವರು ನಿರ್ಧರಿಸಿಲ್ಲ. ಆದರೆ ರಂಗಭೂಮಿಯ ನಂಟು ಮಾತ್ರ ಕೊನೆವರೆಗೂ ಎನ್ನುತ್ತಾರೆ.

ತಂದೆಯ ಕನಸಿನ ಕೂಸು ‘ನಟನಾ’ದಲ್ಲಿ ದಿಶಾ ಸಕ್ರಿಯವಾಗಿ ತೊಡಗಿಸಿಕೊಂಡವರು. ಅಪ್ಪ – ಅಮ್ಮನ ಗರಡಿಯಲ್ಲಿ ಅಭಿನಯದಲ್ಲಿ ಪಳಗುತ್ತಿರುವ ಅವರು ಉತ್ತಮ ಗಾಯಕಿಯೂ ಹೌದು. ‘ನಟನಾ’ದಲ್ಲಿ ಅವರ ಚಟುವಟಿಕೆ ಶುರುವಾಗಿದ್ದೇ ಗಾಯನದ ಮೂಲಕ. ತೆರೆಯ ಮುಂದೆ ಬರುವುದಕ್ಕಿಂತ ಅದರ ಹಿಂದೆ ಪದ್ಯಗಳಿಗೆ ದನಿ ನೀಡುವ ಕೆಲಸವೇ ಅವರಿಗೆ ಹೆಚ್ಚು ಆಪ್ತವೆನಿಸಿತ್ತು.

ಸುಮಾರು 14 ವರ್ಷದ ರಂಗಭೂಮಿ ಸಾಂಗತ್ಯದಲ್ಲಿ ಅವರು ಬಣ್ಣಹಚ್ಚತೊಡಗಿದ್ದು ಐದಾರು ವರ್ಷಗಳ ಹಿಂದಷ್ಟೇ. ‘ಚರಣದಾಸ’ ನಾಟಕದಲ್ಲಿ ಹಚ್ಚಿದ ಬಣ್ಣ ನೀಡಿದ ಅನುಭವ ಅವರನ್ನು ಕಾಡತೊಡಗಿತು. ನಟನೆ ಎಂದರೆ ಏನು ಎಂಬುದು ಅರಿವಾಯಿತು. ಆಗಲೇ ಅವರು ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದು. ಮುಂದೆ ಪ್ರಸನ್ನ ನಿರ್ದೇಶನದ ‘ಹ್ಯಾಮ್ಲೆಟ್‌’, ಬಿ. ಜಯಶ್ರೀ ಅವರ ‘ಅಗ್ನಿಪಥ’, ಮಂಡ್ಯ ರಮೇಶ್‌ ಅವರ ‘ಊರು ಭಂಗ’, ‘ಶತ್ರು ಅಂದ್ರೆ ಶತ್ರು’, ಕೆ.ವಿ. ಅಕ್ಷರ ನಿರ್ದೇಶನದ ‘ಸಂಸಾರದಲ್ಲಿ ಸನಿದಪ’, ಮೇಘ ಸಮೀರ ಅವರ ‘ಟಸ್ಕರ’, ‘ಚಾಮ ಚೆಲುವೆ’ ಮುಂತಾದ ನಾಟಕಗಳು ಅವರನ್ನು ಗುರ್ತಿಸುವಂತೆ ಮಾಡಿದವು.

ಮನುಷ್ಯನ ಬದುಕನ್ನು ಕಟೆದು ರೂಪಿಸುವ ಶಕ್ತಿ ರಂಗಭೂಮಿಗಿದೆ ಎನ್ನುವುದು ಅವರ ಅನುಭವದ ಮಾತು. ರಂಗಭೂಮಿಯಿಂದ ಏನನ್ನು ಪಡೆದುಕೊಂಡಿದ್ದೇನೆ ಎಂದು ವಿವರಿಸಲಾಗದಷ್ಟು ಸಂಗತಿಗಳನ್ನು ಅದು ಕಲಿಸಿಕೊಟ್ಟಿದೆ ಎನ್ನುತ್ತಾರೆ ದಿಶಾ. ಚಿಕ್ಕ ವಯಸ್ಸಿನಿಂದಲೂ ಅವರನ್ನು ಕೀಳರಿಮೆ ಕಾಡುತ್ತಿತ್ತಂತೆ. ತನ್ನಿಂದ ನಟಿಸಲು ಆಗುವುದಿಲ್ಲ ಎಂಬ ಹಿಂಜರಿಕೆಯಿಂದಲೇ ಅವರು ತೆರೆಯ ಹಿಂದೆ ಇರುತ್ತಿದ್ದದ್ದು. ‘ರಂಗಭೂಮಿಯ ಸಾಹಚರ್ಯ, ಅದರಲ್ಲೂ ಅಭಿನಯದಲ್ಲಿ ತೊಡಗಿಸಿಕೊಂಡ ಬಳಿಕ ಕೀಳರಿಮೆ ಕ್ರಮೇಣ ಕಡಿಮೆಯಾಯಿತು. ನನ್ನೊಳಗೆ ಆತ್ಮವಿಶ್ವಾಸ, ಧೈರ್ಯಗಳನ್ನು ತುಂಬಿದ್ದು ರಂಗಭೂಮಿ’ ಎನ್ನುತ್ತಾರೆ ಅವರು. ರಂಗಭೂಮಿ ಸಂವಹನಕ್ಕೆ ಹೇಗೆ ಸಹಕಾರಿಯಾಗಿದೆಯೋ ಪತ್ರಿಕೋದ್ಯಮವೂ ಅದನ್ನು ಕಲಿಸಿದೆ ಎಂದು ಹೇಳುತ್ತಾರೆ.

ಅಪ್ಪನ ಬಗ್ಗೆ ದಿಶಾ ಅವರಿಗೆ ಅಪಾರ ಹೆಮ್ಮೆ. ಅಪ್ಪನಾಗಿ ಒಂದು ರೀತಿ, ಕೇವಲ ಮಂಡ್ಯ ರಮೇಶ್‌ ಆಗಿ ಒಂದು ರೀತಿ, ನಟನಾದ ನಿರ್ದೇಶಕನಾಗಿ ಇನ್ನೊಂದು ರೀತಿ... ಹಲವು ಕೋನಗಳಲ್ಲಿ ವಿಭಿನ್ನವಾಗಿ ಕಾಣಿಸುವ ಅವರು ‘ವಿಚಿತ್ರ ಮನುಷ್ಯ’ ಎನಿಸಿದ್ದೂ ಇದೆಯಂತೆ. ದುಡಿದ ದುಡ್ಡನ್ನೆಲ್ಲಾ ವೈಯಕ್ತಿಕ ಕೆಲಸ, ಸಂಸಾರಕ್ಕೆ ಬಳಸದೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಎಂದು ರಂಗಭೂಮಿಯಲ್ಲಿ ವಿನಿಯೋಗಿಸುತ್ತಿದ್ದಾರೆ. ಏಕೆ ಹೀಗೆ ಮಾಡುತ್ತಾರೆ ಎಂದು ಹಲವು ಬಾರಿ ದಿಶಾ ಅವರಲ್ಲಿ ಪ್ರಶ್ನೆಗಳು ಎದ್ದಿದ್ದವು.

ಆದರೆ ಅವರ ಉದ್ದೇಶ ಸ್ಪಷ್ಟವಾಗತೊಡಗಿದಂತೆ ಅದಕ್ಕೆ ಬೆಂಬಲವಾಗಿ ನಿಲ್ಲತೊಡಗಿದ್ದಾರೆ. ‘ರಂಗಮಂದಿರ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಅಪ್ಪನಿಗೆ ಈಗ ಆರ್ಥಿಕವಾಗಿ ಸಹಾಯ ನೀಡಲು ಸಾಧ್ಯವಾಗದಿದ್ದರೂ ನೈತಿಕವಾಗಿ ಅವರ ಜತೆಗಿರಬಲ್ಲೆ. ಓದು ಮುಗಿದ ಬಳಿಕ ದುಡಿಮೆ ಆರಂಭಿಸಿದರೂ ಆ ಗಳಿಕೆಯನ್ನು ಅದಕ್ಕೇ ನೀಡುತ್ತೇನೆ’ ಎನ್ನುವ ಅವರಲ್ಲಿ ಅಪ್ಪನ ಶ್ರಮ, ರಂಗಭೂಮಿಯಡೆಗಿನ ಪ್ರೀತಿ ಎರಡರಲ್ಲೂ ಮೆಚ್ಚುಗೆ ಭಾವ ಕಾಣಿಸುತ್ತದೆ.
ಅಪ್ಪ ‘ಮಕ್ಕಳ ರಂಗಭೂಮಿ’ಯನ್ನು ತುಂಬಾ ಪ್ರೀತಿಸುವವರು.

ರಂಗಭೂಮಿಯನ್ನು ಉಳಿಸಲು ಬೇರೆ ಬೇರೆ ಊರುಗಳಿಗೆ ತೆರಳಿ ಮಕ್ಕಳಿಗೆ ನಾಟಕ ಹೇಳಿಕೊಡುತ್ತಿದ್ದರು. ನಮ್ಮ ಸಂಸ್ಕೃತಿ, ಸಾಹಿತ್ಯ ಪರಂಪರೆಯನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವೆಂದರೆ ರಂಗಭೂಮಿ. ತುಂಬಾ ಜನ ರಂಗಭೂಮಿಗಾಗಿ ದುಡಿದಿದ್ದಾರೆ. ಆದರೆ ನನ್ನಿಂದ ರಂಗಭೂಮಿಯ ಮೂಲಕ ಮುಂದಿನ ಪೀಳಿಗೆಗೆ ಏನನ್ನು ಕೊಡಬಹುದು, ಈಗಿನ ಯುವಜನತೆಗೆ ಅದರಿಂದ ಯಾವ ರೀತಿ ಉಪಯೋಗವಾಗಬಲ್ಲದು ಮುಂತಾದ ಪ್ರಶ್ನೆಗಳನ್ನಿಟ್ಟುಕೊಂಡು ಅಪ್ಪ ದುಡಿಯುತ್ತಿದ್ದಾರೆ ಎಂದು ವಿವರಿಸುತ್ತಾರೆ ದಿಶಾ.

ನಾಟಕಗಳಲ್ಲಿ ಅಭಿನಯ ನೋಡಿ ಸಿನಿಮಾಗಳಲ್ಲಿ ನಟಿಸುವಂತೆ ಆಹ್ವಾನಗಳು ಬಂದಿದ್ದರೂ, ಮಗಳ ಬೆಳ್ಳಿತೆರೆ ಪ್ರವೇಶಕ್ಕೆ ಮಂಡ್ಯ ರಮೇಶ್‌ ಅವರು ಒಪ್ಪಿರಲಿಲ್ಲವಂತೆ. ‘ಅಪ್ಪ ಸಣ್ಣ ಪುಟ್ಟ ಪಾತ್ರಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡರು. ಆದರೆ ನನ್ನ ಪ್ರವೇಶವೂ ಹಾಗೆಯೇ ಆಗಬಾರದು. ಉತ್ತಮ ಕಥೆ, ತಂಡದ ಮೂಲಕವೇ ಸಿನಿಮಾಕ್ಕೆ ಅಡಿಯಿಡಬೇಕು ಎಂಬುದು ಅವರ ಬಯಕೆ. ಅದಕ್ಕಾಗಿಯೇ ಇಷ್ಟು ಕಾಲ ಕಾದರು. ಅಲ್ಲದೆ ಯಾವ ಚಟುವಟಿಕೆಯೂ ಓದಿಗೆ ಅಡ್ಡಿಯಾಗಬಾರದು ಎನ್ನುವುದು ಅವರ ನೀತಿ.

ಬಿ. ಸುರೇಶ್‌ ಅವರ ಸಿನಿಮಾ, ಅದೂ ಕಾಲೇಜು ರಜೆಯ ದಿನಗಳಲ್ಲಿ ಬಂದಿದ್ದರಿಂದ ಒಪ್ಪಿಕೊಂಡಿದ್ದು. ಪ್ರಕಾಶ್‌ ರೈ, ಅಚ್ಯುತಕುಮಾರ್‌, ಸಿಹಿಕಹಿ ಚಂದ್ರು ಮುಂತಾದ ನಟರ ದಂಡು ಅದರಲ್ಲಿದೆ. ಅಪ್ಪನೂ ನಟಿಸುತ್ತಿದ್ದಾರೆ. ಇಷ್ಟೆಲ್ಲಾ ಇರುವಾಗ ಇದರಲ್ಲೂ ಒಂದು ಅನುಭವ ಆಗಲಿ ಎಂದು ಒಪ್ಪಿಕೊಂಡರು. ಏಕೆಂದರೆ ಇಲ್ಲಿ ಅವರಲ್ಲಿ ಯಾವುದೇ ಅನುಮಾನ, ಆತಂಕಗಳಿರಲಿಲ್ಲ. ಮುಂದೆಯೂ ಅಷ್ಟೇ. ಮನಸಿಗೆ ಇಷ್ಟವಾಗುವ ಕಥೆ, ಪಾತ್ರ ಇದ್ದಾಗ ಮಾತ್ರ ಸಿನಿಮಾ. ಅದೇ ಬೇಕೆನ್ನುವ ಹಟವಂತೂ ಇಲ್ಲ. ಕಲಾತ್ಮಕ ಅಥವಾ ವ್ಯಾಪಾರಿ ಎಂಬ ತಾರತಮ್ಯವೂ ಇಲ್ಲ. ಒಳ್ಳೆಯ ಕಥೆ ಇದ್ದಾಗ, ಅಪ್ಪ ಮತ್ತು ಅಮ್ಮನೂ ಒಪ್ಪಿದರೆ ಬಣ್ಣಹಚ್ಚುವುದು’ ಎನ್ನುತ್ತಾರೆ.

‘ದೇವರ ನಾಡಲ್ಲಿ’ ಚಿತ್ರದಲ್ಲಿ ಅವರದು ಹಳ್ಳಿ ಹುಡುಗಿ, ಕಾಲೇಜು ವಿದ್ಯಾರ್ಥಿನಿಯ ಪಾತ್ರ. ಕಲಾತ್ಮಕತೆ ಮತ್ತು ಕಮರ್ಷಿಯಲ್‌ ಅಂಶಗಳೆರಡೂ ಇಲ್ಲಿ ಬೆರೆತಿವೆ. ಇದರ ಹೊರತು ಚಿತ್ರದ ಬಗ್ಗೆ ಬೇರೇನೂ ಹೇಳಲಾರೆ ಎಂದು ನಸುನಗುತ್ತಾರೆ. ರಾಜು ಅನಂತಸ್ವಾಮಿ ಅವರ ಬಳಿ ಸುಗಮ ಸಂಗೀತ ಕಲಿತಿದ್ದ ದಿಶಾ ಅವರಿಗೆ ಗಾಯನವೆಂದರೆ ಅಚ್ಚುಮೆಚ್ಚು. ‘ಎಲ್ಲಿಯೇ ಕರೆದು ಹಾಡು ಎಂದರೂ ಹಾಡುತ್ತೇನೆ’ ಎನ್ನುವ ಅವರಲ್ಲಿ ಸಿನಿಮಾ ಹಾಡುಗಳ ಕುರಿತೂ ಆಸಕ್ತಿಯಿದೆ. ‘ಚೆನ್ನಾಗಿ ಹಾಡುತ್ತೀರಾ, ಸಂಗೀತ ಕಲಿತಿದ್ದೀರಾ?’ ಎಂದು ಎಲ್ಲರೂ ಕೇಳುತ್ತಾರೆ. ಶಾಸ್ತ್ರೀಯ ಸಂಗೀತ ಕಲಿಯಬೇಕು ಎಂದು ಅಪ್ಪನೂ ಒತ್ತಾಯಿಸುತ್ತಾರೆ. ನಾಟಕ, ಓದಿನ ನಡುವೆ ಸಂಗೀತಕ್ಕೆ ಸಮಯ ಮೀಸಲಿಡಲು ಆಗುತ್ತಿರಲಿಲ್ಲ. ಆದರೆ ಈಗ ಹಿಂದೂಸ್ತಾನಿ ಸಂಗೀತ ಕಲಿಯುವ ದೃಢ ಮನಸ್ಸು ಮಾಡಿದ್ದೇನೆ ಎನ್ನುತ್ತಾರೆ ದಿಶಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT