ADVERTISEMENT

ಕನ್ನಡ ಚಿತ್ರರಂಗಕ್ಕೊಬ್ಬರೇ ಶಾರದಾ!

ಎನ್.ಎಸ್.ಶ್ರೀಧರ ಮೂರ್ತಿ
Published 11 ಜೂನ್ 2015, 19:30 IST
Last Updated 11 ಜೂನ್ 2015, 19:30 IST

‘ವಂಶವೃಕ್ಷ’, ‘ಫಣಿಯಮ್ಮ’ ಚಿತ್ರಗಳ ಎಲ್‌.ವಿ. ಶಾರದಾ ಭಾರತೀಯ ಚಿತ್ರರಂಗ ಕಂಡ ಮೇರು ಕಲಾವಿದೆಯರಲ್ಲಿ ಒಬ್ಬರು. ಕನ್ನಡದ ಈ ಮೇರು ಕಲಾವಿದೆ ತಮ್ಮ ನಟನೆಯ ಅನುಭವವನ್ನು ಈಗ ಸಾಕ್ಷ್ಯಚಿತ್ರಗಳ ಮೂಲಕ ಅಭಿವ್ಯಕ್ತಿಸುತ್ತಿದ್ದಾರೆ.

‘ಯುಆರ್ ಎ ಗಾಡೆಸಸ್ ಅಫ್ ದಿ ಆಕ್ಟಿಂಗ್’ ಎಂದು ಹೃಷಿಕೇಶ ಮುಖರ್ಜಿ ಅವರಿಂದಲೇ ಪ್ರಶಂಸೆ ಪಡೆದ ‘ಫಣಿಯಮ್ಮ’ ಖ್ಯಾತಿಯ ಹೆಮ್ಮೆಯ ಕನ್ನಡತಿ ಎಲ್.ವಿ. ಶಾರದಾ ಈಗ ಏನು ಮಾಡುತ್ತಿದ್ದಾರೆ? ಇದು ಬಹಳ ಜನರನ್ನು ಕಾಡುತ್ತಿರುವ ಪ್ರಶ್ನೆ. ಇದಕ್ಕೆ ಉತ್ತರ ಹುಡುಕಿ ಜಯನಗರದ ನಾಲ್ಕನೇ ಬ್ಲಾಕಿನ ಅವರ ಮನೆಯ ಕದ ತಟ್ಟಿದರೆ ಅದೇ ನಗೆ ಮುಖದ ಸ್ವಾಗತ, ಉತ್ಸಾಹದ ಮಾತು.

ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಬಗ್ಗೆ ಬರೋಬ್ಬರಿ ಹನ್ನೆರಡು ಗಂಟೆಗಳ ಸಾಕ್ಷಚಿತ್ರ ಸಿದ್ಧ ಪಡಿಸಿರುವ ಅವರು, ‘ಎಲ್ಲರೂ ಇದನ್ನು ಕಟ್ ಮಾಡಿಕೊಡಿ ಪ್ರಸಾರ ಮಾಡ್ತೀವಿ ಅಂತಾರೆ, ಇದರಲ್ಲಿ ಶತಮಾನಗಳ ಕಥನವಿದೆ... ಮೈಸೂರು ಬನಿಯ ಇತಿಹಾಸವಿದೆ... ಹೇಗೆ ಕಟ್ ಮಾಡೋದು’ ಎಂದರು ಕಣ್ಣರಳಿಸಿ.

ಹೌದು... ಎಲ್.ವಿ. ಶಾರದಾ ಕನ್ನಡಿಗರನ್ನು ಸೆಳೆದಿದ್ದೇ ಕಣ್ಣುಗಳ ಮೂಲಕ. ‘ವಂಶವೃಕ್ಷ’ ಚಿತ್ರದ ಕಾತ್ಯಾಯಿನಿಯಾಗಿ ಅವರು ಭಾವಗಳನ್ನು ಚಿಮ್ಮಿಸಿದ ಕ್ರಮವನ್ನು ಯಾರೂ ಮರೆಯಲಾರರು. ಈ ಪಾತ್ರ ಶಾರದಾ ಅವರ ಬಳಿ ಬಂದಿದ್ದೇ ವಿಶೇಷ ಸಂದರ್ಭದಲ್ಲಿ. ಶಾರದಾ ಅವರ ತಂದೆ ಎಲ್.ಎಸ್. ವೆಂಕೋಜಿ ರಾವ್ ಕರ್ನಾಟಕದ ರಾಜಕಾರಣ ಕಂಡ ಅಪರೂಪದ ರಾಜಕಾರಣಿ. ಕರ್ನಾಟಕಕ್ಕೆ ಷೇರು ಮಾರುಕಟ್ಟೆಯನ್ನು ಪರಿಚಯಿಸಿದವರು, ಬೆಂಗಳೂರು ಸ್ಟಾಕ್ ಎಕ್ಸ್‌ಚೇಂಜ್‌ನ ಸ್ಥಾಪಕರಲ್ಲಿ ಒಬ್ಬರು.

ಶಿಕ್ಷಣ ಕ್ಷೇತ್ರದಲ್ಲಿಯೂ ಹೆಸರು ಮಾಡಿದವರು. ಸಂಗೀತ, ಸಾಹಿತ್ಯಗಳ ಪ್ರೇಮಿ ಕೂಡ ಹೌದು. ಸ್ವತಃ ಕಲಾವಿದರು ಕೂಡ. ಅವರ ನಾಲ್ವರು ಮಕ್ಕಳಲ್ಲಿ ಮೂರನೆಯವರಾದ ಶಾರದಾ ತಂದೆಯ ಪ್ರೇರಣೆಯಿಂದ ಬಾಲ್ಯದಿಂದಲೂ ಸಂಗೀತ–ಸಾಹಿತ್ಯದತ್ತ ಒಲವನ್ನು ಹೊಂದಿದ್ದವರು. ರಂಗಭೂಮಿಯತ್ತ ಆಸಕ್ತಿ ಹೊಂದಿದ್ದರು. ಬಿ.ವಿ. ಕಾರಂತರನ್ನು ‘ಯಾವುದಾದರೂ ನಾಟಕದಲ್ಲಿ ಪಾತ್ರ ಕೊಡಿ’ ಎಂದು ಕೇಳಿದ್ದರು. ಆಗ ಕಾರಂತರಿಗೆ ಇವರು ಕಾತ್ಯಾಯಿನಿ ಪಾತ್ರಕ್ಕೆ ಸೂಕ್ತ ಎನ್ನಿಸಿತು. 

‘ವಂಶವೃಕ್ಷ’ ಚಿತ್ರದ ಮಾರ್ಗದರ್ಶಕರಾಗಿದ್ದ ವೈ.ಎನ್.ಕೆ ಅವರಿಗಂತೂ ಇವರನ್ನು ಕಂಡಾಗ ಸಾಕ್ಷಾತ್ ಕಾತ್ಯಾಯಿನಿಯೇ ಮೈದಳೆದು ಬಂದಂತೆ ಅನ್ನಿಸಿತು. ಆದರೆ ಶಾರದಾ ನಮ್ಮ ತಂದೆಯವರನ್ನು ಕೇಳಬೇಕು ಎಂದು ಬಿಟ್ಟರು. ಬಿ.ವಿ. ಕಾರಂತರು ಮತ್ತು ಗಿರೀಶ್ ಕಾರ್ನಾಡ್ ಒಟ್ಟಾಗಿ ವೆಂಕೋಜಿ ರಾವ್ ಮನೆ ಕದ ತಟ್ಟಿದರು. ಅವರು ‘ವಂಶವೃಕ್ಷ ಓದಿ ನನಗೆ ಜ್ವರ ಬಂದಿತ್ತು. ಅಷ್ಟು ಬೇಸಿಕ್ ಕೊಶ್ಚನ್ ಅದರಲ್ಲಿದೆ’ ಎಂದರೂ ಮಗಳು ಪಾತ್ರ ಮಾಡುವುದಕ್ಕೆ ವೆಂಕೋಜಿ ರಾಯರು ಒಪ್ಪಿಗೆ ನೀಡಲಿಲ್ಲ.

ಕಾರ್ನಾಡರು ತಮ್ಮ ಮಾತಿನ ಚಮತ್ಕಾರವನ್ನು ಬಳಸಿ ಕೊನೆಗೂ ಒಪ್ಪಿಸಿದರು.‘ ‘ವಂಶವೃಕ್ಷ’ದಲ್ಲಿ ಕಾತ್ಯಾಯಿನಿಯದು ವೈಧವ್ಯ, ಗರ್ಭಪಾತ, ಸಾವು– ಹೀಗೆ ಬದುಕಿನ ಹಲವು ತಲ್ಲಣಗಳನ್ನು ಎದುರಿಸುವ ಪಾತ್ರ. ಅದನ್ನು ಶಾರದಾ ಶಕ್ತವಾಗಿ ನಿರ್ವಹಿಸಿದರು. ಅವರ ಪಾತ್ರ ಅಪಾರ ಮೆಚ್ಚಿಗೆಯನ್ನು ಪಡೆದಿದ್ದಲ್ಲದೆ ಶ್ರೇಷ್ಠನಟಿ ರಾಜ್ಯ ಪ್ರಶಸ್ತಿಯನ್ನೂ ತಂದುಕೊಟ್ಟಿತು.

ಮೊದಲ ಚಿತ್ರಕ್ಕೇ ಬಂದ ರಾಜ್ಯಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿತು ಎನ್ನುತ್ತಾರೆ ಶಾರದಾ. ಗುಣಮಟ್ಟದ ಪಾತ್ರಗಳನ್ನೂ ಮಾತ್ರ ಒಪ್ಪಿಕೊಳ್ಳಬೇಕು ಎಂದು ಅಂದೇ ನಿರ್ಧರಿಸಿ ಬಿಟ್ಟರು. ಇದೇ ವೇಳೆಯಲ್ಲಿ ಅವರಿಗೆ ‘ಎರಡು ಕನಸು’ ಚಿತ್ರದಲ್ಲಿ ಅಭಿನಯಿಸಲು ಆಹ್ವಾನ ಬಂದಿತು. ಕಲ್ಪನಾ ನಿರ್ವಹಿಸಿದ ಪಾತ್ರದ ಮೊದಲ ಆಯ್ಕೆ ಶಾರದಾ ಅವರೇ ಆಗಿದ್ದರು. ಎರಡು ದಿನ ಯೋಚಿಸಿ ವ್ಯಾಪಾರಿ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ನಿರ್ಧರಿಸಿದರು.

ಮುಂದೆ ಸಿಕ್ಕ ಅವಕಾಶ ‘ಬೂತಯ್ಯನ ಮಗ ಅಯ್ಯು’. ಆ ಚಿತ್ರದಲ್ಲಿ ಅಯ್ಯು ಹೆಂಡತಿಯಾಗಿ ಅಭಿನಯಿಸಿದರು. ವ್ಯಾಪಾರಿ ಚಿತ್ರಗಳ ಹಿನ್ನೆಲೆಯಿಂದ ಬಂದಿದ್ದರೂ ಸಿದ್ದಲಿಂಗಯ್ಯ ಪಾತ್ರಗಳ ತುಮುಲವನ್ನು ಸೂಕ್ಷ್ಮವಾಗಿ ಹಿಡಿಯಬಲ್ಲವರಾಗಿದ್ದರು ಎಂದು ಮೆಚ್ಚಿಕೊಳ್ಳುವ ಶಾರದಾ, ಈ ಪಾತ್ರ ನಿರ್ವಹಣೆ ನನಗೆ ತೃಪ್ತಿ ನೀಡಿದೆ ಎನ್ನುತ್ತಾರೆ.

ಸಿದ್ದಲಿಂಗಯ್ಯನವರ ‘ಹೇಮಾವತಿ’ ಚಿತ್ರದಲ್ಲೂ ಚಿಕ್ಕ ಪಾತ್ರವನ್ನು ಶಾರದಾ ನಿರ್ವಹಿಸಿದ್ದರು. ಅದು ಫ್ಲಾಶ್ ಬ್ಯಾಕಿನಲ್ಲಿ ಬಂದು ಹೋಗುವ ಮೊದಲ ಹೆಂಡತಿಯ ಪಾತ್ರ. ಚಿಕ್ಕದಾಗಿದ್ದರೂ ಪರಿಣಾಮಕಾರಿ ಎನ್ನಿಸಿತ್ತು. ಅಭಿನಯದಕ್ಕೆ ಮೊದಲು ಸ್ಕ್ರಿಪ್ಟ್ ಓದಬೇಕು ಎನ್ನುವುದನ್ನು ವ್ರತದಂತೆ ಪಾಲಿಸಿಕೊಂಡು ಬಂದಿರುವ ಶಾರದಾ, ಸ್ಕ್ರಿಪ್ಟ್ ಓದಿ ಇಷ್ಟಪಟ್ಟು ಅಭಿನಯಿಸಿದ ಚಿತ್ರ ‘ಒಂದು ಪ್ರೇಮದ ಕಥೆ’. ರಜನೀಕಾಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ADVERTISEMENT

‘ಈ ಚಿತ್ರದಲ್ಲಿ ರಜನೀಕಾಂತ್ ಕೆನ್ನೆಗೆ ನಾನು ಹೊಡೆಯುವ ದೃಶ್ಯವಿದೆ. ನಾನು ಎಂದಿಗೂ ಯಾರನ್ನೂ ಹೊಡೆದವಳಲ್ಲ. ಹೀಗಾಗಿ ಈ ದೃಶ್ಯದಲ್ಲಿ ಅಭಿನಯಿಸಲು ಹಿಂಜರಿದೆ. ರಜನಿಯವರೇ ನೀವು ಹೊಡೆಯಿರಿ, ಇದು ಅಭಿನಯ ಮಾತ್ರ ಎಂದು ತೋರಿಸಿದ ಡೆಡಿಕೇಷನ್ ಯಾವತ್ತೂ ಮರೆಯಲು ಆಗುವುದಿಲ್ಲ’ ಎನ್ನುತ್ತಾರೆ ಶಾರದಾ.  ಮುಂದೆ ‘ಮೈತ್ರಿ’, ‘ವಾತ್ಯಲ್ಯ ಪಥ’ ಚಿತ್ರಗಳಲ್ಲಿ ಶಾರದಾ ಅಭಿನಯಿಸಿದರು. ವ್ಯಾಸರಾಯ ಬಲ್ಲಾಳರ ಕಾದಂಬರಿಯನ್ನು ಆಧರಿಸಿದ್ದ ‘ವಾತ್ಯಲ್ಯಪಥ’ ಅಹೆಡ್ ಅಫ್ ದಿ ಟೈಂ ಆಗಿತ್ತು ಎನ್ನುವ ಅವರು, ಅದೇ ಕಾರಣಕ್ಕೆ ಅದಕ್ಕೆ ದೊರಕಬೇಕಾದ ಮನ್ನಣೆ ಸಿಕ್ಕಲಿಲ್ಲ ಎನ್ನುತ್ತಾರೆ. ಈ ಚಿತ್ರಕ್ಕೂ ಶಾರದಾ ಅವರಿಗೆ ಶ್ರೇಷ್ಠ ನಟಿ ರಾಜ್ಯಪ್ರಶಸ್ತಿ ಬಂದಿತು.

ವೃತ್ತಿ ಜೀವನದಲ್ಲಿ ಸವಾಲಿನ ಪಾತ್ರ ಎನ್ನುವಂತೆ ದೊರೆತಿದ್ದು ‘ಕುದುರೆ ಮೊಟ್ಟೆ’ ಚಿತ್ರದಲ್ಲಿನ ಲಕ್ಷ್ಮಿದೇವಿ ಪಾತ್ರ. ಅದು ಹನ್ನೆರಡು ವರ್ಷ ತುಂಬುವ ಮೊದಲೇ ಗಂಡನನ್ನು ಕಳೆದುಕೊಂಡ ಬಾಲವಿಧವೆಯ ಪಾತ್ರ. ಕಾಮರೂಪಿಯವರ ಈ ಪ್ರಸಿದ್ಧ ಕಾದಂಬರಿಯನ್ನು ಬೆಳ್ಳಿತೆರೆಗೆ ತಂದವರು ಜಿ.ವಿ.ಅಯ್ಯರ್.

ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’ ಕಾದಂಬರಿಯನ್ನು ಚಲನಚಿತ್ರವಾಗಿಸಲು ಸೂಕ್ತ ಕಲಾವಿದೆಗೆ ಹುಡುಕಾಟ ನಡೆಸಿದ್ದ ಪ್ರೇಮಾ ಕಾರಂತರಿಗೆ ‘ಕುದುರೆ ಮೊಟ್ಟೆ’ ಚಿತ್ರದ ಶಾರದಾ ಹಿಡಿಸಿದರು. ಶಾರದಾ ಅವರು ಒಪ್ಪದಿದ್ದರೆ ಈ ಚಿತ್ರವೇ ಆಗುವುದಿಲ್ಲ ಎನ್ನುವಷ್ಟು ಪ್ರೇಮ ಖಚಿತವಾಗಿದ್ದರು.

ಶಾರದಾ ಆ ವಿಶ್ವಾಸಕ್ಕಾಗಿ ಅಭಿನಯಿಸಲು ಒಪ್ಪಿಕೊಂಡರು. ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರೀಕರಣ ನಡೆದ ಈ ಚಿತ್ರದಲ್ಲಿ, ನೋವನ್ನು ನುಂಗಿ ನಲಿವನ್ನು ಚೆಲ್ಲಿದ ಪಾತ್ರವನ್ನು ಅಂಡರ್ ಪ್ಲೇ ಮಾಡುವ ಮೂಲಕ ಫಣಿಯಮ್ಮನ ಅಂತರಂಗವನ್ನು ಶಾರದಾ ಸಮರ್ಥವಾಗಿ ತೆರೆದಿಟ್ಟರು. ಚಿತ್ರ  ಹದಿಮೂರು ದೇಶಗಳಲ್ಲಿ ಪ್ರದರ್ಶನಗೊಂಡಿತು.

ಎಲ್ಲೆಡೆ ಶಾರದಾ ಅವರ ಅಭಿನಯಕ್ಕೆ ಪ್ರಶಂಸೆಯ ಸುರಿಮಳೆ, ಹೃಷಿಕೇಶ್ ಮುಖರ್ಜಿ, ಕೆ. ಬಾಲಚಂದರ್, ಶಾಂತರಾಂ ಅವರಂತಹ ದಿಗ್ಗಜರಿಂದಲೇ ಮೆಚ್ಚುಗೆ ದೊರಕಿತು. ಈ ಚಿತ್ರಕ್ಕಾಗಿ ಶಾರದಾ ತಲೆ ಕೂದಲು ತೆಗೆಸಿಕೊಂಡಿದ್ದು ಸುದ್ದಿಯಾಯಿತು. ಈ ಕುರಿತು ಅವರಿಗೆ ಈಗಲೂ ಅಸಮಾಧಾನವಿದೆ. ‘ಪಾತ್ರ ಅಥೆಂಟಿಕ್ ಎನ್ನಿಸಲು ಕಲಾವಿದರು ಇದನ್ನೆಲ್ಲಾ ಮಾಡಲೇಬೇಕು. ಅದು ಚರ್ಚೆಯ ವಿಷಯವೇ ಅಲ್ಲ. ಯಾವಾಗಲೂ ಪರ್‌ಫಾರ್ಮನ್ಸ್ ನೋಡಬೇಕೆ ಹೊರತು ಪ್ರಿಪರೇಷನ್ ಅಲ್ಲ’ ಎನ್ನುತ್ತಾರೆ.

‘ಫಣಿಯಮ್ಮ’ ಮುಗಿಯುತ್ತಿದ್ದಂತೆ ಜಿ.ವಿ. ಅಯ್ಯರ್ ‘ಶಂಕರಾಚಾರ್ಯ’ ಚಿತ್ರಕ್ಕೆ ಕರೆದರು. ಶಂಕರರ ತಾಯಿ ಆರ್ಯಾಂಬಾ ಪಾತ್ರವನ್ನು ಶಾರದಾ ನಿರ್ವಹಿಸಿದರು. ‘ಮಧ್ವಾಚಾರ್ಯ’, ‘ರಾಮಾನುಜಾಚಾರ್ಯ’ ಚಿತ್ರಗಳಲ್ಲಿ ಕೂಡ ಅವರು ಅಭಿನಯಿಸಿದರು. ಅವರು ಅಭಿನಯಿಸಿದ್ದ ಇನ್ನೊಂದು ಚಿತ್ರ ‘ಶಾಂತಲಾ’ ಪೂರ್ಣಗೊಳ್ಳಲಿಲ್ಲ.

ಪ್ರೇಮಾ ಕಾರಂತರ ‘ನಕ್ಕಳಾ ರಾಜಕುಮಾರಿ’ ಚಿತ್ರವೇ ಕೊನೆ, ಶಾರದಾ ಚಿತ್ರರಂಗದಿಂದ ದೂರವಾದರು. ‘ಚಿತ್ರರಂಗದ ರೀತಿ ನೀತಿಗಳು ಬದಲಾದವು. ಟೀಂ ವರ್ಕ್‌ನ ಕಲ್ಪನೆ ಹೋಯಿತು. ಪಾತ್ರವನ್ನು ಬೆಳೆಸುವ ರೀತಿಯೇ ಗೊತ್ತಿಲ್ಲದ ನಿರ್ದೇಶಕರು ಬಂದರು ಎನ್ನುವುದು’ ಅವರು ಇದಕ್ಕೆ ನೀಡುವ ಕಾರಣ. ಕೆಲವು ಟಿವಿ ಸೀರಿಯಲ್‌ಗಳಲ್ಲಿ ಅಭಿನಯಿಸಿದ ಶಾರದಾ, ಕ್ರಮೇಣ ಅಲ್ಲಿಂದಲೂ ದೂರವಾದರು.
ನಟನೆಯ ಬಳಿಕ ಅವರ ಕೈಗೆ ಕ್ಯಾಮರಾ ಬಂತು.

ತಮ್ಮ ಅನುಭವನ್ನು ಹಿನ್ನೆಲೆಯಾಗಿಟ್ಟುಕೊಂಡು ತಾವೇ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿಲು ಆರಂಭಿಸಿದರು. ನಿಟ್ಟೂರು ಶ್ರೀನಿವಾಸ ರಾವ್, ಮಾ. ಹಿರಣ್ಣಯ್ಯ, ಶಿವಮೊಗ್ಗ ಸುಬ್ಬಣ್ಣ ಹೀಗೆ ಹಲವು ಸಾಂಸ್ಕೃತಿಕ ಕ್ಷೇತ್ರದ ದಿಗ್ಗಜರ ಬಗ್ಗೆ ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರಗಳು ಒಳನೋಟಗಳಿಂದ ಗಮನ ಸೆಳೆಯುವಂತಿವೆ.

ಆದರೆ ಶಾರದಾ ಅವರ ಬಹು ದೊಡ್ಡ ಕೊಡುಗೆ– ಬೆಂಗಳೂರಿನ ಕೆರೆಗಳ ಸಾಂಸ್ಕೃತಿಕ ಮಹತ್ವ ಮತ್ತು ಅವುಗಳ ಅವಸಾನದ ಕಥೆ ಹೇಳುವ ‘ಕೆರೆಯ ಹಾಡು’ ಸಾಕ್ಷ್ಯಚಿತ್ರ. 140 ಕೆರೆಗಳ ಕಥೆಯನ್ನು ಶಾರದಾ ಸೆರೆ ಹಿಡಿದಿರುವ ಈ ಸಾಕ್ಷ್ಯಚಿತ್ರ ಇಂದಿಗೆ ಇನ್ನಷ್ಟು ಪ್ರಸ್ತುತವಾಗಿದೆ.

ಈಗಲೂ ಸೂಕ್ತವಾದ ಪಾತ್ರ ಸಿಕ್ಕರೆ ಅಭಿನಯಿಸಲು ಸಿದ್ಧ ಎನ್ನುವ ಶಾರದಾ ಅಭಿಯಿಸಿದಕ್ಕಿಂತ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ನಿರಾಕರಿಸಿದ್ದಾರೆ. ಅವುಗಳಲ್ಲಿ ಕೆ. ಬಾಲಚಂದರ್, ಮಣಿರತ್ನಂ ಅವರಂತಹ ದಿಗ್ಗಜರ ಚಿತ್ರಗಳೂ ಸೇರಿವೆ. ‘ನನಗೆ ಯಾರು ನಿರ್ದೇಶಕರು ಎನ್ನುವುದು ಮುಖ್ಯವಲ್ಲ, ಪಾತ್ರ ಎಷ್ಟರ ಮಟ್ಟಿಗಿನ ಸವಾಲು ನೀಡುತ್ತದೆ ಎನ್ನುವುದಷ್ಟೇ ಮುಖ್ಯ’ ಎನ್ನುವ ಅವರು, ‘ಅಭಿನಯ ನನಗೆ ಹವ್ಯಾಸವೇ ಹೊರತು ವೃತ್ತಿಯಲ್ಲ’ ಎನ್ನುವುದನ್ನು ಒತ್ತಿ ಹೇಳುತ್ತಾರೆ.

‘ಅಭಿನಯಕ್ಕೆ ಘನತೆ ತಂದವರು’ ಎಂದು ಸ್ಮಿತಾ ಪಾಟೀಲ್, ಶಬನಾ ಅಜ್ಮಿಯಂತವರ ಬಗ್ಗೆ ಹೆಮ್ಮೆ ಪಡುವವರು, ನಮ್ಮವರೇ ಆದ ಎಲ್.ವಿ. ಶಾರದಾ ಅವರನ್ನು ಮರೆತೇ ಬಿಡುತ್ತಾರೆ. ಅವರಿಗೆ ಪದ್ಮ ಪ್ರಶಸ್ತಿಗಳಿರಲಿ ರಾಜ್ಯ ಸರ್ಕಾರದ ಜೀವಮಾನ ಸಾಧನೆಯ ಗೌರವ ಕೂಡ ಈವರೆಗೆ ದೊರಕಿಲ್ಲ ಎನ್ನುವುದು ಒಂದು ಕಹಿ ಸತ್ಯವೇ ಸರಿ!

ಎಲ್.ವಿ. ಶಾರದಾ ಅಭಿನಯಿಸಿದ ಚಿತ್ರಗಳು
ವಂಶವೃಕ್ಷ (1972), ಬೂತಯ್ಯನ ಮಗ ಅಯ್ಯು(1974), ಒಂದು ಪ್ರೇಮದ ಕಥೆ (1977), ಹೇಮಾವತಿ (1977), ಕುದುರೆ ಮೊಟ್ಟೆ (1977), ಮೈತ್ರಿ (1978), ವಾತ್ಸಲ್ಯ ಪಥ (1980), ಫಣಿಯಮ್ಮ (1982), ಆದಿ ಶಂಕರಾಚಾರ್ಯ (1983), ಮಧ್ವಾಚಾರ್ಯ (1986), ರಾಮಾನುಜಾಚಾರ್ಯ (1989), ನಕ್ಕಳಾ ರಾಜಕುಮಾರಿ (1990).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.